ಟೋಕಿಯೊ: ಭಾರತದಲ್ಲಿ ಕೆಲಸದ ವೇಳೆ ವಿರಾಮ ತೆಗೆದುಕೊಳ್ಳುವುದು ದೊಡ್ಡ ವಿಚಾರವೇನಲ್ಲ. ಎಷ್ಟೋ ಮಂದಿ ಕೆಲಸದ ಮಧ್ಯೆಯೇ ಗಂಟೆಗಳ ಕಾಲ ವಿರಾಮ ತೆಗೆದುಕೊಳ್ಳುವವರೂ ಇದ್ದಾರೆ. ಆದರೆ ಜಪಾನ್‌ನಲ್ಲಿ ಹಾಗಿಲ್ಲ. ಕೆಲಸದ ಅವಧಿಯಲ್ಲಿ ಸಿಗರೇಟ್ ಸೇದುವುದು ಆ ದೇಶದಲ್ಲಿ ಅಕ್ಷಮ್ಯ ಅಪರಾಧವಿದ್ದಂತೆ. ಅದನ್ನೂ ಲೆಕ್ಕಿಸದೆ ಸಿಗರೇಟ್ ಸೇದಿದ್ದ ಉದ್ಯೋಗಿ ಇದೀಗ ಭಾರೀ ಮೊತ್ತದ ದಂಡ ತೆರಬೇಕಾದ ಪರಿಸ್ಥಿತಿ (Viral News) ಬಂದೊದಗಿದೆ.
ಇದನ್ನೂ ಓದಿ: Viral Video: ಇದು ಕುದುರೆ ಸವಾರಿಯಲ್ಲ, ಮೊಸಳೆ ಸವಾರಿ! ಭಯ ತರಿಸುವ ವಿಡಿಯೊ
ಜಪಾನ್‌ನ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 61 ವರ್ಷದ ವ್ಯಕ್ತಿಗೆ ಇದೀಗ ಇಲಾಖೆ ಬರೋಬ್ಬರಿ 9 ಲಕ್ಷ ರೂ. ದಂಡ ವಿಧಿಸಿದೆ. ಅದಕ್ಕೆ ಕಾರಣ ಸಿಗರೇಟ್ ಸೇದಿರುವುದು. ಹೌದು. ಈ ವ್ಯಕ್ತಿ ಕಳೆದ 14 ವರ್ಷಗಳಲ್ಲಿ ಸಿಗರೇಟ್ ಸೇದುವುದಕ್ಕೆಂದೇ 4,500 ಬಾರಿ ವಿರಾಮ ತೆಗೆದುಕೊಂಡಿದ್ದಾರೆ. ಬರೋಬ್ಬರಿ 355 ಗಂಟೆ ಮತ್ತು 19 ನಿಮಿಷಗಳನ್ನು ಸಿಗರೇಟ್ ಸೇದುವುದರಲ್ಲೇ ಕಳೆದಿದ್ದಾರೆ. ಇವರ ಜತೆಗೆ ಇವರಿಬ್ಬರು ಸ್ನೇಹಿತರೂ ಕೂಡ ಹಲವಾರು ಗಂಟೆ ಸಿಗರೇಟ್ ಸೇದುವುದಕ್ಕೆ ಕಳೆದಿದ್ದಾರೆ. ಮೂರು ಉದ್ಯೋಗಿಗಳಿಗೆ ಇಲಾಖೆ ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದೆ.
ಎಷ್ಟು ಬಾರಿ ಎಚ್ಚರಿಕೆ ಕೊಟ್ಟರ ಎಚೆತ್ತುಕ್ಕೊಳ್ಳದ ಈ ಮೂರು ಉದ್ಯೋಗಿಗಳ ವಿರುದ್ಧ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತನಿಖೆ ಆರಂಭಿಸಲಾಗಿದೆ. ತನಿಖಾ ವರದಿ ಬಂದ ನಂತರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. 61 ವರ್ಷದ ವ್ಯಕ್ತಿಯು ನಿರ್ದೇಶಕರ ಮಟ್ಟದ ಹುದ್ದೆಯಲ್ಲಿದ್ದು, ಅವರಿಗೆ ಒಟ್ಟು 9 ಲಕ್ಷ ರೂ. ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೆ ಮುಂದಿನ ಆರು ತಿಂಗಳ ಕಾಲ ಅವರ ಸಂಬಳದಲ್ಲಿ ಶೇ.10ನ್ನು ಕಡಿತ ಮಾಡಿರುವುದಾಗಿಯೂ ಹೇಳಲಾಗಿದೆ.
ಇದನ್ನೂ ಓದಿ: Viral Video: ಭಾರತದಲ್ಲಿ ವಿಶ್ವದಲ್ಲೇ ಎತ್ತರದ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ, ಇಲ್ಲಿದೆ ವಿಡಿಯೊ
ಜಪಾನ್ ಕೆಲಸದ ವಿಚಾರದಲ್ಲಿ ಅತ್ಯಂತ ಕಟ್ಟುನಿಟ್ಟಾದ ದೇಶ. ಅಲ್ಲಿ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗುವ ಹಾಗೂ ಕೆಲಸದಿಂದ ಮನೆಗೆ ತೆರಳುವ ಸಮಯವನ್ನೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಕೇವಲ ಮೂರು ನಿಮಿಷ ಬೇಗ ಮನೆಗೆ ಹೋದರು ಎನ್ನುವ ಕಾರಣಕ್ಕೇ ಉದ್ಯೋಗಿಗಳಿಗೆ ದಂಡ ವಿಧಿಸಿದ ಘಟನೆಗಳೂ ಜಪಾನ್‌ನಲ್ಲಿವೆ.