ಫ್ಲೋರಿಡಾ: ಮಾನವೀಯತೆ ಎನ್ನುವುದು ಇನ್ನೂ ಜೀವಂತವಿದೆ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ. ಫ್ಲೋರಿಡಾದ (Florida) ಪೆನ್ಸಾಕೋಲ ಬೀಚ್‌ನಲ್ಲಿ ಕಂಡುಬಂದ ಈ ದೃಶ್ಯ ಸದ್ಯ ವೈರಲ್ ಆಗಿದೆ. ಸಮುದ್ರದ ದಡದ ಅಂಚಿಗೆ ಬಂದು ಒದ್ದಾಡುತ್ತಿದ್ದ ಬೃಹತ್ ಗಾತ್ರದ ಶಾರ್ಕ್ (shark) ಅನ್ನು ಒಂದಷ್ಟು ಜನರ ಗುಂಪು ಸಾಹಸ ಮಾಡಿ ಮತ್ತೆ ಸಮುದ್ರಕ್ಕೆ ಸೇರಿಸಿದ್ದಾರೆ. ಸಾಕಷ್ಟು ನೀರು ಸಿಗದೆ ಪರಿತಪಿಸುತ್ತಿದ್ದ ಆ ಶಾರ್ಕ್ ಕೊನೆಗೂ ಬದುಕಿದೆಯಾ ಬಡ ಜೀವ ಎನ್ನುವಂತೆ ಸಮುದ್ರದ ಒಳಗೆ ಹೊರಟು ಹೋಗಿದೆ. ಈ ಸಾಹಸ(adventurous)ಮೆರೆದ ವ್ಯಕ್ತಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಸಾಕಷ್ಟು ಪ್ರವಾಸಿಗರು ಆಗಮಿಸಿದ್ದ ಬೀಚ್‌ಗೆ ಬಂದಿದ್ದ ಬೃಹತ್ ಶಾರ್ಕ್ ಬಳಿಕ ಸಮುದ್ರದ ಒಳಗೆ ಹೋಗಲು ಪರದಾಡುತ್ತಿತ್ತು. ಇದನ್ನು ನೋಡಿದ ಪ್ರವಾಸಿಗರು ಆರಂಭದಲ್ಲಿ ಗಾಬರಿಯಿಂದ ಹಿಂದೆ ಸರಿದರೂ ಬಳಿಕ ಗುಂಪುಗೂಡಿ ಶಾರ್ಕ್ ರಕ್ಷಣೆಗೆ ಮುಂದಾದರು.
WATCH 🚨 *Terrifying moment* A group of men helped a stranded mako shark back into the water on Pensacola beach, Florida
— Insider Paper (@TheInsiderPaper) September 18, 2023
(Credit: Tina Fey) pic.twitter.com/b6LFKodCf1
ಸುಲಭವಾಗಿರಲಿಲ್ಲ ರಕ್ಷಣಾ ಕಾರ್ಯಾಚರಣೆ
ಮೊದಲು ಶಾರ್ಕ್‌ನ ಬಾಲ ಹಿಡಿದು ಅದನ್ನು ಸಮುದ್ರದೊಳಗೆ ಬಿಡುವ ಯೋಜನೆಯನ್ನು ಮಾಡಲಾಗಿತ್ತು. ಆದರೆ ಇದರಿಂದ ವಿಚಲಿತವಾದ ಶಾರ್ಕ್ ಮೈ ಕೊಡವಿದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿದ ಮಂದಿ ಹಿಂದೆ ಸರಿದರು. ಬಳಿಕ ಶಾರ್ಕ್ 3,4 ಸಲ ಬಾಲ ಕೊಡವಿತು. ಇದರಿಂದ ವ್ಯಕ್ತಿಯೊಬ್ಬರು ಸಮುದ್ರದೊಳಗೆ ಬಿದ್ದು ಬಿಟ್ಟರು. ಅದರ ಮೈಯನ್ನು ಸ್ವಲ್ಪವೂ ಸರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಎಲ್ಲರೂ ಹಿಂದೆ ಸರಿಯಲು ಆರಂಭಿಸಿದರು. ಆದರೆ ಪಟ್ಟು ಬಿಡದ ಯುವಕನೋರ್ವ ಮತ್ತೆ ಅದರ ಬಾಲ ಹಿಡಿದು ಸಮುದ್ರದೊಳಗೆ ತಳ್ಳುವ ಪ್ರಯತ್ನ ನಡೆಸಿದ. ಅದಾಗಲೇ ಶಾರ್ಕ್ ಹೆಚ್ಚಿನ ನೀರು ಇರುವ ಪ್ರದೇಶಕ್ಕೆ ತಲುಪಿದ್ದರಿಂದ ಆ ಯುವಕನ ಪ್ರಯತ್ನ ಫಲಿಸಿತು. ಅದಕ್ಕೆ ಬ್ಯಾಲೆನ್ಸ್ ಸಿಗುವವರೆಗೂ ಪ್ರಯತ್ನ ಮುಂದುವರಿಸಲಾಯಿತು. ಬಳಿಕ ಶಾರ್ಕ್ ಸಮುದ್ರದ ಆಳಕ್ಕೆ ಈಜಿಕೊಂಡು ಹೋಯಿತು.
ಸದ್ಯ ಈ ವೈರಲ್ ವಿಡಿಯೊವನ್ನು 4೦ ಸಾವಿರಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಇಷ್ಟಪಟ್ಟಿದ್ದಾರೆ. ಬೀಚ್‌ಗೆ ಆಗಮಿಸಿದ್ದ ಟೀನಾ ಎನ್ನುವ ಯುವತಿ ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೊ ಚಿತ್ರೀಕರಣ ನಡೆಸಿದ್ದರು. ಅವರ ಪತಿಯೂ ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದ್ದರು. ಟೀನಾ ಈ ವಿಡಿಯೊವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ನಂತರ ಈ ವಿಡಿಯೊವನ್ನು Insider Paper ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಸಾವಿರಾರು ಮಂದಿ ವೀಕ್ಷಿಸಿದ್ದರು.
ಇದನ್ನೂ ಓದಿ: Viral News: ಶಾಲೆ ತೊರೆದು 37 ವರ್ಷಗಳ ಬಳಿಕ ಪಿಯುಸಿ ಪರೀಕ್ಷೆ ಬರೆದ ಆಟೋ ಡ್ರೈವರ್!
ಮಾದರಿ ನಡೆ
ಈ ರಕ್ಷಣಾ ಕಾರ್ಯಾಚರಣೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇದು ಮಾದರಿ ನಡೆ ಎಂದು ಹಲವರು ಹೇಳಿದ್ದಾರೆ. ಈ ರೀತಿಯ ಕೆಲಸ ಪರಿಸರ ಸಂರಕ್ಷಣೆ ಮತ್ತು ಪ್ರಾಣಿಗಳ ರಕ್ಷಣೆಗೆ ಗಣನೀಯ ಕೊಡುಗೆ ನೀಡುತ್ತದೆ ಎಂದು ಇನ್ನೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಹಲವು ನೆಟ್ಟಿಗರು ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.