Site icon Vistara News

Usha Chilukuri Vance: ಟ್ರಂಪ್ ಅವರ ಉಪಾಧ್ಯಕ್ಷ ಅಭ್ಯರ್ಥಿಯ ಪತ್ನಿ ಭಾರತೀಯ ಸಂಸ್ಕೃತಿಯ ಪ್ರತಿಪಾದಕಿ!

Usha Chilukuri Vance

ಅಮೆರಿಕದ (US) ಮಾಜಿ ಅಧ್ಯಕ್ಷ (former President) ಡೊನಾಲ್ಡ್ ಟ್ರಂಪ್ (Donald Trump) ಅವರ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ (vice presidential) ಓಹಿಯೋ ಸೆನೆಟರ್ (Ohio Senator) ಜೆಡಿ ವ್ಯಾನ್ಸ್ (JD Vance) ಅವರನ್ನು ಆಯ್ಕೆ ಮಾಡಲಾಗಿದೆ. ವಿಶೇಷ ಅಂದರೆ ಅವರ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್ (Usha Chilukuri Vance) ಭಾರತೀಯ ಮೂಲದವರಾಗಿದ್ದಾರೆ. 38 ವರ್ಷದ ಉಷಾ ಚಿಲುಕುರಿ ವ್ಯಾನ್ಸ್ ಕ್ಯಾಲಿಫೋರ್ನಿಯಾ ಉಪನಗರದಲ್ಲಿ ಬೆಳೆದವರು.

ಉಷಾ ಅವರು ಯೇಲ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ್ದು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಾನ್ ರಾಬರ್ಟ್ಸ್ ಮತ್ತು ಬ್ರೆಟ್ ಕವನಾಗ್ ಅವರಿಗೆ ಕ್ಲರ್ಕ್‌ ಆಗಿದ್ದರು. ಓಹಿಯೋ ಸೆನೆಟರ್ ಜೆಡಿ ವ್ಯಾನ್ಸ್ ಅವರನ್ನು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜುಲೈ 15ರಂದು ವೈಟ್ ಹೌಸ್ ಅನ್ನು ಮರಳಿ ಗೆಲ್ಲುವ ಪ್ರಯತ್ನದಲ್ಲಿ ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಉಪಾಧ್ಯಕ್ಷ ಅಭ್ಯರ್ಥಿಯಾಗುವ ಮೊದಲು 39 ವರ್ಷದ ವ್ಯಾನ್ಸ್ ಅವರು ಓಹಿಯೋದಿಂದ ಹೊಸ ರಿಪಬ್ಲಿಕನ್ ಸೆನೆಟರ್ ಆಗಿ ಆಯ್ಕೆಯಾಗಿರುವ ಕಾರಣ ಅವರು ಈಗಾಗಲೇ ಅಮೆರಿಕನ್ನರಿಗೆ ಚಿರಪರಿಚಿತರಾಗಿದ್ದಾರೆ. ಅವರ ಆತ್ಮಚರಿತ್ರೆಯು ಬಿಳಿಯ ಕಾರ್ಮಿಕ ವರ್ಗದ ಸಮಸ್ಯೆಗಳನ್ನು ವಿವರಿಸುತ್ತದೆ.


ವಾನ್ಸ್ ಅವರಿಗೆ ಪತ್ನಿ ಉಷಾ ವ್ಯಾನ್ಸ್ ಎಲ್ಲದರಲ್ಲೂ ಬೆಂಬಲವಾಗಿ ನಿಂತಿದ್ದಾರೆ. ಮಿಲ್ವಾಕೀಯ ರಿಪಬ್ಲಿಕನ್ ನ್ಯಾಷನಲ್ ಕನ್ವೆನ್ಶನ್ ಮಹಡಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಧ್ವನಿ ಮತದ ಮೂಲಕ ವ್ಯಾನ್ಸ್ ಆಯ್ಕೆಯಾದಾಗ ಉಷಾ ಅವರ ಪಕ್ಕದಲ್ಲಿ ನಿಂತು ಹುರಿದುಂಬಿಸಿದ್ದರು. ಜೆಡಿ ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್ ಅವರು ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದಾರೆ. ಭಾರತೀಯ ವಲಸಿಗರ ಮಗಳಾಗಿರುವ ಉಷಾ ಚಿಲುಕುರಿ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಬೆಳೆದರು.

ಯೇಲ್ ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಬ್ಯಾಚುಲರ್ ಪದವಿ ಪಡೆದಿರುವ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಆಫ್ ಫಿಲಾಸಫಿ ಪದವಿಯನ್ನು ಪಡೆದಿದ್ದಾರೆ. ವಾಷಿಂಗ್ಟನ್‌ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬ್ರೆಟ್ ಕವನಾಗ್‌ ಅವರ ಗುಮಾಸ್ತರಾಗಿ ಒಂದು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಬಳಿಕ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್‌ಗೆ ಕಾನೂನು ಗುಮಾಸ್ತರಾಗಿ ಒಂದು ವರ್ಷ ಕಳೆದರು.

ಮುಂಗರ್, ಟೋಲ್ಲೆಸ್ ಮತ್ತು ಓಲ್ಸನ್ ಕಾನೂನು ಸಂಸ್ಥೆಯಲ್ಲಿ ವಕೀಲರಾಗಿದ್ದ ಅವರು ಈಗ ಸಂಸ್ಥೆಯನ್ನು ತೊರೆದಿರುವುದಾಗಿ ಆ ಸಂಸ್ಥೆ ಪ್ರಕಟಿಸಿದೆ. ಉನ್ನತ ಶಿಕ್ಷಣ, ಸ್ಥಳೀಯ ಸರ್ಕಾರ, ಮನರಂಜನೆ ಮತ್ತು ತಂತ್ರಜ್ಞಾನ, ಸೆಮಿಕಂಡಕ್ಟರ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಕೀರ್ಣ ನಾಗರಿಕ ದಾವೆ ಮತ್ತು ಮೇಲ್ಮನವಿಗಳನ್ನು ಅವರು ನಿರ್ವಹಿಸಿದ್ದಾರೆ.

ಯೇಲ್‌ನಲ್ಲಿ ನಾಲ್ಕು ವರ್ಷಗಳ ಪಠ್ಯೇತರ ಚಟುವಟಿಕೆಯ ಅನಂತರ ಅವರು ಕೇಂಬ್ರಿಡ್ಜ್‌ನಲ್ಲಿ ಗೇಟ್ಸ್ ಫೆಲೋ ಆಗಿ ತಮ್ಮ ಅಧ್ಯಯನವನ್ನು ಮುಂದುವರಿಸಿದರು. ಅಲ್ಲಿ ಅವರು ಎಡಪಂಥೀಯ ಮತ್ತು ಉದಾರವಾದಿ ಗುಂಪುಗಳೊಂದಿಗೆ ತೊಡಗಿಸಿಕೊಂಡರು. 2014ರಲ್ಲಿ ನೋಂದಾಯಿತ ಡೆಮೋಕ್ರಾಟ್ ಆಗಿದ್ದರು.


ಉಷಾ ಮತ್ತು ಜೆಡಿ ವಾನ್ಸ್ ಮೊದಲ ಬಾರಿಗೆ ಯೇಲ್ ಲಾ ಸ್ಕೂಲ್‌ನಲ್ಲಿ ಭೇಟಿಯಾದರು. 2014ರಲ್ಲಿ ಕೆಂಟುಕಿಯಲ್ಲಿ ಹಿಂದೂ ಅರ್ಚಕರೊಬ್ಬರ ಸಮ್ಮುಖದಲ್ಲಿ ವಿವಾಹವಾಗಿದ್ದರು. ವ್ಯಾನ್ಸ್ ದಂಪತಿಗೆ ಮೂವರು ಮಕ್ಕಳಿದ್ದಾರೆ.

ಜೆಡಿ ಯಶಸ್ಸಿನಲ್ಲಿ ಉಷಾ ಅವರ ಪಾತ್ರ ಮುಖ್ಯ

ಪತಿಯ ಸಾಧನೆಯಲ್ಲಿ ಉಷಾ ವ್ಯಾನ್ಸ್ ಗಣನೀಯ ಕೊಡುಗೆ ನೀಡಿದ್ದಾರೆ. 2020ರಲ್ಲಿ ರಾನ್ ಹೊವಾರ್ಡ್ ನಿರ್ದೇಶಿಸಿದ ಚಲನಚಿತ್ರದಲ್ಲಿ ಅಳವಡಿಸಲಾದ ಹಿಲ್‌ಬಿಲ್ಲಿ ಎಲಿಜಿ ಎಂಬ ಕತೆ ವ್ಯಾನ್ಸ್ ಅವರ ಆತ್ಮಚರಿತ್ರೆಯ ಭಾಗವಾಗಿದೆ. ಇದರಲ್ಲಿ ಉಷಾ ಅವರನ್ನು ಜೆಡಿ ತನ್ನ “ಯೇಲ್ ಸ್ಪಿರಿಟ್ ಗೈಡ್” ಎಂದು ಹೇಳಿದ್ದಾರೆ. ಅವಕಾಶಗಳನ್ನು ಹುಡುಕಲು ಅವಳು ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದಳು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Donald Trump: ಬೆದರಿಕೆಗೆ ಬಗ್ಗದ ಡೊನಾಲ್ಡ್‌ ಟ್ರಂಪ್;‌ ಕಿವಿಗೆ ಬ್ಯಾಂಡೇಜ್‌ ಕಟ್ಟಿಕೊಂಡು ಜನರೆದುರು ಪ್ರತ್ಯಕ್ಷ!

ಉಷಾ ಅವರ ಕುರಿತು ಮಾತನಾಡಿರುವ ಯುಎಸ್ ಮೂಲದ ಜಾಗತಿಕ ರಿಯಲ್ ಎಸ್ಟೇಟ್ ಹೂಡಿಕೆ ಸಲಹೆಗಾರ ಮತ್ತು ಪ್ರಸಿದ್ಧ ಉದ್ಯಮಿ ಎಐ ಮೇಸನ್, ಉಷಾ ವ್ಯಾನ್ಸ್ ಹೆಚ್ಚು ನಿಪುಣ ವಕೀಲರು ಮತ್ತು ಭಾರತೀಯ ವಲಸಿಗರ ಮಗಳು. ಆಕೆಗೆ ಭಾರತೀಯ ಸಂಸ್ಕೃತಿ ಮತ್ತು ಭಾರತದ ಬಗ್ಗೆ ತಿಳಿದಿದೆ. ಯುಎಸ್ಎ ಮತ್ತು ಭಾರತದ ನಡುವೆ ಉತ್ತಮ ಸಂಬಂಧಗಳನ್ನು ಹೊಂದಲು ಅವರು ತಮ್ಮ ಪತಿಗೆ ದೊಡ್ಡ ಸಹಾಯ ಮಾಡಬಹುದು ಎಂದು ಹೇಳಿದ್ದಾರೆ.

ಪತಿಯ ಬಗ್ಗೆ ಮಾತನಾಡಿರುವ ಉಷಾ, ಅವರು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಅವರು ಎಷ್ಟು ಸೃಜನಶೀಲರು ಎಂಬುದನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರು ಹೇಳುವ ಮತ್ತು ಮಾಡುವ ಎಲ್ಲ ಕಾರ್ಯಗಳು ತುಂಬಾ ಆಲೋಚನೆಯ ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟಿದೆ. ಅವರು ಯಾವಾಗಲೂ ಉತ್ತಮವಾಗಿ ಮಾಡಲು ಪ್ರಯತ್ನಿಸುತ್ತಾರೆ ಎಂದು ತಿಳಿಸಿದ್ದಾರೆ.

Exit mobile version