Site icon Vistara News

ವಿಸ್ತಾರ ಸಂಪಾದಕೀಯ: ನ್ಯಾಷನಲ್ ಜಿಯೋಗ್ರಾಫಿಕ್ ಮುದ್ರಣ ಸ್ಥಗಿತ ವಿಷಾದನೀಯ

National Geographic Cover pages

135 ವರ್ಷಗಳ ಇತಿಹಾಸವನ್ನು ಹೊಂದಿರುವ ನ್ಯಾಷನಲ್ ಜಿಯೋಗ್ರಾಫಿಕ್ (National Geographic) ನಿಯತಕಾಲಿಕ (magazine) ತನ್ನ ಕೊನೆಯ ಎಲ್ಲ ಬರಹಗಾರ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದೆ. ನ್ಯಾಟ್‌ ಜಿಯೊ ಮ್ಯಾಗಜಿನ್ ಮುಂದಿನ ವರ್ಷದಿಂದ ನ್ಯೂಸ್‌ಸ್ಟ್ಯಾಂಡ್‌ಗಳಿಂದ ಹೊರಗುಳಿಯಲಿದ್ದು, ಪ್ರಕಟಣೆಯನ್ನು ನಿಲ್ಲಿಸಲಿದೆ ಎಂದು ಅಮೆರಿಕದ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಈ ಮೂಲಕ, ಶತಮಾನಗಳಿಂದ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದ ಈ ಪತ್ರಿಕೆ ಇತಿಹಾಸದ ಪುಟ ಸೇರಲಿದೆ.

ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿಯು ವಾಲ್ಟ್‌ ಡಿಸ್ನಿ ಕಂಪನಿಯ ಸಹಯೋಗದೊಂದಿಗೆ ಆರಂಭಿಸಿದ ಈ ನಿಯತಕಾಲಿಕದ ಮೊದಲ ಆವೃತ್ತಿ ಪ್ರಕಟವಾದುದು 1888ರಲ್ಲಿ. 1905ರಲ್ಲಿ ಇದು ಚಿತ್ರಗಳನ್ನು ಪ್ರಕಟಿಸಲು ಆರಂಭಿಸಿತು. ಮೊದಲ ಬಣ್ಣದ ಫೋಟೋಗಳು 1910ರ ದಶಕದಲ್ಲಿ ಇದರಲ್ಲಿ ರಾರಾಜಿಸಿದವು. ತನ್ನ ಸಾಂಪ್ರದಾಯಿಕ ಸುಂದರ ಹಳದಿ ಬಾರ್ಡರ್‌ನೊಂದಿಗೆ ಪ್ರತಿ ತಿಂಗಳು ಪ್ರಕಟವಾಗುತ್ತಿದ್ದ ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜಿನ್, ಅತ್ಯುತ್ತಮ ವಿಜ್ಞಾನ ಮತ್ತು ನೈಸರ್ಗಿಕ ಪ್ರಪಂಚವನ್ನು ಓದುಗರ ಮುಂದೆ ತೆರೆದಿಡುತ್ತಿತ್ತು. ಸಾಮಾನ್ಯವಾಗಿ ಭೌಗೋಳಿಕತೆ, ಇತಿಹಾಸ, ಪ್ರಕೃತಿ, ವಿಜ್ಞಾನ ಮತ್ತು ವಿಶ್ವ ಸಂಸ್ಕೃತಿಗೆ ಸಂಬಂಧಿಸಿದ ಸಂಗತಿಗಳು ಇದರ ವೈಶಿಷ್ಟ್ಯಗಳಾಗಿದ್ದವು. ಸಾಂಪ್ರದಾಯಿಕ ಮುದ್ರಿತ ಆವೃತ್ತಿ ಮತ್ತು ಇತ್ತೀಚೆಗೆ ಡಿಜಿಟಲ್‌ ಆವೃತ್ತಿಯೂ ಲಭ್ಯವಾಗುತ್ತಿತ್ತು. 1980ರ ಹೊತ್ತಿಗೆ ಪ್ರಪಂಚದಾದ್ಯಂತ ಸುಮಾರು ನಲುವತ್ತು ಭಾಷೆಯ ಆವೃತ್ತಿಗಳಲ್ಲಿ ಪ್ರಸಾರವಾಗುತ್ತಿತ್ತು. ಮತ್ತು ತಿಂಗಳಿಗೆ ಕನಿಷ್ಠ 1.2 ಕೋಟಿ ಪ್ರತಿಗಳು ಮಾರಾಟವಾಗುತ್ತಿದ್ದವು. 1995ರ ಹೊತ್ತಿಗೆ ಈ ಪ್ರಸಾರ ಸಂಖ್ಯೆ 65 ಲಕ್ಷ ಪ್ರತಿಗಳಿಗೆ, 2022ರ ಕೊನೆಯ ವೇಳೆಗೆ 18 ಲಕ್ಷಕ್ಕೆ ಇಳಿಯಿತು. ಇದುವರೆಗೂ ಈ ಮ್ಯಾಗಜಿನ್‌ ಓದುಗರ ಮನಸ್ಸಿನ ಜತೆಗೆ 25 ರಾಷ್ಟ್ರೀಯ ನಿಯತಕಾಲಿಕ ಪ್ರಶಸ್ತಿಗಳನ್ನೂ ಗೆದ್ದಿದೆ.

ನ್ಯಾಷನಲ್‌ ಜಿಯೊಗ್ರಾಫಿಕ್‌ ಮ್ಯಾಗಜಿನ್‌ನ ಸೇವೆಯ ಮಹತ್ವ ಅದರ ಚಾರಿತ್ರಿಕ ಜಾಗತಿಕ ವಿದ್ಯಮಾನಗಳನ್ನು ಕಟ್ಟಿಕೊಟ್ಟ ವಿಧಾನದಲ್ಲಿದೆ. ಕಳೆದ ಒಂದು ನೂರು ವರ್ಷದ ಜಗತ್ತಿನ ಮಹತ್ವದ ಪರಿಸರ- ಐತಿಹಾಸಿಕ- ವೈಜ್ಞಾನಿಕ- ಯುದ್ಧ ವಿದ್ಯಮಾನಗಳನ್ನು ನ್ಯಾಷನಲ್‌ ಜಿಯೊಗ್ರಾಫಿಕ್‌ ತನ್ನದೇ ಆದ ವಿಶಿಷ್ಟ ಬರಹ- ಕ್ಯಾಮೆರಾ ಕಣ್ಣುಗಳಿಂದ ನೋಡಿ ಸಚಿತ್ರವಾಗಿ ಜಾಗತಿಕ ಓದುಗರಿಗೆ ಕಟ್ಟಿಕೊಟ್ಟಿದೆ. ವನ್ಯಜೀವಿ ರಕ್ಷಣೆ, ಜಾಗತಿಕ ತಾಪಮಾನ, ವಲಸೆ ಮುಂತಾದ ವಿಚಾರಗಳಲ್ಲಿ ಈ ಪತ್ರಿಕೆಯ ಕೊಡುಗೆ ಗಣನೀಯವಾದುದು. 1985ರಲ್ಲಿ ಯುದ್ಧ ಸಂತ್ರಸ್ತ ಅಫಘಾನಿಸ್ತಾನದ ಯುವತಿ ಶರ್ಬತ್‌ ಗುಲಾ ಎಂಬಾಕೆಯ ಹೊಳೆವ ನೀಲಿ ಕಣ್ಣುಗಳ ಮುಖಪುಟ ಹೊಂದಿದ್ದ ಈ ಪತ್ರಿಕೆಯನ್ನು ಯಾರೂ ಮರೆಯಲಾರರು. ಇದರಲ್ಲಿ ಪ್ರಕಟವಾಗುತ್ತಿದ್ದ ವರದಿಗಳು ತನಿಖಾಪೂರ್ಣವಾಗಿರುತ್ತಿದ್ದವು, ನಿಖರವಾಗಿರುತ್ತಿದ್ದವು ಹಾಗೂ ಜಾಗತಿಕ ಮಹತ್ವವನ್ನು ಹೊತ್ತಿರುತ್ತಿದ್ದವು. ಹೀಗಾಗಿಯೇ ಇದರ ಮುದ್ರಣ ನಿಲ್ಲುವುದೊಂದು ನಷ್ಟವೇ ಸರಿ.

2015ರವರೆಗೆ ಮ್ಯಾಗಜೀನ್ ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿಯ ಒಡೆತನದಲ್ಲಿತ್ತು. 2019ರಿಂದ ಅದನ್ನು ಪೂರ್ತಿಯಾಗಿ ವಾಲ್ಟ್ ಡಿಸ್ನಿ ಕಂಪನಿ ಹಿಡಿತಕ್ಕೆ ತೆಗೆದುಕೊಂಡಿತು. ಮಾಲೀಕತ್ವ ಬದಲಾವಣೆಯಾದ ಬಳಿಕ ಪತ್ರಿಕೆಯೂ ಕೂಡ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಸಹಜವಾಗಿಯೇ ಈ ಕಾರ್ಪೊರೇಟ್‌ ಕಂಪನಿ ಮ್ಯಾಗಜಿನ್‌ನಿಂದ ಆಗುತ್ತಿದ್ದ ವಿಜ್ಞಾನ- ಪರಿಸರ ಸೇವೆಗಿಂತಲೂ ಲಾಭ- ನಷ್ಟದ ಲೆಕ್ಕಾಚಾರವನ್ನು ಹಾಕಿದೆ. ನ್ಯಾಟ್‌ ಜಿಯೊ ಮುದ್ರಣ ನಿಲ್ಲಿಸಿದರೂ ಅದರ ಡಿಜಿಟಲ್‌ ಆವೃತ್ತಿ ಪ್ರಕಟವಾಗಬಹುದು. ನ್ಯಾಟ್‌ ಜಿಯೊ ಟಿವಿ ಹಾಗೂ ಯುಟ್ಯೂಬ್‌ ವಾಹಿನಿಗಳು ಲಭ್ಯ ಇವೆ. ಆದರೆ ಮುದ್ರಣ ಮಾಧ್ಯಮದಲ್ಲಿ ಅದರ ಯುಗ ಮುಗಿದಂತೆಯೇ ಸರಿ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಮಾಜಘಾತುಕರ ಕೇಸ್‌ ವಾಪಸ್‌ ತೆಗೆದುಕೊಳ್ಳಬೇಡಿ

ನಷ್ಟದಲ್ಲಿ ನಡೆಯುತ್ತಿರುವ ಹಲವು ಮುದ್ರಣ ಮಾಧ್ಯಮಗಳು ತಮ್ಮ ಕಂಪನಿಗಳಿಂದ ಸಿಬ್ಬಂದಿಯನ್ನು ಸಾಮೂಹಿಕವಾಗಿ ಲೇಆಫ್‌ ಮಾಡುತ್ತಿರುವ ಪ್ರಕ್ರಿಯೆ ಅತಿ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ನ್ಯಾಷನಲ್‌ ಜಿಯೊಗ್ರಾಫಿಕ್‌ ಕೂಡ ಹೊರತಾಗಿಲ್ಲ. ಮುದ್ರಣ ಮಾಧ್ಯಮವು ಅದರದೇ ಆದ ಮಹತ್ವ, ಚಾರಿತ್ರಿಕತೆಯನ್ನು ಹೊಂದಿದೆ. ನೂರಾರು ವರ್ಷಗಳಿಂದ ಮಾಹಿತಿ- ಸುದ್ದಿ- ಜ್ಞಾನಪ್ರಸರಣದ ನೇತೃತ್ವವನ್ನು ವಹಿಸಿದ್ದ ಮುದ್ರಣ ಮಾಧ್ಯಮ ಅಕಾಲಮರಣವನ್ನು ಹೊಂದದೆ, ಸೂಕ್ತ ಓದುಗರನ್ನು ವಿಶಿಷ್ಟವಾದ ಪ್ರಯೋಗಗಳ ಮೂಲಕ ಕಂಡುಕೊಂಡು ಮತ್ತಷ್ಟು ಬೆಳಗಲಿ ಎಂದು ಆಶಿಸಬೇಕಿದೆ.

ಇನ್ನಷ್ಟು ಸಂಪಾದಕೀಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version