Site icon Vistara News

Viral Video: ಮರಿಯೊಂದಕ್ಕೆ ಜನ್ಮ ನೀಡಿದ ಸುಮಾತ್ರನ್ ಖಡ್ಗಮೃಗ; ಪ್ರಾಣಿಪ್ರಿಯರ ಮೊಗದಲ್ಲಿ ಸಂತಸ

rhino

rhino

ಸುಮಾತ್ರಾ: ಪ್ರಾಣಿಪ್ರಿಯರಿಗೊಂದು ಸಂತಸದ ಸುದ್ದಿ ದೂರದ ದಕ್ಷಿಣ ಸುಮಾತ್ರಾ ದ್ವೀಪದಿಂದ ತೇಲಿ ಬಂದಿದೆ. ಅಪರೂಪದ, ಅಳಿವಿನಂಚಿನಲ್ಲಿರುವ ಸುಮಾತ್ರನ್ ಖಡ್ಗಮೃಗ (Sumatran rhino) ಮರಿಯೊಂದಕ್ಕೆ ಜನ್ಮ ನೀಡಿದೆ. ದಕ್ಷಿಣ ಸುಮಾತ್ರಾ ದ್ವೀಪದಲ್ಲಿರುವ ವೇ ಕಂಬಸ್ ರಾಷ್ಟ್ರೀಯ ಉದ್ಯಾನ (Way Kambas National Park) ಈ ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಖಡ್ಗಮೃಗ ಅಳಿವಿನಂಚಿಗೆ ಸಾಗುತ್ತಿರುವುದರಿಂದ ಈ ಹೊಸ ಸದಸ್ಯೆ ಆಗಮನ ಪ್ರಾಮುಖ್ಯತೆ ಪಡೆದಿದೆ.

ಎಕ್ಸ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. “ಹಲೋ ಸ್ನೇಹಿತರೇ, ವೇ ಕಂಬಸ್ ರಾಷ್ಟ್ರೀಯ ಉದ್ಯಾನವನದ (SRS TNWK) ಸುಮಾತ್ರನ್ ಖಡ್ಗಮೃಗ ಮರಿಗೆ ಜನ್ಮ ನೀಡಿದೆ. ಎರಡು ಸುಮಾತ್ರನ್ ಖಡ್ಗಮೃಗಗಳಾದ ರತು ಮತ್ತು ಅಂಡಾಲಾ ಪ್ರೇಮಕ್ಕೆ ಇದು ಸಾಕ್ಷಿಯಾಗಿದೆʼʼ ಎಂದು ಬರೆಯಲಾಗಿದೆ.

ತಾಯಿ ಖಡ್ಗ ಮೃಗ ರತು ಇಂಡೋನೇಷ್ಯಾದ ನಿವಾಸಿ. ಸದ್ಯ ಈ ನ್ಯಾಷನಲ್‌ ಪಾರ್ಕ್‌ನಲ್ಲಿ ಜೀವಿಸುತ್ತಿರುವ ಅಂಡಾಲಾ ಓಹಿಯೋದ ಸಿನ್ಸಿನಾಟಿ ಮೃಗಾಲಯದ ಮಾಜಿ ನಿವಾಸಿ. ಸುಮಾತ್ರನ್ ಖಡ್ಗಮೃಗದ ಮರಿ ರತು ಮತ್ತು ಅಂಡಾಲಾದ ಮೂರನೇ ಸಂತತಿ ಎಂದು ಮೂಲಗಳು ತಿಳಿಸಿವೆ.

ಪಾರ್ಕ್ ಹಂಚಿಕೊಂಡಿರುವ ವಿಡಿಯೊದಲ್ಲಿ ರತು ನವಜಾತ ಶಿಶುವಿಗೆ ಜನ್ಮ ನೀಡುತ್ತಿರುವ ದೃಶ್ಯವನ್ನು ಸೆರೆಯಾಗಿದೆ. ಆಗಷ್ಟೇ ಜನಸಿದ ಶಿಶು ಕೂಡ ಈ ವಿಡಿಯೊದಲ್ಲಿ ಕಂಡುಬರುತ್ತಿದೆ. ಕೊನೆಯಲ್ಲಿ ರತು ಮರಿಗೆ ಹಾಲುಣಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.

ನ್ಯಾಷನ್‌ ಪಾರ್ಕ್‌ ಪುಟಾಣಿ ಖಡ್ಗಮೃಗದ ಇನ್ನಷ್ಟು ಫೋಟೊಗಳನ್ನು ಹಂಚಿಕೊಂಡಿದೆ. ನಮ್ಮ ಹೊಸ ಕುಟುಂಬದ ಹೊಸ ಸದಸ್ಯೆ ಆರೋಗ್ಯದಿಂದಿದ್ದಾಳೆ. ಅವಳಷ್ಟಕ್ಕೆ ನಿಲ್ಲುವಂತಾಗಿದೆ ಎಂದು ಮಾಹಿತಿ ಹಂಚಿಕಪೊಂಡಿದೆ. ಹುಟ್ಟಿದ 4 ಗಂಟೆಯೊಳಗೆ ಮರಿ ತಾಯಿಯ ಹಾಲು ಕುಡಿದಿದೆ. ಈ ನವಜಾತ ಶಿಶು ಸೇರಿ ಇದೀಗ ಪಾರ್ಕ್‌ನಲ್ಲಿರುವ ಖಡ್ಗಮೃಗಗಳ ಸಂಖ್ಯೆ 9ಕ್ಕೆ ಏರಿದೆ ಎಂದಿರುವ ಪಾರ್ಕ್‌, ಇಬ್ಬರೂ ಆರೋಗ್ಯವಂತವಾಗಿರಿ ಎಂದು ಹಾರೈಸಿದೆ.

ಯಾಕೆ ಮುಖ್ಯ?

ಸುಮಾರು 4-5 ಅಡಿ ಎತ್ತರ ಮತ್ತು ಸುಮಾರು 8.2 ಅಡಿ ದೇಹದ ಉದ್ದವನ್ನು ಹೊಂದಿರುವ ಸುಮಾತ್ರನ್ ಖಡ್ಗಮೃಗಗಳನ್ನು ವಿಶ್ವದ ಅತ್ಯಂತ ಚಿಕ್ಕ ಖಡ್ಗಮೃಗವೆಂದೇ ಕರೆಯಲಾಗುತ್ತದೆ. ಆವಾಸಸ್ಥಾನದ ನಾಶ ಮತ್ತು ವ್ಯಾಪಕ ಬೇಟೆಯು ಈ ಪ್ರಭೇದಗಳು ಎದುರಿಸುತ್ತಿರುವ ಬಹು ದೊಡ್ಡ ಆತಂಕ. ಇಂಡೋನೇಷ್ಯಾದ ಹಲವು ಸಂರಕ್ಷಣಾವಾದಿಗಳು ಈ ಖಡ್ಗಮೃಗಗಳ ಉಳಿವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಸುಮಾತ್ರನ್ ಖಡ್ಗಮೃಗ ಅಭಯಾರಣ್ಯದಲ್ಲಿ ಮಗುವಿಗೆ ಜನ್ಮ ನೀಡಿದ್ದು ಈ ಪ್ರಭೇದಗಳಿಗೆ ಭರವಸೆಯ ದೀಪವಾಗಿದೆ. ಇದು ಈಗಾಗಲೇ ಮೂರು ಮರಿಗಳಿಗೆ ಜನ್ಮ ನೀಡಿದೆʼʼ ಎಂದು ಅಧಿಕೃತರು ಹೇಳಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು 10 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: Love story : ಪಿಯು ಹುಡುಗನ ಜತೆ ಹೈಸ್ಕೂಲ್‌ ಟೀಚರ್‌ ಲವ್!; ಭಾವಿ ಗಂಡನ ಕೈಲೇ ಸಿಕ್ಕಿಬಿದ್ರು!

ಸುಮಾತ್ರನ್ ಖಡ್ಗಮೃಗವು ಹಿಂದೆ ಭಾರತ, ಭೂತಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ಲಾವೋಸ್, ಥೈಲ್ಯಾಂಡ್, ಮಲೇಷ್ಯಾ, ಇಂಡೋನೇಷ್ಯಾ ಮತ್ತು ನೈಋತ್ಯ ಚೀನಾದಲ್ಲಿ ವಾಸಿಸುತ್ತಿದ್ದವು. ಸುಮಾತ್ರನ್‌ ಖಡ್ಗಮೃಗವನ್ನು ಕೂದಲುಳ್ಳ ಖಡ್ಗಮೃಗ ಅಥವಾ ಏಷ್ಯಾದ ಎರಡು ಕೊಂಬಿನ ಖಡ್ಗಮೃಗ ಎಂದೂ ಕರೆಯಲಾಗುತ್ತದೆ. ಇದು ಖಡ್ಗಮೃಗ ಕುಟುಂಬದ ಅಪರೂಪದ ಸದಸ್ಯ ಮತ್ತು ಅಸ್ತಿತ್ವದಲ್ಲಿರುವ ಐದು ಪ್ರಬೇಧಗಳಲ್ಲಿ ಒಂದಾಗಿದೆ; ಇದು ಡೈಸೆರೊರ್ಹಿನಸ್ ಕುಲದ ಏಕೈಕ ಅಸ್ತಿತ್ವದಲ್ಲಿರುವ ಪ್ರಬೇಧ.

ಇನ್ನಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version