Site icon Vistara News

ವಿಸ್ತಾರ Explainer: China Borehole: ಭೂಮಿಗೆ ಭಾರೀ ರಂಧ್ರ ಕೊರೆಯಲು ಶುರು ಮಾಡಿದ ಚೀನಾ, ಏನಿದೆ ಅಲ್ಲಿ, ಇದರ ಉದ್ದೇಶವೇನು?

china borehole

ಭೂಮಿಗೆ ಭಾರೀ ತೂತು ಕೊರೆಯುವ ಕಾರ್ಯಾಚರಣೆಯನ್ನು ಚೀನಾ (China Borehole) ಆರಂಭಿಸಿದೆ. 10,000 ಮೀಟರ್ (32,808 ಅಡಿ) ಆಳದ (deep borehole) ರಂಧ್ರವನ್ನು ತೈಲ ಸಮೃದ್ಧ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿರುವ ತಾರಿಮ್ ಜಲಾನಯನ ಪ್ರದೇಶದಲ್ಲಿ ಕೊರೆಯಲು ಶುರು ಮಾಡಿದೆ. ಏನಿದರ ಉದ್ದೇಶ? ಈ ಹಿಂದೆ ಯಾರೂ ಇಂಥ ಸಾಹಸ ಮಾಡಿಲ್ಲವೇ? ನೋಡೋಣ.

ಈ ಬೋರ್‌ಹೋಲ್‌ ಕೊರೆಯುವುದರ ಉದ್ದೇಶವೇನು?

ಚೀನಾದ ಕ್ಸಿನ್ಹುವಾ ನ್ಯೂಸ್ ಏಜೆನ್ಸಿಯ ಪ್ರಕಾರ ಈ ಕಾರ್ಯಾಚರಣೆ ನಡೆಯುತ್ತಿರುವುದು ವೈಜ್ಞಾನಿಕ ಅನ್ವೇಷಣೆಯ ಉದ್ದೇಶದಿಂದ. ʼʼಇದು ಚೀನಾದ ಆಳವಾದ ಭೂಮಿಯ ಕೊರೆತದ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಭೂಮಿಯ ಅತ್ಯಂತ ಆಳದಲ್ಲಿರುವ ಪ್ರದೇಶವನ್ನು ಅಧ್ಯಯನ ಮಾಡಲು ಇದು ಅಭೂತಪೂರ್ವ ಅವಕಾಶ” ಎಂದು ಅದು ಹೇಳಿದೆ. 2021ರಲ್ಲಿ ದೇಶದ ಪ್ರಮುಖ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ, ಆಳ ಭೂಮಿಯ ಪರಿಶೋಧನೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಆಗ್ರಹಿಸಿದ್ದರು. ಅವರ ಮಾತನ್ನು ಅಲ್ಲಿನ ವಿಜ್ಞಾನಿಗಳ ತಂಡ ಸವಾಲಾಗಿ ತೆಗೆದುಕೊಂಡಿದೆ.

ಭೂಮಿಯಾಳದ ಸಂಪತ್ತು

ಭೂಮಿಯಾಳದಲ್ಲಿ ಇರಬಹುದಾದ ಖನಿಜಸಂಪತ್ತು ಮತ್ತು ಇಂಧನ ಸಂಪನ್ಮೂಲಗಳನ್ನು ಕಂಡುಹಿಡಿಯಲು ಈ ಕಾರ್ಯಾಚರಣೆ ಸಹಾಯ ಮಾಡಲಿದೆ. ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗಳು ಸೇರಿದಂತೆ ಪರಿಸರ ವಿಕೋಪಗಳ ಅಪಾಯಗಳನ್ನು ಮೌಲ್ಯಮಾಪನ ಮಾಡಲು ಸಹ ಇದು ಪ್ರಯೋಜನಕಾರಿಯಾಗಲಿದೆಯಂತೆ. ಮುಖ್ಯವಾಗಿ ಪೆಟ್ರೋಲಿಯಂ ಖನಿಜಗಳು ಹಾಗೂ ಇತರ ಇಂಧನ ಮೂಲಗಳು ಇದರ ಗುರಿ.

ಕೆಲವೇ ದಿನಗಳ ಹಿಂದೆ ಭೂಮ್ಯಾಂತರ್ಗತ ತೈಲ ಮತ್ತು ಅನಿಲ ಸಂಪನ್ಮೂಲಗಳ ಗಣಿಗಾರಿಕೆಗಾಗಿ ಅಂತಾರಾಷ್ಟ್ರೀಯ ಕಂಪನಿಯೊಂದನ್ನು ಚೀನಾ ಸ್ಥಾಪಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಶೂನ್ಯ ಕೋವಿಡ್‌ ನೀತಿಯನ್ನು ಕೈಬಿಟ್ಟ ಬಳಿಕ ದೇಶದಲ್ಲಿ ಪೆಟ್ರೋಲ್‌ ಹಾಗೂ ಜೆಟ್‌ ಇಂಧನಗಳ ಬೇಡಿಕೆ ಹೆಚ್ಚಿದೆ. ಇದನ್ನು ಪೂರೈಸಲು ಈ ಬಾರಿ ದಾಖಲೆ ಪ್ರಮಾಣದ ಕಚ್ಚಾ ತೈಲವನ್ನು ಚೀನಾ ಆಮದು ಮಾಡಿಕೊಳ್ಳುವ ನಿರೀಕ್ಷೆ ಇದೆ.

ಹೇಗೆ ಕೊರೆಯಲಾಗುತ್ತದೆ?

ಈ ಬೋರ್‌ಹೋಲ್‌ ಕೊರೆಯುವ ಯಂತ್ರದ ವಿನ್ಯಾಸದಲ್ಲಿರುವ ಆಳದ ಸಾಮರ್ಥ್ಯ 11,100 ಮೀಟರ್‌. ಇದು 2000 ಟನ್‌ ತೂಕದ ಭಾರೀ ಯಂತ್ರ. ಬಂಡೆಗಳನ್ನು ಕೊರೆಯುತ್ತಾ ಇದು ಕೆಳಗೆ ಹೋಗಬಲ್ಲದು. 14.5 ಕೋಟಿ ವರ್ಷಗಳಷ್ಟು ಹಿಂದೆ ರಚನೆಯಾಗಿರುವ ಕ್ರಟೇಶಿಯಸ್‌ ಬಂಡೆಯನ್ನೂ ಕೊರೆಯುತ್ತಾ ತಲುಪುವ ಉದ್ದೇಶವನ್ನು ಇದರಲ್ಲಿ ಹೊಂದಲಾಗಿದೆ.

china's deep borehole drilling

ಸವಾಲುಗಳು ಇವೆ

ಈ ತೂತು ಕೊರೆಯಲಾಗುತ್ತಿರುವುದು ತಾರಿಮ್‌ ನದಿ ಪಾತ್ರದಲ್ಲಿ. ಅದರೆ ತಾರಿಮ್‌ ನದಿ ಈಗ ಹರಿಯುತ್ತಿಲ್ಲ. ಅದರ ಬದಲಾಗಿ ಅಲ್ಲಿ ವಿಶಾಲವಾದ ಮರುಭೂಮಿ ಇದೆ. ತಕ್ಲಿಮಕಾನ್‌ ಹೆಸರಿನ ಇದು ಚೀನಾದ ಅತಿ ದೊಡ್ಡ ಮರುಭೂಮಿ. ಸುಮಾರು 3.42 ಲಕ್ಷ ಚದರ ಕಿಲೋಮೀಟರ್‌ಗಳಷ್ಟು ಹಬ್ಬಿಕೊಂಡಿದೆ.

ಇಲ್ಲಿನ ವಾತಾವರಣ ಕಠೋರವಾಗಿದೆ. ಆಳ ಭೂಮಿಯ ಸ್ಥಿತಿ ಹೇಗಿದೆಯೋ ತಿಳಿಯದು. ಹೀಗಾಗಿ ಇಲ್ಲಿ ಬೋರ್‌ ಕೊರೆಯುವುದು ಸುಲಭವಂತೂ ಅಲ್ಲ. ʼʼಈ ಕೆಲಸ ಎರಡು ತೆಳುವಾದ ಉಕ್ಕಿನ ಕೇಬಲ್‌ಗಳ ಮೇಲೆ ಒಂದು ಟ್ರಕ್‌ ಓಡಿಸಿದಂತೆʼʼ ಎಂದು ಈ ಪ್ರಾಜೆಕ್ಟ್‌ನ ತಜ್ಞರಲ್ಲೊಬ್ಬರಾದ ಸುನ್‌ ಜಿನ್‌ಶೆಂಗ್‌ ಎಂಬವರು ಬಣ್ಣಿಸಿದ್ದಾರೆ.

ಇದನ್ನೂ ಓದಿ: Viral news: ಭೂಮಿಗೆ ಇನ್ನೊಂದು ಭಾರೀ ತೂತು ಕೊರೆಯಲಿದೆ ಚೀನಾ!

ಅತ್ಯಂತ ಆಳ, ಆದರೆ ದಾಖಲೆ ರಷ್ಯದ್ದು

ಇದು ಅತೀ ಆಳದ ಮಾನವನಿರ್ಮಿತ ಬೋರ್‌ಹೋಲ್‌ ಎನಿಸಿಕೊಳ್ಳಲಿದೆಯಾದರೂ, ಇದಕ್ಕಿಂತ ಆಳದ ತೂತು ಕೊರೆದ ದಾಖಲೆ ರಷ್ಯದ ಹೆಸರಿನಲ್ಲಿದೆ. ರಷ್ಯದ ಕೋಲಾ ಸೂಪರ್‌ಡೀಪ್‌ ಬೋರ್‌ಹೋಲ್‌ನ ಆಳ 12,262 ಮೀಟರ್.‌ 1970ರಲ್ಲಿ ಆರಂಭವಾದ ಇದರ ಕೊರೆತ 19 ವರ್ಷ ಕಾಲ ನಡೆದು 1989ರಲ್ಲಿ ಅಷ್ಟು ಆಳಕ್ಕೆ ತಲುಪಿತು. ತಾಪಮಾನ 180 ಡಿಗ್ರಿ ಸೆಂಟಿಗ್ರೇಡ್‌ ತಲುಪಿದ ಕಾರಣ 1992ರಲ್ಲಿ ಕೆಲಸ ನಿಲ್ಲಿಸಲಾಯಿತು. ಇದು ಅಲ್ಲಿರಬಹುದು ಎಂದು ನಿರೀಕ್ಷಿಸಿದ ತಾಪದ ದುಪ್ಪಟ್ಟು. ಹಣದ ಕೊರತೆ, ಸೋವಿಯತ್‌ ಯೂನಿಯನ್‌ ಕುಸಿತದ ಕಾರಣ ಕೆಲಸ ನಿಂತಿತು.

ಅಮೆರಿಕದ ವಿಫಲ ಯತ್ನ

ಅಮೆರಿಕ ಇನ್ನೂ ಒಂದು ಹುಚ್ಚು ಸಾಹಸಕ್ಕೆ ಕೈ ಹಾಕಿತ್ತು. ಕೊರೆಯುತ್ತಾ ಕೊರೆಯುತ್ತಾ ಭೂಮಿಯ ಕೇಂದ್ರವನ್ನೂ (ಮ್ಯಾಂಟಲ್)‌ ತಲುಪಬೇಕು ಎಂಬ ಚಿಂತನೆ. 1960ರಲ್ಲಿ ಕೆಲಸ ಶುರುವಾಯಿತು. ಮೆಕ್ಸಿಕೋದ ಗುಡಲೂಪ್‌ ಕೊಲ್ಲಿಯ ಸಮುದ್ರತಳದಲ್ಲಿ ಇದು ಶುರುವಾಯಿತು. ಆದರೆ ಪ್ರಾಜೆಕ್ಟ್‌ನ ಖರ್ಚು ಆಗಸ ಮುಟ್ಟಲಿದೆ ಎಂದು ಅರ್ಥವಾದಾಗ ಅಮೆರಿಕ ಅದನ್ನು ನಿಲ್ಲಿಸಿತು. ಅದು ಕೊರೆದದ್ದು 183 ಮೀಟರ್‌ ಮಾತ್ರ.

ಜರ್ಮನಿ ಕೂಡ ಪ್ರಯತ್ನಿಸಿತ್ತು. ಜರ್ಮನ್‌ ಕಾಂಟಿನೆಂಟಲ್‌ ಡೀಪ್‌ ಡ್ರಿಲ್ಲಿಂಗ್‌ ಕಂಪನಿ ಮೂಲಕ 1990ರಲ್ಲಿ ಇದು ಕೆಲಸ ಶುರು ಮಾಡಿತು. 9 ಕಿಮೀ ತಲುಪಿ ಕೆಲಸ ನಿಲ್ಲಿಸಿತು. ನಿಲ್ಲಿಸಲು ಕಾರಣ ಅತ್ಯಧಿಕ ಖರ್ಚು.

ಈ ವಿಚಾರದಲ್ಲಿ ತಜ್ಞರು ಹೇಳುವುದೇನೆಂದರೆ, ಭೂಮಿಯ ಅಳ ಹೆಚ್ಚಾಗುತ್ತಾ ಹೋದಂತೆ ಕೊರೆತದ ಖರ್ಚು ಊಹಿಸಲಾಗದಷ್ಟು ಏರುತ್ತಾ ಹೋಗುತ್ತದೆ. ಅದನ್ನು ನಿಭಾಯಿಸುವುದೇ ಸವಾಲು. ಲಕ್ಷ ಕೋಟಿಗಳಷ್ಟು ಖರ್ಚಾದರೂ ನಿರೀಕ್ಷಿಸಿದ ಫಲಿತ ಸಿಗುತ್ತದೆ ಎಂಬ ಖಾತ್ರಿ ಇಲ್ಲ. ಇದೆಲ್ಲವನ್ನು ಮೀರಿಯೂ, ಭೂಮಿಯ ಕೇಂದ್ರವನ್ನು ತಲುಪಬಹುದು ಎಂಬ ಮನುಷ್ಯನ ಹುಚ್ಚು ನಿರೀಕ್ಷೆ ಮುಂದೊಂದು ದಿನ ನಿಜವಾಗಬಹುದೋ ಏನೋ.

ಇದನ್ನೂ ಓದಿ: TAPAS 201 UAV : ತಪಸ್ 201 ಮಾನವರಹಿತ ಕಣ್ಗಾವಲು ಡ್ರೋನ್ ರೆಡಿ! ಚೀನಾ-ಪಾಕ್‌ಗೆ ನಡುಕ

Exit mobile version