Site icon Vistara News

Imran Khan | ಇಮ್ರಾನ್ ಖಾನ್ ಕೊಲ್ಲುವುದಷ್ಟೇ ಗುರಿಯಾಗಿತ್ತು! ಬಂಧಿತ ದಾಳಿಕೋರನ ಹೇಳಿಕೆ

Imran Khan

ಇಸ್ಲಾಮಾಬಾದ್:‌ ಪಾಕಿಸ್ತಾನದ ವಜೀರಾಬಾದ್‌ನಲ್ಲಿ ನಡೆದ ಪಿಟಿಐ ಪಕ್ಷದ ರ‍್ಯಾಲಿ ವೇಳೆ ಗುಂಡಿನ ದಾಳಿ ನಡೆಸಲಾಗಿದ್ದು, ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan ‌March) ಬಲಗಾಲಿಗೆ ಗಾಯಗಳಾಗಿವೆ. ರ‍್ಯಾಲಿ ನಡೆಸುತ್ತಿರುವ ವೇಳೆ ಅಪರಿಚಿತನೊಬ್ಬ ಗುಂಡಿನ ದಾಳಿ ನಡೆಸಿದ್ದು, ಇಮ್ರಾನ್‌ ಖಾನ್‌, ಸಿಂಧ್‌ ಪ್ರಾಂತ್ಯದ ಮಾಜಿ ಗವರ್ನರ್‌ ಸೇರಿ ಒಂಬತ್ತು ಜನರಿಗೆ ಗಾಯಗಳಾಗಿವೆ. ಅಲ್ಲದೆ, ಒಬ್ಬ ಮೃತಪಟ್ಟಿದ್ದಾನೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇಮ್ರಾನ್ ಖಾನ್ ಅವರನ್ನು ಮಾತ್ರವೇ ಸಾಯಿಸುವ ಗುರಿ ಇತ್ತು. ಈ ಕೊಲೆ ಯತ್ನವನ್ನು ನಾನು ನನ್ನ ಸ್ವಇಚ್ಛೆಯಿಂದ ಮಾತ್ರವೇ ಮಾಡಿದ್ದೇನೆ ಎಂದು ಬಂಧಿತ ವ್ಯಕ್ತಿ ಕ್ಯಾಮೆರಾಗಳ ಮುಂದೆ ಹೇಳಿದ್ದಾನೆ. ಮತ್ತೊಂದೆಡೆ, ಇಡೀ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂಧಾಮ್ ಬಾಘಚಿ ಹೇಳಿದ್ದಾರೆ.

ಗುಂಡಿನ ದಾಳಿ ಬಳಿಕ ಆಸ್ಪತ್ರೆಗೆ ಸಾಗಿಸುವಾಗಲೇ ಇಮ್ರಾನ್‌ ಖಾನ್‌ ಮೊದಲ ಪ್ರತಿಕ್ರಿಯೆ ನೀಡಿದ್ದು, “ಅಲ್ಲಾ ನನಗೆ ಮತ್ತೊಂದು ಅವಕಾಶ ನೀಡಿದ್ದಾರೆ. ನಾನು ಮತ್ತೆ ಹೋರಾಟ ಮುಂದುವರಿಸುತ್ತೇನೆ” ಎಂಬುದಾಗಿ ಹೇಳಿದ್ದಾರೆ. ಮತ್ತೊಂದೆಡೆ ಘಟನೆ ಕುರಿತು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ವರದಿ ಕೇಳಿದ್ದಾರೆ.

ಸಣ್ಣಪುಟ್ಟ ಗಾಯಗಳಾದರೂ ಇಮ್ರಾನ್‌ ಖಾನ್‌ ಅಪಾಯದಿಂದ ಪಾರಾಗಿದ್ದಾರೆ. ಆದರೂ, ಅವರನ್ನು ಲಾಹೋರ್‌ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಪಾಕಿಸ್ತಾನದಲ್ಲಿ ಅವಧಿಪೂರ್ವ ಚುನಾವಣೆಗೆ ಆಗ್ರಹಿಸಿ ಇಮ್ರಾನ್‌ ಖಾನ್‌ ಅವರು ಲಾಹೋರ್‌ನಿಂದ ಇಸ್ಲಾಮಾಬಾದ್‌ವರೆಗೆ ‘ದೀರ್ಘ ನಡಿಗೆ’ (Long March) ಆರಂಭಿಸಿದ್ದಾರೆ. ಇದರ ಭಾಗವಾಗಿಯೇ ವಜೀರಾಬಾದ್‌ನಲ್ಲಿ ಅವರು ರ‍್ಯಾಲಿ ಕೈಗೊಂಡಿದ್ದರು.

ಗಾಯಾಳುಗಳು ಯಾರು?
ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಸೇರಿ ಹಲವರಿಗೆ ಗಾಯಗಳಾಗಿವೆ. ಸಿಂಧ್‌ ಮಾಜಿ ಗವರ್ನರ್‌ ಇಮ್ರಾನ್‌ ಇಸ್ಮಾಯಿಲ್‌, ಸಂಸದ ಪೈಸಲ್‌ ಜಾವೇದ್‌ ಖಾನ್‌, ಪಿಟಿಐ ನಾಯಕರಾದ ಅಹ್ಮದ್‌ ಚಟ್ಟಾ ಹಾಗೂ ಉಮರ್‌ ದರ್‌ ಸೇರಿ ಹಲವರು ಗಾಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ, ಖಾನ್‌ ಅವರಿಗೆ ರ‍್ಯಾಲಿ ಕೈಗೊಳ್ಳದಂತೆ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಗುಂಡಿನ ದಾಳಿ ನಡೆಸಲಾಗಿದೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Imran Khan | ಚುನಾವಣೆಗೆ ಆಗ್ರಹಿಸಿ ದೀರ್ಘ ನಡಿಗೆ ಆರಂಭಿಸಿದ ಪಾಕ್ ಮಾಜಿ ಪಿಎಂ ಇಮ್ರಾನ್ ಖಾನ್

Exit mobile version