ರಷ್ಯಾ ಮತ್ತು ಉಕ್ರೇನ್ ನಡುವೆ ಕಳೆದ ಒಂದೂವರೆ ವರ್ಷದಿಂದ ಯುದ್ಧ ನಡೆಯುತ್ತಿದ್ದು, ಸಾಕಷ್ಟು ಸಾವು ನೋವು ಸಂಭವಿಸಿದೆ. ಉಕ್ರೇನ್‌ನ 80 ಲಕ್ಷ ಜನರು ದೇಶದೊಳಗೇ ತೀವ್ರ ತೊಂದರೆಗೆ ಸಿಲುಕಿದ್ದರೆ, 82 ಲಕ್ಷ ಜನರು ದೇಶ ತೊರೆದು ಹೋಗಿದ್ದಾರೆ. ಈವರೆಗೆ 9614 ನಾಗರಿಕರು ಮೃತಪಟ್ಟು 17,535 ಜನರು ಗಾಯಗೊಂಡಿದ್ದಾರೆ. ರಷ್ಯಾ-ಉಕ್ರೇನ್ ನಡುವಿನ ಯುದ್ಧವು ಜಗತ್ತಿನ ಆರ್ಥಿಕತೆ ಮೇಲೆ ಅಡ್ಡ ಪರಿಣಾಮ ಬೀರಿವೆ. ಜಗತ್ತು ನಿಧಾನವಾಗಿ ಆರ್ಥಿಕ ಹಿಂಜರಿತಕ್ಕೆ ಜಾರುತ್ತಿರುವ ಹೊತ್ತಿನಲ್ಲೇ ಜಗತ್ತು ಮತ್ತೊಂದು ಯುದ್ಧಕ್ಕೆ ಸಾಕ್ಷಿಯಾಗುತ್ತಿದೆ. ಅಕ್ಟೋಬರ್ 7ರಂದು ಹಮಾಸ್ ಉಗ್ರರು ಸಿಡಿಸಿದ 5000 ಕ್ಷಿಪಣಿಗಳು ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಭಾರೀ ನಷ್ಟವನ್ನು ಸೃಷ್ಟಿಸಿದೆ. ಸತ್ತವರ ಸಂಖ್ಯೆ ಸಾವಿರತ್ತ ದಾಪುಗಾಲು ಹಾಕುತ್ತಿದ್ದರೆ, ಹೆಚ್ಚುಕಡಿಮೆ ಎರಡು ಸಾವಿರ ಜನರು ಗಾಯಗೊಂಡಿದ್ದಾರೆ. ಪರಿಣಾಮ, ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ಸಂಪೂರ್ಣ ಪ್ರಮಾಣದಲ್ಲಿ ಯುದ್ಧವನ್ನು ಸಾರಿದ್ದು, ವೈಮಾನಿಕ ದಾಳಿಯನ್ನು ನಡೆಸುತ್ತಿದೆ. ಎರಡು ದೇಶಗಳ ನಡುವೆ ನಡೆಯುವ ಯುದ್ಧವು, ಈ ಜಾಗತಿಕರಣದ ಸಂದರ್ಭದಲ್ಲಿ ಅದು ಆ ದೇಶಗಳಿಗೆ ಮಾತ್ರವೇ ಪರಿಣಾಮ ಬೀರುವುದಿಲ್ಲ; ಇಡೀ ಜಗತ್ತಿನ ಮೇಲಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು.
ಇಸ್ರೇಲ್ ಮತ್ತು ಪ್ಯಾಲಿಸ್ತೀನ್ ನಡುವಿನ ಸಂಘರ್ಷವು ಇಂದು-ನಿನ್ನೆಯದಲ್ಲ. ಇದಕ್ಕೆ ಸುದೀರ್ಘ ಇತಿಹಾಸವಿದೆ. ಉಭಯ ರಾಷ್ಟ್ರಗಳ ಮಧ್ಯೆ ನಿತ್ಯ ಸಂಘರ್ಷ ಇದ್ದೇ ಇದೆ. ಆದರೆ, ಶನಿವಾರ ನಡೆದ ದಾಳಿ ಮಾತ್ರ ಹತ್ತು ವರ್ಷದಲ್ಲೇ ಇದೇ ಮೊದಲು ಇಷ್ಟು ದೊಡ್ಡ ಪ್ರಮಾಣದಲ್ಲಿ ದಾಳಿ ಎನಿಸಿಕೊಂಡಿದೆ. 20ನೇ ಶತಮಾನದ ಮಧ್ಯದ ಆರಂಭದಿಂದಲೇ ಈ ಸಂಘರ್ಷ ಶುರುವಾಗಿದೆ. ಹಾಗೆ ನೋಡಿದರೆ, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವನ್ನು ಜಗತ್ತಿನ ಅತ್ಯಂತ ಸುದೀರ್ಘ ಸಂಘರ್ಷ ಎಂದು ಹೇಳಬಹುದು. ಮೊದಲನೆ ಮಹಾಯುದ್ಧ ಬಳಿಕ ಯುಹೂದಿ ಮತ್ತು ಅರಬ್ ಬಹುಸಂಖ್ಯಾತರು ವಾಸಿಸುತ್ತಿದ್ದ ಪ್ಯಾಲಿಸ್ತೀನ್ ಮೇಲೆ ಬ್ರಿಟನ್ ನಿಯಂತ್ರಣ ಸಾಧಿಸಿತು. ಎರಡನೇ ಮಹಾಯುದ್ಧ ವೇಳೆ ಯುರೋಪ್‌ನಿಂದ ಯಹೂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರದೇಶಕ್ಕೆ ವಲಸೆ ಬಂದರು. ಜತೆಗೆ, ಯಹೂದಿಗಳಿಗೆ ತಾಯ್ನಾಡು ರಚನೆಯ ಅಂತಾರಾಷ್ಟ್ರೀಯ ಪ್ರಸ್ತಾವು ಕೂಡ ಸಂಘರ್ಷಕ್ಕೆ ಕಾರಣವಾಯಿತು. ಅಂತಿಮವಾಗಿ 1948ರಲ್ಲಿ ಯಹೂದಿಗಳಿಗಾಗಿಯೇ ಇಸ್ರೇಲ್ ಪ್ರತ್ಯೇಕ ರಾಷ್ಟ್ರವಾಗಿ ಉದಯಿಸಿತು. ಆದರೆ, ಪ್ಯಾಲೆಸ್ತೀನಿಯರು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಜತೆಗೆ, ಅರಬ್ ದೇಶಗಳು ಹಿಂದೇಟು ಹಾಕಿದವು. ಇದರೊಂದಿಗೆ ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ಮುಂದುವರಿಯಿತು. ಇಸ್ರೇಲ್‌ಗೆ ಅಮೆರಿಕ ಮತ್ತು ಯುರೋಪ್‍ಗಳಿಂದ ವ್ಯಾಪಕ ಬೆಂಬಲ ದೊರೆತರೆ, ಪ್ಯಾಲೆಸ್ತೀನ್‌ಗೆ ಇರಾನ್, ಲೆಬನಾನ್, ಟರ್ಕಿ ಸೇರಿದಂತೆ ಅನೇಕ ಮುಸ್ಲಿಮ್ ಬಾಹ್ಯಳದ ರಾಜ್ಯಗಳು ಬೆಂಬಲ ನೀಡಿದವು.
ಈ ಮಧ್ಯೆ, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಅನೇಕ ಯುದ್ಧಗಳಾಗಿವೆ. ಹಲವು ಶಾಂತಿ ಒಪ್ಪಂದಗಳಾಗಿವೆ; ಮುರಿದಿವೆ. ಯಾಸೀರ್ ಅರಾಫತ್ ಆಡಳಿತದಲ್ಲಿ ಇಸ್ರೇಲ್ ಜತೆ ಸಂಧಾನ ಮಾತುಕತೆಗಳು ನಡೆದವು. ಈ ಮಧ್ಯೆ ಮುಸ್ಲಿಮ್ ಬ್ರದರ್ ಹುಡ್ ಅಡಿ ಹುಟ್ಟಿಕೊಂಡು ಹಮಾಸ್ ಇಸ್ರೇಲ್ ಜತೆ ನಿರಂತರ ಸಂಘರ್ಷವನ್ನು ಕಾಯ್ದುಕೊಂಡು ಬಂದಿದೆ. ಹಮಾಸ್ ಬಂಡುಕೋರರಿಗೆ ಟರ್ಕಿ, ಇರಾನ್ ಸೇರಿದಂತೆ ಮಧ್ಯ ಪ್ರಾಚ್ಯ ರಾಷ್ಟ್ರಗಳ ಬೆಂಬಲ ಇದ್ದೇ ಇದೆ. ಈಗ ಭೀಕರ ದಾಳಿ ನಡೆಸಿರುವುದು ಇದೇ ಹಮಾಸ್ ಉಗ್ರರೇ ಆಗಿದ್ದಾರೆ. ಹಮಾಸ್ ಸಂಘಟನೆಯನ್ನುಇಸ್ರೇಲ್, ಅಮೆರಿಕ, ಯುರೋಪಿಯನ್ ಒಕ್ಕೂಟ, ಕೆನಡಾ, ಈಜಿಪ್ಟ್ ಮತ್ತು ಜಪಾನ್ ದೇಶಗಳು ಜಾಗತಿಕವಾಗಿ ಉಗ್ರ ಸಂಘಟನೆ ಎಂದು ಪರಿಗಣಿಸಿವೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಏಷ್ಯನ್ ಗೇಮ್ಸ್ ನಲ್ಲಿ ಐತಿಹಾಸಿಕ ಪದಕ ಸಾಧನೆ ಇನ್ನಷ್ಟು ಸಾಧನೆಗೆ ಸ್ಫೂರ್ತಿಯಾಗಲಿ
ಯುದ್ಧಗಳು ಎಂದಿಗೂ ಶಾಂತಿ, ನೆಮ್ಮದಿಯನ್ನು ತರುವುದಿಲ್ಲ. ಅವುಗಳಿಂದೇ ವಿನಾಶವೇ ಹೊರತು ವಿಕಾಸವಲ್ಲ. ಈಗ ಶುರುವಾಗಿರುವ ಯುದ್ಧದ ಅಂತಿಮ ಫಲಿತಾಂಶವೂ ಇದೇ ಆಗಲಿದೆ. ಜತೆಗೆ, ಜಗತ್ತಿನ ಇತರ ರಾಷ್ಟ್ರಗಳ ಮೇಲೂ ದುಷ್ಪರಿಣಾಮ ಬೀರಲಿದೆ. ಯುದ್ಧ ಮುಂದುವರಿದಂತೆ, ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ವ್ಯಾಪಿಸಿಕೊಂಡರೆ ಭಾರತದ ಮೇಲೂ ದುಷ್ಪರಿಣಾಮವಾಗಲಿದೆ. ವಿಶೇಷವಾಗಿ ನಮ್ಮ ರೂಪಾಯಿ ಮೌಲ್ಯ ಕುಸಿಯುವ ಸಾಧ್ಯತೆಗಳು ಹೆಚ್ಚಾಗಿವೆ. ತೈಲ ಪೂರೈಕೆಯಲ್ಲಿ ಅಡೆತಡೆಗಳಾದರೆ ಖಂಡಿತವಾಗಿಯೂ ಬೆಲೆ ಏರಿಕೆಯಂಥ ಸಮಸ್ಯೆಗಳನ್ನು ಭಾರತವೂ ಸೇರಿದಂತೆ ಇತರ ರಾಷ್ಟ್ರಗಳು ಅನುಭವಿಸಬೇಕಾಗುತ್ತದೆ. ಹಾಗಾಗಿ, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ಸಾಧ್ಯವಾದಷ್ಟು ಬೇಗನೆ ತಡೆಯಬೇಕಿದೆ. ಅಂತಾರಾಷ್ಟ್ರೀಯ ಸಮುದಾಯವು ಈ ನಿಟ್ಟಿನಲ್ಲಿ ಜವಾಬ್ದಾರಿಯನ್ನು ಪ್ರದರ್ಶಿಸಬೇಕು. ಯುದ್ಧಕ್ಕೆ ಮತ್ತಷ್ಟು ತುಪ್ಪ ಸರಿಯುವ ಬದಲು ನಂದಿಸುವ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ, ಯಾವುದೋ ಮಾಯೆಯಲ್ಲಿ ಅದು ನಮ್ಮ ಬಾಗಲಿಗೂ ಬರಬಹುದು ಎಂಬುದನ್ನು ಮರೆಯಬಾರದು. ಸಂಘರ್ಷವನ್ನು ಸಂಧಾನದೊಂದಿಗೆ ತಡೆಯುವ ಜತೆಗೆ, ಹಮಾಸ್ ಮತ್ತು ಹೆಜ್ಬುಲ್ಲಾಗಳಂಥ ಉಗ್ರ ಸಂಘಟನೆಗಳನ್ನು ಮಟ್ಟ ಹಾಕುವ ಕೆಲಸವನ್ನು ಮಾಡಬೇಕು. ಈ ಉಗ್ರ ಸಂಘಟನೆಗಳು ಎಂದಿಗೂ ಸೆರಗಿನಲ್ಲಿರುವ ಕೆಂಡವೇ ಸರಿ. ಯಾವುದೇ ದೇಶವಾಗಲಿ ಉಗ್ರ ಸಂಘಟನೆಗಳಿಗೆ ಆಸ್ಪದ ನೀಡಬಾರದು. ಹಾಗಾಗಿ, ಉಗ್ರ ಸಂಘಟನೆಗಳನ್ನು ದೂರವಿಟ್ಟು, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ನಿರಂತರ ಸಂಘರ್ಷದ ಕಾರಣಗಳನ್ನು ಪತ್ತೆ ಹಚ್ಚಿ, ಶಾಂತಿ ಮಾತುಕತೆ ಮೂಲಕ ಸಂಘರ್ಷವನ್ನು ನಿವಾರಿಸಿಕೊಳ್ಳಬೇಕು. ಜಗತ್ತಿನ ಹಿತದೃಷ್ಟಿಯಿಂದ ಇದೊಂದು ಪರಿಹಾರ ಮಾರ್ಗವಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯವು ಕಾರ್ಯೋನ್ಮುಖವಾಗಲಿ.