Site icon Vistara News

ವಿಸ್ತಾರ ಸಂಪಾದಕೀಯ: ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಮುಸ್ಲಿಂ ದೇಶಗಳಿಂದಲೇ ಬುದ್ಧಿಮಾತು!

India and Pakistan

ಕಾಶ್ಮೀರ ಸಮಸ್ಯೆ ಮುಗಿದ ಅಧ್ಯಾಯ, ಅದನ್ನು ಮರೆತು ಭಾರತದೊಂದಿಗೆ ಸ್ನೇಹದಿಂದ ವರ್ತಿಸಿ ಎಂದು ಪಾಕಿಸ್ತಾನಕ್ಕೆ ಸೌದಿ ಅರೆಬಿಯಾ ಹಾಗೂ ಯುಎಇ ರಾಷ್ಟ್ರಗಳು (islamic countries) ಕಿವಿಮಾತು ಹೇಳಿವೆ. ಆದರೆ, ಪಾಕಿಸ್ತಾನ ಇಷ್ಟರಿಂದಲೇ ತನ್ನ ನೀತಿಯನ್ನು ಬದಲಿಸಿಕೊಂಡು, ಕಾಶ್ಮೀರ ಮರೆತು ಸ್ನೇಹ ಸಂಪಾದಿಸುವ ಯಾವುದೇ ಲಕ್ಷಣಗಳಿಲ್ಲ. ಹಾಗಂತ, ಈಗಲೂ ಪಾಕಿಸ್ತಾನ ಬುದ್ಧಿ ಕಲಿಯದಿದ್ದರೆ ಅದಕ್ಕೆ ಉಳಿಗಾಲವಿಲ್ಲ.

ಕಾಶ್ಮೀರ ಸಮಸ್ಯೆಯನ್ನು ಮರೆತು, ಭಾರತದೊಂದಿಗೆ ಸ್ನೇಹದಿಂದ ವರ್ತಿಸಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂತೆಗೆತ ಕುರಿತು ಅನಗತ್ಯವಾಗಿ ವಿವಾದ ಮಾಡುವುದನ್ನು ಬಿಟ್ಟು ಬಿಡಿ ಎಂದು ಸೌದಿ ಅರೆಬಿಯಾ ಹಾಗೂ ಯುಎಇ ಪಾಕಿಸ್ತಾನಕ್ಕೆ ಬುದ್ಧಿ ಮಾತು ಹೇಳಿವೆ. ಇದರೊಂದಿಗೆ ಅಂತಾರಾಷ್ಟ್ರೀಯವಾಗಿ ತೀವ್ರ ಮುಜುಗರವನ್ನು ಪಾಕಿಸ್ತಾನವು ಎದುರಿಸಿದೆ. ಅವಕಾಶ ಸಿಕ್ಕಾಗಲೆಲ್ಲ ಪಾಕಿಸ್ತಾನವು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ, ಬೆಂಬಲವನ್ನು ಪಡೆಯಲು ಪ್ರಯತ್ನ ಮಾಡುತ್ತಲೇ ಇರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಈ ವಿಷಯದಲ್ಲಿ ಯಾವುದೇ ನೆರವು ದೊರೆಯುತ್ತಿಲ್ಲ. ಅಂತಿಮವಾಗಿ ಮುಸ್ಲಿಂ ರಾಷ್ಟ್ರಗಳೇ ಈಗ ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ಮೂಲಕ, ಅದಕ್ಕೆ ವಾಸ್ತವ ಸ್ಥಿತಿಯನ್ನು ತಿಳಿಸುವ ಪ್ರಯತ್ನ ಮಾಡಿವೆ ಎಂದು ವಿಶ್ಲೇಷಿಸಬಹುದು

ಭಾರತ ಮತ್ತು ಪಾಕಿಸ್ತಾನಗಳೆರಡೂ ಏಕಕಾಲಕ್ಕೆ ಸ್ವಾತಂತ್ರ್ಯವನ್ನು ಪಡೆದುಕೊಂಡು, 75 ವಸಂತಗಳನ್ನು ಕಂಡಿವೆ. ಭಾರತವು ಈಗ ಜಾಗತಿಕ ಮಟ್ಟದಲ್ಲಿ ಯಾವ ಸ್ಥಾನದಲ್ಲಿದೆ ಮತ್ತು ಪಾಕಿಸ್ತಾನ ಯಾವ ಸ್ಥಾನದಲಿಲ್ಲ ಎಂದು ನೋಡಿದರೆ, ಉಭಯ ರಾಷ್ಟ್ರಗಳ ಮಧ್ಯೆ ಅಜಗಜಾಂತರವಿದೆ. ಯಾವ ವಿಷಯದಲ್ಲೂ, ಯಾವ ಕ್ಷೇತ್ರದಲ್ಲೂ ಇಂದು ಪಾಕಿಸ್ತಾನವು ಭಾರತದ ಸನಿಹದಲ್ಲೂ ಇಲ್ಲ. ಪ್ರಗತಿಯನ್ನೇ ಮುಖ್ಯ ಧ್ಯೇಯವಾಗಿಸಿಕೊಂಡು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೀತಿ-ವಿಶ್ವಾಸಗಳಿಂದ ಮುನ್ನಡೆದ ಪರಿಣಾಮ ಇಂದು ಭಾರತವು ಜಗತ್ತಿನ ಅಗ್ರಮಾನ್ಯ ರಾಷ್ಟ್ರವಾಗಿ ಬೆಳೆಯುತ್ತಿದೆ. ಆರ್ಥಿಕವಾಗಿ ಐದನೇ ಅತಿದೊಡ್ಡ ರಾಷ್ಟ್ರವಾಗಿ ಉದಯಿಸಿದೆ. ಎಲ್ಲ ಕ್ಷೇತ್ರಗಳಲ್ಲಿ ಇಂದು ಭಾರತೀಯರ ಪಾರುಪತ್ಯವಿದೆ. ಇದೇ ವೇಳೆ, ದ್ವೇಷವನ್ನು ತುಂಬಿಕೊಂಡು, ಧಾರ್ಮಿಕ ಸಂಕುಚಿತವನ್ನೇ ಮುಂದೆ ಮಾಡಿಕೊಂಡ ಬಂದ ಪಾಕಿಸ್ತಾನವು ಆರ್ಥಿಕ ಸಂಕಟದ ಸ್ಥಿತಿಯಲ್ಲಿದೆ. ಅಲ್ಲಿಯ ಜನರ ಪರಿಸ್ಥಿತಿ ಈಗ ಚಿಂತಾಜನಕವಾಗಿದೆ. ಹೊಟ್ಟಿಗೆ ಹಿಟ್ಟಿರದಿದ್ದರೂ ಜುಟ್ಟಿಗೆ ಮಲ್ಲಿಗೆ ಎನ್ನುವಂತೆ, ಹಸಿದ ತನ್ನ ಜನರ ಹೊಟ್ಟೆಯನ್ನು ತುಂಬಿಸುವ ಬದಲು, ಭಾರತದ ಜತೆಗೆ ಶಸ್ತ್ರಾಸ್ತ್ರ ಪೈಪೋಟಿಗೆ ಇಳಿದು ಪಾಕಿಸ್ತಾನ ಪಾತಾಳಕ್ಕೆ ಕುಸಿದಿದೆ.

ಕಾಶ್ಮೀರವನ್ನು ಹೇಗಾದರೂ ಮಾಡಿ ಕಬಳಿಸಲೇಬೇಕು ಎಂಬ ಕಾರಣಕ್ಕೆ ಭಾರತದ ವಿರುದ್ಧ ಪಾಕಿಸ್ತಾನವು ನಾಲ್ಕು ಯುದ್ಧಗಳನ್ನು ಮಾಡಿದೆ. ಎಲ್ಲ ಯುದ್ಧಗಳಲ್ಲೂ ಭಾರತದ ಎದುರು ಹೀನಾಯವಾಗಿ ಸೋತಿದೆ. 1971ರ ಯುದ್ಧದಲ್ಲಂತೂ ತನ್ನ ಪೂರ್ವ ಪಾಕಿಸ್ತಾನ(ಇಂದಿನ ಬಾಂಗ್ಲಾದೇಶ)ವನ್ನೇ ಕಳೆದುಕೊಂಡಿತು. ಆದರೂ, ಪಾಕಿಸ್ತಾನವು ಸಮಯ ಸಂದರ್ಭ ನೋಡಿ, ಅವಕಾಶ ಸಿಕ್ಕಾಗಲೆಲ್ಲ ಭಾರತದ ಮೇಲೆ ದಾಳಿ ಮಾಡಲು ಬಂದು, ಪೆಟ್ಟು ತಿನ್ನುತ್ತಲೇ ಇರುತ್ತದೆ. ಇನ್ನು ಹಿಂಬಾಗಿಲು ಅಂದರೆ, ಉಗ್ರ ಚಟುವಟಿಕೆಗಳ ಮೂಲಕ ಭಾರತದಲ್ಲಿ ಸದಾ ಹಿಂಸಾಚಾರ ವಾತಾರಣವನ್ನು ಜೀವಂತವಾಗಿಡುವ ಪ್ರಯತ್ನಗಳು ಕಾಲಾನುಕ್ರಮದಲ್ಲಿ ವಿಫಲವಾಗುತ್ತ ಬಂದಿವೆ. ಇಷ್ಟಾಗಿಯೂ ಅಲ್ಲಿಯ ಐಎಸ್ಐ, ಸೇನೆ ಮತ್ತು ಸರ್ಕಾರಗಳು ಬುದ್ಧಿ ಕಲಿತಿಲ್ಲ. ಈಗಲೂ ಭಾರತದ ಮೇಲೆ ಕತ್ತಿ ಮಸಿಯುವ ಪ್ರಯತ್ನಗಳು ಕೈ ಬಿಟ್ಟಿಲ್ಲ.

ಕಾಶ್ಮೀರ ವಿಚಾರ ಮುಂದಿಟ್ಟು ಪಾಕಿಸ್ತಾನ ವಿಶ್ವದ ಮುಸ್ಲಿಂ ದೇಶಗಳ ನೆರವು ಪಡೆಯಲು ಶತಾಯಗತಾಯ ಕಳೆದ ಹಲವು ದಶಕಗಳಿಂದ ಪ್ರಯತ್ನಿಸುತ್ತಲೇ ಬಂದಿದೆ. ಆದರೆ, ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಜಾಗತಿಕ ಸಮೀಕರಣಗಳು ಬದಲಾಗುತ್ತಿವೆ. ಪರಿಣಾಮ ಈ ಬಾರಿ ಸೌದಿ ಅರೆಬಿಯಾ ಮತ್ತು ಯುಎಇಗೆ ಭೇಟಿ ನೀಡಿದ ಪಾಕ್ ಪ್ರಧಾನಿಗೆ ಆ ದೇಶದ ಮುಖ್ಯಸ್ಥರೇ, ಭಾರತದೊಂದಿಗೆ ಸ್ನೇಹ ಸಂಪಾದಿಸಿ ಎಂದು ಕಿವಿ ಹಿಂಡಿ ಕಳಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ”ಭಾರತದ ಜತೆಗಿನ ಯುದ್ಧಗಳ ಬಳಿಕ ಪಾಕಿಸ್ತಾನ ಪಾಠ ಕಲಿತಿದೆ. ನಮಗೆ ಯುದ್ಧ ಬೇಕಾಗಿಲ್ಲ, ಶಾಂತಿ ಬೇಕು,” ಎಂದು ಇತ್ತೀಚೆಗೆ ಹೇಳಿದ್ದಾರೆ. ಆದರೆ ಅವರ ಈ ಮಾತುಗಳಲ್ಲಿ ಎಷ್ಟು ಪ್ರಾಮಾಣಿಕತೆ ಇದೆ ಎಂಬುದು ಗೊತ್ತಿಲ್ಲ. ಪಾಕಿಸ್ತಾನ ಇಷ್ಟರಿಂದಲೇ ಪಾಠ ಕಲಿಯುತ್ತದೆ ಎಂದೇನೂ ನಂಬಬೇಕಿಲ್ಲ. ಯಾಕೆಂದರೆ, ಪಾಕಿಸ್ತಾನ ಈವರೆಗೆ ಬೆನ್ನಿಗೆ ಚೂರಿ ಹಾಕುವ ನೀತಿಯನ್ನೇ ಪಾಲಿಸಿಕೊಂಡೇ ಬಂದಿದೆ.

ಇತ್ತ ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಕಾಶ್ಮೀರ ವಿಷಯದಲ್ಲಿ ತೋರುತ್ತಿರುವ ಕಠಿಣ ನೀತಿಗಳಿಂದ, ನಿಧಾನವಾಗಿ ಪರಿಸ್ಥಿತಿಯು ಬದಲಾಗುತ್ತಿದೆ. ಭಯೋತ್ಪಾದನೆಯಂತೂ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿನ ಜನರೂ ಭಾರತದೊಂದಿಗೆ ತಮ್ಮನ್ನು ಸೇರಿಸಿ ಎಂದು ಬೇಡಿಕೆ ಮಂಡಿಸುವಷ್ಟರ ಮಟ್ಟಿಗೆ ಬದಲಾವಣೆ ಕಾಣಬಹುದು. ಅತ್ತ ಪಾಕಿಸ್ತಾನದಲ್ಲೂ ಹೊಸ ತಲೆಮಾರಿನ ಜನರಿಗೆ ಕಾಶ್ಮೀರ ವಿಷಯ ಅಷ್ಟೇನೂ ಮುಖ್ಯವಲ್ಲ. ಜಗತ್ತನ್ನು ಕಣ್ಣೆದರು ಕಾಣುತ್ತಿರುವ ಹೊಸ ತಲೆಮಾರಿನ ಜನರು ಸ್ಪರ್ಧಾತ್ಮಕ ಶಿಕ್ಷಣ, ಉದ್ಯೋಗವನ್ನು ಬೇಡುತ್ತಿದ್ದಾರೆ. ಹಾಗಾಗಿ, ಇನ್ನಾದರು ಪಾಕಿಸ್ತಾನ ತನ್ನ ನಿಲುವನ್ನು ಬದಲಿಸಿಕೊಳ್ಳದೇ ಹೋದರೆ ಅದರ ಅಧಃಪತನ ಖಚಿತ.

Exit mobile version