Site icon Vistara News

Viral News: ಪರೀಕ್ಷೆ 90 ಸೆಕೆಂಡ್‌ ಮೊದಲೇ ಮುಗಿಸಿದ್ದಕ್ಕೆ 12 ಲಕ್ಷ ರೂ. ಪರಿಹಾರ ಕೋರಿದ ವಿದ್ಯಾರ್ಥಿಗಳು!

south korea

south korea

ದಕ್ಷಿಣ ಕೊರಿಯಾ: ಪ್ರತಿಯೊಂದು ಸೆಕೆಂಡ್‌ ಕೂಡ ಅಮೂಲ್ಯವಾದುದು, ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಬಹುಶಃ ಇದೀಗ ಈ ಮಾತಿನ ಅರ್ಥ ದಕ್ಷಿಣ ಕೊರಿಯಾ (South Korean) ಸರ್ಕಾರಕ್ಕೆ ಚೆನ್ನಾಗಿ ಅರ್ಥವಾದಂತಿದೆ. ಯಾಕೆಂದರೆ ಕಾಲೇಜು ಪ್ರವೇಶ ಪರೀಕ್ಷೆಯನ್ನು (College entrance examination) ನಿಗದಿತ ಅವಧಿಗಿಂತ 90 ಸೆಕೆಂಡ್‌ ಮೊದಲೇ ಮುಗಿಸಿದ್ದಕ್ಕೆ ಸುಮಾರು 39 ವಿದ್ಯಾರ್ಥಿಗಳು ಕೋರ್ಟ್‌ ಮೊರೆ ಹೋಗಿದ್ದಾರೆ. ಪ್ರತಿಯೊಬ್ಬರು 20 ಮಿಲಿಯನ್‌ ವೋನ್‌ (12 ಲಕ್ಷ ರೂ.) ಪರಿಹಾರ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ (Viral News).

ಏನಿದು ಪ್ರಕರಣ?

ಕಾಲೇಜು ಪ್ರವೇಶಕ್ಕಾಗಿ ಸುಮಾರು 8 ಗಂಟೆಗಳ ಪರೀಕ್ಷೆ ಆಯೋಜಿಸಲಾಗಿತ್ತು. ವಿವಿಧ ವಿಷಯನ್ನೊಳಗೊಂಡ ಈ ಪರೀಕ್ಷೆಯನ್ನು 90 ಸೆಕೆಂಡ್‌ ಮೊದಲು ಮುಗಿಸಿದ್ದರಿಂದ ಒಂದು ವರ್ಷ ನಷ್ಟವಾಗಿದೆ. ಮತ್ತೆ ಪರೀಕ್ಷೆ ಬರೆಯಲು, ಒಂದು ವರ್ಷ ಅಧ್ಯಯನ ಮಾಡಲು 20 ಮಿಲಿಯನ್‌ ವೋನ್‌ ವೆಚ್ಚವಾಗುತ್ತದೆ ಎನ್ನುವುದು ವಿದ್ಯಾರ್ಥಿಗಳ ವಾದ.

ತನ್ನ ದೀರ್ಘ ಸಮಯ ಮತ್ತು ಕಠಿಣ ಪ್ರಶ್ನೆಗಳ ಕಾರಣದಿಂದ ಈ ಪರೀಕ್ಷೆ ಆಗಾಗ ಸುದ್ದಿಯಾಗುತ್ತದೆ. ಇದು ಅನೇಕ ವಿಷಯಗಳಲ್ಲಿ ಎಂಟು ಗಂಟೆಗಳ ಬ್ಯಾಕ್-ಟು-ಬ್ಯಾಕ್ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡ ಪರೀಕ್ಷೆ. ಇದನ್ನು ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಪರಿಗಣಿಸಲಾಗುತ್ತದೆ. ಇನ್ನು ಈ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗ ಬಾರದಿರಲಿ ಎಂದು ಸರ್ಕಾರ ವಾಯುಪ್ರದೇಶವನ್ನು ಮುಚ್ಚುವುದು ಮತ್ತು ಷೇರು ಮಾರುಕಟ್ಟೆಯನ್ನು ವಿಳಂಬವಾಗಿ ತೆರೆಯುವುದು ಮುಂತಾದ ಕ್ರಮವನ್ನು ಕೈಗೊಳ್ಳುತ್ತದೆ.

ಈ ವರ್ಷದ ಈ ಸುನೆಂಗ್ ಪರೀಕ್ಷೆ(Suneung exam)ಯಲ್ಲಿ ಅರ್ಧ ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಿತ್ತು. ಈ ಮಧ್ಯೆ 39 ವಿದ್ಯಾರ್ಥಿಗಳ ಗುಂಪು ಮೊಕದ್ದಮೆ ಹೂಡಿ, ಪರೀಕ್ಷೆ ಸಮಯದಲ್ಲಿ ಅವಧಿ ಕಡಿತಗೊಳಿಸಿದ್ದರ ಬಗ್ಗೆ ಕೋರ್ಟ್‌ನ ಗಮನ ಸೆಳೆದಿದ್ದಾರೆ. ದೇಶದ ರಾಜಧಾನಿ ಸಿಯೋಲ್‌ (Seoul)ನಲ್ಲಿ ನಡೆದ ಕೊರಿಯನ್ ಭಾಷಾ ಪರೀಕ್ಷೆಯ ಸಮಯದಲ್ಲಿ ಈ ಘಟನೆ ನಡೆದಿತ್ತು. ಅಕಾಲಿಕವಾಗಿ ಗಂಟೆ ಬಾರಿಸಿ, ವಿದ್ಯಾರ್ಥಿಗಳ ಪ್ರತಿಭಟನೆಯ ಹೊರತಾಗಿಯೂ ಮೇಲ್ವಿಚಾರಕರು ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಿದ್ದರು. ಬಳಿಕ ತಪ್ಪನ್ನು ಒಪ್ಪಿಕೊಂಡರೂ ಊಟದ ವಿರಾಮದ ಸಮಯದಲ್ಲಿ ಕೇವಲ ಒಂದೂವರೆ ನಿಮಿಷಗಳನ್ನು ಮಾತ್ರ ನೀಡಲಾಯಿತು.

ಇದನ್ನೂ ಓದಿ: Viral Video: ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ!

ವಿದ್ಯಾರ್ಥಿಗಳ ಮೇಲೆ ಪರಿಣಾಮ

ಈ ಘಟನೆಯಿಂದ ವಿದ್ಯಾರ್ಥಿಗಳನ್ನು ಭಾವನೆಗೆ ಧಕ್ಕೆ ಉಂಟಾಗಿದೆ. ಅವರು ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ವಕೀಲರು ವಾದಿಸಿದ್ದಾರೆ. ಪರೀಕ್ಷೆಯ ಉಳಿದ ವಿಭಾಗಗಳತ್ತ ಗಮನ ಹರಿಸುವ ಅವರ ಸಾಮರ್ಥ್ಯದ ಮೇಲೆ ಈ ಘಟನೆ ಪರಿಣಾಮ ಬೀರಿದೆ. ಇದರಿಂದಾಗಿ ಕೆಲವು ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರ ನಡೆದರು ಎಂದು ಅವರು ವಿವರಿಸಿದ್ದಾರೆ. ನಿರ್ದಿಷ್ಟ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕರು ಸಮಯವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ತಪ್ಪು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. 2012ರಲ್ಲಿ ಚೀನಾದಲ್ಲಿ ನ್ಯಾಷನಲ್ ಕಾಲೇಜು ಪ್ರವೇಶ ಪರೀಕ್ಷೆಯ ಸಮಯದಲ್ಲಿ ಅಕಾಲಿಕವಾಗಿ ಗಂಟೆ ಬಾರಿಸಿದ್ದಕ್ಕಾಗಿ ಸಿಬ್ಬಂದಿಯೊಬ್ಬರು ಒಂದು ವರ್ಷದ ಅಮಾನತು ಶಿಕ್ಷೆಯನ್ನು ಪಡೆದಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version