ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾಗಿರುವ ಬ್ರಿಟನ್ ಪಿಎಂ (Britain PM) ಹುದ್ದೆ ಯಾರ ಪಾಲಾಗಲಿದೆ ಎಂಬುದು ಸೋಮವಾರ(ಸೆ.5) ಅಧಿಕೃತವಾಗಿ ತಿಳಿಯಲಿದೆ. ಭಾರತೀಯ ಮೂಲದ ಹಾಗೂ ಮಾಜಿ ವಿತ್ತ ಸಚಿವ ರಿಷಿ ಸುನಕ್ (Rishi Sunak) ಹಾಗೂ ಮಾಜಿ ವಿದೇಶಾಂಗ ಸಚಿವೆ ಲಿಜ್ ಟ್ರಸ್ (Liz Truss) ಅವರಿಬ್ಬರ ಮಧ್ಯೆ ಒಬ್ಬರು ಪ್ರಧಾನಿಯಾಗಲಿದ್ದಾರೆ. ಅಂತಿಮ ಸುತ್ತಿನಲ್ಲಿ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಲಿಜ್ ಟ್ರಸ್ ಅವರ ಪರವಾಗಿ ಮತ ಚಲಾಯಿಸಿದ್ದಾರೆಂದು ಬ್ರಿಟನ್ ಮಾಧ್ಯಮಗಳು ವರದಿ ಮಾಡಿವೆ. ಹಾಗಾಗಿ, ಲಿಜ್ ಅವರೇ ಬ್ರಿಟನ್‌ನ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ. ಸೋಮವಾರ ಪ್ರಕಟವಾಗುವ ಫಲಿತಾಂಶದ ಬಳಿಕ ಇದು ಅಧಿಕೃತಗೊಳ್ಳಲಿದೆ.
ಬ್ರಿಟನ್ ಪ್ರಧಾನಿ ನೇಮಕ ಪ್ರಕ್ರಿಯೆಗಳು ಇಂಟರೆಸ್ಟಿಂಗ್ ಆಗಿವೆ. ಎಲ್ಲವೂ ಕರಾರುವಕ್ಕಾದ ಸಮಯಕ್ಕೆ ನಡೆಯಲಿವೆ. ಸೋಮವಾರ(ಸೆ.5) ಮಧ್ಯಾಹ್ನದ ಹೊತ್ತಿಗೆ ಕನ್ಸರ್ವೇಟಿವ್ ಪಕ್ಷದ ನಾಯಕ ಯಾರು ಎಂದು ಅಧಿಕೃತವಾಗಿ ಗೊತ್ತಾಗುತ್ತದೆ ಮತ್ತು ಅವರೇ ಬ್ರಿಟನ್‌ನ ಮುಂದಿನ ಪ್ರಧಾನಿಯಾಗುತ್ತಾರೆ. ಮಾರನೇ ದಿನ ಅಂದರೆ, ಮಂಗಳವಾರ (ಸೆ.6) ಹೊರ ಹೋಗುತ್ತಿರುವ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಅಧಿಕೃತವಾಗಿ ತಮ್ಮ ರಾಜೀನಾಮೆಯನ್ನು ರಾಣಿಗೆ ಸಲ್ಲಿಸುತ್ತಾರೆ. ಬಳಿಕ ಬ್ರಿಟನ್ ರಾಣಿ ಅವರು ಹೊಸ ಪ್ರಧಾನಿಯನ್ನು ನೇಮಕ ಮಾಡುತ್ತಾರೆ. ಬುಧವಾರ (ಸೆ.7) ಹೊಸ ಪ್ರಧಾನಿ ಮೊದಲ ಸಂಪುಟ ಸಭೆ ನಡೆಸುವುದರೊಂದಿಗೆ ಪ್ರಧಾನಿ ನೇಮಕ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತವೆ.
ಯಾವಾಗ ಘೋಷಣೆ?
ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಸಂಬಂಧ ಒಂದು ತಿಂಗಳಿಗೂ ಅಧಿಕ ಕಾಲ ಪ್ರಕ್ರಿಯೆಗಳು ನಡೆದಿವೆ. ಅಂತಿಮ ಸುತ್ತಿನ ವೋಟಿಂಗ್ ಫಲಿತಾಂಶ ಸೋಮವಾರ(ಸೆ.5) ಮಧ್ಯಾಹ್ನ 12.30ಕ್ಕೆ ಪ್ರಕಟವಾಗಲಿದೆ. ಈ ನಾಯಕತ್ವ ಆಯ್ಕೆಯಲ್ಲಿ 1.80 ಲಕ್ಷದಿಂದ 2 ಲಕ್ಷವರೆಗೂ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಪಾಲ್ಗೊಂಡಿದ್ದಾರೆ.
2019ರಲ್ಲಿ ನಡೆದ ನಾಯಕತ್ವ ಆಯ್ಕೆ ಚುನಾವಣೆಯಲ್ಲಿ 1.60 ಲಕ್ಷ ಸದಸ್ಯರು ಪಾಲ್ಗೊಂಡಿದ್ದರು. ಮಾಜಿ ವಿದೇಶಾಂಗ ಸಚಿವೆ ಲಿಜ್ ಟ್ರಸ್ ಮತ್ತು ಮಾಜಿ ವಿತ್ತ ಸಚಿವ ರಿಷಿ ಸುನಕ್ ಪೈಕಿ ಒಬ್ಬರು ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಮತ್ತು ಅವರೇ ಬ್ರಿಟನ್ ಪ್ರಧಾನಿಯಾಗಲಿದ್ದಾರೆ.
ಅಧಿಕೃತ ಘೋಷಣೆ ಪ್ರಕ್ರಿಯೆ ಹೇಗೆ?
ಚಲಾವಣೆಯಾದ ಎಲ್ಲ ಮತ ಎಣಿಕೆಯು ಮುಗಿಯುತ್ತಿದ್ದಂತೆ, ಪಕ್ಷದ ಚೇರ್ಮನ್(1922ರ ಕಮಿಟಿ) ಸರ್ ಗ್ರಹಾಮ್ ಬ್ರಾಡಿ ಅವರು ಅಧಿಕೃತ ಫಲಿತಾಂಶವನ್ನು ಪ್ರಕಟಿಸುತ್ತಾರೆ. 2019ರಲ್ಲಿ ಬೋರಿಸ್ ಜಾನ್ಸನ್ ಅವರು ನಾಯಕತ್ವ ಸ್ಥಾನಕ್ಕೆ ಆಯ್ಕೆಯಾದಾಗ, ಅಧಿಕೃತ ಘೋಷಣೆಯನ್ನು ವೆಸ್ಟ್ ಮಿನ್‌ಸ್ಟರ್ ಕ್ವೀನ್ ಎಲಿಜಬೆತ್ ಸೆಂಟರ್‌ನಲ್ಲಿ ಮಾಡಲಾಗಿತ್ತು. ಈಗಲೂ ಅದೇ ಸ್ಥಳದಲ್ಲಿ ಈ ಪ್ರಕ್ರಿಯೆಯ ಕಾರ್ಯಕ್ರಮ ನಡೆಯಲಿದೆ. ಲಿಜ್ ಟ್ರಸ್ ಮತ್ತು ರಿಷಿ ಸುನಕ್ ಅವರಿಗೆ ಮುಂದಿನ ಸಾಲಿನಲ್ಲಿ ಆಸನ ವ್ಯವಸ್ಥೆ ಇರುತ್ತದೆ. ಈ ಪೈಕಿ ಯಾರು ಗೆಲ್ಲುತ್ತಾರೋ ಅವರು, ವೇದಿಕೆಗೆ ತೆರಳಿ ತಮ್ಮ ಭಾಷಣವನ್ನು ಮಾಡುತ್ತಾರೆ. ಅಲ್ಲಿಗೆ ಫಲಿತಾಂಶ ಘೋಷಣೆಯ ಪ್ರಕಿಯೆಗಳು ಮುಗಿಯುತ್ತವೆ.
ಯಾರೆಲ್ಲ ಭಾಗವಹಿಸಬಹುದು?
ಜನಪ್ರತಿನಿಧಿಗಳು(ಸಂಸದರು) ಕನ್ಸರ್ವೇಟಿವ್ ಪಕ್ಷದ ಸದಸ್ಯರು, ಪತ್ರಕರ್ತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಸಾಮಾನ್ಯ ಜನರಿಗೆ ಯಾವುದೇ ಅವಕಾಶವಿರುವುದಿಲ್ಲ.
ಪ್ರಧಾನಿ ನೇಮಕ ಪ್ರಕ್ರಿಯೆ ಹೇಗೆ?
- ಕನ್ಸರ್ವೇಟಿವ್ ಪಕ್ಷದ ನಾಯಕ ಯಾರು ಎಂದು ಅಧಿಕೃತವಾಗಿ ಗೊತ್ತಾಗುತ್ತಿದ್ದಂತೆ, ಬ್ರಿಟನ್ ಪ್ರಧಾನಿ ನೇಮಕ ಪ್ರಕ್ರಿಯೆಗಳು ಶುರುವಾಗುತ್ತವೆ.
- ಸಂಪ್ರದಾಯದ ಪ್ರಕಾರ, ಹೊರಹೋಗುತ್ತಿರುವ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಬಂಕಿಂಗ್ಹ್ಯಾಮ್ ಪ್ಯಾಲೇಸ್ನಲ್ಲಿ ಕ್ವೀನ್ ಎಲಿಜಬೆತ್ ಅವರನ್ನು ಭೇಟಿ ಮಾಡಿ, ಹುದ್ದೆಯಿಂದ ತಾವು ಕೆಳಗಿಳಿಯುವ ಮಾಹಿತಿಯನ್ನು ನೀಡುತ್ತಾರೆ.
- ಸಂಪ್ರದಾಯದಂತೆ ಕ್ವೀನ್ ಎಲಿಜಬೆತ್ ಬಂಕಿಂಗ್ಹ್ಯಾಮ್ ಪ್ಯಾಲೇಸ್ನಲ್ಲಿರಬೇಕಾಗಿತ್ತು. ಆದರೆ, ಕಾರಣಾಂತರಗಳಿಂದಾಗಿ ಈ ಬಾರಿ ಅವರು ಸ್ಕಾಟ್ಲೆಂಡ್ನ ಬಾಲ್ಮೋರಲ್ ಪ್ಯಾಲೇಸ್ನಲ್ಲಿರಲಿದ್ದಾರೆ. ಹಾಗಾಗಿ, ಈ ಬಾರಿ ಸಂಪ್ರದಾಯ ಮುರಿಯಲಿದೆ.
- ಕ್ವೀನ್ ಎಲಿಜಬೆತ್ ಅವರನ್ನು ಭೇಟಿ ಮಾಡಲು ಹೋಗುವ ಮೊದಲು ಬೋರಿಸ್ ಜಾನ್ಸನ್ ಅವರು, ಪ್ರಧಾನಿಯಾಗಿ ತಮ್ಮ ಕೊನೆಯ ಭಾಷಣವನ್ನು ಸೆ.6ರಂದು ಬೆಳಗ್ಗೆ ಡೌನಿಂಗ್ ಸ್ಟ್ರೀಟ್ನಲ್ಲಿ ಮಾಡಲಿದ್ದಾರೆ.
- ಬೋರಿಸ್ ಜಾನ್ಸನ್ ಮತ್ತು ಹೊಸ ಪ್ರಧಾನಿ (ಲಿಜ್ ಅಥವಾ ಸುನಕ್) ಅವರು ಪ್ರತ್ಯೇಕವಾಗಿಯೇ ಬಾಲ್ಮೋರಲ್ ಪ್ಯಾಲೇಸ್ಗೆ ತೆರಳಿ, ರಾಣಿ ಅವರನ್ನು ಭೇಟಿ ಮಾಡುತ್ತಾರೆ.
- ಕಿಸ್ಸಿಂಗ್ ಹ್ಯಾಂಡ್ಸ್ ಸರ್ವೀಸ್ ಎಂಬ ಪ್ರಧಾನ ಮಂತ್ರಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಆಗ ಅಧಿಕೃತವಾಗಿ ಪ್ರಧಾನಮಂತ್ರಿ ನೇಮಕವಾಗುತ್ತದೆ.
ಮೊದಲ ಸಂಪುಟ ಸಭೆ
ಕ್ವೀನ್ ಎಲಿಜಬೆತ್ ಅವರು ಪ್ರಧಾನ ಮಂತ್ರಿ ನೇಮಕ ಸಂಪ್ರದಾಯವನ್ನು ಪೂರ್ಣಗೊಳಿಸಿದ ಬಳಿಕ, ಬುಧವಾರ ಬೆಳಗ್ಗೆ ನೂತನ ಪ್ರಧಾನಿ ಮೊದಲ ಸಂಪುಟ ಸಭೆಯನ್ನು ನಡೆಸುತ್ತಾರೆ. ಈ ಪ್ರಕ್ರಿಯೆಯೊಂದಿಗೆ ಬ್ರಿಟನ್ ಪ್ರಧಾನಿ ನೇಮಕ ಪ್ರಕ್ರಿಯೆ ಸಂಪೂರ್ಣವಾಗುತ್ತದೆ.
ಲಿಜ್ ಪ್ರಧಾನಿ, ಸುನಕ್‌ಗೆ ಸೋಲು?
ಕನ್ಸರ್ವೇಟಿವ್ ಪಕ್ಷದ ನಾಯಕತ್ವ ನಿರ್ಧರಿಸುವ ಮೊದಲ ಕೆಲವು ಸುತ್ತುಗಳಲ್ಲಿ ರಿಷಿ ಸುನಕ್ ಅವರು ಎಲ್ಲ ಸ್ಪರ್ಧಾಳುಗಳಿಗಿಂತಲೂ ಮುಂಚೂಣಿಯಲ್ಲಿದ್ದರು. ಆದರೆ, ಆಯ್ಕೆ ಸುತ್ತುಗಳು ಮುಂದುವರಿದಂತೆ ಲಿಜ್ ಟ್ರಸ್ ಅವರು ರಿಷಿ ಅವರನ್ನು ಹಿಂದಿಕ್ಕಿ ಮುಂದೆ ಹೋದರು. ಕೊನೆಯ ಸುತ್ತಿನಲ್ಲಿ ಲಿಜ್ ಅವರೇ ಗೆಲ್ಲಲಿದ್ದಾರೆ ಎಂದು ಹೇಳಲಾಗುತ್ತಿದೆ. ಬ್ರಿಟನ್ ಮಾಧ್ಯಮಗಳು ಕೂಡ ಲಿಜ್ ಅವರು ಗೆಲ್ಲವುವುದು ಪಕ್ಕಾ ಎಂದು ವಿಶ್ಲೇಷಣೆ ಮಾಡುತ್ತಿವೆ. ಆದರೆ, ರಿಷಿ ಕೂಡ ವಿಶ್ವಾಸವನ್ನು ಕಳೆದುಕೊಂಡಿಲ್ಲ. ಅವರಿಗೆ ಗೆಲುವಿನ ನಿರೀಕ್ಷೆ ಇದೆ.
ಇದನ್ನೂ ಓದಿ | Rishi Sunak | ಬ್ರಿಟನ್ ಪಿಎಂ ರೇಸಿನಲ್ಲಿ ರಿಷಿ ಸುನಕ್ ಹಿಂದೆ ಬಿದ್ದಿದ್ದೇಕೆ? ಇಲ್ಲಿವೆ 7 ಕಾರಣ