ವಾಷಿಂಗ್ಟನ್: ಆಕಾಶದಲ್ಲಿ ಹಾರಾಡುತ್ತಿದ್ದ ಅಪರಿಚಿತ ವಸ್ತುವೊಂದನ್ನು (Spy Balloon) ಅಮೆರಿಕವು ಭಾನುವಾರವೂ ಹೊಡೆದುರುಳಿಸಿದೆ. ಕೆನಡಾದ ಗಡಿಯಲ್ಲಿ ಈ ಬಲೂನ್ ರೀತಿಯ ವಸ್ತು ಹಾರಾಡುತ್ತಿತ್ತು. ಆಗ ಅಮೆರಿಕವು ಮಧ್ಯೆ ಪ್ರವೇಶಿಸಿ ಈ ವಸ್ತುವನ್ನು ಹೊಡೆದುರುಳಿಸಿದೆ. ವಸ್ತುವು 20,000 ಅಡಿ ಎತ್ತರದಲ್ಲಿ ಪ್ರಯಾಣಿಸುತ್ತಿರುವುದರಿಂದ ವಾಣಿಜ್ಯ ವಾಯು ಸಂಚಾರಕ್ಕೆ ಅಡ್ಡಿಯಾಗಬಹುದಾಗಿತ್ತು. ಹಾಗಾಗಿ, ಇದನ್ನು ಹೊಡೆದರುಳಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಆದೇಶಿಸಿದ್ದರು ಎಂದು ಪೆಂಟಗನ್ ಹೇಳಿದೆ.
ಹ್ಯುರಾನ್ ಸರೋವರದ ಮೇಲೆ ಹೊಡೆದುರುಳಿಸಿದ ವಸ್ತುವು ಶನಿವಾರ ಮೊಂಟಾನಾದ ಸೇನಾ ನೆಲೆಗಳ ಮೇಲೆ ಮೊದಲ ಬಾರಿಗೆ ಕಂಡುಬಂದಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಏತನ್ಮಧ್ಯೆ, ಇದೊಂದು ಏಲಿಯನ್ ಕೃತ್ಯಗಳಾಗಿರಬಹುದು ಎಂದೂ ಹೇಳಲಾಗುತ್ತಿದೆ. ಉತ್ತರ ಅಮೆರಿಕಾದ ವಾಯುಪ್ರದೇಶದ ಮೇಲೆ ಅಪರಿಚಿತ ಹಾರುವ ವಸ್ತುಗಳ ನಿಗೂಢತೆಯು ಇನ್ನೂ ಹೆಚ್ಚುತ್ತಲೇ ಸಾಗಿದೆ. ಕೆರೊಲಿನಾಸ್‌ನಲ್ಲಿ ಕಳೆದ ವಾರ ಚೀನಾದ ಗೂಢಚಾರ ಬಲೂನ್ ಅನ್ನು ಹೊಡೆದುರುಳಿಸಿದ ನಂತರ, ಅಮೆರಿಕ ಅದೇ ಮಾದರಿಯ ಮತ್ತೆ ಮೂರು ಅಪರಿಚಿತ ವಸ್ತುಗಳನ್ನು ಹೊಡೆದುರುಳಿಸಿತ್ತು.
ಇದನ್ನೂ ಓದಿ: Spy Balloon: ಕೆನಡಾದ ವಾಯು ಪ್ರದೇಶದಲ್ಲಿ ಬಲೂನ್, ಹೊಡೆದುರುಳಿಸಿದ ಅಮೆರಿಕ
ಇದು ಏಲಿಯನ್‌ಗಳ ಕೃತ್ಯವೇ?
ಅಮೆರಿಕದ ವಾಯು ಪ್ರದೇಶದಲ್ಲಿ ಕಂಡು ಬರುತ್ತಿರುವ ಈ ನಿಗೂಢ ಹಾರುವ ವಸ್ತುಗಳ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ದೊರೆಯಿತ್ತಿಲ್ಲ. ಆದರೆ, ಇವು ಏಲಿಯನ್ ಕೃತ್ಯಗಳಾಗಿರಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದೂ ಹೇಳಲಾಗುತ್ತಿದೆ. ಈ ಅಪರಿಚಿತ ವಸ್ತುಗಳ ಹಿಂದೆ ವಿದೇಶಿಯರು ಅಥವಾ ಇತರ ಯಾವುದೇ ಶಕ್ತಿಗಳ ಕೈವಾಡ ಇರುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ಉತ್ತರ ಅಮೆರಿಕಾದ ವಾಯುಪ್ರದೇಶದ ಮೇಲ್ವಿಚಾರಣೆಯ ಯುಎಸ್ ಏರ್ ಫೋರ್ಸ್ ಜನರಲ್ ಅವರು ಭಾನುವಾರ ಹೇಳಿದ್ದಾರೆ.