Site icon Vistara News

ವಿಸ್ತಾರ Explainer | ಬ್ರಿಟನ್‌ ಪ್ರಧಾನಿ ಆಯ್ಕೆಗೆ ಮತದಾನದ ಮೇಲೆ ಮತದಾನ! ರಿಷಿ ಸುನಕ್ ಎಲ್ಲಿ?

rishi sunak

ಬೋರಿಸ್ ಜಾನ್ಸನ್ ನಂತರ ಬ್ರಿಟನ್ ಪ್ರಧಾನಿಯಾಗುವ ಹೊಸ ನಾಯಕನನ್ನು ಸೆಪ್ಟೆಂಬರ್ 5ರಂದು ಘೋಷಿಸಲಾಗುವುದು ಎಂದು ಬ್ರಿಟನ್‌ನ ಆಡಳಿತ ನಡೆಸುತ್ತಿರುವ ಕನ್ಸರ್ವೇಟಿವ್ ಪಕ್ಷ ಹೇಳಿದೆ. ಬೋರಿಸ್ ಜಾನ್ಸನ್ ಇತ್ತೀಚೆಗೆ ತಮ್ಮ ಸರ್ಕಾರದಲ್ಲಿ ನಡೆದ ರಾಜೀನಾಮೆಗಳ ಸರಣಿಯ ನಂತರ ಕೆಳಗಿಳಿದಿದ್ದಾರೆ. ಆದರೆ ಅವರ ನಂತರದ ಪ್ರಧಾನಿಯ ಆಯ್ಕೆ ಆಗುವ ತನಕ ಪ್ರಧಾನಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಇನ್‌ಫೋಸಿಸ್‌ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್‌ ಟಾಪ್‌ 3 ಸ್ಪರ್ಧಿಗಳಲ್ಲಿ ಒಬ್ಬರೆನಿಸಿದ್ದಾರೆ.

ಬ್ರಿಟನ್‌ನಲ್ಲಿ ಎರಡು ಪ್ರಮುಖ ರಾಜಕೀಯ ಪಕ್ಷಗಳಿವೆ- ಕನ್ಸರ್ವೇಟಿವ್‌ ಪಕ್ಷ (ಇದನ್ನು ಟೋರಿ ಪಾರ್ಟಿ ಎಂದೂ ಕರೆಯಲಾಗುತ್ತದೆ) ಹಾಗೂ ಲೇಬರ್‌ ಪಾರ್ಟಿ. ಸದ್ಯ ಬ್ರಿಟನ್‌ನಲ್ಲಿ ಆಡಳಿತ ನಡೆಸುತ್ತಿರುವುದು ಕನ್ಸರ್ವೇಟಿವ್‌ ಪಕ್ಷ. ಈಗ ನಡೆಯುತ್ತಿರುವುದು ಸಾರ್ವತ್ರಿಕ ಚುನಾವಣೆಯಲ್ಲ. ಆಡಳಿತ ಪಕ್ಷದೊಳಗೇ ನಾಯಕನ ಬದಲಾವಣೆ. ಶಾಸಕಾಂಗ ಪಕ್ಷದ ಹೊಸ ನಾಯಕ, ಪ್ರಧಾನಿಯಾಗುತ್ತಾರೆ.

ಸದ್ಯ ಬ್ರಿಟನ್‌ ಪ್ರಧಾನಿಯ ಹುದ್ದೆಗೆ ಕನ್ಸರ್ವೇಟಿವ್ ಪಕ್ಷದ ಎಂಟು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ- ರಿಷಿ ಸುನಕ್‌, ಲಿಜ್ ಟ್ರಸ್, ನಾಧಿಮ್ ಜಹಾವಿ, ಜೆರೆಮಿ ಹಂಟ್, ಕೆಮಿ ಬಡೆನೋಚ್, ಸುಯೆಲ್ಲಾ ಬ್ರವರ್‌ಮನ್, ಪೆನ್ನಿ ಮೊರ್ಡಾಂಟ್ ಮತ್ತು ಟಾಮ್ ತುಗೆಂದಟ್.‌ ಸದ್ಯ ಎರಡು ರೌಂಡ್‌ಗಳ ಮತದಾನದ ಬಳಿಕ ಐವರು ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ- ರಿಷಿ ಸುನಕ್‌, ಪೆನ್ನಿ ಮೋರ್ಡಾಂಟ್‌, ಲಿಜ್‌ ಟ್ರಸ್‌, ಕೆಮಿ ಬಡೆನೋಚ್‌ ಮತ್ತು ಟಾಮ್‌ ತುಗೆಂದಟ್.‌

ಇನ್ನಿಬ್ಬರು ಸಚಿವರು- ಸಾಜಿದ್ ಜಾವಿದ್ ಮತ್ತು ರೆಹಮಾನ್ ಚಿಸ್ತಿ- ಈ ಹಿಂದೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಅಂತಿಮ ಪಟ್ಟಿಯನ್ನು ಪ್ರಕಟಿಸುವ ಮೊದಲು ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿದ್ದರು.

ಯಾರು ಸ್ಪರ್ಧಿಸಬಹುದು?
ಪ್ರಧಾನಿ ಹುದ್ದೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮಗೆ ಕನಿಷ್ಠ 20 ಸಂಸದರ ಬೆಂಬಲವಿದೆ ಎಂದು ಸಾಬೀತುಪಡಿಸಬೇಕಾಗುತ್ತದೆ. ಒಬ್ಬ ಪ್ರಪೋಸರ್, ಇನ್ನೊಬ್ಬ ಅನುಮೋದಕ ಮತ್ತು 18 ಇತರರು. ರಿಷಿ ಸುನಕ್‌ ಈಗಾಗಲೇ ತಮಗೆ 40ಕ್ಕೂ ಅಧಿಕ ಸಂಸದರ ಬೆಂಬಲವಿದೆ ಎಂದು ತೋರಿಸಿದ್ದಾರೆ.

ನಾಯಕನನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?

ಕನ್ಸರ್ವೇಟಿವ್ ಪಕ್ಷವು ಎರಡು ಹಂತದ ನಾಯಕತ್ವದ ಆಯ್ಕೆ ಪ್ರಕ್ರಿಯೆಯ ಮೂಲಕ ತನ್ನ ನಾಯಕನನ್ನು ಆಯ್ಕೆ ಮಾಡುತ್ತದೆ. ಅಭ್ಯರ್ಥಿಗಳ ಸಂಖ್ಯೆಯನ್ನು ಇಳಿಸಲು ಟೋರಿ ಸಂಸದರು ರಹಸ್ಯ ಮತದಾನದ ಸರಣಿಯನ್ನು ನಡೆಸುತ್ತಾರೆ. ಇದು ಬ್ಯಾಲೆಟ್‌ ಪೇಪರ್‌ಗಳ ಮೂಲಕ ನಡೆಯುತ್ತದೆ. ಮೊದಲ ಸುತ್ತಿನಲ್ಲಿ 358 ಟೋರಿ ಸಂಸದರು ಮತ ಚಲಾಯಿಸುತ್ತಾರೆ. ಒಬ್ಬರಿಗೆ ಒಂದೇ ಮತ. ಇದರಲ್ಲಿ ಸಂಸದರು ತಾವು ಯಾರಿಗೆ ಅನುಮೋದಿಸಿದೆವೋ ಅವರಿಗೇ ಮತ ಹಾಕಬೇಕೆಂದಿಲ್ಲ. ಈ ಸುತ್ತಿನಲ್ಲಿ ಅಭ್ಯರ್ಥಿಗಳು ಕನಿಷ್ಠ 30 ಮತಗಳನ್ನು ಗಳಿಸಬೇಕು. ಅದಕ್ಕಿಂತ ಕಡಿಮೆ ಮತ ಪಡೆದವರನ್ನು ಸ್ಪರ್ಧೆಯಿಂದ ಹೊರಗೆ ಹಾಕಲಾಗುತ್ತದೆ. ಜುಲೈ 13ರಂದು ಈ ಮತದಾನ ನಡೆಯಿತು.

ಜುಲೈ 14ರಂದು ಎರಡನೇ ಹಂತದ ಮತದಾನ ನಡೆದಿದೆ. ಇದರಲ್ಲೂ ಕೆಳ ಶ್ರೇಣಿಯ ಅಭ್ಯರ್ಥಿಯನ್ನು ಹೊರಹಾಕಲಾಗುತ್ತದೆ. ಮುಂದಿನ ವಾರದಲ್ಲಿ ಹೆಚ್ಚಿನ ಮತಪತ್ರಗಳನ್ನು ನಡೆಸಲಾಗುವುದು, ಪ್ರತಿ ಸುತ್ತಿನಲ್ಲಿ ಕೆಳ ಶ್ರೇಯಾಂಕದ ಅಭ್ಯರ್ಥಿಯನ್ನು ಹೊರಹಾಕಲಾಗುತ್ತದೆ. ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದ್ದಷ್ಟೂ ಈ ಎಲಿಮಿನೇಷನ್‌ ಹಂತಗಳೂ ಹೆಚ್ಚುತ್ತವೆ. ಈ ಪ್ರಕ್ರಿಯೆ ಸಾಮಾನ್ಯವಾಗಿ ಒಂದರಿಂದ ಎರಡು ವಾರ ತೆಗೆದುಕೊಳ್ಳುತ್ತದೆ. ರಿಷಿ, ಲಿಜ್‌ ಟ್ರಸ್‌ ಮತ್ತು ಪೆನ್ನಿ ಮೊರ್ಡಾಂಟ್‌ ನಡುವೆ ಪ್ರಬಲ ಪೈಪೋಟಿಯ ನಿರೀಕ್ಷೆ ಇದೆ.

ಕೊನೆಯ ಸುತ್ತಿನಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ. ಆಗಸ್ಟ್‌ ಪೂರ್ತಿ ಈ ಇಬ್ಬರು ಸ್ಪರ್ಧಿಗಳ ಪ್ರಚಾರ ನಡೆಯಲಿದೆ. ಟೋರಿ ಪಕ್ಷದ ಸದಸ್ಯರು ಬ್ಯಾಲೆಟ್‌ ಪೇಪರ್‌ ಮೂಲಕ ವಿಜೇತರನ್ನು ಆಯ್ಕೆ ಮಾಡುತ್ತಾರೆ. ದೇಶಾದ್ಯಂತ ಇರುವ ಪಕ್ಷದ ಸರಿಸುಮಾರು 160,000- 200,000 ಸದಸ್ಯರು ಮತದಾನ ಮಾಡುತ್ತಾರೆ. ಇವರು ಪಕ್ಷದಲ್ಲಿ ಕನಿಷ್ಠ ಮೂರು ತಿಂಗಳ ಹಿಂದೆ ಸದಸ್ಯತ್ವ ನೋಂದಣಿ ಮಾಡಿಸಿಕೊಂಡಿರಬೇಕು. ಕೆಲವೊಮ್ಮೆ, ಈ ಕಾರ್ಯವಿಧಾನದ ಮೂಲಕ ಆಯ್ಕೆಯಾದ ಪ್ರಧಾನ ಮಂತ್ರಿಗಳು ಜನಾದೇಶವನ್ನು ಪಡೆಯಲು ಸಾರ್ವತ್ರಿಕ ಚುನಾವಣೆಯನ್ನೂ ಕರೆಯಬಹುದು.

2019ರ ಜುಲೈನಲ್ಲಿ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಜಾನ್ಸನ್ ಡಿಸೆಂಬರ್‌ನಲ್ಲಿ ಚುನಾವಣೆಗೆ ಕರೆ ನೀಡಿದ್ದರು. ಆದರೆ 2007ರಲ್ಲಿ ಗೋರ್ಡನ್ ಬ್ರೌನ್ ಅವರು ಲೇಬರ್ ಪಕ್ಷದ ಪ್ರಧಾನ ಮಂತ್ರಿ ಟೋನಿ ಬ್ಲೇರ್ ಅವರಿಂದ ಅಧಿಕಾರ ವಹಿಸಿಕೊಂಡಾಗ ಚುನಾವಣೆಗೆ ಹೋಗಿರಲಿಲ್ಲ.

ಹಸ್ಟಿಂಗ್ಸ್ ಎಂದರೇನು?

ಅಂತಿಮ ಇಬ್ಬರು ಅಭ್ಯರ್ಥಿಗಳು ಆಗಸ್ಟ್‌ನಲ್ಲಿ ಎರಡನೇ ಸುತ್ತಿನ ಪ್ರಚಾರ ಮಾಡುತ್ತಾರೆ. ಈ ಪ್ರಚಾರ ಕಾರ್ಯಕ್ರಮವನ್ನು ʻಹಸ್ಟಿಂಗ್ಸ್’ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಮತದಾರರ ಮುಂದೆ ಭಾಷಣಗಳನ್ನು ಒಳಗೊಂಡಿರುತ್ತದೆ. ಮತಪತ್ರಗಳನ್ನು ಆಗಸ್ಟ್‌ನಲ್ಲಿ ಸದಸ್ಯರಿಗೆ ಕಳುಹಿಸಲಾಗುತ್ತದೆ. ಅಂತಿಮ ಫಲಿತಾಂಶ ಸೆಪ್ಟೆಂಬರ್ 5ರಂದು ಪ್ರಕಟವಾಗುತ್ತದೆ.

ರಾಣಿಯ ಪಾತ್ರ

ಸಂಪ್ರದಾಯದ ಪ್ರಕಾರ, ನಿರ್ಗಮನ ಪ್ರಧಾನ ಮಂತ್ರಿಯು ಕೊನೆಯ ಬಾರಿಗೆ ಹೌಸ್ ಆಫ್ ಕಾಮನ್ಸ್ ಮುಂದೆ ಭಾಷಣ ಮಾಡಬಹುದು. ನಂತರ 10 ಡೌನಿಂಗ್ ಸ್ಟ್ರೀಟ್‌ನಿಂದ ಹೊರಬಿದ್ದು ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ರಾಣಿಯನ್ನು ಭೇಟಿ ಮಾಡುತ್ತಾರೆ. ಅಲ್ಲಿ ತನ್ನ ರಾಜೀನಾಮೆಯನ್ನು ರಾಣಿಯ ಮುಂದೆ ಇಡುತ್ತಾರೆ. ರಾಣಿಯು ಪ್ರಧಾನ ಮಂತ್ರಿಯ ರಾಜೀನಾಮೆಯನ್ನು ಅಂಗೀಕರಿಸುತ್ತಾರೆ. ನಂತರ ಹೊಸ ನಾಯಕ ರಾಣಿಯನ್ನು ಭೇಟಿಯಾಗಿ ಹೊಸ ಸರ್ಕಾರ ರಚಿಸಲು ಅನುಮತಿ ಪಡೆಯುತ್ತಾರೆ. ರಾಣಿ ಒಪ್ಪಿಗೆ ನೀಡುತ್ತಾರೆ. ಭಾರತದಲ್ಲಿ ರಾಷ್ಟ್ರಪತಿ ಮಾಡುವ ʻಸಹಿ ಹಾಕುವʼ ಕೆಲಸವನ್ನು ಇಲ್ಲಿ ರಾಣಿ ಮಾಡುತ್ತಾರೆ.

Exit mobile version