ಅಮೆರಿಕ ವೈಟ್ಹೌಸ್ (ಶ್ವೇತ ಭವನ)ನ ಮಾಧ್ಯಮ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಅವರು ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ, ಯುಎಸ್ ಅಧ್ಯಕ್ಷ ಜೋ ಬೈಡೆನ್ ಎಂದು ಹೇಳುವ ಬದಲು ಅಧ್ಯಕ್ಷ ಒಬಾಮಾ ಎಂದಿದ್ದಾರೆ. ಕರೀನ್ ಜೀನ್ ಪಿಯರ್ ಅವರು ಬಾಯ್ತಪ್ಪಿನಿಂದ ‘ಅಧ್ಯಕ್ಷ ಒಬಾಮಾ’ ಎಂದು ಹೇಳಿರುವ ವಿಡಿಯೊ ಕೂಡ ಎಲ್ಲೆಡೆ ವೈರಲ್ ಆಗುತ್ತಿದೆ.
ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುವುದಾಗಿ ಡೇವಿಡ್ ಮಾಲ್ಪಾಸ್ ಅವರು ಘೋಷಣೆ ಮಾಡಿದ ಬೆನ್ನಲ್ಲೇ, ಆ ಸ್ಥಾನಕ್ಕೆ ಭಾರತ ಮೂಲದ, ಮಾಸ್ಟರ್ಕಾರ್ಡ್ ಕಂಪನಿಯ ಅಜಯ್ ಬಾಂಗಾ ಹೆಸರನ್ನು ಯುಎಸ್ ಅಧ್ಯಕ್ಷ ಜೋ ಬೈಡೆನ್ ನಾಮ ನಿರ್ದೇಶನ ಮಾಡಿದ್ದಾರೆ. ಇದೇ ವಿಷಯವನ್ನು ಮಾಧ್ಯಮಗಳ ಎದುರು ಪ್ರಸ್ತುತ ಪಡಿಸಲು ಕರೀನ್ ಜೀನ್ ಪಿಯರ್ ಸುದ್ದಿಗೋಷ್ಠಿ ಕರೆದಿದ್ದರು. ಆದರೆ ಅದರಲ್ಲಿ ಮಾತನಾಡುವಾಗ ಬಾಯ್ತಪ್ಪಿ ‘ಅಧ್ಯಕ್ಷ ಒಬಾಮಾ’ ಎಂದಿದ್ದಾರೆ. ತಕ್ಷಣವೇ ಸರಿಪಡಿಸಿಕೊಂಡು ‘ಕ್ಷಮಿಸಿ, ಅಧ್ಯಕ್ಷ ಬೈಡೆನ್’ ಎಂದು ಹೇಳಿದ್ದಾರೆ.
ವಿಶ್ವಬ್ಯಾಂಕ್ಗೆ ಇಷ್ಟು ದಿನ ಅಧ್ಯಕ್ಷರಾಗಿದ್ದ ಡೇವಿಡ್ ಮಾಲ್ಪಾಸ್ ಅವರು ಡೊನಾಲ್ಡ್ ಟ್ರಂಪ್ರಿಂದ ನೇಮಕಗೊಂಡವರು. 2024ರ ಏಪ್ರಿಲ್ನಲ್ಲಿ ಅವರ ಅಧಿಕಾರ ಅವಧಿ ಮುಗಿಯುವುದಿತ್ತು. ಆದರೆ ಜೂನ್ನಲ್ಲಿ ತಾವು ಅಧಿಕಾರ ತ್ಯಜಿಸುವುದಾಗಿ ಹೇಳಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಅಜಯ್ ಬಾಂಗಾ ಹೆಸರನ್ನು ಅಮೆರಿಕ ಅಧ್ಯಕ್ಷರು ನಾಮನಿರ್ದೇಶನ ಮಾಡಿದ್ದಾರೆ. ಸದ್ಯ ಅವರು ಜನರಲ್ ಅಟ್ಲಾಂಟಿಕ್ ಎಂಬ ಖಾಸಗಿ ಕಂಪನಿಯ ಉಪಾಧ್ಯಕ್ಷರಾಗಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ 30ವರ್ಷಗಳ ಅನುಭವ ಅವರದ್ದು. ಹಾಗೇ, ಇದೀಗ ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಮೂಲದ ವ್ಯಕ್ತಿಯೂ ಆಗಿದ್ದಾರೆ.
ಕರೀನ್ ಜೀನ್-ಪಿಯರ್ ವಿಡಿಯೊ:
ಹೀಗೆ ಯುಎಸ್ ಅಧ್ಯಕ್ಷರು ಯಾವುದೇ ಹೊಸ ಘೋಷಣೆ ಮಾಡಿದಾಗಲೂ, ವೈಟ್ ಹೌಸ್ನ ಮಾಧ್ಯಮ ಕಾರ್ಯದರ್ಶಿ ಸುದ್ದಿಗೋಷ್ಠಿ ಕರೆದು ಅದನ್ನು ತಿಳಿಸುತ್ತಾರೆ. ಅಂತೆಯೇ ಕರೀನ್ ಜೀನ್-ಪಿಯರ್ ಈ ವಿಷಯವನ್ನೂ ಪ್ರಕಟಿಸಿದರು. ಮಧ್ಯೆ ಒಂದು ಸಣ್ಣ ಎಡವಟ್ಟು ಮಾಡಿಕೊಂಡರು. ಅಂದಹಾಗೇ, ಈ ಪಿಯರ್ ಅವರು ಸುದೀರ್ಘ ಕಾಲದಿಂದಲೂ ಬೈಡೆನ್ಗೆ ಸಲಹೆಗಾರರಾಗಿದ್ದಾರೆ. ಬರಾಕ್ ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದಾಗ ಜೋ ಬೈಡೆನ್ ಉಪಾಧ್ಯಕ್ಷರಾಗಿದ್ದರು. ಆಗಲೂ ಇದೇ ಜೀನ್ ಪಿಯರ್ ಬೈಡೆನ್ಗೆ ಸಲಹೆಗಾರರಾಗಿದ್ದರು. 2022ರ ಮೇ ತಿಂಗಳಿಂದ ವೈಟ್ ಹೌಸ್ ಮಾಧ್ಯಮ ಕಾರ್ಯದರ್ಶಿಯಾಗಿದ್ದಾರೆ.