Site icon Vistara News

Visa Free: ಶ್ರೀಲಂಕಾಕ್ಕೆ ಇನ್ನು ವೀಸಾ ಇಲ್ಲದೆ ಪ್ರಯಾಣಿಸಬಹುದು; ಈ ದೇಶಗಳಿಗೆಲ್ಲ ಅನ್ವಯ

srilanka

srilanka

ನವ ದೆಹಲಿ: ಮಹತ್ವದ ಬೆಳೆವಣಿಗೆಯೊಂದರಲ್ಲಿ ಶ್ರೀಲಂಕಾ ಕ್ಯಾಬಿನೆಟ್‌ ಭಾರತ ಸೇರಿದಂತೆ 7 ರಾಷ್ಟ್ರಗಳಿಗೆ ವೀಸಾ ರಹಿತ ಪ್ರವೇಶಕ್ಕೆ (Visa Free) ಅನುಮೋದನೆ ನೀಡಿದೆ. ಈ ಪ್ರಾಯೋಗಿಕ ಯೋಜನೆ ತಕ್ಷಣವೇ ಜಾರಿಗೆ ಬರಲಿದ್ದು, ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್‌, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್‌ ದೇಶಗಳ ಪ್ರಯಾಣಿಕರಿಗೆ ಐದು ತಿಂಗಳವರೆಗೆ ಉಚಿತ ವೀಸಾ ನೀಡುವ ಪ್ರಸ್ತಾಪಕ್ಕೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ (Ali Sabry) ಮಂಗಳವಾರ ಪ್ರಕಟಿಸಿದ್ದಾರೆ. ಮಾರ್ಚ್‌ 31ರ ವರೆಗೆ ಈ ಯೋಜನೆ ಜಾರಿಯಲ್ಲಿರಲಿದೆ.

ಕಾರಣವೇನು?

ಈ ಪಟ್ಟಿಯಲ್ಲಿ ಅಮೆರಿಕದ ಹೆಸರಿಲ್ಲ ಎನ್ನುವುದು ಮುಖ್ಯ ವಿಚಾರ. ಹೆಚ್ಚಿನ ಪ್ರವಾಸಿಗರನ್ನು ದೇಶದತ್ತ ಆಕರ್ಷಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದು ಶ್ರೀಲಂಕಾದ ಪ್ರವಾಸೋದ್ಯಮ ಸಚಿವಾಲಯ ಹೇಳಿದೆ. ಮುಂಬರುವ ವರ್ಷಗಳಲ್ಲಿ ಪ್ರವಾಸಿಗರ ಸಂಖ್ಯೆಯನ್ನು 50 ಲಕ್ಷಕ್ಕೇರಿಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದ್ದಾಗಿ ಮಾಧ್ಯಮ ವರದಿ ಮಾಡಿದೆ. ಈ ಕ್ರಮದಿಂದ ಪ್ರಯಾಣಿಕರಿಗೆ ವೀಸಾ ಪಡೆಯಲು ಖರ್ಚು ಮಾಡುವ ಹಣ ಮತ್ತು ಸಮಯ ಉಳಿತಾಯವಾಗುವ ನಿರೀಕ್ಷೆಯಿದೆ.

ಕಳೆದ ವಾರ ಪ್ರವಾಸೋದ್ಯಮ ಸಚಿವಾಲಯವು ಐದು ದೇಶಗಳ ಪ್ರಯಾಣಿಕರಿಗೆ ಉಚಿತ ಪ್ರವಾಸಿ ವೀಸಾಗಳನ್ನು ನೀಡುವ ಪ್ರಸ್ತಾಪವನ್ನು ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸಲಾಗಿದೆ ಎಂದು ಘೋಷಿಸಿತ್ತು. ಶ್ರೀಲಂಕಾ ಪ್ರಧಾನಿ ದಿನೇಶ್ ಗುಣವರ್ಧನೆ, ಪ್ರವಾಸೋದ್ಯಮ ಮತ್ತು ಭೂ ಸಚಿವ ಹರಿನ್ ಫರ್ನಾಂಡೊ, ಸಾರ್ವಜನಿಕ ಭದ್ರತಾ ಸಚಿವ ಟಿರಾನ್ ಅಲೆಸ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ ಜಂಟಿಯಾಗಿ ಈ ಪ್ರಸ್ತಾವನೆಯನ್ನು ಮಂಡಿಸಿದ್ದರು ಎಂದು ವರದಿಯಾಗಿದೆ.

ಮುಂದಿನ ದಿನಗಳಲ್ಲಿ ದೇಶದ ಹೆಚ್ಚಿನ ಪ್ರವಾಸಿ ತಾಣಗಳಿಗೆ ಇ-ಟಿಕೆಟಿಂಗ್ ವ್ಯವಸ್ಥೆಯನ್ನು ಪರಿಚಯಿಸಲು ನಿರ್ಧರಿಸಿದ್ದೇವೆ ಎಂದು ಸಚಿವಾಲಯ ತಿಳಿಸಿದೆ.

ವಿಶೇಷವೆಂದರೆ ದ್ವೀಪ ರಾಷ್ಟ್ರವಾದ ಶ್ರೀಲಂಕಾ ಮುಖ್ಯವಾಗಿ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ. ಪ್ರವಾಸೋದ್ಯಮ ದೇಶದ ಜಿಡಿಪಿಗೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಬಳಿಕ, ಕೆಲವು ತಪ್ಪಾದ ನಿರ್ಧಾರ, ಯೋಜನೆಗಳಿಂದ ಇತ್ತೀಚೆಗೆ ಪ್ರವಾಸೋದ್ಯಮ ಕ್ಷೇತ್ರ ನೆಲಕಚ್ಚಿತ್ತು. ಇದು ದೇಶವನ್ನು ತೀವ್ರ ಬಿಕ್ಕಟ್ಟಿಗೆ ತಳ್ಳಿತ್ತು. ಹೀಗಾಗಿ ಮತ್ತೆ ಪ್ರವಾಸೋದ್ಯವನ್ನು ಪುನಶ್ಚೇತನಗೊಳಿಸಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: Israel Palestine War: ಇಸ್ರೇಲ್‌ಗೆ ಹೆದರಿ ಮತ್ತಿಬ್ಬರು ಒತ್ತೆಯಾಳುಗಳನ್ನು ಬಿಟ್ಟ ಹಮಾಸ್!‌

ಇದಕ್ಕೂ ಮುನ್ನ ಮಾರ್ಚ್‌ನಲ್ಲಿ ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ, ಭಾರತದೊಂದಿಗಿನ ತಮ್ಮ ದೇಶದ ಸಂಬಂಧವು ‘ನಮ್ಮ ವಿದೇಶಾಂಗ ನೀತಿಯಲ್ಲಿ ಪ್ರಮುಖವಾದುದು’ ಎಂದು ಹೇಳಿದ್ದರು. ಆರ್ಥಿಕ ಚೇತರಿಕೆಯನ್ನು ಹೆಚ್ಚಿಸಲು ನವದೆಹಲಿಯೊಂದಿಗೆ ಹೆಚ್ಚು ನಿಕಟವಾಗಿ ಕೆಲಸ ಮಾಡುವ ತಮ್ಮ ಸರ್ಕಾರದ ಯೋಜನೆಗಳನ್ನು ಅವರು ತೆರೆದಿಟ್ಟಿದ್ದರು. “ನಾವು ಭಾರತೀಯ ಕರೆನ್ಸಿಯನ್ನು ಶ್ರೀಲಂಕಾದಲ್ಲಿ ವ್ಯಾಪಾರ ಮಾಡಬಹುದಾದ ಕರೆನ್ಸಿಯಾಗಿಸಲು ಪ್ರಯತ್ನಿಸುತ್ತೇವೆʼʼ ಎಂದು ಪ್ರಕಟಿಸಿದ್ದರು. ಸದ್ಯ ಈ ವೀಸಾ ರಹಿತ ಪ್ರವೇಶಕ್ಕೆ ಅನುಮತಿ ನೀಡುವ ನಿರ್ಧಾರ ಬಹಳಷ್ಟು ಬದಲಾವಣೆಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Exit mobile version