ಲಂಡನ್: ದೀರ್ಘಕಾಲ ರಾಜ್ಯಾಡಳಿತ ನಡೆಸಿದ ಎರಡನೇ ಕ್ವೀನ್ ಎಲಿಜಬೆತ್ (Queen Elizabeth Death) ಅವರು ಸ್ಕಾಟ್ಲೆಂಡ್‌ನ ಬಾಲ್ಮೋರ್ ಹೈಲ್ಯಾಂಡ್ಸ್ ರೆಸಿಡೆನ್ಸಿಯಲ್ಲಿ ಮೃತಪಟ್ಟಿದ್ದಾರೆ. ರಾಣಿ ಅವರು ಕೊನೆಯುಸಿರೆಳೆದ ಸ್ಥಳದಿಂದಾಗಿ, ನಿಧನದ ನಂತರ ಕೈಗೊಳ್ಳಬೇಕಾದ ಕೆಲವು ಪದ್ಧತಿಗಳ ಸಂಬಂಧ ಗೊಂದಲ ಏರ್ಪಟ್ಟಿದೆ. ಒಂದು ವೇಳೆ, ಕ್ವೀನ್ ಎಲಿಜಬೆತ್ ಅವರೇನಾದರೂ ಲಂಡನ್‌ನ ಬಕಿಂಗ್‌ಹ್ಯಾಮ್ ಪ್ಯಾಲೇಸಿನಲ್ಲಿ ಮೃತಪಟ್ಟಿದ್ದರೆ, ಈ ಸಂಕೀರ್ಣತೆ ಸೃಷ್ಟಿಯಾಗುತ್ತಿರಲಿಲ್ಲ. ಹಾಗಾಗಿ, ಬ್ರಿಟಷ್ ಆಡಳಿತವು ಸ್ಕಾಟ್ಲೆಂಡ್‌ನಿಂದ ರಾಣಿಯ ಪಾರ್ಥಿವ್ ಶರೀರವನ್ನು ಲಂಡನ್‌ಗೆ ತಂದು, ಅಂತಿಮ ಸಂಸ್ಕಾರ ಪೂರೈಸುವ ಕಾರ್ಯಕ್ಕೆ ಆಪರೇಷನ್ ಯೂನಿಕಾರ್ನ್ (Operation Unicorn) ಎಂದು ಹೆಸರಿಟ್ಟಿದೆ.
ಲಂಡನ್‍ನಲ್ಲಿ ಕ್ವೀನ್ ಎಲಿಜಬೆತ್ ಮೃತಪಟ್ಟಿದ್ದರೆ, ಬಕಿಂಗ್‌ಹ್ಯಾಮ್ ಪ್ಯಾಲೇಸ್ ಅವರ ಶವಸಂಸ್ಕಾರಕ್ಕೆ ಸಂಬಂಧಿಸಿದಂತೆ ಲಂಡನ್ ಬ್ರಿಡ್ಜ್(London Bridge) ಹೆಸರಿನಲ್ಲಿ ಪ್ಲ್ಯಾನ್ ರೆಡಿ ಮಾಡಿಕೊಂಡಿತ್ತು. ಆದರೆ, ರಾಣಿಯು ಸ್ಕಾಟ್ಲೆಂಡ್‌ನಲ್ಲಿಸತ್ತಿರುವುದರಿಂದ ಬೇರೆಯ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಒಟ್ಟು ಕಾರ್ಯಕ್ಕೆ ಅಲ್ಲಿನ ಆಡಳಿತವು ಆಪರೇಷನ್ ಯೂನಿಕಾರ್ನ್ ಕೈಗೊಳ್ಳುತ್ತಿದೆ.
ಯೂನಿಕಾರ್ನ್ ಸ್ಕಾಟ್ಲೆಂಡ್‌ನ ರಾಷ್ಟ್ರೀಯ ಪ್ರಾಣಿ. ಜತೆಗೆ ಇಂಗ್ಲೆಂಡ್‌ನ ಸಿಂಹದ ಜತೆಗೆ ರಾಯಲ್ ಕೋಟ್ ಆರ್ಮ್ಸ್‌ನ ಭಾಗವೂ ಆಗಿದೆ. ಹಾಗಾಗಿ, ಆಪರೇಷನ್ ಯೂನಿಕಾರ್ನ್ ಎಂದು ಹೆಸರಿಡಲಾಗಿದೆ. ಕ್ವೀನ್ ಎಲಿಜಬೆತ್ ನಿಧನಹೊಂದಿ ದಿನವನ್ನು ಡಿ ಡೇ ಎಂದು ಕರೆಯಲಾಗುತ್ತದೆ. ಆ ನಂತರ ಪ್ರತಿ ದಿನಗಳನ್ನು ಡಿ ಪ್ಲಸ್ 1, ಡಿ ಪ್ಲಸ್ 2 ಹೀಗೆ ಕರೆಯುತ್ತಾ ಹೋಗಲಾಗುತ್ತದೆ ಎನ್ನಲಾಗುತ್ತಿದೆ.
ಆಪರೇಷನ್ ಯೂನಿಕಾರ್ನ್ ಪ್ರಕಾರ, ರಾಣಿ ಮೃತಪಟ್ಟ ಮೊದಲ ವಾರದಲ್ಲಿ ಅವರ ಪಾರ್ಥಿವ ಶರೀರವನ್ನು ಸ್ಕಾಟ್ಲೆಂಡ್‌ನಿಂದ ಬಕಿಂಗ್‌ಹ್ಯಾಮ್ ಪ್ಯಾಲೇಸ್‌ಗೆ ತರಲಾಗುತ್ತದೆ. ಇದಕ್ಕೂ ಮೊದಲು ಅವರ ಪಾರ್ಥಿವ ಶರೀರವನ್ನು ಬಾಲ್ಮೋರ್‌ದಿಂದ ಹೋಲಿರೂಡ್‌ಹೌಸ್‌ಗೆ ಶಿಫ್ಟ್ ಮಾಡಲಾಗುತ್ತದೆ. ಈ ಹೌಸ್, ಸ್ಕಾಟ್ಲೆಂಡ್‌ನ ರಾಜಧಾನಿ ಎಡಿನ್‌ಬರ್ಗ್‌ನಲ್ಲಿದೆ. ಇಲ್ಲಿ ಕೆಲ ಕಾಲದವರೆಗೆ ಪಾರ್ಥಿವ ಶರೀರವನ್ನು ಇಡಲಾಗುತ್ತದೆ. ಆ ಬಳಿಕ, ರಿಸಪ್ಷನ್ ಸರ್ವೀಸ್‌ಗಾಗಿ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ರಾಯಲ್ ಮೈಲ್‌ಗೆ ತರಲಾಗುತ್ತದೆ.
ಇಷ್ಟಾದ ಮೇಲೆ, ಕ್ವೀನ್ ಎಲಿಜಬೆತ್ ಅವರ ಪಾರ್ಥಿವ ಶರೀರವನ್ನು ಎಡಿನ್‌ಬರ್ಗ್ ಸಿಟಿಯ ವೇವರ್ಲೀ ಸ್ಟೇಷನ್‌ನಿಂದ ರಾಯಲ್ ಟ್ರೈನ್ ಮೂಲಕ ಲಂಡನ್‌ಗೆ ಕೊಂಡ್ಯೊಯಲಾಗುತ್ತದೆ. ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ನೂತನ ಪ್ರಧಾನಿ ಲಿಜ್ ಟ್ರಸ್ ಅವರು ರಾಣಿಯ ಶವಪೆಟ್ಟಿಗೆಯನ್ನು ಬರಮಾಡಿಕೊಳ್ಳುತ್ತಾರೆ. ಅಲ್ಲಿಂದ ಬಕಿಂಗ್‌ಹ್ಯಾಮ್ ಪ್ಯಾಲೇಸ್‌ಗೆ ತೆಗೆದುಕೊಂಡು ಹೋಗಲಾಗುತ್ತದೆ.
ಹತ್ತನೇ ದಿನದಂದು ವೆಸ್ಟ್‌ಮಿನಿಸ್ಟರ್ ಆ್ಯಬಿಯಲ್ಲಿ ಸರ್ಕಾರಿ ಶವಸಂಸ್ಕಾರದ ಕ್ರಿಯಾವಿಧಿಗಳನ್ನು ನೆರವೇರಿಸಲಾಗುತ್ತದೆ. ಆ ಬಳಿಕ, ವಿಂಡ್ಸರ್ ಕ್ಯಾಸಲ್‌ನ ನಾಲ್ವಡಿ ಕಿಂಗ್ ಜಾರ್ಜ್ ಮೆಮೋರಿಯಲ್ ಚಾಪೆಲ್‌ನಲ್ಲಿ ಕ್ವೀನ್ ಎಲಿಜಬೆತ್ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಗುತ್ತದೆ.
ಒಂದು ವೇಳೆ, ಕ್ವೀನ್ ಎಲಿಜಬೆತ್ ಅವರೇನಾದರೂ ಬಕಿಂಗ್ ಹ್ಯಾಮ್ ಪ್ಯಾಲೇಸಿನಲ್ಲಿ ಮೃತಪಟ್ಟಿದ್ದರೆ. ಆಪರೇಷನ್ ಲಂಡನ್ ಬ್ರಿಡ್ಜ್ ನಡೆಸಲಾಗುತ್ತಿತ್ತು. ಆಗ, ಆಪರೇಷನ್ ಲಂಡನ್ ಬ್ರಿಡ್ಜ್ ಕಾರ್ಯಾಚರಣೆಯಲ್ಲಿ ರಾಣಿಯ ಆಪ್ತ ಕಾರ್ಯದರ್ಶಿಯು ಪ್ರಧಾನ ಮಂತ್ರಿಯನ್ನು ಕರೆದು, ಶಿಷ್ಟಾಚಾರದ ಅನುಸಾರ ಲಂಡನ ಬ್ರಿಡ್ಜ್ ಈಸ್ ಡೌನ್(London Bridge is down) ಎಂದು ಹೇಳುತ್ತಿದ್ದರು. ಆ ಬಳಿಕ ಪ್ರಧಾನಿಗಳು ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸುತ್ತಿದ್ದರು. ಕಾಮನ್ವೆಲ್ತ್‌ನ 30 ಸದಸ್ಯ ರಾಷ್ಟ್ರಗಳಿಗೆ ಮತ್ತು ರಾಣಿ ಮುಖ್ಯಸ್ಥರಾಗಿರುವ 15 ಸರ್ಕಾರಗಳಿಗೆ ಈ ಮಾಹಿತಿಯನ್ನು ರವಾನಿಸಲಾಗುತ್ತಿತ್ತು. ಆ ನಂತರ ಅಂತಿಮ ವಿಧಾನಗಳನ್ನು ಕೈಗೊಳ್ಳಲಾಗುತ್ತಿತ್ತು.
ಇದನ್ನೂ ಓದಿ | Queen Elizabeth | ಪ್ರಗತಿಶೀಲ, ಪ್ರಯೋಗಶೀಲ ವ್ಯಕ್ತಿತ್ವದ ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್