Site icon Vistara News

ವಿಸ್ತಾರ Explainer: Hollywood Strike: 63 ವರ್ಷಗಳ ಬಳಿಕ ಹಾಲಿವುಡ್‌ನಲ್ಲಿ ಬೃಹತ್‌ ಪ್ರತಿಭಟನೆ; ನಟ, ನಟಿಯರು ಬೀದಿಗಿಳಿದಿದ್ದೇಕೆ?

hollywood strike

ಲಾಸ್‌ ಏಂಜಲೀಸ್:‌ 63 ವರ್ಷಗಳ ಬಳಿಕ ಹಾಲಿವುಡ್‌ ಮೊದಲ ಬೃಹತ್‌ ಪ್ರತಿಭಟನೆ, ಮುಷ್ಕರವನ್ನು (Hollywood Strike) ಕಾಣುತ್ತಿದೆ. ಚಲನಚಿತ್ರ ಬರಹಗಾರರು, ನಟ-ನಟಿಯರು ದೊಡ್ಡ ಸಂಖ್ಯೆಯಲ್ಲಿ ಸೇರಿ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರದ ಉದ್ದೇಶ- ವೇತನ ಹೆಚ್ಚಿಸಬೇಕು ಹಾಗೂ ತಮ್ಮ ಕೆಲಸಗಳಿಗೆ ಕೃತಕ ಬುದ್ಧಿಮತ್ತೆಯಿಂದ (ಎಐ) ಉಂಟಾಗಿರುವ ಬೆದರಿಕೆಯನ್ನು ಇಲ್ಲವಾಗಿಸಬೇಕು.

ಕೃತಕ ಬುದ್ಧಿಮತ್ತೆಯಿಂದಾಗಿ (artificial intelligence) ತಮ್ಮ ಕೆಲಸಗಳಿಗೆ ಸಂಚಕಾರ ಬಂದಿದೆ; ವೇತನ ಕಡಿಮೆಯಾಗಿದೆ ಎಂದು ಆಕ್ಷೇಪಿಸಿ 11 ವಾರಗಳ ಹಿಂದೆ ಸಾವಿರಾರು ಸ್ಕ್ರೀನ್‌ ರೈಟರ್‌ಗಳು (screen writer) ಕೆಲಸದಿಂದ ಹೊರನಡೆದಿದ್ದರು. ಇವರನ್ನು ʼಸ್ಕ್ರೀನ್ ಆಕ್ಟರ್ಸ್ ಗಿಲ್ಡ್ʼ ಎಂಬ ಸಂಸ್ಥೆ ಬೆಂಬಲಿಸಿದೆ. ಇದು ಅಮೆರಿಕದ ಪ್ರಮುಖ ನಟನಟಿಯರು (hollywood actors) ಇರುವ ಸಂಸ್ಥೆ.

ಗಿಲ್ಡ್‌ ಹಾಗೂ ಚಲನಚಿತ್ರ ತಯಾರಕರನ್ನು ಪ್ರತಿನಿಧಿಸುವ ʼಅಲಯನ್ಸ್ ಆಫ್ ಮೋಷನ್ ಪಿಕ್ಚರ್ ಮತ್ತು ಟೆಲಿವಿಷನ್ ಪ್ರೊಡ್ಯೂಸರ್ಸ್‌ʼ ಸಂಸ್ಥೆಯ (ಇದರಲ್ಲಿ ವಾಲ್ಟ್‌ ಡಿಸ್ನಿ, ನೆಟ್‌ಫ್ಲಿಕ್ಸ್‌ ಮುಂತಾದ ಸಂಸ್ಥೆಗಳಿವೆ) ಜತೆಗೆ ಈ ಕುರಿತು ಸುದೀರ್ಘ ಕಾಲದ ಮಾತುಕತೆ ನಡೆದಿತ್ತು. ನಿನ್ನೆ ಈ ಮಾತುಕತೆ ಮುರಿದು ಬಿದ್ದ ಪರಿಣಾಮ ಇಂದಿನಿಂದ ಮುಷ್ಕರ ಹಾಗೂ ಕೆಲಸದ ನಿಲುಗಡೆ ಘೋಷಿಸಲಾಗಿದೆ. ಇವರೊಂದಿಗೆ ಸಾವಿರಾರು ಚಲನಚಿತ್ರ ಮತ್ತು ದೂರದರ್ಶನ ನಟರೂ ಸೇರಿಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆ ದೊಡ್ಡ ಸ್ವರೂಪ ತಾಳಿದೆ.

1960ರಲ್ಲಿ ಇಂಥದೊಂದು ಬೃಹತ್‌ ಮುಷ್ಕರ ನಡೆದಿತ್ತು. ನಂತರ ಅಮೆರಿಕದ ಅಧ್ಯಕ್ಷರಾದ ರೊನಾಲ್ಡ್ ರೇಗನ್ ಅವರು ಆಗ ಪ್ರತಿಭಟನೆಗಳ ನೇತೃತ್ವ ವಹಿಸಿದ್ದರು. ಅದರ ಬಳಿಕ ಇದೇ ಈ ಪರಿಯ ವ್ಯಾಪಕತೆ ಹೊಂದಿದ ಪ್ರತಿಭಟನೆಯಾಗಿದೆ.

ಮುಷ್ಕರ ಮುಂದುವರಿದರೆ ಹಲವಾರು ಪ್ರಮುಖ ವೆಬ್‌ ಸೀರೀಸ್‌ಗಳು, ಟಿವಿ ಶೋಗಳು, ಹಾಗೂ ಸಿನಿಮಾಗಳ ತಯಾರಿ ಅರ್ಧಕ್ಕೇ ನಿಲ್ಲಲಿವೆ. ಯಾಕೆಂದರೆ ಹಾಲಿವುಡ್‌ನ ಹೆಚ್ಚಿನ ಬರಹಗಾರರು ಹಾಗೂ ನಟ- ನಟಿಯರು ಈ ಮುಷ್ಕರ ನಡೆಸುತ್ತಿರುವ ಸಂಘಟನೆಗಳಲ್ಲಿ ಇದ್ದಾರೆ. ಈಗಾಗಲೇ ಬಿಡುಗಡೆ ಘೋಷಣೆಯಾಗಿರುವ ಸಿನಿಮಾ ಹಾಗೂ ಸರಣಿಗಳು ಉತ್ಪಾದನಾ ನಂತರದ ಕೆಲಸಗಳನ್ನು ಮುಗಿಸಿರುವುದರಿಂದ ಅವುಗಳ ಬಿಡುಗಡೆಗೆ ಯಾವುದೇ ತೊಂದರೆಯಾಗಲಾರದು.

ಯಾರ ವಿರುದ್ಧ ಮುಷ್ಕರ?

AMPTP ಅಥವಾ ಅಲೈಯನ್ಸ್ ಆಫ್ ಮೋಷನ್ ಪಿಕ್ಚರ್ ಮತ್ತು ಟೆಲಿವಿಷನ್ ಎಂಬ ಸಂಘಟನೆಯು ಹಾಲಿವುಡ್‌ನಲ್ಲಿದ್ದು, ಇದು ಪ್ರಮುಖ ಹಾಲಿವುಡ್ ಸ್ಟುಡಿಯೋಗಳನ್ನು ಒಳಗೊಂಡಿದೆ. ಇದರ ವಿರುದ್ಧ ನಟ ಮತ್ತು ಬರಹಗಾರರ ಗಿಲ್ಡ್‌ಗಳು ಮುಷ್ಕರಕ್ಕೆ ನಿಂತಿವೆ. ಹಲವು ತಿಂಗಳುಗಳಿಂದ ಇವರ ನಡುವೆ ಮಾತುಕತೆಗಳು ನಡೆಯುತ್ತಿದ್ದು, ಫಲಪ್ರದವಾಗಿಲ್ಲ.

ಯಾರೆಲ್ಲ ಇದ್ದಾರೆ?

ಟಾಮ್ ಕ್ರೂಸ್, ಜಾನಿ ಡೆಪ್‌, ಏಂಜಲಿನಾ ಜೋಲಿ ಸೇರಿದಂತೆ ದೊಡ್ಡ ದೊಡ್ಡ ತಾರೆಯರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ʼಸ್ಕ್ರೀನ್ ಆಕ್ಟರ್ಸ್ ಗಿಲ್ಡ್ʼನಲ್ಲಿ ಇವರೂ ಸೇರಿದಂತೆ 1,60,000 ನಟ ನಟಿಯರಿದ್ದಾರೆ. ಮೆರಿಲ್ ಸ್ಟ್ರೀಪ್, ಬೆನ್ ಸ್ಟಿಲ್ಲರ್, ಕಾಲಿನ್ ಫಾರೆಲ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಮುಷ್ಕರದ ಪರವಾಗಿ ನಿಂತಿದ್ದಾರೆ. ಈ ಟಾಪ್ ಸ್ಟಾರ್‌ಗಳಿಗೂ ಮುಷ್ಕರದಿಂದ ಆರ್ಥಿಕ ನಷ್ಟವಾಗಲಿದೆ. ಇವರ ಕೆಲಸಗಳು ಅರ್ಧಕ್ಕೆ ನಿಲ್ಲಲಿವೆ. ಆದರೆ ಇವರ ಉಪಸ್ಥಿತಿಯು ಯೂನಿಯನ್‌ನ ಕೆಸಲಗಾರರ ಸಂಕಷ್ಟಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಲಿದೆ. ಹಾಗೂ ಸ್ಟುಡಿಯೊಗಳು ನ್ಯಾಯಯುತವಾದ ಮಾತುಕತೆಯ ಮೇಜಿಗೆ ಬರಬಹುದಾಗಿದೆ.

hollywood strike

ಬೇಡಿಕೆ ಏನು?

ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಮತ್ತು ರೈಟರ್ಸ್ ಗಿಲ್ಡ್ ಎರಡೂ ತಮ್ಮ ಕೆಲಸಗಳಿಗೆ ಉತ್ತಮ ವೇತನ, ಲಾಭದಲ್ಲಿ ನ್ಯಾಯೋಚಿತ ಪಾಲು, ಕೆಲಸದ ಪರಿಸ್ಥಿತಿಯಲ್ಲಿ ಸುಧಾರಣೆ, ಕೃತಕ ಬುದ್ಧಿಮತ್ತೆಯ ಬಳಕೆಯ ಇಳಿಕೆ ಅಥವಾ ಅದರಿಂದ ತಮ್ಮ ಉದ್ಯೋಗಗಳಿಗೆ ರಕ್ಷಣೆಯನ್ನು ಅಪೇಕ್ಷಿಸಿವೆ. ಹೊಸ ಕಾಲದಲ್ಲಿ ಆಧುನಿಕ ಸಮಸ್ಯೆಗಳು ಸೃಷ್ಟಿಯಾಗಿದ್ದು, ಅವುಗಳನ್ನು ಪರಿಹರಿಸಲು ಆಧುನಿಕ ಒಪ್ಪಂದಗಳು ಆಗಬೇಕಿವೆ ಎಂದಿವೆ.

ದೊಡ್ಡ ಸಿನಿಮಾಗಳಿಗೆ ಹೊಡೆತ

ಈ ಮುಷ್ಕರದ ಮೊದಲ ಹೊಡೆತ ನಿರ್ದೇಶಕ ಕ್ರಿಸ್ಟೋಫರ್ ನೋಲನ್‌ನ ʼಓಪನ್‌ಹೈಮರ್ʼ ಸಿನಿಮಾಗೆ ಬಿದ್ದಿದೆ. ನಟರಾದ ಸಿಲಿಯನ್ ಮರ್ಫಿ, ಎಮಿಲಿ ಬ್ಲಂಟ್ ನಟಿಸಿರುವ ಈ ಸಿನಿಮಾದ ಲಂಡನ್‌ನಲ್ಲಿ ನಡೆಯಲಿದ್ದ ಪ್ರಥಮ ಪ್ರೀಮಿಯರ್‌ ಪ್ರದರ್ಶನದಿಂದ ಈ ಚಿತ್ರದ ಪಾತ್ರವರ್ಗದವರು ಹೊರನಡೆಯಬೇಕಾಯಿತು. ನಿಕೋಲ್ ಕಿಡ್‌ಮನ್, ಜೊಯಿ ಸಲ್ಡಾನಾ, ಮೋರ್ಗಾನ್ ಫ್ರೀಮನ್ ಮತ್ತು ಇತರರು ನಟಿಸಿರುವ ʼಸ್ಪೆಷಲ್ ಓಪ್ಸ್: ಲಯನೆಸ್‌ʼನ ಪ್ರಥಮ ಪ್ರದರ್ಶನವನ್ನೂ ರದ್ದುಗೊಳಿಸಲಾಗಿದೆ.

ಮುಷ್ಕರ ನಡೆಸುತ್ತಿರುವ ಸಂಘಟನೆ ಹಾಲಿವುಡ್‌ನ ಟಾಪ್ ಸ್ಟಾರ್‌ಗಳನ್ನು ಒಳಗೊಂಡಿದೆ. ಇವರು ಮುಷ್ಕರ ಮುಗಿಯುವವರೆಗೂ ನಟನೆ, ನೃತ್ಯ, ಹಾಡುಗಾರಿಕೆ ಅಥವಾ ವಾಯಿಸ್‌ ಡಬ್ಬಿಂಗ್‌ ಸೇರಿ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ತಮ್ಮ ಚಲನಚಿತ್ರ ಪ್ರಚಾರ, ಪ್ರೀಮಿಯರ್‌ಗಳು, ಉತ್ಸವ, ಪ್ಯಾನೆಲ್‌, ಸಂದರ್ಶನ, ಪ್ರಶಸ್ತಿ ಪ್ರದರ್ಶನಗಳು ಅಥವಾ ಅಭಿಮಾನಿಗಳ ಸಭೆಗಳಿಗೆ ಹಾಜರಾಗಲೂ ಸಾಧ್ಯವಿಲ್ಲ. ರಿಹರ್ಸಲ್‌ ಅಥವಾ ಡ್ರೆಸ್‌ ರಿಹರ್ಸಲ್‌ಗೂ ಹಾಜರಾಗಲು ಸಾಧ್ಯವಿಲ್ಲ.

ಒಟಿಟಿಗಳಿಗೂ ಸಮಸ್ಯೆ?

Netflix, Amazon Prime Videoದಂತಹ ಒಟಿಟಿ ಸ್ಟ್ರೀಮಿಂಗ್ ಸೇವೆಗಳು ಭಾರತದ ಸ್ಥಳೀಯ ಭಾಷೆಗಳ ಸಿನಿಮಾಗಳು, ಸರಣಿಗಳನ್ನು ಒದಗಿಸುವುದನ್ನು ಮುಂದುವರಿಸಲಿವೆ. ಆದರೆ ಅವರ ಹಾಲಿವುಡ್ ನಿರ್ಮಾಣಗಳಿಗೆ ಧಕ್ಕೆ ಆಗಲಿದೆ. ಅಮೆರಿಕದ ಮನರಂಜನಾ ಉದ್ಯಮದ ಗ್ರಾಹಕರ ವೆಚ್ಚದ 90%ಕ್ಕಿಂತ ಹೆಚ್ಚು ಟಿವಿ ಮತ್ತು ಡಿಜಿಟಲ್ ಚಂದಾದಾರಿಕೆ ಪಾವತಿಸಲು ಹೋಗುತ್ತದೆ.

ಇದನ್ನೂ ಓದಿ: Hollywood : 494 ಕೋಟಿಯ ಮನೆಗೆ ಶಿಫ್ಟ್‌ ಆದ ಹಾಲಿವುಡ್‌ ಜೋಡಿ! ಈ ಮನೆ ಹೇಗಿದೆ ನೋಡಿ!

Exit mobile version