ಬ್ರಿಟನ್‌ನ ಹಣಕಾಸು ಸಚಿವ ಸ್ಥಾನಕ್ಕೆ ರಿಷಿ ಸುನಕ್ ರಾಜೀನಾಮೆ ನೀಡಿದ್ದಾರೆ. ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿ ಎಂದು ಕೆಲವು ತಿಂಗಳ ಹಿಂದೆ ಹೊಗಳಿಸಿಕೊಂಡಿದ್ದ ರಿಷಿ ಅವರಿಗೂ ಬೋರಿಸ್‌ಗೂ ಯಾಕೆ ಭಿನ್ನಮತ ಮೂಡಿತು? ಬ್ರಿಟನ್‌ನ ಪ್ರಧಾನಿಯಾಗುವ ಇನ್ಫಿ ಮೂರ್ತಿ ಅಳಿಯನ ಕನಸು ನನಸಾಗುವುದಿಲ್ಲವೇ? ರಿಷಿ ಅವರ ಮುಂದಿನ ಹಾದಿ ಏನು?
ಬೋರಿಸ್‌ಗೆ ಕಾಡಿದ ಕೋವಿಡ್ ಪಾರ್ಟಿ
ಹಣಕಾಸು ಸಚಿವ ರಿಷಿ ಸುನಕ್ ಹಾಗೂ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಅವರ ರಾಜೀನಾಮೆ ಬೋರಿಸ್ ಸರ್ಕಾರಕ್ಕೆ ದೊಡ್ಡ ಹೊಡೆತ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರಿಂದಾಗಿ ಬೋರಿಸ್ ಅವರ ವಿಶ್ವಾಸಾರ್ಹತೆ ಕುಸಿದಿದ್ದು, ಪೇಚಿಗೆ ಸಿಲುಕಿದ್ದಾರೆ. ಸಚಿವ ಸಂಪುಟದ ಸದಸ್ಯರೇ ಬಂಡಾಯ ಎದ್ದಿದ್ದಾರೆ ಎಂದರೆ ಸರ್ಕಾರ ಸರಿಯಾಗಿ ನಡೆಯುತ್ತಿಲ್ಲ ಎಂದೇ ಅರ್ಥ.
ಬೋರಿಸ್ ಜಾನ್ಸನ್ ಅವರು ಕಳೆದ ವರ್ಷದ ಆರಂಭದಿಂದಲೂ ಬ್ರಿಟನ್ ಜನತೆಯ ಮುಂದೆ ವಿಶ್ವಾಸದ ಕೊರತೆಯನ್ನು ಎದುರಿಸುತ್ತಿದ್ದಾರೆ. ಕೋವಿಡ್ ಸನ್ನಿವೇಶವನ್ನು ಅವರು ಸಾಕಷ್ಟು ಸಮರ್ಪಕವಾಗಿ ಎದುರಿಸಿರಲಿಲ್ಲ ಎಂಬ ಆಕ್ಷೇಪ ಅವರ ಮೇಲೆ ಇದೆ. ಬ್ರಿಟನ್ ಕೊರೊನಾ ಸಾಂಕ್ರಾಮಿಕವನ್ನು ಎದುರಿಸುತ್ತಿದ್ದಾಗ ಪ್ರಧಾನಿ ಬೋರಿಸ್ ಹಾಗೂ ಅವರ ಗೆಳೆಯರು ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಆಲ್ಕೋಹಾಲ್ ಪಾರ್ಟಿ ನಡೆಸಿದ್ದರು. ಇದು ವಿವಾದದ ಕಿಡಿ ಹೊತ್ತಿಸಿತ್ತು.
ಇದರಿಂದ ಅವರು ತಮ್ಮ ಪಕ್ಷವಾದ ಕನ್ಸರ್ವೇಟಿವ್ ಪಾರ್ಟಿಯಲ್ಲೇ ಸಾಕಷ್ಟು ಶಾಸಕರ ವಿರೋಧ, ಭಿನ್ನಮತ ಎದುರಿಸಬೇಕಾಗಿ ಬಂದಿತ್ತು. ಬೋರಿಸ್ ರಾಜೀನಾಮೆ ನೀಡಬೇಕು ಎಂದು ದೊಡ್ಡದೊಂದು ಬಣ ಒತ್ತಾಯಿಸಿತ್ತು. ಬೋರಿಸ್ ನಾಯಕತ್ವದಲ್ಲಿ ಮುಂದುವರಿಯುವುದನ್ನು ಆಕ್ಷೇಪಿಸಿ ಸರಕಾರದ ಹಲವು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಜೂನ್ 6ರಂದು ಬೋರಿಸ್ ನಾಯಕತ್ವದ ಬಗೆಗೆ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ, 211: 148 ಮತಗಳಲ್ಲಿ ಬೋರಿಸ್ ಗೆದ್ದಿದ್ದರು. ಇದರ ನಂತರ ನಡೆದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ಕನ್ಸರ್ವೇಟಿವ್ ಪಕ್ಷವನ್ನು ಕೈಬಿಟ್ಟಿದ್ದರು. ಇದು ಬೋರಿಸ್‌ಗೆ ಬಿದ್ದ ಎರಡನೇ ಹೊಡೆತ.
ಇಂಥ ಸಮಯದಲ್ಲಿಯೂ ರಿಷಿ ಸುನಕ್ ಅವರು ಬೋರಿಸ್ ಅವರ ಕೈಬಿಟ್ಟಿರಲಿಲ್ಲ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದಾಗ, ಉಕ್ರೇನ್‌ಗೆ ನೀಡಲಾದ ದೊಡ್ಡ ಮೊತ್ತದ ಸಹಾಯಧನದ ಕುರಿತು ಆಕ್ಷೇಪ ಎದ್ದಾಗಲೂ ಅದನ್ನು ರಿಷಿ ಸಮರ್ಥಿಸಿಕೊಂಡಿದ್ದರು.
ಮುಳುವಾದ ಕ್ರಿಸ್ ಪಿಂಚರ್
ಆದರೆ ಮೂರನೆಯದಾಗಿ ಬೋರಿಸ್‌ಗೆ ಸುತ್ತಿಕೊಂಡದ್ದು ಅವರ ಆಪ್ತನಾದ ಸಚಿವನೊಬ್ಬನ ಲೈಂಗಿಕ ಹಗರಣ. ಇದು 2019ರಲ್ಲೇ ನಡೆದಿದ್ದ ಘಟನೆ. ಆ ವರ್ಷ ಜುಲೈನಲ್ಲಿ, ಕನ್ಸರ್ವೇಟಿವ್ ಪಕ್ಷದ ಸಂಸದ ಕ್ರಿಸ್ ಪಿಂಚರ್ ಎಂಬಾತ, ಪಿಕಾಡೆಲಿ ಎಂಬಲ್ಲಿ ಒಂದು ಕ್ಲಬ್‌ಗೆ ಹೋಗಿದ್ದ. ಈತ ಅಲ್ಲಿ ಇಬ್ಬರು ತರುಣರನ್ನು ಲೈಂಗಿಕವಾಗಿ ಬಳಸಿಕೊಳ್ಳುವಂತೆ ಸ್ಪರ್ಶಿಸಿದ್ದ. ಇದು ಮರುದಿನ ಸುದ್ದಿಯಾಗಿ, ಸ್ವತಃ ಮುಜುಗರಕ್ಕೊಳಗಾಗಿದ್ದ ಈತ ತಾನು ಹೊತ್ತಿದ್ದ ಪಕ್ಷದ ಡೆಪ್ಯುಟಿ ಚೀಫ್ ವಿಪ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ.
ಇದರ ನಂತರವೂ ಪಿಂಚರ್‌ನನ್ನು ಬೋರಿಸ್ ಜಾನ್ಸನ್ ವಿದೇಶಾಂಗ ವ್ಯವಹಾರ ಸಚಿವ ಸ್ಥಾನದಂಥ ಮಹತ್ವದ ಸ್ಥಾನಗಳಿಗೆ ನೇಮಿಸಿದ್ದರು. ಪಿಕಾಡೆಲಿ ಕ್ಲಬ್ ಮಾತ್ರವಲ್ಲದೆ ಹಲವು ಕಡೆಗಳಿಂದ ಪಿಂಚರ್‌ನ ಕಾಮುಕ ವರ್ತನೆಯ ಬಗ್ಗೆ ದೂರುಗಳು ಬಂದಿದ್ದರೂ ಅವುಗಳಿಗೆ ಬೋರಿಸ್ ಕಿವುಡಾಗಿದ್ದರು. ಇತ್ತೀಚೆಗೆ, ಪಿಂಚರ್‌ನ ಬಗ್ಗೆ ಎಲ್ಲ ವಿವರಗಳು ಗೊತ್ತಿದ್ದರೂ ಬೋರಿಸ್ ತಲೆ ಕೆಡಿಸಿಕೊಂಡಿರಲಿಲ್ಲ ಎಂಬುದನ್ನು ಅವರ ಪಕ್ಷದ ಮಹತ್ವದ ಸ್ಥಾನದಲ್ಲಿದ್ದವರೇ ಬಯಲು ಮಾಡಿದ್ದರು. ಇದು ಬೋರಿಸ್‌ರನ್ನು ತೀರಾ ಮುಜುಗರಕ್ಕೀಡು ಮಾಡಿತ್ತು.
ರಿಷಿ ಸುನಕ್ ಹೇಳಿದ್ದೇನು?
ತಮ್ಮ ರಾಜೀನಾಮೆ ಪತ್ರದಲ್ಲಿ ರಿಷಿ ಸುನಕ್ ಬೋರಿಸ್ ಅವರ ಮೇಲೆ ಹೆಚ್ಚಿನ ಆರೋಪಗಳನ್ನೇನೂ ಹೊರಿಸಿಲ್ಲ. ಆದರೆ ಬೋರಿಸ್ ನಾಯಕತ್ವದಲ್ಲಿ ವಿಶ್ವಾಸವಿಲ್ಲ ಎಂದಿದ್ದಾರೆ.
ʼʼಕೊರೊನಾ ಪ್ಯಾಂಡೆಮಿಕ್ ನಂತರದ ಆರ್ಥಿಕ ಸಂಕಷ್ಟ, ಉಕ್ರೇನ್ ಯುದ್ಧದ ಬಿಕ್ಕಟ್ಟು, ಇನ್ನಿತರ ಗಂಭೀರ ಸವಾಲುಗಳು ನಡುನಡುವೆ ನನ್ನ ಈ ರಾಜೀನಾಮೆ ನಾನು ಹಗುರವಾಗಿ ಪರಿಗಣಿಸುತ್ತಿರುವ ಸಂಗತಿಯಲ್ಲ. ಆದರೆ ಸರ್ಕಾರ ಸರಿಯಾಗಿ. ಸ್ಪರ್ಧಾತ್ಮಕವಾಗಿ, ಗಂಭೀರ ರೀತಿಯಲ್ಲಿ ಮುನ್ನಡೆಯಬೇಕು ಎಂದು ಜನ ನಿರೀಕ್ಷಿಸುತ್ತಾರೆ. ಸರ್ಕಾರವನ್ನು ತೊರೆಯುತ್ತಿರುವುದಕ್ಕೆ ಬೇಸರವಾಗಿದೆ. ಆದರೆ ನಾವು ಹೀಗೇ ಮುಂದುವರಿಯಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಇದರಿಂದಾಗಿ ನನಗೆ ಸಚಿವ ಸ್ಥಾನ ಶಾಶ್ವತವಾಗಿ ದೂರವಾಗಲಿದೆ ಎಂಬುದು ನನಗೆ ತಿಳಿದಿದೆ. ಆದರೆ ಮೇಲೆ ಹೇಳಿದ ಮೌಲ್ಯಗಳಿಗಾಗಿ ನನ್ನ ಹೋರಾಟ ಯೋಗ್ಯವಾಗಿದೆ ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ನಾನು ರಾಜೀನಾಮೆ ನೀಡುತ್ತಿದ್ದೇನೆ” ಎಂದು ಸುನಕ್ ತಿಳಿಸಿದ್ದಾರೆ.
ಬೋರಿಸ್ ಅವರ ಮುಂದಿನ ಹಾದಿ ಕಷ್ಟಕರವಾಗಿದೆ. ಯಾಕೆಂದರೆ ಸುನಕ್ ಸೇರಿದಂತೆ ಹಲವಾರು ಶಾಸಕರು, ಸಚಿವರು, ಬೋರಿಸ್ ನಾಯಕತ್ವದಲ್ಲಿ ಅವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಜುಗರಕ್ಕೆ ಒಳಗಾಗಿರುವ ಪಕ್ಷ ಇಷ್ಟರಲ್ಲೇ ಬೇರೊಬ್ಬ ನಾಯಕನನ್ನು ಆರಿಸಿದರೂ ಆಶ್ಚರ್ಯವಿಲ್ಲ.
ರಿಷಿ ಸುನಕ್ ಬೆಳವಣಿಗೆ
ರಿಷಿ ಸುನಕ್ ಇನ್‌ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರ ಅಳಿಯ. ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರನ್ನು ಮದುವೆಯಾಗಿದ್ದಾರೆ. ರಿಷಿ ಇಂಗ್ಲೆಂಡಿನ ಸೌತಾಂಪ್ಟನ್‌ನಲ್ಲಿ ನೆಲೆಸಿದ್ದ ಯಶ್ವೀರ್ ಮತ್ತು ಉಷಾ ಸುನಕ್ ಎಂಬ ದಂಪತಿಗೆ 1980ರಲ್ಲಿ ಜನಿಸಿದವರು. ಇವರ ಅಜ್ಜ ಅಜ್ಜಿ ಪಂಜಾಬ್‌ನಿಂದ ವಲಸೆ ಹೋದವರು. ತಂದೆ ವೈದ್ಯರು. ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಫಿಲಾಸಫಿ, ಪಾಲಿಟಿಕ್ಸ್ ಮತ್ತು ಎಕಾನಮಿಕ್ಸ್ ಓದಿದರು. ಪದವಿ ಪಡೆದ ನಂತರ ಗೋಲ್ಡ್‌ಮನ್ ಸ್ಯಾಕ್ಸ್ ಬ್ಯಾಂಕ್‌ನಲ್ಲಿ ಅನಲಿಸ್ಟ್ ಆಗಿ ಸೇರಿಕೊಂಡರು. 2014ರಲ್ಲಿ ರಿಚ್ಮಂಡ್ ಎಂಬಲ್ಲಿಂದ ಕನ್ಸರ್ವೇಟಿಕ್ ಪಕ್ಷದಿಂದ ಸ್ಪರ್ಧಿಸುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಬಳಿಕ ಎರಡು ಬಾರಿ ಆರಿಸಿ ಬಂದಿದ್ದಾರೆ. ಪ್ರತಿಸಲವೂ ಅವರ ಜನಪ್ರಿಯತೆ ಏರುತ್ತಾ ಹೋಯಿತು.
2009ರಲ್ಲಿ ರಿಷಿ ಹಾಗೂ ಅಕ್ಷತಾ ಮೂರ್ತಿ ಮದುವೆಯಾದರು. ಅದಕ್ಕೂ ಮುನ್ನ ರಿಷಿ ಅವರು ನಾರಾಯಣಮೂರ್ತಿ ಪಾಲುದಾರರಾಗಿದ್ದ ಇಂಗ್ಲೆಂಡ್‌ನ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿದ್ದರು.
ಪ್ರಧಾನಿ ಬೋರಿಸ್ ಜಾನ್ಸನ್ ಕೊರೊನಾದ ಅಪಕ್ವ ನಿರ್ವಹಣೆ ಸೇರಿದಂತೆ ಅನೇಕ ವಿವಾದಗಳಲ್ಲಿ ಸಿಲುಕಿ ಹೆಸರು ಕೆಡಿಸಿಕೊಂಡ ಬಳಿಕ, ರಿಷಿ ಸುನಕ್ ಅವರು ಜಾನ್ಸನ್‌ನ ಉತ್ತರಾಧಿಕಾರಿ ಎಂದು ಬ್ರಿಟಿಷ್ ಮಾಧ್ಯಮಗಳು ಹೇಳತೊಡಗಿದವು. ಹಣಕಾಸು ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದು ಇದಕ್ಕೆ ಕಾರಣವಾಗಿತ್ತು. ಅದಕ್ಕೂ ಮುನ್ನ ಪರಿಸರ ಮುಂತಾದ ಖಾತೆಗಳನ್ನು ಇವರು ನಿರ್ವಹಿಸಿದ್ದರು.
ಏರಿದಷ್ಟೇ ವೇಗದಲ್ಲಿ ಇಳಿದ ಖ್ಯಾತಿ
ಆದರೆ ಈ ವರ್ಷದ ಆರಂಭದಲ್ಲಿ ಅವರ ಜನಪ್ರಿಯತೆಯ ಗ್ರಾಫ್ ಅಷ್ಟೇ ವೇಗವಾಗಿ ಇಳಿಯತೊಡಗಿತು. ಇದಕ್ಕಿರುವ ಕಾರಣಗಳಲ್ಲಿ ಒಂದು, ಹಗರಣಗಳಲ್ಲಿ ಸಿಲುಕಿಕೊಂಡ ಬೋರಿಸ್ ಜಾನ್ಸನ್ ಅವರನ್ನು ಸಮರ್ಥಿಸಿಕೊಂಡು ಬಂದದ್ದು. ಇನ್ನೊಂದು ಪ್ರಮುಖ ಕಾರಣ, ಪತ್ನಿ ಅಕ್ಷತಾ ಮೂರ್ತಿ ಅವರ ತೆರಿಗೆ ಪ್ರಕರಣ.
ಅಕ್ಷತಾ ಮೂರ್ತಿ ತೆರಿಗೆ ಪ್ರಕರಣ
ಅಕ್ಷತಾ ಅವರು ಇಂಗ್ಲೆಂಡ್ ಸರಕಾರಕ್ಕೆ ಸಲ್ಲಿಸಬೇಕಾದ 20 ದಶಲಕ್ಷ ಪೌಂಡ್ (ಸುಮಾರು 197 ಕೋಟಿ ರೂಪಾಯಿ) ತೆರಿಗೆಯನ್ನು ತಪ್ಪಿಸಿದ್ದಾರೆ ಎಂಬುದು ಅವರ ಮೇಲಿರುವ ಆರೋಪ. ಅಕ್ಷತಾ ಅವರು ಬೆಂಗಳೂರು ಮೂಲದ ಇನ್ಫೋಸಿಸ್ ಕಂಪನಿಯಲ್ಲಿ 0.91% ಷೇರುಗಳನ್ನು ಹೊಂದಿದ್ದಾರೆ. ಪ್ರಸ್ತುತ ಅವುಗಳ ಮೌಲ್ಯ ಸುಮಾರು 100 ಕೋಟಿ ಡಾಲರ್. ಇದರಿಂದಲೇ ಅವರು ವರ್ಷಕ್ಕೆ ₹ 11.56 ಕೋಟಿಗಳಷ್ಟು ಡಿವಿಡೆಂಡ್ ಗಳಿಸುತ್ತಾರೆ. ಅಕ್ಷತಾ ಅವರು ಹೊಂದಿರುವ ಎಲ್ಲ ಸ್ಥಿರ ಚರ ಆಸ್ತಿ ಮೌಲ್ಯ ಸುಮಾರು ₹ 6,834 ಕೋಟಿ ಆಗಬಹುದು ಎಂಬ ಅಂದಾಜು. ಅಂದರೆ ಅವರು ಬ್ರಿಟನ್ ರಾಣಿಗಿಂತಲೂ ಶ್ರೀಮಂತೆ.
ಆದರೆ ತಮ್ಮ ಆದಾಯಕ್ಕೆ ತಕ್ಕಂತೆ ಅವರು ಬ್ರಿಟನ್‌ನಲ್ಲಿ ತೆರಿಗೆ ಪಾವತಿ ಮಾಡಿಲ್ಲ. ಯಾಕೆಂದರೆ ಅವರು ಬ್ರಿಟನ್‌ನ ಕಾಯಂ ನಿವಾಸಿ (Domicile) ಅಲ್ಲ. ಅವರು ಈಗಲೂ ಭಾರತೀಯ ಪೌರರೇ. ಭಾರತದಲ್ಲೇ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮಾಡಿದ ಅವರು ಇಂದಿಗೂ ಅದನ್ನು ತ್ಯಜಿಸಿ ಬ್ರಿಟನ್‌ನ ಪೌರತ್ವ ಪಡೆಯಲು ಮನಸ್ಸು ಮಾಡಿಲ್ಲ. ದ್ವಿರಾಷ್ಟ್ರ ಪೌರತ್ವವನ್ನು ಭಾರತ ಮಾನ್ಯ ಮಾಡುವುದಿಲ್ಲ. ಇದುವರೆಗೂ ಅವರು ಇನ್ಫಿಯಿಂದ ಗಳಿಸಿರುವ ಡಿವಿಡೆಂಡ್ ಪ್ರಮಾಣ ಸುಮಾರು ₹ 544 ಕೋಟಿ. ಈ ಲೆಕ್ಕಾಚಾರದಲ್ಲಿ ಅವರು ಸಲ್ಲಿಸಬೇಕಿರುವ ತೆರಿಗೆ ಮೊತ್ತ ₹ 200 ಕೋಟಿ. ಈ ತೆರಿಗೆ ಹಣವನ್ನು ಅವರು ಸಲ್ಲಿಸಿಲ್ಲ ಎಂದು ಪ್ರತಿಪಕ್ಷದ ಸದಸ್ಯರು ಆಕ್ಷೇಪಿಸಿದ್ದರು. ಈ ಬಗ್ಗೆ ಉತ್ತರ ನೀಡುವಂತೆ ಸಾರ್ವನಿಕರಿಂದಲೂ ಒತ್ತಡ ಬರತೊಡಗಿದಾಗ, ತಾವು ಬ್ರಿಟನ್‌ನಲ್ಲಿ ಪೂರ್ತಿ ತೆರಿಗೆ ಪಾವತಿ ಮಾಡುವುದಾಗಿ ಅಕ್ಷತಾ ಉತ್ತರ ನೀಡಿದ್ದರು.
ಬ್ರಿಟನ್‌ನ ಕಾಯಿದೆ ಪ್ರಕಾರ ಅಕ್ಷತಾ ಮೂರ್ತಿ ಅವರು ಅಲ್ಲಿನ non domicile ಪ್ರಜೆ. ಅಂದರೆ ಅವರು ಬ್ರಿಟನ್‌ನಲ್ಲಿ ಗಳಿಸುವ ಆದಾಯಕ್ಕೆ ಅಲ್ಲಿ ತೆರಿಗೆ ಸಲ್ಲಿಸಬೇಕು. ಆದರೆ ದೇಶದಾಚೆಯ ಮೂಲಗಳಿಂದ ಪಡೆದ ಆದಾಯಕ್ಕೆ ಅವರು ಬ್ರಿಟನ್‌ನಲ್ಲಿ ತೆರಿಗೆ ಕಟ್ಟಬೇಕಿಲ್ಲ. ಆದರೆ ಈ non domicile ಸ್ಥಾನಮಾನ ವಿದೇಶಿ ಪ್ರಜೆಯೊಬ್ಬರಿಗೆ ಅದರಷ್ಟಕ್ಕದೇ ದೊರೆಯುವುದಿಲ್ಲ. ಅದನ್ನು ಪಡೆಯಲು ಅವರು ಅರ್ಜಿ ಸಲ್ಲಿಸಬೇಕು. ಅಕ್ಷತಾ ಹಾಗೆ ಅರ್ಜಿ ಸಲ್ಲಿಸಿಲ್ಲ. 15 ವರ್ಷಗಳ ನಂತರ ಈ non domicile ಸ್ಥಾನಮಾನ ರದ್ದಾಗುತ್ತದೆ. ಅಕ್ಷತಾ ಅವರು ತೆರಿಗೆ ಕಟ್ಟದಿರುವುದೇನೂ ವಂಚನೆ ಅಲ್ಲ, ಕಾನೂನುಬಾಹಿರವೂ ಅಲ್ಲ. ಆದರೆ ಸ್ವತಃ ಗಂಡ ರಿಷಿ ಸುನಕ್ ವಿತ್ತ ಸಚಿವರಾಗಿರುವಾಗ, ತೆರಿಗೆ ಕಟ್ಟಬಹುದಾದ ಸ್ಥಿತಿಯಲ್ಲಿದ್ದೂ, ಅದನ್ನು ಕಟ್ಟದೆ ತಪ್ಪಿಸಿರುವುದು ಪತಿ- ಪತ್ನಿಯ ಆಷಾಢಭೂತಿತನ ಎಂಬುದು ಟೀಕಾಕಾರರ ಆರೋಪವಾಗಿತ್ತು.
ರಿಷಿಗೆ ಅಂಟಿಕೊಂಡ ಕಳಂಕಗಳು
ರಿಷಿ ಸುನಕ್ ಗಣ್ಯತೆ ದಿನದಿಂದ ದಿನಕ್ಕೆ ಇಳಿಯುತ್ತಿದೆ. ಇತ್ತೀಚೆಗೆ ರಿಷಿ ಮಿನಿ ಬಜೆಟ್ ಮಂಡಿಸಿದ್ದರು. ಆದರೆ ಹಣದುಬ್ಬರದಿಂದ ಶ್ರೀಸಾಮಾನ್ಯರ ಬದುಕು ಕಷ್ಟವಾಗುತ್ತಿರುವಾಗ, ಆ ಹೊರೆಯನ್ನು ಇಳಿಸಲು ಏನನ್ನೂ ರಿಷಿ ಮಾಡಿಲ್ಲ ಎಂಬ ಸಿಟ್ಟಿದೆ. ಉಕ್ರೇನ್ ಮೇಲಿನ ಯುದ್ಧಕ್ಕಾಗಿ ರಷ್ಯಾದ ಮೇಲೆ ಹಲವು ವಾಣಿಜ್ಯ ನಿರ್ಬಂಧಗಳನ್ನು ಇಂಗ್ಲೆಂಡ್ ವಿಧಿಸಿದೆ. ಆದರೆ ಇನ್‌ಫೋಸಿಸ್ ಮಾತ್ರ ರಷ್ಯಾದಲ್ಲಿ ಎಂದಿನಂತೆ ತನ್ನ ವ್ಯವಹಾರ ನಡೆಸುತ್ತಿದೆ. ಇವೆಲ್ಲ ಕಾರಣಗಳು ರಿಷಿಯ ಪ್ರಧಾನಿ ಹಾದಿಯಲ್ಲಿ ಮುಳ್ಳಾಗಿ ಕಾಣಿಸಿಕೊಂಡಿವೆ. ಬ್ರಿಟನ್‌ನ ಜನತೆ ಅಧಿಕಾರ ಸ್ಥಾನದಲ್ಲಿ ಇರುವವರ ಪ್ರಾಮಾಣಿಕತೆಯನ್ನು ಭೂತಗನ್ನಡಿ ಹಿಡಿದು ನೋಡುತ್ತಾರೆ. ಹೀಗಾಗಿಯೇ ಇಂದು ಬೋರಿಸ್‌ಗೆ ಸಂಕಷ್ಟ ಕಾಣಿಸಿಕೊಂಡಿರುವಂತೆ, ಸುನಕ್ ಅವರಿಗೂ ತಮ್ಮ ಪ್ರಾಮಾಣಿಕತೆ ಸಾಬೀತುಪಡಿಸಬೇಕಾದ ಅಗತ್ಯ ಒದಗಿದೆ.
ರಿಷಿ ಪ್ರಧಾನಿ ಆಗಬಹುದೇ?
ರಿಷಿ ಸುನಕ್ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಕುತೂಹಲ ಮೂಡಿದೆ. ಕೆಲ ದಿನಗಳ ಹಿಂದೆ ʼʼನೀವು ಬ್ರಿಟನ್‌ನ ಪ್ರಧಾನಿ ಆಗಬಯಸುತ್ತೀರಾ?ʼʼ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದರು- ʼʼನಾನು ಇಲ್ಲಿನ ಹಣಕಾಸು ಸಚಿವನಾದದ್ದೇ ಈ ದೇಶದ ಅಪಾರ ಸಹಿಷ್ಣುತೆ ಹಾಗೂ ಮುಕ್ತತೆಯ ಬಗ್ಗೆ ತಿಳಿಸುತ್ತದೆ. ಆದರೆ ಇಷ್ಟಕ್ಕೇ ಬ್ರಿಟಿಷ್- ಇಂಡಿಯಾ ಬಾಂಧವ್ಯ ಮುಗಿಯಬಾರದು ಅನಿಸುತ್ತದೆ. ನಾವಿನ್ನೂ ಮಾಡಬಹುದಾದ ಎಷ್ಟೋ ಸಂಗತಿಗಳಿವೆ, ಹೀಗಾಗಿ ಭವಿಷ್ಯದ ಬಗ್ಗೆ ನಾನು ಕುತೂಹಲಿಯಾಗಿದ್ದೇನೆ.ʼʼ
ಪ್ರಧಾನಿಯಾಗುವ ಬಗ್ಗೆ ರಿಷಿ ಅವರಿಗೆ ಆಸಕ್ತಿಯಿದೆ ಎಂಬುದನ್ನು ಈ ಮಾತು ಸಾಬೀತುಪಡಿಸುತ್ತದೆ. ಆದರೆ ಇದು ನಿಜವಾಗಬೇಕಾದರೆ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಬೇಕು ಹಾಗೂ ಇತರ ಶಾಸಕರು ರಿಷಿ ಅವರನ್ನು ಬೆಂಬಲಿಸಬೇಕು. ರಿಷಿ ಅವರಂತೆಯೇ ಆಕಾಂಕ್ಷಿಗಳಾದ ಇತರರೂ ಇರುವುದರಿಂದ ರಿಷಿಯ ಹಾದಿ ಸುಲಭವಾಗಿಲ್ಲ.