Site icon Vistara News

Volodymyr Zelenskyy: ನಟರಾಗಿದ್ದ ಜೆಲನ್‌ಸ್ಕಿ ಉಕ್ರೇನ್ ಅಧ್ಯಕ್ಷರಾಗಿದ್ದು ಹೇಗೆ? ನಿಜವಾಯಿತು ಟಿವಿ ಧಾರಾವಾಹಿ ಕಥೆ

#image_title

ಸಿನಿ ಕ್ಷೇತ್ರದಲ್ಲಿ ಗೆದ್ದವರು ಮುಂದೆ ರಾಜಕೀಯಕ್ಕೆ ಹೋಗಿ ಮಿಂಚುವುದನ್ನು ನಾವು ನೋಡಿದ್ದೇವೆ. ಆದರೆ ಏನೂ ಇಲ್ಲದೆ ಅತ್ಯಂತ ಸಾಮಾನ್ಯವಾಗಿದ್ದ ಒಬ್ಬ ನಟ ಇದ್ದಕ್ಕಿದ್ದಂತೆ ರಾಷ್ಟ್ರದ ಅಧ್ಯಕ್ಷರಾಗಿಬಿಡುತ್ತಾರೆ. ರಷ್ಯಾದಂತಹ ದೈತ್ಯ ರಾಷ್ಟ್ರದ ಎದುರು ನಿಂತು ಯುದ್ಧ ಮಾಡುತ್ತಾರೆ. ಅಂತಹ ಒಬ್ಬ ಅಸಮಾನ್ಯ ವ್ಯಕ್ತಿ ಉಕ್ರೇನ್ ರಾಷ್ಟ್ರದ ಅಧ್ಯಕ್ಷ ವೊಲೊಡಿಮಿರ್ ಜೆಲನ್‌ಸ್ಕಿ(Volodymyr Zelenskyy). ರಷ್ಯಾದ ವಿರುದ್ಧ ಹೋರಾಡುತ್ತಿರುವ ಪರಿಯಿಂದಲೇ ಪೂರ್ತಿ ಜಗತ್ತಿಗೆ ಪರಿಚಿತರಾಗಿರುವ ಈ ವ್ಯಕ್ತಿಯ ಜೀವನದ ಕಥೆ ಇಲ್ಲಿದೆ.

ಇದನ್ನೂ ಓದಿ: Russia-Ukraine War : ಯುದ್ಧದ ಭೀಕರತೆ ಹೇಗಿರುತ್ತವೆ ಎಂಬುದಕ್ಕೆ ರಷ್ಯಾ- ಉಕ್ರೇನ್​ ಕದನ ಈ ಚಿತ್ರಗಳೇ ಸಾಕ್ಷಿ

ಜೆಲನ್‌ಸ್ಕಿ ಮೂಲತಃ ಒಬ್ಬ ನಟರಾಗಿದ್ದವರು. ‘ಸರ್ವಂಟ್ ಆಫ್ ದಿ ಪೀಪಲ್’ ಹೆಸರಿನ ಟಿವಿ ಧಾರಾವಾಹಿ ಮೂಲಕ ಉಕ್ರೇನ್ ಜನರ ಮನೆ ಮಾತಾದವರು. ಅಂದ ಹಾಗೆ ಈ ಧಾರಾವಾಹಿಯನ್ನು ಜೆಲನ್‌ಸ್ಕಿ ಮತ್ತು ಅವರ ಸ್ನೇಹಿತರ ತಂಡವಾದ ‘ಕ್ವರ್ಟಲ್ 95’ ನಿರ್ಮಿಸಿತ್ತು. 2015ರಲ್ಲಿ ಆರಂಭವಾದ ಈ ಧಾರಾವಾಹಿ ಒಟ್ಟು ಮೂರು ಭಾಗಗಳಾಗಿ 2019ರವರೆಗೆ ತೆರೆ ಕಂಡಿದೆ.


ಈ ಸರ್ವಂಟ್ ಆಫ್ ದಿ ಪೀಪಲ್ ಒಂದು ರಾಜಕೀಯ ಕಥೆ. ಕೀವ್ ನಗರದ ಶಾಲೆಯೊಂದರಲ್ಲಿ ರಾಜಕೀಯ ಶಿಕ್ಷಕನಾಗಿರುವ ವಾಸಿಲಿ ಪೆಟ್ರೋವಿಚ್ ಗೊಲೊಬೊರೊಡ್ಕೊ ಕಥೆಯ ನಾಯಕ. ಆತ ಮಕ್ಕಳಿಗೆ ಪಾಠ ಮಾಡುವಾಗಲೆಲ್ಲ ರಾಜಕಾರಣಿಗಳ ಬಗ್ಗೆ ಬೈಯುತ್ತಿರುತ್ತಾನೆ. ನಾನೊಂದು ವೇಳೆ ರಾಜಕಾರಣಿಯಾಗಿದ್ದರೆ ಏನು ಮಾಡುತ್ತಿದ್ದೆ, ಸಮಾಜವನ್ನು ಹೇಗೆ ಸುಧಾರಣೆ ಮಾಡುತ್ತಿದ್ದೆ ಎನ್ನುವುದರ ಬಗ್ಗೆ ಮಕ್ಕಳಿಗೆ ತಿಳಿಸುತ್ತಿರುತ್ತಾನೆ.

ವಾಸಿಲಿ ಹೇಳುವ ಮಾತನ್ನು ಆತನ ವಿದ್ಯಾರ್ಥಿಯೊಬ್ಬ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾರಂಭಿಸುತ್ತಾನೆ. ಆ ವಿಡಿಯೊಗಳು ವೈರಲ್ ಆಗಲಾರಂಭಿಸುತ್ತವೆ. ಜನರು ಇಂಥವರೇ ನಮ್ಮ ಅಧ್ಯಕ್ಷರಾಗಬೇಕು ಎಂದು ಹೇಳಲಾರಂಭಿಸುತ್ತಾರೆ. ಅದನ್ನು ಕಂಡ ವಿದ್ಯಾರ್ಥಿಗಳು ತಾವೇ ಹಣ ಸಂಗ್ರಹಿಸಿ, ತಮ್ಮ ಶಿಕ್ಷಕನನ್ನು ಚುನಾವಣೆಗೆ ನಿಲ್ಲಿಸುತ್ತಾರೆ. ವಿಚಿತ್ರವೆಂಬಂತೆ ಆತ ಅಧ್ಯಕ್ಷನಾಗಿ ಚುನಾಯಿತನಾಗುತ್ತಾನೆ ಕೂಡ. ನಂತರದ ದಿನಗಳಲ್ಲಿ ಒಬ್ಬ ನಾಯಕನಾಗಿ ಅವನು ತರುವ ಸುಧಾರಣೆಗಳು, ಮಾಡುವ ಅಭಿವೃದ್ಧಿಗಳನ್ನು ಕಥೆಯಲ್ಲಿ ತೋರಿಸಲಾಗಿದೆ.

ಈ ಧಾರಾವಾಹಿ ಪ್ರಸಾರವಾಗುವ ಸಮಯದಲ್ಲಿ ಉಕ್ರೇನ್ ದೇಶದ ರಾಜಕೀಯ ವ್ಯವಸ್ಥೆ ತೀರಾ ಹದಗೆಟ್ಟಿತ್ತು. 2014ರ ಸಮಯದಲ್ಲಿ ದೇಶದಲ್ಲಿ ರಷ್ಯಾ ಪರ ಅಧ್ಯಕ್ಷರಾದ ವಿಕ್ಟರ್ ಯಾನುಕೋವಿಚ್ ಆಡಳಿತವಿತ್ತು. ಆದರೆ ಆ ವರ್ಷದಲ್ಲಿ ಅತಿ ಹೆಚ್ಚು ಪ್ರತಿಭಟನೆಗಳು ನಡೆದ ಹಿನ್ನೆಲೆ ಆ ಸರ್ಕಾರ ಪತನಗೊಂಡಿತು. ಅದೇ ವರ್ಷ ಮೇ ತಿಂಗಳಲ್ಲಿ ಕೋಟ್ಯಧಿಪತಿ ಉದ್ಯಮಿ ಪೆಟ್ರೋ ಪೊರೊಶೆಂಕೊ ಅವರು ಕ್ಷಿಪ್ರ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. 2016ರಲ್ಲಿ ಪನಾಮಾ ಪೇಪರ್ ಬಿಡುಗಡೆಯಾಯಿತು. ಆಗ ಪೆಟ್ರೋ ಅವರು ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ಖಾತೆ ಹೊಂದಿರುವ ವಿಚಾರ ಹೊರಬಿದ್ದಿತು. ಅದರಿಂದಾಗಿ ಅವರ ಸರ್ಕಾರವೂ ಪತನಗೊಂಡಿತು. ಈ ಕಾರಣದಿಂದಾಗಿ ‘ಸರ್ವಂಟ್ ಆಫ್ ದಿ ಪೀಪಲ್’ ಧಾರಾವಾಹಿ ಜನರಿಗೆ ಹೆಚ್ಚು ಹತ್ತಿರವಾಯಿತು.


ಜೆಲನ್‌ಸ್ಕಿ ಅವರ ಧಾರಾವಾಹಿ ಜನಪ್ರಿಯವಾದ ನಂತರ 2018ರಲ್ಲಿ ತಾವೂ ಕೂಡ ಸಮಾಜದಲ್ಲಿ ಬದಲಾವಣೆ ತರಬಹುದು ಎನ್ನುವ ಆಲೋಚನೆ ಜೆಲನ್‌ಸ್ಕಿ ಅವರಲ್ಲಿ ಮೂಡಿತು. ಆ ಹಿನ್ನೆಲೆ ಅವರು ಮತ್ತು ಅವರ ಕ್ವರ್ಟಲ್ 95 ತಂಡ ಜತೆಯಾಗಿ ‘ಸರ್ವಂಟ್ ಆಫ್ ದಿ ಪೀಪಲ್’ ಹೆಸರಿನಲ್ಲೇ ಪಕ್ಷವನ್ನು ಆರಂಭಿಸಿದರು. 2019ರಲ್ಲಿ ಅಧ್ಯಕ್ಷೀಯ ಚುನಾವಣೆ ಘೋಷಣೆಯಾದಾಗ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದರು.

ಇದನ್ನೂ ಓದಿ: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಿಂದ ಹಿಂದೆ ಸರಿದ ಉಕ್ರೇನ್​

ಜಲೆನ್‌ಸ್ಕಿ ಅವರ ಚುನಾವಣಾ ಪ್ರಚಾರ ಬೇರೆ ರಾಜಕಾರಣಿಗಳ ರೀತಿಯಲ್ಲಿ ಇರಲಿಲ್ಲ. ಅವರ ಪ್ರಚಾರ ಸಂಪೂರ್ಣವಾಗಿ ಅನೌಪಚಾರಿಕವಾಗಿತ್ತು. ಜನರನ್ನು ತಲುಪುವುದಕ್ಕೆ ಅವರು ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಅಂತಹ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡರು.

ಮೂಲತಃ ಕಲಾವಿದರಾಗಿದ್ದ ಅವರು ಕಾಮಿಕ್ ಸ್ಕೆಚ್‌ಗಳ ಮೂಲಕ ಜನರನ್ನು ತಲುಪುವ ಯತ್ನ ಮಾಡಿದರು. ಚುನಾವಣೆ ನಡೆದು, ಏಪ್ರಿಲ್ 21ರಂದು ಮತ ಎಣಿಕೆ ನಡೆಯಿತು. ಅದರಲ್ಲಿ ಜಲನ್‌ಸ್ಕಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾಗಿ ಘೋಷಣೆಯಾಯಿತು. ಇದು ಉಕ್ರೇನ್ ಸೇರಿ ಇಡೀ ವಿಶ್ವಕ್ಕೇ ಒಂದು ರೀತಿಯಲ್ಲಿ ಅಚ್ಚರಿ ತಂದಂತಹ ವಿಷಯವಾಗಿತ್ತು. ಓರ್ವ ನಟ ಅಧ್ಯಕ್ಷನಾಗುವ ಬಗ್ಗೆ ಧಾರಾವಾಹಿ ಮಾಡಿ, ಅದನ್ನೇ ನಿಜ ಜೀವನದಲ್ಲಿ ನನಸು ಮಾಡಿಕೊಂಡಂತಾಯಿತು.

Exit mobile version