Site icon Vistara News

ವಿಸ್ತಾರ Explainer | ಜವಾಹಿರಿಯನ್ನು ಕತ್ತರಿಸಿ ಹಾಕಿದ ಆ ಹೆಲ್‌ಫೈರ್‌ ಕ್ಷಿಪಣಿ ಸಾಮರ್ಥ್ಯ ಅನೂಹ್ಯ!

hellfire

ಅಮೆರಿಕ ತನ್ನ ಮೇಲೆ ಘಾತಕ ದಾಳಿ (9/11) ನಡೆಸಿದ್ದ ಅಲ್‌ ಖೈದಾ ಮುಖ್ಯಸ್ಥ ಅಲ್‌ ಜವಾಹಿರಿಯನ್ನು ಬೇರೆ ಯಾವ ಜೀವಹಾನಿಯೂ ಇಲ್ಲದಂತೆ ಆಕಾಶದಿಂದಲೇ ಕೊಂದು ಮುಗಿಸಿದೆ. ತನ್ನ ಮನೆಯ ಬಾಲ್ಕನಿಯಲ್ಲಿ ನಿಂತಿದ್ದ ಜವಾಹಿರಿಯನ್ನು ಇಂಚು ಮಾತ್ರ ವ್ಯತ್ಯಾಸವೂ ಇಲ್ಲದಂತೆ ಬಡಿದು ಕೆಡಹಿದ ಆ ಡ್ರೋನ್‌ ಹಾಗೂ ಕ್ಷಿಪಣಿಯ ಬಗ್ಗೆ ಈಗ ಕುತೂಹಲವೆದ್ದಿದೆ.

ಇದರ ಹೆಸರು ಹೆಲ್‌ಫೈರ್‌ (Hellfire R9X) “ninja bombʼ ಅಂತಲೂ ಕರೆಯಲಾಗುತ್ತದೆ. ಜನನಿಬಿಡ ಪ್ರದೇಶದಲ್ಲಿರುವ ಭಯೋತ್ಪಾದಕ ಮುಖಂಡರನ್ನು ಕೆಡವಲು ಈ ಕ್ಷಿಪಣಿಯನ್ನು ಅಮೆರಿಕದ ಸೈನ್ಯ ಬಳಸುತ್ತ ಬಂದಿದೆ. ಎಎಫ್‌ಪಿ ವರದಿಯ ಪ್ರಕಾರ ಅಲ್-ಜವಾಹಿರಿ ನೆಲೆಸಿದ್ದ ಕಾಬೂಲ್‌ನ ಮನೆಯ ಮೇಲೆ ಎರಡು ಕ್ಷಿಪಣಿಗಳನ್ನು ಪ್ರಯೋಗಿಸಲಾಗಿದೆ. ಆದರೆ ಸ್ಥಳದಲ್ಲಿ ಯಾವುದೇ ಸ್ಫೋಟ ಆಗಿಲ್ಲ. ಮತ್ತು ಬೇರೆ ಯಾರಿಗೂ ಹಾನಿ ಆಗಿಲ್ಲ.

ಸ್ಫೋಟಗೊಳ್ಳುವ ವಾರ್‌ಹೆಡ್‌ ಈ ಕ್ಷಿಪಣಿಯಲ್ಲಿ ಇಲ್ಲ. ಆದರೆ ಆರು ರೇಜರ್‌ನಂತಿರುವ ಬ್ಲೇಡ್‌ಗಳಿವೆ. ಗುರಿಯನ್ನು ತಲುಪಿದಾಗ ಈ ಕ್ಷಿಪಣಿ ಸ್ಫೋಟಗೊಳ್ಳದೆ ಬ್ಲೇಡ್‌ಗಳನ್ನು ಬಿಡುಗಡೆ ಮಾಡುತ್ತದೆ. ನಿಖರ ಗುರಿಯನ್ನೇ ಛೇದಿಸುತ್ತದೆ. ಇತರ ನಾಗರಿಕರಿಗೆ ಹಾನಿ ಉಂಟುಮಾಡುವುದಿಲ್ಲ. ಫ್ಲೈಯಿಂಗ್ ಗಿನ್ಸು (flying Ginsu) ಎಂದೂ ಕರೆಯಲಾಗುವ ಹೆಲ್‌ಫೈರ್ R9X, ಯಾವುದೇ ಸ್ಫೋಟಕ ಪೇಲೋಡ್ ಇಲ್ಲದ ಕಾರಣ ಇಡೀ ಪ್ರದೇಶದಲ್ಲಿ ಅಶಾಂತಿ ಸೃಷ್ಟಿಸುವುದಿಲ್ಲ. ನಾಗರಿಕ ಸಾವುನೋವುಗಳನ್ನು ತಪ್ಪಿಸಲು ಅಮೆರಿಕ ಸೈನ್ಯ ಕಂಡುಕೊಂಡ ಆಯುಧವಿದು.

R9X ಮೊದಲ ಬಾರಿಗೆ ಮಾರ್ಚ್ 2017ರಲ್ಲಿ ಕಾಣಿಸಿಕೊಂಡಿತು, ಅಲ್‌ಖೈದಾ ಹಿರಿಯ ನಾಯಕ ಅಬು ಅಲ್-ಖೈರ್ ಅಲ್-ಮಸ್ರಿ ಸಿರಿಯಾದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆತನ ಮೇಲೆ ಡ್ರೋನ್ ದಾಳಿ ನಡೆಸಿ ಕೊಂದು ಹಾಕಿತು. ಆದರೆ ಇದರ ಹೊಣೆಯನ್ನು ಅಮೆರಿಕದ ಮಿಲಿಟರಿ ಪೆಂಟಗನ್ ಅಥವಾ ಗುಪ್ತಚರ ಸಂಸ್ಥೆ CIA ಸಾರ್ವಜನಿಕವಾಗಿ ಒಪ್ಪಿಕೊಳ್ಳಲಿಲ್ಲ.

ನಂತರ, ಅಮೆರಿಕ ಪಡೆಗಳು 2020ರಲ್ಲಿ ಸಿರಿಯಾದಲ್ಲಿ ಅಲ್ ಖೈದಾದ ತರಬೇತುದಾರನನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಿದವು. ಆಗ ಇವುಗಳ ಬಳಕೆಯಾಯಿತು.

ಹೆಲ್‌ಫೈರ್ R9X ಎಂದರೇನು?

AGM-114 ಹೆಲ್‌ಫೈರ್ ಕ್ಷಿಪಣಿಗಳು ಗಾಳಿಯಿಂದ ನೆಲಕ್ಕೆ ಪ್ರಯೋಗಿಸುವಂಥವು. ಇವುಗಳು ಲೇಸರ್‌ನಿಂದ ಮಾರ್ಗದರ್ಶಿತ, ಸಬ್‌ಸಾನಿಕ್ ವೇಗದ ಕ್ಷಿಪಣಿಗಳು. ಯುದ್ಧ ಟ್ಯಾಂಕ್‌ಗಳನ್ನೂ ಇವು ಛೇದಿಸಬಲ್ಲವು. ಸಿಡಿತಲೆ, ಮಾರ್ಗದರ್ಶನ ವ್ಯವಸ್ಥೆ ಮತ್ತು ಭೌತಿಕ ವ್ಯತ್ಯಾಸಗಳನ್ನು ಅವಲಂಬಿಸಿ ಹೆಲ್‌ಫೈರ್ ಕ್ಷಿಪಣಿಯಲ್ಲಿ ಹಲವಾರು ರೂಪಾಂತರಗಳಿವೆ. ಈ ಸಾಲಿಗೆ ಇತ್ತೀಚಿನ ಮತ್ತು ವಿಶಿಷ್ಟವಾದ ಸೇರ್ಪಡೆ ಎಂದರೆ ಹೆಲ್‌ಫೈರ್ R9X. ಇದು ಪಾಪ್-ಔಟ್ ಆಗುವ ಖಡ್ಗದಂಥ ಬ್ಲೇಡ್‌ಗಳನ್ನು ಬಳಸಿಕೊಂಡು ಗುರಿಯನ್ನು ಭೇದಿಸುತ್ತದೆ. ಬಹುಶಃ ಕಳೆದ ವರ್ಷ ಇರಾನ್‌ನ ಸೈನ್ಯದ ಜನರಲ್ ಖಾಸೆಮ್ ಸೊಲೈಮಾನಿಯನ್ನು ಹತ್ಯೆ ಮಾಡಲು ಬಳಸಿದ ಕ್ಷಿಪಣಿಯೂ ಇದರ ರೂಪಾಂತರವಾಗಿರಬಹುದು.

ಇದನ್ನೂ ಓದಿ: ಅಮೆರಿಕದ ಡ್ರೋನ್‌ ದಾಳಿಗೆ ಅಲ್‌ ಖೈದಾ ನಾಯಕ ಜವಾಹಿರಿ ಹತ್ಯೆ

ವಾಲ್ ಸ್ಟ್ರೀಟ್ ಜರ್ನಲ್ ಹೇಳುವ ಪ್ರಕಾರ, ಈ ಕ್ಷಿಪಣಿಯನ್ನು ರೂಪಿಸಿದ ಸಂದರ್ಭದಲ್ಲಿ ಬರಾಕ್‌ ಒಬಾಮಾ ಆಡಳಿತ ನಾಗರಿಕ ಸಾವು ನೋವುಗಳನ್ನು ಕಡಿಮೆ ಮಾಡುವತ್ತ ಗಮನಹರಿಸಿತ್ತು. ಬೈಡೆನ್‌ಗೂ ಸ್ಫೋಟ ಬೇಕಿರಲಿಲ್ಲ. ಕ್ಷಿಪಣಿಯಲ್ಲಿ ವಿಭಿನ್ನ ರೀತಿಯ ಪೇಲೋಡ್ ಇರುತ್ತದೆ. ಆರು ಉದ್ದನೆಯ ಬ್ಲೇಡ್‌ಗಳನ್ನು ಒಳಗೆ ಹುದುಗಿಸಲಾಗಿರುತ್ತದೆ. ಕ್ಷಿಪಣಿ ಗುರಿಯನ್ನು ನಾಟುವ ಕೆಲವೇ ಸೆಕೆಂಡುಗಳ ಮೊದಲು ಅದು ಬಿಡಿಸಿಕೊಂಡು ತನ್ನ ದಾರಿಯಲ್ಲಿ ಸಿಗುವುದನ್ನೆಲ್ಲ ಚೂರುಚೂರು ಮಾಡುತ್ತದೆ. ಸಾಂಪ್ರದಾಯಿಕ ಹೆಲ್‌ಫೈರ್ ಕ್ಷಿಪಣಿಯಂತೆ ಇದು ಯಾವುದೇ ಸ್ಫೋಟದ ಗುರುತುಗಳನ್ನು ಬಿಡುವುದಿಲ್ಲ. ಸುಟ್ಟಗಾಯಗಳೂ ಇರುವುದಿಲ್ಲ.

ನಿಂಜಾ ಬಾಂಬ್ ಸುಮಾರು 45 ಕೆಜಿ ತೂಗುತ್ತದೆ. ಈ ಕ್ಷಿಪಣಿಯನ್ನು ಡ್ರೋನ್ ಹೆಲಿಕಾಪ್ಟರ್‌ಗಳು, ಜೆಟ್‌ಗಳು ಮತ್ತು ಹಮ್‌ವೀ ಟ್ಯಾಂಕ್‌ಗಳಿಂದಲೂ ಉಡಾಯಿಸಬಹುದು. 500 ಮೀಟರ್‌ಗಳಿಂದ 11 ಕಿ.ಮೀವರೆಗೆ ಎಷ್ಟು ದೂರಕ್ಕೂ ಈ ಕ್ಷಿಪಣಿಯನ್ನು ಬಳಸಬಹುದು.

ಈ ಕಾರ್ಯಾಚರಣೆಯಲ್ಲಿ ಕ್ಷಿಪಣಿಯನ್ನು ಲಾಂಚ್‌ ಮಾಡಲು ಅಮೆರಿಕ ಡ್ರೋನ್ ಅನ್ನು ಬಳಸಿತು. ಮಾಜಿ ಅಧ್ಯಕ್ಷ ಒಬಾಮಾ ಅವರ ಅಧಿಕಾರಾವಧಿಯಲ್ಲಿ ಡ್ರೋನ್ ದಾಳಿಗಳು ಹೆಚ್ಚಾದವು. ಡ್ರೋನ್‌ಗಳ ಮಿತಿಮೀರಿದ ಬಳಕೆಯಿಂದ ಟೀಕೆಗೂ ಗುರಿಯಾದದ್ದುಂಟು. ಆದರೆ ಹೆಲ್‌ಫೈರ್‌ನ ಬಳಕೆಯು ಹಾನಿಯನ್ನು ಕಡಿಮೆ ಮಾಡಿದೆ.

ಯಾವ ಡ್ರೋನ್‌ನಿಂದ ಉಡಾಯಿಸಲಾಯಿತು?

ಇವುಗಳನ್ನು MQ9 ರೀಪರ್‌ ಕ್ಷಿಪಣಿಯಿಂದ ಪರಿಣಾಮಕಾರಿಯಾಗಿ ಉಡಾಯಿಸಬಹುದು. ಇವನ್ನು ಪ್ರಿಡೇಟರ್ ಡ್ರೋನ್ಸ್ ಎಂದೂ ಕರೆಯುತ್ತಾರೆ. ಈ ಡ್ರೋನ್‌ಗಳು ತಮ್ಮ ಅಂತರ್ಗತ ಸೆನ್ಸರ್‌ಗಳು ಹಾಗೂ ರೇಡಾರ್‌ಗಳನ್ನು ಬಳಸಿಕೊಂಡು ಗುರಿಗಳನ್ನು ಪತ್ತೆ ಮಾಡುತ್ತವೆ. ಇದು ಒಮ್ಮೆ ಹಾರಿಬಿಟ್ಟರೆ 27 ಗಂಟೆಗಳಿಗೂ ಹೆಚ್ಚು ಕಾಲ ಗಾಳಿಯಲ್ಲಿರಬಲ್ಲದು. ಸುಮಾರು 1,700 ಕೆಜಿಗಳವರೆಗೆ ಪೇಲೋಡ್‌ ಹೊತ್ತು, 6,000 ನಾಟಿಕಲ್ ಮೈಲುಗಳ ವ್ಯಾಪ್ತಿಯಲ್ಲಿ, 50,000 ಅಡಿಗಳಷ್ಟು ಎತ್ತರದಲ್ಲಿ ಹಾರಬಲ್ಲದು. ಮಾರಣಾಂತಿಕ ಹೆಲ್‌ಫೈರ್ ಕ್ಷಿಪಣಿಗಳು ಮತ್ತು ಲೇಸರ್-ಮಾರ್ಗದರ್ಶಿತ ಬಾಂಬುಗಳನ್ನು ಒಯ್ಯಬಲ್ಲದು.

ಇದನ್ನೂ ಓದಿ: Al-jawahiri dead| ಕಾಬೂಲ್‌ನ ಆ ಮನೆಯ ಬಾಲ್ಕನಿಗೇ ಬಡಿದಿತ್ತು ಮಿಸೈಲ್‌, ಹೆಣವಾಗಿ ಬಿದ್ದಿದ್ದ ಜವಾಹಿರಿ

ಭಾರತಕ್ಕೂ ಬೇಕಿದೆ

ಎರಡು ಅಪಾಯಕಾರಿ ದೇಶಗಳ ಜತೆ ಗಡಿ ಹಂಚಿಕೊಂಡಿರುವ ಭಾರತಕ್ಕೂ ಇಂಥ ಕ್ಷಿಪಣಿ ಹಾಗೂ ಡ್ರೋನ್‌ಗಳು ಅಗತ್ಯವಾಗಿ ಬೇಕಿವೆ. ಸಶಸ್ತ್ರ ಡ್ರೋನ್‌ಗಳನ್ನು ಪಡೆಯಲು ಭಾರತವೂ ಆಸಕ್ತಿ ತೋರಿಸಿದೆ.

ಯುಎಸ್ ಕಂಪನಿ ಜನರಲ್ ಅಟಾಮಿಕ್ಸ್ ತಯಾರಿಸಿದ 30 ಸಶಸ್ತ್ರ ಡ್ರೋನ್‌ಗಳ ಖರೀದಿಗೆ $ 3 ಬಿಲಿಯ ಒಪ್ಪಂದ ನಡೆಯುತ್ತಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ತಲಾ 10 ಯುದ್ಧ ಡ್ರೋನ್‌ಗಳನ್ನು ಪಡೆಯಲು ಚಿಂತಿಸಲಾಗಿದೆ.

ಈ ಡ್ರೋನ್‌ಗಳು ಬಾಂಬ್‌ಗಳನ್ನು ಬೀಳಿಸಬಲ್ಲವು, ಕ್ಷಿಪಣಿಗಳನ್ನು ಹಾರಿಸಬಲ್ಲವು, ಅಥವಾ ಸಶಸ್ತ್ರ UAV ಅನ್ನು ಅಪ್ಪಳಿಸಿ ಧ್ವಂಸಗೊಳಿಸಬಲ್ಲವು. ಡ್ರೋನನ್ನು ಅಡಗಿಸುವ ಅಂತರ್ಗತ ವೈಶಿಷ್ಟ್ಯಗಳು ಇವುಗಳನ್ನು ವೈರಿ ರೇಡಾರ್‌ಗಳು ಪತ್ತೆ ಹಚ್ಚದಂತೆ ಮಾಡುತ್ತವೆ. ಜನನಿಬಿಡ ಪ್ರದೇಶದಲ್ಲೂ ಒಳಗೊಳಗೇ ನುಗ್ಗಿ ಇವು ಹೊಡೆಯಬಲ್ಲವು.

ಯುಎಸ್ ಪಡೆಗಳು ಕಡಿಮೆ ಸಾವುನೋವು ಖಚಿತಪಡಿಸಿಕೊಳ್ಳಲು ಡ್ರೋನ್ ಯುದ್ಧತಂತ್ರವನ್ನು ಅಳವಡಿಸಿಕೊಂಡಿವೆ. ತೀರಾ ಇತ್ತೀಚೆಗೆ, ಅರ್ಮೇನಿಯಾ ವಿರುದ್ಧ ಅಜೆರ್ಬೈಜಾನ್‌ ಸಶಸ್ತ್ರ ಡ್ರೋನ್‌ಗಳನ್ನು ಬಳಸಿತು. ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್ ಇದನ್ನು ವ್ಯಾಪಕವಾಗಿ ಬಳಸಿತು.

ಒಸಾಮಾ ಬಿನ್ ಲಾಡೆನ್‌ನ ಹತ್ಯೆಯ ನಂತರ ಅಲ್ ಖೈದಾ ನಾಯಕತ್ವ ವಹಿಸಿಕೊಂಡ ಈಜಿಪ್ಟ್ ಮೂಲದ ಶಸ್ತ್ರಚಿಕಿತ್ಸಕ ಅಲ್ ಜವಾಹಿರಿ ಕ್ಷಿಪಣಿಗೆ ತುತ್ತಾಗುವಾಗ ಆತನಿಗೆ 71 ವರ್ಷವಾಗಿತ್ತು. ಅವನ ತಲೆಯ ಮೇಲೆ $25 ಮಿಲಿಯನ್ ತಲೆದಂಡವಿತ್ತು.

Exit mobile version