Site icon Vistara News

Vistara Explainer: ಎತ್ತ ಸಾಗುತ್ತಿದೆ ಮಯನ್ಮಾರ್ ದಂಗೆ ಮತ್ತು ರೋಹಿಂಗ್ಯಾ ಬಿಕ್ಕಟ್ಟು?

vistara explainer about Myanmar insurgency and Rohingya crisis on the rise

| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು
ಕಳೆದ ಶನಿವಾರ ಇಸ್ರೇಲಿ ಸೇನೆ ಉತ್ತರ ಗಾಜಾದ ಜಬಾಲಿಯಾದಲ್ಲಿನ (Israel-Palestine War) ವಿಶ್ವಸಂಸ್ಥೆಯ ನಿರಾಶ್ರಿತ ಶಿಬಿರದ ಮೇಲೆ ನಡೆಸಿದ ವಾಯುದಾಳಿಯಲ್ಲಿ 80ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದರು. ಅಲ್ಲಿನ ಸಾವಿರಾರು ನಾಗರಿಕರಲ್ಲಿ ಭೀತಿ ಮೂಡಿಸಿದೆ. ಆದರೆ ನಾಗರಿಕರ ಸಾವಿಗೆ ಕಾರಣವಾದ ಈ ದಾಳಿಯನ್ನು ಜಗತ್ತು ಪ್ರಶ್ನಿಸಿದೆ. ಅದೇ ದಿನ, ಇಸ್ರೇಲಿ ಸೇನೆಯ ವಾಯುದಾಳಿಯಲ್ಲಿ, ಜಬಾಲಿಯ ನಿರಾಶ್ರಿತ ಶಿಬಿರದಲ್ಲಿ ವಿಶ್ವಸಂಸ್ಥೆಯ ಏಜೆನ್ಸಿ (UNRWA) ಪ್ಯಾಲೆಸ್ತೀನಿಯನ್ ನಿರಾಶ್ರಿತರಿಗಾಗಿ ನಡೆಸುತ್ತಿರುವ ಅಲ್-ಫಖೌರಾ ಶಾಲೆಯ ಮೇಲೆ ನಡೆದ ವಾಯುದಾಳಿಯಲ್ಲಿ ಮತ್ತು ಉತ್ತರ ಗಾಜಾದಲ್ಲಿನ ತಾಲ್ ಅಜ಼್ ಜ಼ಾತಾರ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 50 ಪ್ಯಾಲೆಸ್ತೀನಿಯನ್ನರು ಸಾವಿಗೀಡಾದರು. ಈ ಘಟನೆಗಳಿಗೆ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು. ಆದರೆ, ಕಳೆದ ವಾರದ ಮಧ್ಯಭಾಗದಲ್ಲಿ ನೆರೆಯ ಮಯನ್ಮಾರ್(Myanmar) ದೇಶದ, ಚಿನ್ ಸ್ಟೇಟ್‌ನ ಪರ್ವತ ಪ್ರದೇಶದ ವುಯ್ಲು ಗ್ರಾಮದ ಶಾಲೆಯ ಬಳಿ ಮಿಲಿಟರಿ ಜೆಟ್ ಬಾಂಬ್ ದಾಳಿ(Military Jet bomb attack) ನಡೆಸಿದ ಪರಿಣಾಮವಾಗಿ ಹನ್ನೊಂದು ಜನರು ಸಾವನ್ನಪ್ಪಿದರು. ಅವರಲ್ಲಿ ಎಂಟು ಜನ ಏಳರಿಂದ ಹನ್ನೊಂದರ ಹರೆಯದ ಮಕ್ಕಳಾಗಿದ್ದರು. ಆದರೆ ಈ ಘಟನೆ ಯಾಕೋ ಜಗತ್ತಿನ ಗಮನಕ್ಕೇ ಬರಲಿಲ್ಲ.(Vistara Explainer)

ಈ ವರ್ಷದ ಅಕ್ಟೋಬರ್ ತಿಂಗಳ ಆರಂಭದಲ್ಲಿ, ಉತ್ತರ ಮಯನ್ಮಾರ್‌ನ ಕಚಿನ್ ಸ್ಟೇಟ್ ಪ್ರದೇಶದ ಲಾಯ್ಜಾ ಪಟ್ಟಣದ ಬಳಿ, ಚೀನಾ ಗಡಿಯ ಸಮೀಪ, ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗಾಗಿ ಇರುವ ಶಿಬಿರದಲ್ಲಿ ಮಕ್ಕಳೂ ಸೇರಿದಂತೆ ಕನಿಷ್ಠ 29 ನಾಗರಿಕರನ್ನು ಮಿಲಿಟರಿ ದಾಳಿಯೊಂದರಲ್ಲಿ ಕೊಲೆಗೈಯಲಾಯಿತು. ಇದೂ ಜಗತ್ತಿನ ಗಮನದಿಂದ ದೂರವೇ ಉಳಿಯಿತು.

ಆಗ್ನೇಯ ಏಷ್ಯಾದ, 5.4 ಕೋಟಿ ಜನಸಂಖ್ಯೆ ಹೊಂದಿರುವ ರಾಷ್ಟ್ರವಾದ ಮಯನ್ಮಾರ್, ಈಗ ಆಂತರಿಕ ಯುದ್ಧದ ದಳ್ಳುರಿಗೆ ಸಿಲುಕಿ ನರಳುತ್ತಿದೆ. ಅಸಂಖ್ಯಾತ ಶಸ್ತ್ರಸಜ್ಜಿತ ಜನಾಂಗೀಯ ಗುಂಪುಗಳು ಮತ್ತು ಪ್ರಜಾಪ್ರಭುತ್ವ ಪರ ಗುಂಪುಗಳು 2021ರಲ್ಲಿ ಕ್ಷಿಪ್ರ ಕ್ರಾಂತಿ ನಡೆಸಿ, ಜನಾದೇಶ ಹೊಂದಿದ್ದ ಸರ್ಕಾರವನ್ನು ಕಿತ್ತಸೆದಿದ್ದ ಮಿಲಿಟರಿ ಜುಂಟಾ ವಿರುದ್ಧ ಕದನಕ್ಕಿಳಿದಿವೆ. ಭಾರತದ ಮಿಜೋರಾಂ ರಾಜ್ಯದ ಜೌಖಾತರ್ ಪ್ರದೇಶಕ್ಕೆ ಸನಿಹದಲ್ಲಿರುವ ಚಿನ್ ಸ್ಟೇಟ್ ಮಿಲಿಟರಿ ಆಡಳಿತದ ವಿರುದ್ಧ ನಿರಂತರವಾಗಿ ತನ್ನ ಪ್ರತಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಕಳೆದ ಮೂರು ವಾರಗಳಿಂದ ಮಿಲಿಟರಿ ಆಡಳಿತಕ್ಕೆ ದೇಶಾದ್ಯಂತ ವಿರೋಧಿ ಗುಂಪುಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದ್ದು, ಸೇನೆ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಆದ್ದರಿಂದ ಅದು ಮೇಲುಗೈ ಸಾಧಿಸಲು ಬಹುತೇಕ ವಾಯುಪಡೆಯ ಮೇಲೆ ಅವಲಂಬಿತವಾಗಿದೆ. ಚಿನ್ ಜನಾಂಗೀಯ ಗುಂಪು ಇತ್ತೀಚೆಗೆ ಗಡಿ ಪಟ್ಟಣವಾದ ರಿಖಾವ್ದರ್ ಅನ್ನು ವಶಪಡಿಸಿಕೊಂಡಿದೆ.

ಇತ್ತೀಚಿನ ವಾರಗಳಲ್ಲಿ, ಮಯನ್ಮಾರ್ ಆದ್ಯಂತ ಮಿಲಿಟರಿ ಆಡಳಿತ ಭಾರೀ ಪ್ರತಿರೋಧ ಎದುರಿಸಿದೆ. ಚೀನಾ ಗಡಿಯಾದ್ಯಂತ ಶಾನ್ ಸ್ಟೇಟ್ ಪ್ರದೇಶದಲ್ಲಿರುವ ಮೂರು ದೀರ್ಘಕಾಲೀನ ಜನಾಂಗೀಯ ಅಲ್ಪಸಂಖ್ಯಾತ ಶಸ್ತ್ರಸಜ್ಜಿತ ಗುಂಪುಗಳು ಮತ್ತು ದೇಶಾದ್ಯಂತ ಇರುವ ಪ್ರಜಾಪ್ರಭುತ್ವ ಪರ ಹೋರಾಟಗಾರರ ಕೂಟ ಸೇನೆ ಮತ್ತು ಪೊಲೀಸರನ್ನು ತಮ್ಮ ಪ್ರದೇಶಗಳಿಂದ ಹೊರಹಾಕುತ್ತಿವೆ. ಆಪರೇಶನ್ 1027 ಎಂಬ ರಹಸ್ಯ ಹೆಸರು ಹೊಂದಿರುವ ಹೊಸ ಆಕ್ರಮಣ ಅಕ್ಟೋಬರ್ 27ರಂದು ಆರಂಭಗೊಂಡಿತು. ಇದನ್ನು ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಆರ್ಮಿ, ಅರಾಕನ್ ಆರ್ಮಿ, ಹಾಗೂ ಟಾಂಗ್ ನ್ಯಾಷನಲ್ ಲಿಬರೇಶನ್ ಆರ್ಮಿಗಳನ್ನು ಒಳಗೊಂಡ ತ್ರೀ ಬ್ರದರ್‌ಹುಡ್ ಅಲಯನ್ಸ್ ಕೈಗೊಳ್ಳುತ್ತಿವೆ.

ಸೇನಾಡಳಿತಕ್ಕೆ ತೀವ್ರ ವಿರೋಧ

ಶಾನ್ ಸ್ಟೇಟ್‌ನಲ್ಲಿ ಮೂರು ಸಶಸ್ತ್ರ ಜನಾಂಗೀಯ ಗುಂಪುಗಳು ಸಾಧಿಸಿರುವ ಭಾರೀ ಯಶಸ್ಸು ಮಯನ್ಮಾರ್‌ನ ಇತರ ವಿರೋಧೀ ಪಡೆಗಳಿಗೆ ಇನ್ನಷ್ಟು ಧೈರ್ಯ ತುಂಬಿದೆ. ಮಯನ್ಮಾರ್ ಮಿಲಿಟರಿ ಆಡಳಿತ ತಾನು ಕಳೆದ ತಿಂಗಳ ಕೊನೆಯ ಭಾಗದಿಂದ ದಂಗೆ ವಿರೋಧಿ ಪಡೆಗಳಿಂದ ಪ್ರಬಲ ಪ್ರತಿರೋಧ ಎದುರಿಸುತ್ತಿದ್ದು, ಅವರು ಹಲವು ಗಡಿ ಪಟ್ಟಣಗಳು ಮತ್ತು ಬಹಳಷ್ಟು ಸೇನಾ ಹೊರಠಾಣೆಗಳನ್ನು ವಶಪಡಿಸಿಕೊಂಡಿವೆ ಎಂದು ಒಪ್ಪಿಕೊಂಡಿದೆ. ಮಯನ್ಮಾರ್ ಸೇನೆ ಭಾರತದ ಗಡಿಯಾದ್ಯಂತ ಬಹುತೇಕ ಪ್ರದೇಶಗಳ ಮೇಲೆ ತನ್ನ ನಿಯಂತ್ರಣ ಕಳೆದುಕೊಂಡಿದೆ.

ಮಯನ್ಮಾರ್ ಪೂರ್ವದಲ್ಲಿ ಕಯಾ ಸ್ಟೇಟ್‌ನ ಕ್ರಾಂತಿಕಾರಿಗಳು, ಪಶ್ಚಿಮದಲ್ಲಿ ರಖಿನ್ ಸ್ಟೇಟ್ ಕ್ರಾಂತಿಕಾರಿಗಳು, ಮತ್ತು ವಿಶೇಷವಾಗಿ ಉತ್ತರದ ಶಾನ್ ಸ್ಟೇಟ್‌ನ ಪ್ರಜಾಪ್ರಭುತ್ವ ಪರ ಹೋರಾಟಗಾರರು ಸೇನೆಯ ಮೇಲೆ ಭಾರೀ ದಾಳಿ ನಡೆಸುತ್ತಿದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಈ ಹೋರಾಟಗಾರರು ನೂರಾರು ಡ್ರೋನ್‌ಗಳನ್ನು ಬಳಸಿಕೊಂಡು, ಸೇನಾ ನೆಲೆಗಳ ಮೇಲೆ ಬಾಂಬ್‌ಗಳನ್ನು ಸುರಿಸುತ್ತಿದ್ದಾರೆ. ಮಿಲಿಟರಿ ಬೆಂಬಲಿತ ಮಯನ್ಮಾರ್ ಅಧ್ಯಕ್ಷ ವಿನ್ ಮೀಂಟ್ ಅವರು, ಒಂದು ವೇಳೆ ಸರ್ಕಾರ ಏನಾದರೂ ಗಲಭೆ ಪೀಡಿತ ಶಾನ್ ಸ್ಟೇಟ್ ಪ್ರದೇಶದಲ್ಲಿ ಹಿಡಿತ ಬಿಗಿಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ದೇಶ ವಿಭಜನೆಗೊಳ್ಳುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಸಂಸ್ಥೆ ಕಳವಳ

ಇಸ್ರೇಲ್ – ಹಮಾಸ್ ಯುದ್ಧದ ರೀತಿಯಲ್ಲೇ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರು ಮಯನ್ಮಾರ್‌ನಲ್ಲಿ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಮಯನ್ಮಾರ್ ಅಂತರ್ಯುದ್ಧದಲ್ಲಿ ಬಹುತೇಕ ಇಪ್ಪತ್ತು ಲಕ್ಷ ಜನರು ಸ್ಥಳಾಂತರಗೊಂಡಿದ್ದು, ಮಕ್ಕಳೂ ಸೇರಿದಂತೆ 75 ನಾಗರಿಕರು ಸಾವಿಗೀಡಾಗಿದ್ದಾರೆ. ಗುಟೆರೆಸ್ ಎಲ್ಲ ಯುದ್ಧದಲ್ಲಿ ಭಾಗವಹಿಸುವವರಿಗೂ ಸಾಮಾನ್ಯ ನಾಗರಿಕರನ್ನು ರಕ್ಷಿಸಲು ಮತ್ತು ಪರಿಹಾರ ಸಾಮಗ್ರಿಗಳನ್ನು ಪೂರೈಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ತಾಮಡವ್ ಎಂದು ಕರೆಯಲಾಗುವ ಮಯನ್ಮಾರ್ ಸೇನೆ ಕ್ಷಿಪ್ರ ಕ್ರಾಂತಿ ನಡೆಸಿ, ಫೆಬ್ರವರಿ 1, 2021ರಂದು ನಾಗರಿಕ ನಾಯಕಿ ಆ್ಯಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ಎಲ್‌ಡಿ) ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆದ ಬಳಿಕ, ಮಯನ್ಮಾರ್‌ನಲ್ಲಿ ವ್ಯಾಪಕ ಹಿಂಸಾಚಾರ ಆರಂಭಗೊಂಡಿತು.

2021ರ ದಂಗೆ, ಕಳೆದ ಹತ್ತು ವರ್ಷಗಳಿಂದ ಮಿಲಿಟರಿ ಮತ್ತು ನಾಗರಿಕ ಸರ್ಕಾರದ ನಡುವೆ ನಡೆಯುತ್ತಿದ್ದ ಅಧಿಕಾರದ ಸ್ಪರ್ಧೆಗೆ ಅಂತ್ಯ ಹಾಡಿತು. ಅವೆರಡೂ 2008ರಲ್ಲಿ ಮಿಲಿಟರಿ ರಚಿಸಿದ ಸಂವಿಧಾನದಡಿ ಅಧಿಕಾರ ಹಂಚಿಕೊಂಡಿದ್ದವು. ಈ ಸಂವಿಧಾನ, ಮಯನ್ಮಾರ್ ಸೇನೆಗೆ ಸಂಸತ್ತಿನಲ್ಲಿ ಕಾಲು ಭಾಗ ಸದಸ್ಯತ್ವವನ್ನು, ಪ್ರಮುಖ ಸಚಿವಾಲಯಗಳ ನಿಯಂತ್ರಣ, ಸಂವಿಧಾನ ತಿದ್ದುಪಡಿಗಳ ಮೇಲೆ ವಿಟೋ ಅಧಿಕಾರ ನೀಡಿತ್ತು ಮತ್ತು ಆ್ಯಂಗ್ ಸಾನ್ ಸೂಕಿ ಅವರಿಗಿದ್ದ ವಿದೇಶೀ ಕುಟುಂಬ ಸಂಬಂಧದ ಕಾರಣದಿಂದ ಅವರಿಗೆ ಅಧ್ಯಕ್ಷರಾಗುವ ಅಧಿಕಾರವನ್ನು ನಿರಾಕರಿಸಿತ್ತು.

ಮಯನ್ಮಾರ್ ಮಿಲಿಟರಿ ಜುಂಟಾ ನವೆಂಬರ್ 2020ರ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದಯ ಆರೋಪಿಸಿ, ತಾನು ನಡೆಸಿದ ಕ್ಷಿಪ್ರ ಕ್ರಾಂತಿಯನ್ನು ಸಮರ್ಥಿಸಿಕೊಂಡಿತ್ತು. ಆದರೆ ಸೇನೆಯ ಆರೋಪಗಳನ್ನು ಚುನಾವಣಾ ಆಯೋಗ ಮತ್ತು ಅಂತಾರಾಷ್ಟ್ರೀಯ ವೀಕ್ಷಕರು ನಿರಾಕರಿಸಿ, ಚುನಾವಣೆ ಮುಕ್ತವಾಗಿ, ನ್ಯಾಯಯುತವಾಗಿ ನಡೆದಿತ್ತು ಎಂದಿದ್ದರು. ಅಂತಾರಾಷ್ಟ್ರೀಯ ಸಮುದಾಯ ಸೇನಾ ಕ್ರಾಂತಿಯನ್ನು ಖಂಡಿಸಿ, ಸೇನೆಯ ಮೇಲೆ ನಿರ್ಬಂಧಗಳನ್ನು ಹೇರಿ, ಚೀನಾ ಮತ್ತು ರಷ್ಯಾಗಳಂತಹ ಮಿತ್ರರಾಷ್ಟ್ರಗಳಿಗೆ ಈ ಬಿಕ್ಕಟ್ಟನ್ನು ಕೊನೆಗೊಳಿಸಲು ನೆರವಾಗುವಂತೆ ಕೋರಿತ್ತು.

ಈ ದಂಗೆಗೆ ಪ್ರತಿಕ್ರಿಯೆಯಾಗಿ, ಮಯನ್ಮಾರ್ ನಾಗರಿಕರು ಬೃಹತ್ ಕ್ರಾಂತಿಯನ್ನೇ ಆರಂಭಿಸಿದರು. ಅವರು ತಮ್ಮ ಚುನಾಯಿತ ಸರ್ಕಾರದ ಮರುಸ್ಥಾಪನೆಯಾಗಬೇಕು ಮತ್ತು ಮಾನವ ಹಕ್ಕುಗಳು ಲಭ್ಯವಾಗಬೇಕು ಎಂದು ಆಗ್ರಹಿಸತೊಡಗಿದರು. ಈ ಹೋರಾಟದಲ್ಲಿ ಜನಾಂಗೀಯ ಅಲ್ಪಸಂಖ್ಯಾತರು, ಮಹಿಳೆಯರು, ಯುವಕರು ಮತ್ತು ನಾಗರಿಕ ಸೇವಾ ಉದ್ಯೋಗಿಗಳು ಸೇರಿದಂತೆ, ಎಲ್ಲಾ ಸ್ತರಗಳ ಜನರೂ ಭಾಗಿಯಾಗಿ, ಶಾಂತಿಯುತ ರೀತಿಯಲ್ಲಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸತೊಡಗಿದರು. ಆದರೆ ಮಯನ್ಮಾರ್ ಸೇನೆ ಇದಕ್ಕೆ ಭಾರೀ ಬಲಪ್ರಯೋಗದ ಮೂಲಕ ಪ್ರತಿಕ್ರಿಯಿಸಿ, ಕ್ಷೋಭೆಯನ್ನು ಇನ್ನಷ್ಟು ಹೆಚ್ಚಿಸಿ, ಮಾನವ ಹಕ್ಕುಗಳನ್ನು ದಮನಿಸಲು ಆರಂಭಿಸಿತು.

ಮಿಲಿಟರಿ ಜುಂಟಾ ಪ್ರತಿಭಟನಾಕಾರರನ್ನು ಚದುರಿಸಲು ಮಾರಣಾಂತಿಕ ಪ್ರಹಾರ ನಡೆಸಿದ ಪರಿಣಾಮವಾಗಿ, ಸಾಕಷ್ಟು ಜನರು ಪ್ರಾಣ ಕಳೆದುಕೊಂಡರು. ಮಹಿಳೆಯರು, ಮಕ್ಕಳು, ವೈದ್ಯರು, ಪತ್ರಕರ್ತರು, ವೈದ್ಯರು, ಶಿಕ್ಷಕರು ಮತ್ತು ರಾಜಕಾರಣಿಗಳು ಸೇರಿದಂತೆ ಸಾವಿರಾರು ಜನರನ್ನು ವಶಪಡಿಸಿಕೊಂಡು, ಅವರಿಗೆ ಚಿತ್ರಹಿಂಸೆ ನೀಡಿ ಸಾಯಿಸಲಾಯಿತು. ಮಯನ್ಮಾರ್ ಸೇನೆ ಜನಾಂಗೀಯ ಸಶಸ್ತ್ರ ಸಂಘಟನೆಗಳನ್ನು ಗುರಿಯಾಗಿಸಿ ಅವರ ಮೇಲೆ ವಾಯುದಾಳಿ, ಭೂ ಕಾರ್ಯಾಚರಣೆ ಮತ್ತು ವ್ಯಾಪಕ ಸ್ಥಳಾಂತರಗಳನ್ನು ನಡೆಸತೊಡಗಿತು. ಇದು ಭಾರೀ ಮಾನವೀಯ ಬಿಕ್ಕಟ್ಟು ಸೃಷ್ಟಿಸಿತು.

ಈ ಎಲ್ಲ ಕ್ರೌರ್ಯಗಳ ಹೊರತಾಗಿಯೂ, ನಾಗರಿಕ ಪ್ರತಿರೋಧ ಮುಂದುವರಿದಿದೆ. ಆಡಳಿತದಿಂದ ಕಿತ್ತು ಹಾಕಲ್ಪಟ್ಟ ಜನಪ್ರತಿನಿಧಿಗಳು, ವಿವಿಧ ಗುಂಪುಗಳು, ಸಂಘಟನೆಗಳ ಪ್ರತಿನಿಧಿಗಳು ಜೊತೆಯಾಗಿ, ನ್ಯಾಷನಲ್ ಯುನಿಟಿ ಗವರ್ನಮೆಂಟ್ (ಎನ್‌ಯುಜಿ) ಎಂಬ ಪರ್ಯಾಯ ಸರ್ಕಾರವನ್ನು ಸ್ಥಾಪಿಸಿದರು. ಸೇನಾ ಆಡಳಿತವನ್ನು ಕೊನೆಗೊಳಿಸಲು ಮತ್ತು ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸಲು ಅವರು ಪೀಪಲ್ಸ್ ಡಿಫೆನ್ಸ್ ಫೋರ್ಸ್ (ಪಿಡಿಎಫ್) ಎಂಬ ಗೆರಿಲ್ಲಾ ಸೇನೆಯನ್ನು ಸ್ಥಾಪಿಸಿ, ಮಿಲಿಟರಿಯ ದಮನಕಾರಿ ನೀತಿಯ ವಿರುದ್ಧ ಹೋರಾಟ ಆರಂಭಿಸಿದರು. ಎನ್‌ಯುಜಿ ಮಯನ್ಮಾರ್ ನಾಗರಿಕರನ್ನು ರಕ್ಷಿಸಲು, ಶಾಂತಿ ಮರುಸ್ಥಾಪಿಸಲು ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ಬೆಂಬಲವನ್ನು ಎದುರು ನೋಡುತ್ತಿದೆ.

ಮಯನ್ಮಾರ್ ಆಂತರಿಕ ದಳ್ಳುರಿಯನ್ನು ಎದುರಿಸುತ್ತಿರುವಾಗಲೇ, ರೊಹಿಂಗ್ಯಾದ ಜನಾಂಗೀಯ ಅಲ್ಪಸಂಖ್ಯಾತರಿಗೆ, ಅದರಲ್ಲೂ ಪ್ರಮುಖವಾಗಿ ಮುಸ್ಲಿಮರಿಗೆ ಕಿರುಕುಳ ಮುಂದುವರಿಯುತ್ತಿದೆ. ಮುಖ್ಯವಾಗಿ ರಖಿನ್ ಸ್ಟೇಟ್‌ನಲ್ಲಿ ವಾಸಿಸುತ್ತಿರುವ ರೊಹಿಂಗ್ಯಾಗಳು ಅಪಾರ ತಾರತಮ್ಯಗಳನ್ನು ಎದುರಿಸಿದ್ದು, ಅವರಿಗೆ ಪೌರತ್ವ ನಿರಾಕರಿಸಿ, ಮೂಲಭೂತ ಹಕ್ಕುಗಳಿಂದಲೂ ವಂಚಿಸಲಾಗಿದೆ. ಹಿಂಸಾಚಾರ ಮತ್ತು ಮಿಲಿಟರಿ ಆಕ್ರಮಣ ಅಪಾರ ಸಂಖ್ಯೆಯಲ್ಲಿ ರೊಹಿಂಗ್ಯನ್ನರು ನೆರೆ ರಾಷ್ಟ್ರಗಳಲ್ಲಿ ಆಶ್ರಯ ಕೋರುವಂತೆ ಮಾಡಿದೆ. ಹೆಚ್ಚಿನ ಸಂಖ್ಯೆಯ ರೊಹಿಂಗ್ಯನ್ನರು ಬಾಂಗ್ಲಾದೇಶ ಮತ್ತು ಭಾರತದ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಮಯನ್ಮಾರ್‌ನಲ್ಲಿ ಚೀನಾ ಕಿತಾಪತಿ

ಮಯನ್ಮಾರ್‌ನ ರಾಜಕೀಯ ಚಿತ್ರಣದಲ್ಲಿ ಅದರ ಪ್ರಮುಖ ಮಿತ್ರ ರಾಷ್ಟ್ರವಾದ ಚೀನಾ ಮಹತ್ವದ ಪಾತ್ರ ವಹಿಸಿದೆ. ಚೀನಾ ಸಾರ್ವಜನಿಕವಾಗಿ ಮಯನ್ಮಾರ್‌ನಲ್ಲಿ ಸ್ಥಿರತೆಗಾಗಿ ಕರೆ ನೀಡಿದರೂ, ಅದು ಸೇನಾ ದಂಗೆಯನ್ನು ಖಂಡಿಸದಿರುವುದಕ್ಕೆ ಮತ್ತು ಮಿಲಿಟರಿ ಆಡಳಿತದೊಡನೆ ವ್ಯವಹಾರ ಮುಂದುವರಿಸಿರುವುದಕ್ಕೆ ವ್ಯಾಪಕ ಟೀಕೆ ಎದುರಿಸಿದೆ. ಚೀನಾದ ನಡೆಯ ಹಿಂದೆ, ಮೂಲ ಸೌಕರ್ಯ ನಿರ್ಮಾಣ ಯೋಜನೆಗಳು, ಪ್ರಮುಖ ವ್ಯಾಪಾರ ಮಾರ್ಗದ ಮೇಲಿನ ನಿಯಂತ್ರಣ ಸೇರಿದಂತೆ ಚೀನಾದ ಆರ್ಥಿಕ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳಿವೆ ಎಂದು ಹಲವರು ಆರೋಪಿಸಿದ್ದಾರೆ. ದಂಗೆಗೆ ಚೀನಾ ಬೆಂಬಲ ನೀಡಿರುವುದು ಪ್ರಜಾಪ್ರಭುತ್ವ ಪರ ಹೋರಾಟಗಾರರು ಮತ್ತು ಅಂತಾರಾಷ್ಟ್ರೀಯ ಸಮುದಾಯದೊಡನೆ ಚೀನಾದ ಸಂಬಂಧವನ್ನು ಹಾಳುಗೆಡವಿದೆ.

ಕಳೆದ ವಾರ ಭಾರತ ಅನಿರೀಕ್ಷಿತವಾಗಿ ಮಯನ್ಮಾರ್ ಸೇನೆಗೆ ನೆರವು ನೀಡಲು ಮುಂದೆ ಬಂತು. ಭಾರತ 46 ಮಯನ್ಮಾರ್ ಸೈನಿಕರಿಗೆ ಮಿಜೋರಾಂ ಒಳಗೆ ಪ್ರವೇಶಿಸಲು ಅನುಮತಿ ನೀಡಿತು. ಈ ಸೈನಿಕರು ಮಿಜೋರಾಂ ಗಡಿಯಾಚೆ ಪ್ರಜಾಪ್ರಭುತ್ವ ಪರ ಹೋರಾಟಗಾರರು ಚಿನ್ ಸ್ಟೇಟ್‌ನಲ್ಲಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದಾಗ ಅವರಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಬಹುಶಃ ಭಾರತ ಇದೇ ಮೊದಲ ಬಾರಿಗೆ ಅವರದೇ ನೆಲದಲ್ಲಿ ಹೋರಾಡುತ್ತಿದ್ದ ಇನ್ನೊಂದು ದೇಶದ ಸೈನಿಕರನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿತ್ತು. ಇದು ಬಹುಶಃ ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಮಯನ್ಮಾರ್ ಮಿಲಿಟರಿ ಆಡಳಿತದೊಡನೆ ಸಹಕರಿಸಲು ಸಿದ್ಧವಾಗಿದೆ ಎಂಬ ಸಂಕೇತವೂ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಕಳವಳ ವ್ಯಕ್ತಪಡಿಸಿದ ಭಾರತ

ಮಯನ್ಮಾರ್ ನೆರೆ ರಾಷ್ಟ್ರವಾಗಿ, ಭಾರತ ಅಲ್ಲಿನ ಬಿಕ್ಕಟ್ಟಿನ ಕುರಿತು ಕಳವಳ ವ್ಯಕ್ತಪಡಿಸಿದ್ದು, ಪ್ರಾದೇಶಿಕ ಸ್ಥಿರತೆಗಾಗಿ ಆಗ್ರಹಿಸಿದೆ. ಭಾರತ ಇದಕ್ಕೆ ಒಂದು ಶಾಂತಿಯುತ ಪರಿಹಾರ ಕಂಡುಕೊಳ್ಳಲು ಕರೆ ನೀಡಿದ್ದು, ಅದಕ್ಕಾಗಿ ಮಯನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಬೇಕು, ಹಿಂಸಾಚಾರ ಕೊನೆಯಾಗಬೇಕು ಎಂದಿದೆ. ಅದರಲ್ಲೂ ಭಾರತದ ಈಶಾನ್ಯ ಮತ್ತು ಪೂರ್ವದ ರಾಜ್ಯಗಳಿಗೆ ಬರುತ್ತಿರುವ ನಿರಾಶ್ರಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಸ್ಥಳೀಯ ಸಂಪನ್ಮೂಲ, ಮೂಲಭೂತ ಸೌಕರ್ಯಗಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿದೆ. ಫೆಬ್ರವರಿ 2021ರ ಕ್ಷಿಪ್ರ ದಂಗೆಯ ಬಳಿಕ 40,000ಕ್ಕೂ ಹೆಚ್ಚು ಚಿನ್ ನಿರಾಶ್ರಿತರು ಮಿಜೋರಾಂ ಪ್ರವೇಶಿಸಿರುವುದರಿಂದ, ಮಯನ್ಮಾರ್ ದಂಗೆಯ ಕಹಿ ಅನುಭವ ಭಾರತವನ್ನೂ ತಟ್ಟತೊಡಗಿದೆ.

ಅದರೊಡನೆ, ಭಾರತ ಮತ್ತು ಮಯನ್ಮಾರ್ ನಡುವಿನ ವ್ಯಾಪಾರ ಮತ್ತು ಆರ್ಥಿಕ ಸಂಬಂಧಕ್ಕೆ ಎದುರಾಗಿರುವ ಅಡಚಣೆ, ಗಡಿಯಾಚೆಗಿನ ವ್ಯಾಪಾರ ವಹಿವಾಟು ಮತ್ತು ಹೂಡಿಕೆಗಳ ಮೇಲೆ ಪರಿಣಾಮ ಬೀರಿದೆ. ಈ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತದ ಕಾಳಜಿ ಗಡಿ ವ್ಯವಹಾರವನ್ನು ಮೀರಿದ್ದು, ಈ ಪ್ರದೇಶದಲ್ಲಿ ಶಾಂತಿ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಮಹತ್ವವನ್ನು ಸಾರುತ್ತಿದೆ.

ಮಯನ್ಮಾರ್ ಬಿಕ್ಕಟ್ಟು ಹಲವು ಆಯಾಮಗಳನ್ನು ಹೊಂದಿದ್ದು, ಪ್ರಸ್ತುತ ಕ್ರಾಂತಿ, ದಮನಕಾರಿ ಆಡಳಿತ, ರೊಹಿಂಗ್ಯನ್ ಅಲ್ಪಸಂಖ್ಯಾತರ ಪಾಡು, ಮತ್ತು ಪ್ರಾದೇಶಿಕ ಶಕ್ತಿಯಾಗಿರುವ ಚೀನಾದ ಮಧ್ಯಪ್ರವೇಶಗಳು ಅದರಲ್ಲಿ ಪ್ರಮುಖವಾಗಿವೆ. ಭಾರತವೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಈ ಸವಾಲುಗಳನ್ನು ಎದುರಿಸಲು ಜೊತೆಯಾಗಿ ಕಾರ್ಯಾಚರಿಸಿ, ಮಯನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪಿಸಿ, ಮಾನವ ಹಕ್ಕುಗಳನ್ನು ರಕ್ಷಿಸಲು ಮುಂದಾಗಬೇಕು. ಅದರೊಡನೆ, ರೊಹಿಂಗ್ಯನ್ನರ ಪರಿಸ್ಥಿತಿಯೆಡೆಗೂ ಗಮನ ಹರಿಸಿ, ಅವರ ದಮನವನ್ನು ಕೊನೆಗಾಣಿಸಿ, ಅವರಿಗೂ ಹಕ್ಕುಗಳು ಮತ್ತು ಸುರಕ್ಷತೆಯನ್ನು ಒದಗಿಸಬೇಕು. ಈ ಸಮಸ್ಯೆಗಳನ್ನು ಜೊತೆಯಾಗಿ ಎದುರಿಸುವ ಮೂಲಕ, ಮಯನ್ಮಾರ್ ಮತ್ತು ಸುತ್ತಲಿನ ಪ್ರದೇಶಗಳಿಗೆ ಶಾಂತಿಯುತ, ಸ್ಥಿರ ಭವಿಷ್ಯ ಒದಗಿಸಲು ಸಾಧ್ಯ.

ಈ ಸುದ್ದಿಯನ್ನೂ ಓದಿ: Vistara Explainer: ಇಸ್ರೇಲಿ ಗುಪ್ತಚರಕ್ಕೆ ಹಮಾಸ್ ಚಳ್ಳೆಹಣ್ಣು ತಿನ್ನಿಸಿದ್ದು ಹೇಗೆ? ಕತೆ ರೋಚಕವಾಗಿದೆ!

Exit mobile version