ನಮ್ಮ ಏರ್ಫೋರ್ಸ್ಗೆ ಸೇರಿದ ಕಣ್ಗಾವಲು ಡ್ರೋನ್ (US Drone) ಎಮ್ಕ್ಯೂ-9ಗೆ ಕಪ್ಪು ಸಮುದ್ರದ ಮೇಲ್ಭಾಗದಲ್ಲಿ ರಷ್ಯಾದ ಸುಖೋಯ್-27 ವಿಮಾನ ಡಿಕ್ಕಿ ಹೊಡೆದು, ಅದನ್ನು ಪತನಗೊಳಿಸಿದೆ ಎಂದು ಬುಧವಾರ ಆರೋಪಿಸಿದ್ದ ಅಮೆರಿಕ, ಇಂದು ಅದರ ವಿಡಿಯೊವನ್ನು ಬಿಡುಗಡೆ ಮಾಡಿದೆ. ಈ ಕಣ್ಗಾವಲು ಡ್ರೋನ್ನ ಹಿಂಬದಿಯ ಕ್ಯಾಮರಾದಲ್ಲಿ ರಷ್ಯಾದ ಸುಖೋಯ್ ವಿಮಾನದ ಕಾರ್ಯಾಚರಣೆ ಸೆರೆಯಾಗಿದೆ. ವಿಮಾನ ಇಂಧನವನ್ನು ಚೆಲ್ಲುತ್ತ, ಡ್ರೋನ್ನತ್ತ ಸಾಗಿಬಂದಿದ್ದನ್ನು ವಿಡಿಯೊದಲ್ಲಿ ನೋಡಬಹುದು. ಸದ್ಯ ಡ್ರೋನ್ ಕಪ್ಪು ಸಮುದ್ರದಲ್ಲಿ ಪತನವಾಗಿದ್ದು, ಅದರ ಅವಶೇಷಗಳಿಗಾಗಿ ಹುಡುಕಾಟ ನಡೆದಿದೆ. ರಷ್ಯಾದ ದೊಡ್ಡ ಹಡಗೂ ಒಂದು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಡ್ರೋನ್ ಅವಶೇಷಗಳ ಪತ್ತೆ ಕಾರ್ಯ ನಡೆಸಿದೆ.
ರಷ್ಯಾ ಯುದ್ಧ ವಿಮಾನ ನಮ್ಮ ಡ್ರೋನ್ನ್ನು ಕುತಂತ್ರದಿಂದ ಮತ್ತು ಅಜಾಗರೂಕತೆಯಿಂದ ಹೊಡೆದು ಹಾಕಿದೆ. ಎಮ್ಕ್ಯೂ-9 ಡ್ರೋನ್ ಎದುರು ಹಲವು ಬಾರಿ ಹಾರಾಡಿದ ಸುಖೋಯ್-27, ಅದರ ಮೇಲೆ ಇಂಧನವನ್ನು ಹಾಕಿತು. ಇಂಧನ ಹಾಕಿದರೂ ಡ್ರೋನ್ ಕೆಳಗೆ ಬೀಳದೆ ಇದ್ದಾಗ, ಅದಕ್ಕೆ ಡಿಕ್ಕಿ ಹೊಡೆಯಿತು ಎಂದು ಅಮೆರಿಕ ತಿಳಿಸಿತ್ತು. ಅದರ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿದ್ದ ರಷ್ಯಾ ‘ಡ್ರೋನ್ ಪತನವಾಗಲು ನಮ್ಮ ವಿಮಾಣ ಕಾರಣವಲ್ಲ. ಅದು ಸಮುದ್ರ ಪ್ರದೇಶದಲ್ಲಿ ಅತ್ಯಂತ ಕೆಳಭಾಗದಲ್ಲಿ, ವೇಗವಾಗಿ ಹಾರಾಡಿದ ಪರಿಣಾಮ ನಿಯಂತ್ರಣ ಕಳೆದುಕೊಂಡು ಬಿದ್ದಿದೆ’ ಎಂದು ಹೇಳಿತ್ತು. ಇದೀಗ ಅಮೆರಿಕ ವಿಡಿಯೊ ಬಿಡುಗಡೆ ಮಾಡಿ, ತನ್ನ ಆರೋಪವನ್ನು ಪುಷ್ಟೀಕರಿಸಿದೆ.‘
ಇನ್ನು ರಷ್ಯಾ ಹಡಗುಗಳು ಡ್ರೋನ್ ಬಿದ್ದ ಜಾಗದಲ್ಲಿ, ಅದರ ಅವಶೇಷಕ್ಕಾಗಿ ಎಷ್ಟೇ ಹುಡುಕಾಟ ನಡೆಸಿದರೂ ಪ್ರಯೋಜನ ಇಲ್ಲ. ಡ್ರೋನ್ ಬಿದ್ದ ಜಾಗದಲ್ಲಿ 4 ಸಾವಿರದಿಂದ 5 ಸಾವಿರ ಅಡಿ ಆಳವಿದೆ. ಡ್ರೋನ್ ಅವಶೇಷಗಳು ಈಗಾಗಲೇ ಬಹಳ ಆಳಕ್ಕೆ ತಲುಪಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ನ ಜಂಟಿ ಚೀಫ್ ಆಫ್ ಸ್ಟಾಫ್ಸ್ ಚೇರ್ಮನ್ ಜನರಲ್ ಮಾರ್ಕ್ ಮಿಲ್ಲಿ ಹೇಳಿದರು. ಅವರು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರೊಂದಿಗೆ ಸೇರಿ, ಸುದ್ದಿಗೋಷ್ಠಿ ನಡೆಸಿ ಈ ವಿವರಣೆ ನೀಡಿದ್ದಾರೆ.