ಕ್ರೆಮ್ಲಿನ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russia President Vladimir Putin) ತನಗಿಂತ 32 ವರ್ಷ ಕಿರಿಯಳಾದ, ಬಾರ್ಬಿ ಡಾಲ್‌ನಂತೆ (Barbie Doll) ಕಾಣುವ ಈ ಚೆಲುವೆ ಜೊತೆ ಇತ್ತೀಚೆಗೆ ಸರಸವಾಡುತ್ತಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಈಕೆಯ ಹೆಸರು ಎಕಟೆರಿನಾ “ಕಟ್ಯಾ” ಮಿಜುಲಿನಾ (Ekaterina “Katya” Mizulina) . 39 ವರ್ಷ. ಈಕೆ ವೃತ್ತಿಯಿಂದ ಕಲಾ ಇತಿಹಾಸಕಾರ್ತಿ. ಈಕೆ ರಷ್ಯಾ ಪರ ಕಾರ್ಯ ನಿರ್ವಹಿಸುತ್ತಿರುವ ಸುರಕ್ಷಿತ ಇಂಟರ್ನೆಟ್ ಲೀಗ್‌ನ ಮುಖ್ಯಸ್ಥರಾಗಿದ್ದಾರೆ. ರಷ್ಯಾ ಮತ್ತು ಅದರ ಅಧ್ಯಕ್ಷರ ವಿರುದ್ಧ, ವಿಶೇಷವಾಗಿ ಉಕ್ರೇನ್ ಮೇಲಿನ ರಷ್ಯಾದ ಯುದ್ಧದ ಬಗ್ಗೆ ಯಾವುದೇ ಟೀಕೆ ಬಂದರೆ ಅದನ್ನು ಯಶಸ್ವಿಯಾಗಿ ಎದುರಿಸುವುದು ಈಕೆಯ ಕೆಲಸದ ಮುಖ್ಯ ಭಾಗವಾಗಿದೆ.
ಈಕೆ ರಷ್ಯಾದ ಸೆನೆಟರ್ ಎಲೆನಾ ಮಿಜುಲಿನಾ (69) ಅವರ ಮಗಳು. ಈಕೆ ಪುಟಿನ್ ಪರ ಮತ್ತು ಉಕ್ರೇನ್ ವಿರೋಧಿ. “ಕಟ್ಯಾ ಮಿಜುಲಿನಾ ಸಂಪೂರ್ಣವಾಗಿ ಪುಟಿನ್ ಅವರ ಅಭಿರುಚಿಗೆ ಸರಿಹೊಂದುವ ಮಹಿಳೆ. ಈ ಬಾರ್ಬಿ ಅಭಿರುಚಿ ಪುಟಿನ್‌ಗೆ ತುಂಬಾ ಇಷ್ಟ” ಎಂದು ರಷ್ಯಾದ ಮಾನವ ಹಕ್ಕುಗಳ ಪ್ರಚಾರಕಿ, ಓಲ್ಗಾ ರೊಮಾನೋವಾ ಅವರು ಉಕ್ರೇನ್‌ನ ಚಾನೆಲ್‌ಗೆ ತಿಳಿಸಿದ್ದಾರೆ.
71 ವರ್ಷದ ಪುಟಿನ್ ಅವರು ಒಲಿಂಪಿಕ್ ಜಿಮ್ನಾಸ್ಟ್ ಅಲೀನಾ ಕಬೇವಾ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳಿದ್ದವು. ಈ ಜೋಡಿಗೆ ಮೂರು ಮಕ್ಕಳು ಇದ್ದಾರೆ. ರಷ್ಯಾದ ಅಧ್ಯಕ್ಷ ಪುಟಿನ್ ತಮ್ಮ ಪತ್ನಿ ಲ್ಯುಡ್ಮಿಲಾಗೆ 30 ವರ್ಷಗಳ ದಾಂಪತ್ಯದ ಬಳಿಕ 2014ರಲ್ಲಿ ವಿಚ್ಛೇದನ ನೀಡಿದ್ದರು.
ರಷ್ಯಾದ ಹಲವಾರು ಮಾಧ್ಯಮಗಳು ಮತ್ತು ಟೆಲಿಗ್ರಾಮ್ ಚಾನೆಲ್‌ಗಳು ಪುಟಿನ್ ಮತ್ತು ಮಿಜುಲಿನಾ ಅವರ ಸಂಬಂಧದ ಬಗ್ಗೆ ಸುದ್ದಿಗಳನ್ನು ಪೋಸ್ಟ್ ಮಾಡುತ್ತಿವೆ. ಅವರು ಇತ್ತೀಚೆಗೆ ಪರಸ್ಪರ ಹತ್ತಿರವಾಗಿದ್ದಾರೆ ಎಂದು ಹೇಳಿಕೊಂಡಿವೆ. ಆದರೆ ಪುಟಿನ್ ಆಗಲೀ ಮಿಜುಲಿನಾ ಆಗಲೀ ಏನೂ ಹೇಳಿಲ್ಲ.
ಕಟ್ಯಾ ಮಿಜುಲಿನಾ ಅವರು 2004ರಲ್ಲಿ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಸ್ಕೂಲ್ ಆಫ್ ಓರಿಯಂಟಲ್ ಮತ್ತು ಆಫ್ರಿಕನ್ ಸ್ಟಡೀಸ್‌ನಿಂದ ಕಲಾ ಇತಿಹಾಸ ಮತ್ತು ಇಂಡೋನೇಷಿಯನ್ ಭಾಷೆಯಲ್ಲಿ ಪದವಿ ಪಡೆದವರು. 2017ರಲ್ಲಿ ಸೇಫ್ ಇಂಟರ್ನೆಟ್ ಲೀಗ್‌ಗೆ ಸೇರುವ ಮೊದಲು ಚೀನಾಕ್ಕೆ ಭೇಟಿ ನೀಡಿದ ರಷ್ಯಾದ ಅಧಿಕೃತ ನಿಯೋಗಗಳಿಗೆ ಅನುವಾದಕರಾಗಿ ಕೆಲಸ ಮಾಡಿದರು.
ಈಕೆ ನ್ಯಾಟೋದ ಉಗ್ರ ವಿರೋಧಿ ಕೂಡ. “ಮೊದಲು ನಾವು ಉಕ್ರೇನ್ ಅನ್ನು ನಾಜಿಗಳಿಂದ ಸ್ವಚ್ಛಗೊಳಿಸುತ್ತೇವೆ. ನಂತರ ನಾವು ಗೂಗಲ್ ಮತ್ತು ವಿಕಿಪೀಡಿಯಾದ ಕಡೆ ಹೋಗುತ್ತೇವೆ” ಎಂದು ಅವರು 2022ರಲ್ಲಿ ಒಂದು ಭಾಷಣದಲ್ಲಿ ಹೇಳಿದ್ದರು.
ಪ್ರೇಯಸಿ ಕಬಯೇವಾಗಾಗಿಯೂ ಪುಟಿನ್ ರಹಸ್ಯವಾಗಿ ಲಕ್ಷಾಂತರ ಖರ್ಚು ಮಾಡುತ್ತಿದ್ದಾರೆ. ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಕಬಯೇವಾ ಮಾಸ್ಕೋದ ವಾಯುವ್ಯಕ್ಕೆ ಸುಮಾರು 250 ಮೈಲಿಗಳ ದೂರದಲ್ಲಿರುವ ವಾಲ್ಡೈ ಸರೋವರದ ಪುಟಿನ್ ಎಸ್ಟೇಟ್‌ನಲ್ಲಿರುವ ವಿಲ್ಲಾದಲ್ಲಿ ವಾಸಿಸುತ್ತಿದ್ದಾರೆ ಎಂದು ಇನ್ನೊಂದು ವರದಿ ಹೇಳಿದೆ.
ಇದನ್ನೂ ಓದಿ: Alexei Navalny: ರಷ್ಯಾ ಪ್ರತಿಪಕ್ಷದ ನಾಯಕ, ಪುಟಿನ್ ಕಡು ಟೀಕಾಕಾರ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಸಾವು