ಅಂಟಾರ್ಟಿಕಾ: ಅಂಟಾರ್ಟಿಕಾದ ಹಿಮಾಚ್ಛಾದಿತ ರನ್‌ವೇಯಲ್ಲಿ ಬೋಯಿಂಗ್ 787 (Boeing 787) ವಿಮಾನವು ಇಳಿದು ಇತಿಹಾಸ ನಿರ್ಮಿಸಿದೆ. ಬ್ಲೂ ಐಸ್ ರನ್‌ವೇ(Blue ice runway)ಯಲ್ಲಿ ಇಳಿದ ಅತಿದೊಡ್ಡ ಪ್ರಯಾಣಿಕ ವಿಮಾನ ಇದು ಎನ್ನುವ ಕಾರಣಕ್ಕೆ ಇದ್ದು ಸದ್ದು ಮಾಡುತ್ತಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ (Viral Video).
ನಾರ್ಸ್ ಅಟ್ಲಾಂಟಿಕ್ ಏರ್‌ವೇಸ್ (Norse Atlantic Airways) ನಿರ್ವಹಿಸುವ ಮತ್ತು ಎವರ್ಗ್ಲೇಡ್ಸ್ (Everglades) ಎಂಬ ಹೆಸರಿನ ಈ ವಿಮಾನವು ಬುಧವಾರ (ನವೆಂಬರ್ 15) ಅಂಟಾರ್ಟಿಕಾದ ಟ್ರೋಲ್ ವಾಯುನೆಲೆಯಲ್ಲಿ ಇಳಿಯಿತು. 330 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಬೃಹತ್ ವಿಮಾನವೊಂದು ಈ ಪ್ರದೇಶದಲ್ಲಿ ಲ್ಯಾಂಡ್ ಆಗಿದ್ದು ಇದು ಮೊದಲ ಬಾರಿ ಎಂದು ಅಧಿಕಾರಿಗಳು ಹೇಳಿದ್ದಾರೆ. “ನಾರ್ಸ್‌ಗೆ ಇದು ಐತಿಹಾಸಿಕ ಕ್ಷಣ. ಅಂಟಾರ್ಟಿಕಾದಲ್ಲಿ ಇಳಿದ ಮೊದಲ ಬೋಯಿಂಗ್ 787 ವಿಮಾನ. ಇತಿಹಾಸದ ಭಾಗವಾಗಲು ನಮಗೆ ತುಂಬ ಖುಷಿಯಾಗುತ್ತಿದೆ. ಇದು ನಾರ್ಸ್ ಪಾಲಿನ ವಿಶೇಷವಾದ ಮೈಲಿಗಲ್ಲುʼʼ ಎಂದು ಏರ್‌ಲೈನ್ಸ್‌ನ ಸೋಷಿಯಲ್ ಮೀಡಿಯಾ ಖಾತೆ ಬರೆದುಕೊಂಡಿದೆ.
Largest aircraft ever to land on #TrollAirfield!
— Norsk Polarinstitutt // Norwegian Polar Institute (@NorskPolar) November 16, 2023
"This demonstrates our capability of performing more effective flight operations to #Antarctica by carrying a larger scientific/logistics crew, more cargo with a smaller environmental footprint", says NPI-director, Camilla Brekke, pic.twitter.com/7vjsSw0gPI
ವಿಡಿಯೊ ಪೋಸ್ಟ್
“ಟ್ರೋಲ್ ಏರ್‌ಫೀಲ್ಡ್ ಮೇಲೆ ಇಳಿದ ಅತಿದೊಡ್ಡ ವಿಮಾನ! ಪರಿಣಾಮಕಾರಿ ವಿಮಾನ ಕಾರ್ಯಾಚರಣೆಗಳನ್ನು ನಡೆಸುವ ನಮ್ಮ ಸಾಮರ್ಥ್ಯವನ್ನು ಇದು ಪ್ರದರ್ಶಿಸುತ್ತದೆ” ಎಂದು ಬರೆದುಕೊಂಡು ನಾರ್ವೇಜಿಯನ್ ಪೋಲಾರ್ ಇನ್‌ಸ್ಟಿಟ್ಯೂಟ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಮಾನ ಇಳಿಯುವ ವಿಡಿಯೊವನ್ನು ಪೋಸ್ಟ್ ಮಾಡಿದೆ.
12 ಟನ್ ಭಾರದ ಉಪಕರಣ
ಅಂಟಾರ್ಟಿಕಾ ಕ್ವೀನ್ ಮೌಡ್ ಲ್ಯಾಂಡ್‌ನಲ್ಲಿರುವ ರಿಮೋಟ್ ಟ್ರೋಲ್ ಸಂಶೋಧನಾ ಕೇಂದ್ರಕ್ಕೆ ಅಗತ್ಯ ಸಂಶೋಧನಾ ಉಪಕರಣಗಳು ಮತ್ತು ವಿಜ್ಞಾನಿಗಳನ್ನು ಕರೆದೊಯ್ಯುವುದು ಈ ಡ್ರೀಮ್ ಲೈನರ್‌ನ ಧ್ಯೇಯ ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ವಿಮಾನದಲ್ಲಿ ನಾರ್ವೇಜಿಯನ್ ಪೋಲಾರ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಸೇರಿದಂತೆ ಒಟ್ಟು 45 ಪ್ರಯಾಣಿಕರು ಇದ್ದರು. ಈ ಸಂದರ್ಭದಲ್ಲಿ ಅಂಟಾರ್ಟಿಕಾ ಸಂಶೋಧನೆಗೆ ಅಗತ್ಯವಾದ 12 ಟನ್ ಸಂಶೋಧನಾ ಉಪಕರಣಗಳನ್ನು ಸಾಗಿಸಲಾಗಿದೆ.
“ಮೊದಲ ಡ್ರೀಮ್ ಲೈನರ್ ಅನ್ನು ಇಳಿಸುವ ಮಹತ್ವದ ಕ್ಷಣವನ್ನು ನಾವು ಒಟ್ಟಿಗೆ ಸಾಧಿಸಿದ್ದೇವೆ ಎಂಬುದೇ ಇಡೀ ತಂಡದ ಹೆಮ್ಮೆಯ ಕ್ಷಣ. ಇದು ನಮ್ಮ ಉತ್ಸಾಹವನ್ನು ಹೆಚ್ಚಿಸಿದೆ. ನಮ್ಮ ಉನ್ನತ ತರಬೇತಿ ಪಡೆದ, ನುರಿತ ಪೈಲಟ್ ಮತ್ತು ಸಿಬ್ಬಂದಿಯಿಂದ ಈ ಐತಿಹಾಸಿಕ ಹೆಜ್ಜೆ ಇಡಲು ಸಾಧ್ಯವಾಗಿದೆʼʼ ಎಂದು ನಾರ್ಸ್ ಅಟ್ಲಾಂಟಿಕ್ ಏರ್‌ವೇಸ್‌ನ ಸಿಇಒ ಜೋರ್ನ್ ಟೋರೆ ಲಾರ್ಸೆನ್ ಹೇಳಿದ್ದಾರೆ.
ಇದನ್ನೂ ಓದಿ: Viral Video: ಎಲೆಕ್ಷನ್ ಗೆಲ್ಲಲು ಬಾಬಾನಿಂದ ‘ಚಪ್ಪಲಿ ಏಟು’ ತಿಂದ ಕಾಂಗ್ರೆಸ್ ಅಭ್ಯರ್ಥಿ!
ವಿಮಾನವು ನವೆಂಬರ್ 13ರಂದು ನಾರ್ವೆಯ ಓಸ್ಲೋದಿಂದ ಹೊರಟು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ಲ್ಲಿ ಇಳಿಯಿತು. ಬಳಿಕ ಸವಾಲಿನ ಅಂಟಾರ್ಟಿಕಾ ಪ್ರಯಾಣವನ್ನು ಆರಂಭಿಸಿತು. ಈ ಡ್ರೀಮ್ ಲೈನರ್‌ಗೆ ಇಂಧನ ತುಂಬಿಸುವ ಅಗತ್ಯವಿಲ್ಲದೆ ಕೇಪ್‌ಟೌನ್‌ನಿಂದ ಯಶಸ್ವಿಯಾಗಿ ಹಾರಾಟ ನಡೆಸಲು ಸಾಧ್ಯವಾಯಿತು ಎಂದು ನಾರ್ಸ್ ಅಟ್ಲಾಂಟಿಕ್ ತಿಳಿಸಿದೆ. ಐತಿಹಾಸಿಕ ಕ್ಷಣಗಳಿಗೆ ಕಾರಣವಾದ ಬ್ಲೂ ಐಸ್ ರನ್‌ವೇ ಸುಮಾರು 2 ಮೈಲಿ ಉದ್ದ (3,000 ಮೀಟರ್) ಮತ್ತು 200 ಅಡಿ ಅಗಲ(60 ಮೀಟರ್)ವಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ