Site icon Vistara News

Viral News: ವಿದೇಶಿ ಕೆಲಸ: ಅತೀ ಹೆಚ್ಚು ಸಂಬಳ ನೀಡುವ ದೇಶ ಇದಂತೆ!

switzerland

ವಿದೇಶದಲ್ಲಿ ಕೆಲಸ ಮಾಡುವ ಕನಸು ಯಾರಿಗಿಲ್ಲ ಹೇಳಿ! ಹೆಚ್ಚು ಸಂಬಳ, ವಿಪುಲ ಅವಕಾಶ ಅರಸಿ ವಿದೇಶಕ್ಕೆ ಹೋದರೆ, ಯಾವ ದೇಶದಲ್ಲಿ ಅತ್ಯಂತ ಹೆಚ್ಚು ಸಂಬಳ (salary) ಸಿಗುತ್ತದೆ ಗೊತ್ತಾ? ಅದು ಸ್ವಿಜರ್‌ಲ್ಯಾಂಡ್ (switzerland)!‌ ಹೌದು. ಸ್ವಿಜರ್‌ಲ್ಯಾಂಡ್‌ ಅತೀ ಹೆಚ್ಚು ಸಂಬಳ ಕೊಡುವ ದೇಶವಾದರೆ, ಯುಎಸ್‌ ಇದರಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತ ಏಳನೇ ಸ್ಥಾನದಲ್ಲಿದೆ.

ವೃತ್ತಿಜೀವನಕ್ಕೆ ಸಂಬಂಧಿಸಿ ನಾವು ಆರಿಸಿಕೊಂಡ ನಮ್ಮದೇ ದೇಶದ ಸ್ಥಳವೊಂದರಲ್ಲಿ ಕಂಫರ್ಟ್‌ಗಳನ್ನು ಪಡೆದುಕೊಂಡು ಅದಕ್ಕೇ ಅಂಟಿಕೊಂಡು ಯಾವುದೇ ರಿಸ್ಕ್‌ ತೆಗೆದುಕೊಳ್ಳದ ವರ್ಗ ಒಂದಾದರೆ, ರಿಸ್ಕ್‌ಗಳ್ನು ಎದುರು ಹಾಕಿಕೊಂಡು ಕಂಫರ್ಟ್‌ಗಳನ್ನು ಮೀರಿ, ಮುಂದೊಂದು ದಿನದ ಅತ್ಯುತ್ತಮ ಬದುಕಿನ ಕನಸಿನಲ್ಲಿ ಹೊಸ ಅವಕಾಶಗಳನ್ನು ಅರಸುತ್ತಾ ವಿದೇಶಕ್ಕೆ ಹಾರುವ ವರ್ಗ ಇನ್ನೊಂದೆಡೆ. ಕೆಲವರಿಗೆ, ಮನೆಯವರು, ಪ್ರೀತಿಪಾತ್ರರೆಲ್ಲರನ್ನು ಬಿಟ್ಟು ಹೊಸ ನೆಲ, ಹೊಸ ಜನರು ಸೇರಿದಂತೆ ಎಲ್ಲೂ ಹೊಸತೇ ಆಗಿರುವ ಅಪರಿಚಿತವಾದ ಇನ್ನೊಂದು ಜಾಗಕ್ಕೆ ಹೋಗಿ ಅಲ್ಲಿ ದೊಡ್ಡ ಕೊಳದಲ್ಲಿ ಈಜಾಡಲು ಕಲಿಯುವುದು ಸ್ವಲ್ಪ ಚಾಲೆಂಜಿಂಗ್‌ ಅನಿಸಬಹುದು. ಆದರೆ ಬದುಕಿನ ಮುಂದೆ ಇದು ಹರವಿಬಿಡುವ ಸಾಧ್ಯತೆಗಳು, ವಿಸ್ತರಿಸುವ ಅವಕಾಶಗಳು ಎಲ್ಲವೂ ನಮ್ಮ ಕೆಲವು ವೀಕ್‌ನೆಸ್‌ಗಳನ್ನು ಮೆಟ್ಟಿ ನಿಲ್ಲುವಂತೆ ಮಾಡಿಬಿಡುತ್ತದೆ.

ಇಂತಹ ವಿಶಾಲ ಸಮುದ್ರದಲ್ಲಿ ಈಜಲು ಒಮ್ಮೆ ಹಾರಿದರೆಂದರೆ, ಬಹುತೇಕರಿಗೆ ಮತ್ತೆ ತಿರುಗಿ ನೋಡುವುದು ಬೇಕಾಗಿರುವುದಿಲ್ಲ. ಈಜಲು ಬರುತ್ತದೋ ಇಲ್ಲವೋ ಈಜಿಯೇನು ಎಂಬ ಧೈರ್ಯವೇ ಸಾಕಾಗುತ್ತದೆ. ಹೀಗೆ ಒಮ್ಮೆ ಹಾರಿದರೆಂದರೆ ಒಟ್ಟು ವಾರ್ಷಿಕ ಆದಾಯದಲ್ಲಿ, ಇಲ್ಲಿನ ಅದೇ ಕೆಲಸಕ್ಕೆ ಇನ್ನೊಂದು ದೇಶದಲ್ಲಿ ಸಿಗುವ ದೊಡ್ಡ ಜಂಪ್‌ ಇದ್ದಕ್ಕಿದಂತೆ ಬದುಕನ್ನೇ ಬೇರೊಂದು ಸ್ತರಕ್ಕೆ ಕೊಂಡೊಯ್ಯಬಲ್ಲದು. ಒಂದು ಅಂದಾಜಿನ ಪ್ರಕಾರ, ಹೀಗೆ ತಮ್ಮ ದೇಶದಿಂದ ವಿದೇಶಕ್ಕೆ ಹಾರಿದ ಮಂದಿಯಲ್ಲಿ ಪ್ರತಿಯೊಬ್ಬನ ವಾರ್ಷಿಕ ಆದಾಯದಲ್ಲಿ ಸರಾಸರಿ ಸುಮಾರು 21,000 ಡಾಲರ್‌ಗಳಷ್ಟು ಏರಿಕೆಯಾಗಿಬಿಡುತ್ತದೆಯಂತೆ. ಹಾಗೆ ನೋಡಿದರೆ ಇದು ಬದುಕಿನಲ್ಲಿ ಬಹುದೊಡ್ಡ ಬದಲಾವಣೆಯೇ ಸರಿ.

2015ರ ವರದಿಯೊಂದರ ಆಧಾರದಲ್ಲಿ, ವಿದೇಶದಲ್ಲಿ ಕೆಲಸವು ಈಗಿರುವ ಕೆಲಸಕ್ಕಿಂತ ಸುಮಾರು ಶೇ.28ರಷ್ಟು ಹೆಚ್ಚುವರಿ ಸಂಬಳದ ಸರಾಸರಿ ತಂದುಕೊಡುತ್ತದಂತೆ. ವರದಿಯ ಪ್ರಕಾರ, ವೃತ್ತಿ ಜೀವನ ಸಂಬಂಧಿಸಿ ವಿದೇಶ ಪ್ರಯಾಣ ಮಾಡುವುದಾದರೆ ಅತ್ಯಂತ ಹೆಚ್ಚು ಸಂಬಳ ಪಡೆಯಬಹುದಾದ ಸಾಧ್ಯತೆ ಇರುವ ದೇಶವಾಗಿ ಸ್ವಿಜರ್‌ಲ್ಯಾಂಡ್‌ ಹೊರಹೊಮ್ಮಿದೆ. ನಂತರ ಸ್ಥಾನದಲ್ಲಿ ಅಮೆರಿಕಾ (ಯುಎಸ್‌), ಮೂರನೇ ಸ್ಥಾನದಲ್ಲಿ ಹಾಂಗ್‌ಕಾಂಗ್‌ ಇದೆ. ನಾಲ್ಕನೇ ಸ್ಥಾನದಲ್ಲಿ ಚೈನಾ, ಐದನೇ ಸ್ಥಾನದಲ್ಲಿ ಸಿಂಗಾಪುರ ಇದ್ದರೆ, ಟಾಪ್‌ ೧೦ರ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ಕ್ರಮವಾಗಿ ಯುಎಇ, ಭಾರತ, ಇಂಡೋನೇಶಿಯಾ, ಜಪಾನ್‌ ಹಾಗೂ ಆಸ್ಟ್ರೇಲಿಯಾ ಇವೆ. ಭಾರತ ಏಳನೇ ಸ್ಥಾನದಲ್ಲಿರುವುದು ವಿಶೇಷ!

ಇದೇ ವರದಿಯ ಆಧಾರದಲ್ಲಿ ಪುರುಷರ ವಾರ್ಷಿಕ ಆದಾಯದ ಸರಾಸರಿಗಿಂತ ಮಹಿಳೆಯರ ಆದಾಯದ ಸರಾಸರಿ ಕಡಿಮೆಯಿದೆ. ವಿದೇಶೀ ಉದ್ಯೋಗವೊಂದು ಮಹಿಳೆಯರ ಆದಾಯದಲ್ಲಿ ಶೇಕಡಾ 27ರಷ್ಟು ಏರಿಕೆ ನೀಡಿದರೆ, ಪುರುಷರು ಶೇಕಡಾ 47ರಷ್ಟು ಏರಿಕೆ ಪಡೆದಿರುತ್ತಾರೆ. ಮಹಿಳೆಯರು ಇಲ್ಲಿ ಸಮಾನತೆಯನ್ನು ಕಾಯ್ದುಕೊಂಡಿರದಿರುವುದಕ್ಕೆ ಬಹುಶಃ ಅವರ ಕಲಿಕೆ ಅಥವಾ ಆಯ್ಕೆ ಮಾಡಿಕೊಂಡ ವೃತ್ತಿಯ ಆಧಾರದಲ್ಲಿಯೂ ಇರಬಹುದು ಎಂದು ಅಂದಾಜಿಸಲಾಗಿದೆ.

ಸ್ತ್ರೀಪುರುಷ ಸಮಾನತೆಯ ಆಧಾರದಲ್ಲಿ ವೃತ್ತಿಯಲ್ಲಿ ಬೆಳವಣಿಗೆ ಸಿಗಬಹುದಾದ ದೇಶಗಳ ಪೈಕಿ ಫಿಲಿಪೈನ್ಸ್‌ ಮುಂಚೂಣಿಯಲ್ಲಿದೆ. ಮಹಿಳೆಯರು ಫಿಲಿಫೈನ್ಸ್‌ ಬೆಳವಣಿಗೆಯ ವಿಚಾರದಲ್ಲಿ ತಮಗೆ ಅತ್ಯಂತ ಸೂಕ್ತ ದೇಶ ಎಂದಿದ್ದಾರೆ.  2018ರ ವರದಿಯಲ್ಲೂ ಏಷ್ಯಾದ ದೇಶಗಳ ಪೈಕಿ ಫಿಲಿಪೈನ್ಸ್‌ ಈ ವಿಷಯದಲ್ಲಿ ಅತ್ಯುತ್ತಮ ದೇಶವಾಗಿ ಹೊರಹೊಮ್ಮಿದ್ದು, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್‌ ಮತ್ತಿತರ ಕ್ಷೇತ್ರಗಳಲ್ಲಿ ಈ ದೇಶದಲ್ಲಿ ಸ್ತ್ರೀಸಮಾನತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Viral News : ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ! ವಿವೇಕ್‌ ಬಿಂದ್ರಾ ಫೋಟೋ ವೈರಲ್ ಆಗಿದ್ದೇಕೆ?

Exit mobile version