Site icon Vistara News

Israel Palestine War: ಹಮಾಸ್ ಉಗ್ರರ ದಾಳಿಯ ಸೂತ್ರಧಾರಿ ಇವನೇ! ಯಾರಿವನು ಒಕ್ಕಣ್ಣ ರಾಕ್ಷಸ?

mohammed deif hamas leader

ಇಸ್ರೇಲ್‌ನಂಥ ಇಸ್ರೇಲ್‌ನಿಂದಲೂ ಕೊಲ್ಲಲು ಸಾಧ್ಯವಾಗದ ಭಯೋತ್ಪಾದಕ ಕಮಾಂಡರ್‌ ಒಬ್ಬಾತ ಪ್ಯಾಲೆಸ್ತೀನ್‌ನಲ್ಲಿದ್ದಾನೆ. ಅವನೇ ಇಸ್ರೇಲ್‌ ಮೇಲೆ (Hamas attack) ಮೊನ್ನೆ ನಡೆದ ಪ್ರಳಯಾಂತಕ ಉಗ್ರ ದಾಳಿಯ (Israel Palestine War) ಸೂತ್ರಧಾರಿ ಎಂದು ಗೊತ್ತಾಗಿದೆ. ವಿಶೇಷ ಎಂದರೆ, ಇವನಿಗೆ ಕಾಣುವುದು ಒಂದು ಕಣ್ಣು ಮಾತ್ರ! ಕಾಲು ಸ್ವಾಧೀನವಿಲ್ಲ. ಗಾಲಿ ಕುರ್ಚಿಯೇ ಮನೆ!

ಈ ಒಕ್ಕಣ್ಣ ರಾಕ್ಷಸನ ಹೆಸರು ಮೊಹಮ್ಮದ್ ಡೀಫ್ (Mohammed Deif). ಇವನೇ ಹಮಾಸ್‌ ದಾಳಿಯ ಮಾಸ್ಟರ್ ಮೈಂಡ್. 900 ಜನ ಇಸ್ರೇಲಿಗರ ಸಾವಿಗೆ ಕಾರಣವಾದ ಹಮಾಸ್‌ನ ಸಂಘಟಿತ ದಾಳಿಯ ಈ ರೂವಾರಿ ಗಾಜಾದ ನಿರಾಶ್ರಿತರ ಶಿಬಿರದಲ್ಲಿ ಹುಟ್ಟಿ ಬೆಳೆದವನು.

ಮೊಹಮ್ಮದ್ ಡೀಫ್ ಯಾರು?

ಮೊಹಮ್ಮದ್ ಡೀಫ್ ತನ್ನವರಿಂದ ಪ್ಯಾಲೆಸ್ತೀನಿಯನ್ ಹೋರಾಟಗಾರ ಎಂದು ಶ್ಲಾಘನೆ ಪಡೆದವನು. 2002ರಿಂದ ಹಮಾಸ್‌ನ ಮಿಲಿಟರಿ ವಿಭಾಗದ ಮುಖ್ಯಸ್ಥ. ಅಂದಿನಿಂದ ಹಮಾಸ್‌ನ ಮಿಲಿಟರಿ ಶಾಖೆ ಕಸ್ಸಾಮ್ ಬ್ರಿಗೇಡ್‌ಗಳನ್ನು ಮುನ್ನಡೆಸಿದ್ದಾನೆ.

1960ರ ದಶಕದಲ್ಲಿ ಗಾಜಾದಲ್ಲಿದ್ದ ಖಾನ್ ಯೂನಿಸ್ ನಿರಾಶ್ರಿತರ ಶಿಬಿರದಲ್ಲಿ ಹುಟ್ಟಿದ. ಇವನ ತಂದೆ ಮೊಹಮ್ಮದ್ ದಿಯಾಬ್ ಇಬ್ರಾಹಿಂ ಅಲ್-ಮಸ್ರಿ. ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆದ. ಅಲ್ಲೇ ಮೂಲಭೂತವಾದದ ಶಿಕ್ಷಣವನ್ನೂ ಪಡೆದ. ಆ ಸಮಯದಲ್ಲಿ ಗಾಜಾ ಈಜಿಪ್ಟಿನ ನಿಯಂತ್ರಣದಲ್ಲಿತ್ತು (1948ರಿಂದ 1967ರ ವರೆಗೆ). ಜೂನ್ 1967ರಲ್ಲಿ ಆರು ದಿನಗಳ ಯುದ್ಧದ ನಂತರ ಇದು ಇಸ್ರೇಲಿ ಆಳ್ವಿಕೆಗೆ ಒಳಪಟ್ಟಿತು, ಇಸ್ರೇಲ್‌ ಸಿನಾಯ್ ಪೆನಿನ್ಸುಲಾ, ಗಾಜಾ ಸ್ಟ್ರಿಪ್, ವೆಸ್ಟ್ ಬ್ಯಾಂಕ್, ಓಲ್ಡ್ ಸಿಟಿ ಆಫ್ ಜೆರುಸಲೆಮ್ ಮತ್ತು ಗೋಲನ್ ಹೈಟ್ಸ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಶನಿವಾರ ನಡೆದ ದಾಳಿಯಲ್ಲಿ ಹಮಾಸ್ ಹೋರಾಟಗಾರರು ನುಸುಳಿದ ಅದೇ ಪ್ರದೇಶಕ್ಕೆ 1950ರಲ್ಲಿಯೂ ಪ್ಯಾಲೆಸ್ತೀನ್‌ ಉಗ್ರರ ದಾಳಿ ನಡೆಸಿದ್ದರು. ಅದರಲ್ಲಿ ಡೀಫ್‌ನ ತಂದೆ, ಅವನ ಚಿಕ್ಕಪ್ಪ ಕೂಡ ಭಾಗವಹಿಸಿದ್ದರು. ಹೀಗೆ ಇವರದು ಉಗ್ರರ ಕುಟುಂಬ. ಈತನಿಗೆ ಒಂದು ಕಣ್ಣಿಲ್ಲ. ಎದ್ದು ಓಡಾಡಲೂ ಬಾರದು. 2004ರಲ್ಲಿ ಇಸ್ರೇಲಿ ವೈಮಾನಿಕ ದಾಳಿಯಿಂದ ಕೊಲ್ಲಲ್ಪಟ್ಟ ಹಮಾಸ್‌ನ ವಿಕಲಚೇತನ ಧಾರ್ಮಿಕ ನಾಯಕ ಶೇಖ್ ಅಹ್ಮದ್ ಯಾಸಿನ್‌ನಂತೆಯೇ ಡೀಫ್ ಕಳೆದ ಎರಡು ದಶಕಗಳಿಂದ ಗಾಲಿಕುರ್ಚಿಯಲ್ಲಿ ಕುಳಿತೇ ಕಸ್ಸಾಮ್ ಬ್ರಿಗೇಡ್‌ಗಳನ್ನು ಮುನ್ನಡೆಸುತ್ತಾನೆ.

ಅಮೆರಿಕದ ಭದ್ರತಾ ಇಲಾಖೆಯಿಂದ ಈತನನ್ನು ವಿಶೇಷವಾಗಿ ಗುರುತಿಸಲಾದ ಜಾಗತಿಕ ಭಯೋತ್ಪಾದಕ (SDGT) ಎಂದು ಪಟ್ಟಿ ಮಾಡಲಾಗಿದೆ. ಹಮಾಸ್‌ನ ಬಾಂಬ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ನಿರ್ಮಿಸುತ್ತಿದ್ದ, ʼಇಂಜಿನಿಯರ್ʼ ಎಂದು ಕರೆಯಲ್ಪಡುತ್ತಿದ್ದ ಯೆಹ್ಯಾ ಅಯಾಶ್ ಎಂಬ ಭಯೋತ್ಪಾದಕ ಡೀಫ್‌ನ ಮಾರ್ಗದರ್ಶಕ.‌

Stop Air Strike, hostages will be killed, Hamas threatens Israel

ಹಮಾಸ್‌ನಲ್ಲಿ ಡೀಫ್‌ನ ಪಾತ್ರ

ಹಮಾಸ್, ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್ಮೆಂಟ್, 1987ರಲ್ಲಿ ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯನ್ನು ಇಸ್ರೇಲ್ ಆಕ್ರಮಿಸಿಕೊಂಡ ನಂತರ ಸ್ಥಾಪಿತವಾಯಿತು. ಆಗಿನ ದಂಗೆಗಳನ್ನು ಮೊದಲ ಇಂಟಿಫಾಡಾ ಅಥವಾ ಪ್ಯಾಲೇಸ್ಟಿನಿಯನ್ ದಂಗೆ ಎನ್ನಲಾಗುತ್ತದೆ. ಆಗ ಡೀಫ್‌ಗೆ 20ರ ಹರೆಯ. ಆತ್ಮಹತ್ಯಾ ಬಾಂಬ್ ದಾಳಿಯನ್ನು ಸಂಘಟಿಸಿದ ಆರೋಪದಲ್ಲಿ ಇಸ್ರೇಲಿಗಳು ಇವನನ್ನು ಜೈಲಿಗೆ ಹಾಕಿದರು.

ಹಮಾಸ್‌ನೊಂದಿಗಿನ ಡೀಫ್ ಸಂಬಂಧ ಇಸ್ಲಾಮಿಕ್ ಯುನಿವರ್ಸಿಟಿ ಆಫ್ ಗಾಜಾದಲ್ಲಿ ಪ್ರಾರಂಭವಾಯಿತು. ಅಲ್ಲಿ ಅನೇಕ ಪ್ಯಾಲೆಸ್ತೀನಿಯನ್ ನಾಯಕರು ತಮ್ಮ ವಿವಿ ಅವಧಿಯಲ್ಲಿ ವಿಮೋಚನಾ ಚಳುವಳಿಗಳಲ್ಲಿ ಸೇರಿಕೊಂಡರು. 1993ರಲ್ಲಿ ಟೂ ಸ್ಟೇಟ್‌ ಪರಿಹಾರದ ಆಧಾರದ ಮೇಲೆ ಓಸ್ಲೋ ಒಪ್ಪಂದ ನಡೆಯಿತು. ಸಂಘರ್ಷಕ್ಕೆ ಅಂತ್ಯ ಹಾಡಲು ಪ್ಯಾಲೆಸ್ಟೀನಿಯನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್ಒ) ಅಧ್ಯಕ್ಷ ಯಾಸರ್ ಅರಾಫತ್ ಮುಂದಾದರು. ಈ ಸಮಯದಲ್ಲಿ ಡೀಫ್‌ ಕಸ್ಸಾಮ್ ಬ್ರಿಗೇಡ್‌ಗೆ ಸೇರಿದ.

Stop Air Strike, hostages will be killed, Hamas threatens Israel

ಮೊಹಮ್ಮದ್ ಡೀಫ್‌ಗೆ ಮೊದಲಿಂದಲೂ ಇಸ್ರೇಲ್ ಮೇಲೆ ಆಕ್ರಮಣ ಮಾಡುವುದರಲ್ಲಿ ಹೆಚ್ಚು ಆಸಕ್ತಿ. ಆತನಿಗೆ ಪ್ಯಾಲೇಸ್ಟಿನಿಯನ್ ನಾಯಕತ್ವದ ಚಳುವಳಿಗಳಲ್ಲಿ ಆಸಕ್ತಿ ಇಲ್ಲ. ಕಳೆದ ವಾರದ ಇಸ್ರೇಲ್ ಮೇಲಿನ ದಾಳಿಯ ನಂತರ ಮೊಹಮ್ಮದ್ ಡೀಫ್ ಹೇಳಿದ್ದು ಹೀಗೆ- ʼʼಇದು ಆಪರೇಷನ್ ಅಲ್-ಅಕ್ಸಾ ಸ್ಟಾರ್ಮ್. ಗಾಜಾದ ಮೇಲಿನ 16 ವರ್ಷಗಳ ದಿಗ್ಬಂಧನ, ಇಸ್ರೇಲಿ ಆಕ್ರಮಣ, ಇಸ್ರೇಲಿ- ಪ್ಯಾಲೆಸ್ತೀನ್ ಉದ್ವಿಗ್ನತೆಯನ್ನು ಹೆಚ್ಚಿಸಿರುವ ಇತ್ತೀಚಿನ ಘಟನೆಗಳ ಸರಣಿಗೆ ಇದು ಪ್ರತಿಕ್ರಿಯೆ.”

ಹತ್ಯೆಯ ಪ್ರಯತ್ನಗಳು

ಈ ದುಷ್ಟನನ್ನು ಬಲಿ ಹಾಕಲು ಇಸ್ರೇಲಿನ ಮಿಲಿಟರಿ. ಬೇಹುಗಾರರು ದಶಕಗಳಿಂದ ಸತತ ಪ್ರಯತ್ತ ಮಾಡುತ್ತಲೇ ಇದ್ದಾರೆ. 20 ವರ್ಷಗಳಿಗೂ ಹೆಚ್ಚು ಕಾಲದಿಂದ ದೇಶದ “ಮೋಸ್ಟ್ ವಾಂಟೆಡ್” ಪಟ್ಟಿಯಲ್ಲಿದ್ದಾನೆ. 20 ವರ್ಷಗಳ ಹಿಂದೆ ನಡೆದ ವೈಮಾನಿಕ ದಾಳಿಯಲ್ಲಿ ಈತ ಬಹುತೇಕ ಕೊಲ್ಲಲ್ಪಟ್ಟಿದ್ದ. ಕಣ್ಣು, ಕೈ ಮತ್ತು ಕಾಲುಗಳನ್ನು ಕಳೆದುಕೊಂಡಿದ್ದ. ನಂತರ ಗಾಲಿಕುರ್ಚಿಯೇ ಅವನ ಕಾಯಂ ವಾಸಸ್ಥಾನವಾಗಿದೆ.

2002ರಲ್ಲಿ ಕಸ್ಸಾಮ್ ಬ್ರಿಗೇಡ್‌ಗಳನ್ನು ಮುನ್ನಡೆಸಲು ಪ್ರಾರಂಭಿಸಿದಾಗಿನಿಂದ ಕನಿಷ್ಠ ಏಳು ಬಾರಿ ಇಸ್ರೇಲಿ ಏಜೆಂಟರು ಈತನನ್ನು ಸಾಯಿಸಲು ಯತ್ನಿಸಿದ್ದಾರೆ. ಈತ ಹೇಗೋ ಬದುಕುಳಿದಿದ್ದಾನೆ. ಆದರೆ ಇವನ ಪತ್ನಿ ಮತ್ತು ಇಬ್ಬರು ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ. 2002ರಲ್ಲಿ ಇಸ್ರೇಲ್ ಗಾಜಾ ನಗರದ ಬಳಿ ಕಾರೊಂದರ ಮೇಲೆ ಈತನನ್ನು ಗುರಿಯಾಗಿಸಿ ಕ್ಷಿಪಣಿಗಳನ್ನು ಸಿಡಿಸಿತ್ತು. ಅದರಲ್ಲಿ ಇಬ್ಬರು ಹಮಾಸ್ ಸದಸ್ಯರು ಸಾವನ್ನಪ್ಪಿದ್ದರು. ಇತರ 40 ಮಂದಿ ಗಾಯಗೊಂಡಿದ್ದರು. 2014ರಲ್ಲಿ ಮನೆಯೊಂದರ ಮೇಲೆ ಇಸ್ರೇಲ್‌ ದಾಳಿ ನಡೆಸಿತು. ಅದರಲ್ಲಿ ಅವನ ಹೆಂಡತಿ ಮಕ್ಕಳು ಕೊಲ್ಲಲ್ಪಟ್ಟರು.

ಹಮಾಸ್ ಮತ್ತು ಇಸ್ರೇಲಿ ಪಡೆಗಳ ನಡುವಿನ ಹೋರಾಟ ಮಂಗಳವಾರ ನಾಲ್ಕನೇ ದಿನ ಪ್ರವೇಶಿಸಿದೆ. ಸುಮಾರು 150 ಜನರನ್ನು ಪ್ಯಾಲೆಸ್ತೀನ್ ಗುಂಪು ಸೆರೆಹಿಡಿದು ಗಾಜಾ ಪಟ್ಟಿಯೊಳಗೆ ಕೊಂಡೊಯ್ದಿದೆ. ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಹಮಾಸ್‌ ಬೆದರಿಕೆ ಹಾಕಿದೆ. ಏತನ್ಮಧ್ಯೆ, ಹಮಾಸ್‌ ಮೇಲೆ ಭಾರಿ ಸೇನಾ ದಾಳಿ ನಡೆಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಮುಂದಾಗಿದ್ದಾರೆ.

ಇದನ್ನೂ ಓದಿ: ವೈಮಾನಿಕ ದಾಳಿ ನಿಲ್ಲಿಸದಿದ್ರೆ, ಒತ್ತೆಯಾಳುಗಳ ಹತ್ಯೆ; ಇಸ್ರೇಲ್‌ಗೆ ಹಮಾಸ್ ಬೆದರಿಕೆ

Exit mobile version