ಮಲ್ಲಿಕಾರ್ಜುನ ತಿಪ್ಪಾರ
ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರ ಬ್ರಿಟನ್‌ಗೆ ಹೊಸ ಸಾರಥಿ ಯಾರೆಂಬುದು ಸೋಮವಾರ ಸಾಯಂಕಾಲದ ಹೊತ್ತಿಗೆ ಗೊತ್ತಾಗಲಿದೆ. ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಾಯಕರನ್ನು ಆಯ್ಕೆ ಮಾಡುವ ಕನ್ಸರ್ವೇಟಿವ್ ಪಕ್ಷದ ಪ್ರಕ್ರಿಯೆಗಳು ಅಂತಿಮ ಘಟ್ಟಕ್ಕೆ ಬಂದಿವೆ. ಮಾಜಿ ವಿದೇಶಾಂಗ ಸಚಿವೆ ಲಿಜ್ ಟ್ರಸ್ (Liz Truss) ಮತ್ತು ಮಾಜಿ ವಿತ್ತ ಸಚಿವ, ಭಾರತೀಯ ಮೂಲದ ರಿಷಿ ಸುನಕ್ (Rishi Sunak) ನಡುವೆ ಒಬ್ಬರು ಬ್ರಿಟನ್ ಪ್ರಧಾನಿ (Britain PM) ಆಗಲಿದ್ದಾರೆ. ಆದರೆ, ಶುಕ್ರವಾರ ಮುಕ್ತಾಯವಾದ ಅಂತಿಮ ಸುತ್ತಿನ ಮತದಾನದಲ್ಲಿ ಲಿಜ್ ಟ್ರಸ್ ಅವರು ಬಹುತೇಕ ಜಯಶಾಲಿ ಆಗಿ ಹೊರ ಹೊಮ್ಮಿದ್ದಾರೆ ಎನ್ನುತ್ತಿವೆ ವರದಿಗಳು. ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಅಲ್ಲಿಗೆ, ಬ್ರಿಟನ್ ಮತ್ತೊಬ್ಬ ಮಹಿಳಾ ಪ್ರಧಾನಿಯನ್ನು ಕಾಣಲಿದೆ!
ಇದರ ಮಧ್ಯೆಯೇ, ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಏನೆಂದರೆ – ಮೊದಲಿನಿಂದಲೂ ಪಿಎಂ ರೇಸಿನಲ್ಲಿ ಮುಂದಿದ್ದ ರಿಷಿ ಸುನಕ್ ಇದ್ದಕ್ಕಿದ್ದಂತೆ ಹಿಂದೆ ಬಿದ್ದಿದ್ದೇಕೆ?
ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವನ್ನು ರಾಜಕೀಯ ಪಂಡಿತರು ಮಾಡುತ್ತಿದ್ದಾರೆ. ಹಾಗೆ ನೋಡಿದರೆ, ಆರಂಭದ ಸುತ್ತುಗಳಲ್ಲಿ ಲಿಜ್ ಸೇರಿದಂತೆ 10 ಸ್ಪರ್ಧಾಳುಗಳಿಗಿಂತಲೂ ರಿಷಿ ಅವರು ಬಹಳ ಮುಂದಿದ್ದರು ಮತ್ತು ಬಹುತೇಕರು ಅವರೇ ಮುಂದಿನ ಪ್ರಧಾನಿ ಎಂದು ಭಾವಿಸಿದ್ದರು. ಈಗ ಎಲ್ಲ ಲೆಕ್ಕಾಚಾರಗಳು ತಲೆ ಕೆಳಗಾಗಿವೆ! ರಿಷಿ ಸುನಕ್ ಅವರ ಹಿನ್ನಡೆ ಅಥವಾ ವೈಫಲ್ಯಕ್ಕೆ ಸಾಕಷ್ಟು ಕಾರಣಗಳನ್ನು ಕೊಡಲಾಗುತ್ತಿದೆ. ಯಾವ ಕಾರಣ, ಯಾವ ರೀತಿಯಲ್ಲಿ ತನ್ನ ಪರಿಣಾಮ ಬೀರಿದೆ ಎಂಬುದನ್ನು ಊಹಿಸುವುದು ಕಷ್ಟ.
- ಜನಪ್ರಿಯತೆ ಕುಸಿಯಿತೇ?
ಇನ್ಫೋಸಿಸ್ ಎಂಬ ಬಹುರಾಷ್ಟ್ರೀಯ ಐಟಿ ಕಂಪನಿಯನ್ನು ಕಟ್ಟಿ ಬೆಳೆಸಿದ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್, ಬ್ರಿಟನ್‌ನ ಸಂಸತ್ತಿನಲ್ಲಿ ರಿಚ್ಮಂಡ್ (ಯಾರ್ಕ್ಸ್) ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಬೋರಿಸ್ ಜಾನ್ಸನ್ ಸಂಪುಟದಲ್ಲಿ ವಿತ್ತ ಖಾತೆಯನ್ನು ನಿಭಾಯಿಸಿ ಸಾಕಷ್ಟು ಅನುಭವ ಗಳಿಸಿಕೊಂಡಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲಿ ತೋರಿದ ಆರ್ಥಿಕ ಜಾಣ್ಮೆ ಅವರಿಗೆ ಹೆಚ್ಚು ಮನ್ನಣೆ ತಂದುಕೊಟ್ಟಿದೆ. ಪಿಎಂ ಆಯ್ಕೆ ಸಂಬಂಧ ಬ್ರಿಟನ್‌ನಲ್ಲಿ ಅವರು ಜನಪ್ರಿಯತೆಯಲ್ಲಿ ತೀರಾ ಹಿಂದೆ ಬಿದ್ದಿಲ್ಲ. ಸಮೀಪದ ಎದುರಾಳಿಗಿಂತ 8ರಿಂದ 5 ಪಾಯಿಂಟುಗಳಷ್ಟೇ ಹಿಂದಿದ್ದಾರೆ. ಲಿಜ್ ಟ್ರಸ್ ಅವರ ಜನಪ್ರಿಯತೆ 92ರಿಂದ 95ರಷ್ಟಿದೆ. ಆದರೆ, ಕೆಲವು ವಾರಗಳ ಹಿಂದೆಯಷ್ಟೇ ರಿಷಿ ಸುನಕ್ ಅವರ ಹತ್ತಿರಕ್ಕೂ ಬರಲು ಲಿಜ್ ಅವರಿಗೆ ಸಾಧ್ಯವಾಗಿರಲಿಲ್ಲ ಎಂದರೆ ನಂಬಲೇಬೇಕು. ಅಂತಿಮ ಸುತ್ತು ಹತ್ತಿರವಾಗುತ್ತಿದ್ದಂತೆ ಎಲ್ಲವೂ ಬದಲಾಗಿ ಹೋಗಿದೆ. - ಕಣ್ಣುಕುಕ್ಕುವ ಸಂಪತ್ತು ಮುಳುವಾಯಿತೇ?
ಖಂಡಿತವಾಗಿಯೂ ರಿಷಿ ಸುನಕ್ ಮತ್ತು ಅಕ್ಷಿತಾ ಮೂರ್ತಿ ಬ್ರಿಟನ್‌ನ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿದ್ದಾರೆ. ಇನ್‌ಫ್ಯಾಕ್ಟ್, ಸುನಕ್ ಮತ್ತು ಅಕ್ಷಿತಾ ಮೂರ್ತಿ ಅವರು ಬ್ರಿಟನ್‌ನ ಕ್ವೀನ್ ಎಲಿಜಬೆತ್‌ಗಿಂತಲೂ ಶ್ರೀಮಂತರಂತೆ! ಸಾಮಾನ್ಯ ಜನರು ಎದುರಿಸುತ್ತಿರುವ ಆರ್ಥಿಕ ಸಂಕಟಗಳಿಗೆ ಆಗರ್ಭ ಶ್ರೀಮಂತ ಸುನಕ್ ಅವರು ಹೇಗೆ ಕಿವಿಯಾದಾರು ಎಂಬ ಅನುಮಾನಗಳು ಪ್ರಚಾರದ ವೇಳೆ ಮೂಡಿದವು. ಅಥವಾ ಮೂಡುವಂತೆ ಮಾಡಲಾಯಿತು! ಬ್ರಿಟನ್‌ನಲ್ಲಿ ಸದ್ಯಕ್ಕೆ ಜೀವನಮಟ್ಟ ಸಿಕ್ಕಾಪಟ್ಟೆ ಕಾಸ್ಟ್ಲೀ ಆಗಿದೆ. ಇದು ಕೂಡ ಅಲ್ಲೀಗ ಆತಂಕದ ಸಂಗತಿಯಾಗಿದೆ. ಈ ಸಮಸ್ಯೆಯನ್ನು ರಿಷಿ ಸುನಕ್ ಅವರು ಬಗೆ ಹರಿಸುವ ಬಗ್ಗೆ ಟೋರಿ(ಕನ್ಸರ್ವೇಟಿವ್ ಸಂಸದರು)ಗಳಿಗೆ ವಿಶ್ವಾಸ ಮೂಡಲಿಲ್ಲ! ವಿಪರ್ಯಾಸ ನೋಡಿ, ಯಾರಿಗೆ ಸುನಕ್ ಅವರ ಸಂಪತ್ತು ಅಡ್ಡಿಯಾಗಿದೆಯೋ, ಅವರಿಗೆ ಲಿಜ್ ಟ್ರಸ್ ಅವರ ಶ್ರೀಮಂತಿಕೆ ಯಾವುದೇ ತೊಂದರೆ ಕೊಟ್ಟಿಲ್ಲ! ಟೋರಿ ಪಕ್ಷದ ಡೇವಿಡ್ ಕ್ಯಾಮೆರೂನ್ ಅವರಿಂದ ಹಿಡಿದು, ಲಿಜ್ ಟ್ರಸ್ ಮತ್ತು ಹೊರ ಹೋಗುತ್ತಿರುವ ಬೋರಿಸ್ ಜಾನ್ಸನ್ ಅವರ ವರೆಗೂ ಎಲ್ಲರೂ ಶ್ರೀಮಂತರೇ; ಎಲ್ಲರೂ ಕೋಟ್ಯಧೀಶರು. ಸಾರ್ವತ್ರಿಕ ಚುನಾವಣೆ ಬಳಿಕ ಮುಂದಿನ ಪ್ರಧಾನಿ ಎಂದೇ ಬಿಂಬಿತರಾಗಿರುವ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಕೀರ್ ಸ್ಟಾರ್ಮರ್ ಕೂಡ ಆಗರ್ಭ ಶ್ರೀಮಂತ! ಇಷ್ಟಾಗಿಯೂ, ಸುನಕ್ ಅವರ ಶ್ರೀಮಂತಿಕೆಯೇ ಸೋಲಿಗೆ ಕಾರಣವಾಗುತ್ತಿದೆ ಎಂದರೆ ನಂಬುವುದು ಹೇಗೆ? - ಚಹಾ ಕಪ್‌ನಲ್ಲಿ ಬಿರುಗಾಳಿ!
ಸುನಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಮನೆಗೆ ಆಗಮಿಸಿದ್ದ ಪತ್ರಕರ್ತರಿಗೆ, ಪತ್ನಿ ಅಕ್ಷಿತಾ ಮೂರ್ತಿ ಅವರು ದುಬಾರಿ ಬೆಲೆಯ ಕಪ್‌ಗಳಲ್ಲಿ ಚಹಾ ನೀಡಿದ್ದು ಆಗ ಭಾರಿ ಸುದ್ದಿಯಾಗಿತ್ತು. ಮತ್ತೊಂದೆಡೆ, ಈ ಹಿಂದೆ ಸುನಕ್, ತನಗೆ ಮಧ್ಯಮ ವರ್ಗದ ಫ್ರೆಂಡ್ಸ್ ಇಲ್ಲ ಎಂದು ಹೇಳಿದ ವಿಡಿಯೊ ಕೂಡ ಮತ್ತೆ ಮುನ್ನೆಲೆಗೆ ಬಂದಿದ್ದು, ಅವರ ಹಿನ್ನಡೆಗೆ ಕಾರಣವಾಯಿತಾ? ಈ ಬಗ್ಗೆ ಸ್ಪಷ್ಟವಾಗಿ ಉತ್ತರವಿಲ್ಲ. - ರಾಜೀನಾಮೆ ನೀಡಿದ್ದೇ ತಪ್ಪಾಯಿತೇ?
ಹಾಗೆ ನೋಡಿದರೆ, ಬೋರಿಸ್ ಜಾನ್ಸನ್ ಅವರ ನೇತೃತ್ವದ ಸರ್ಕಾರದ ಪತನಕ್ಕೆ ಅಂತಿಮ ಮೊಳೆ ಹೊಡೆದಿದ್ದು ರಿಷಿ ಸುನಕ್ ಹಾಗೂ ಪಾಕಿಸ್ತಾನ ಮೂಲದ ಸಾಜಿದ್ ಜಾವಿದ್ ಅವರು. ಜಾನ್ಸನ್ ಸಂಪುಟದಲ್ಲಿ ಈ ಇಬ್ಬರು ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಪ್ರಧಾನಿ ಬೋರಿಸ್ ಜಾನ್ಸನ್ ಅವರು ಹಗರಣಗಳಲ್ಲಿ ಮುಳುಗುತ್ತಿದ್ದಂತೆ, ಗೊತ್ತಿದ್ದೂ ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದನ್ನು ವಿರೋಧಿಸಿ, ಇವರಿಬ್ಬರು ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಇವರನ್ನು ಅನುಸರಿಸಿ ಸುಮಾರು 50 ಸಂಸದರು ರಾಜೀನಾಮೆಗೆ ಮುಂದಾದರು. ಇದರಿಂದಾಗಿ ಬೋರಿಸ್ ಜಾನ್ಸನ್ ಪಿಎಂ ಹುದ್ದೆಗೆ ರಾಜೀನಾಮೆ ನೀಡುವ ಒತ್ತಡ ಸೃಷ್ಟಿಯಾಯಿತು. ರಿಷಿ ಅವರು ಜಾನ್ಸನ್ ಬೆನ್ನಿಗಿರಿದರು ಎಂಬ ಭಾವನೆ ಸಾಮಾನ್ಯ ಜನರಲ್ಲೂ ದಟ್ಟವಾಗಿತ್ತು. ಇಂದಿನ ರಾಜಕೀಯ ಅಸ್ಥಿರತೆಗೆ ರಿಷಿ ನೇರವಾಗಿ ಕಾರಣವಾಗಿದ್ದಾರೆಂಬ ಅಸಮಾಧಾನವು ಕನ್ಸರ್ವೇಟಿವ್ ಪಕ್ಷದ ಸದಸ್ಯರಲ್ಲೂ ಇದೆ. ಈ ಅಸಮಾಧಾನವೇ ಸುನಕ್ ಅವರು ಪ್ರಧಾನಿ ಹುದ್ದೆಗೇರುವ ಕನಸಿಗೆ ಅಡ್ಡಿಯಾಯಿತು ಎಂಬ ವಿಶ್ಲೇಷಣೆಯಲ್ಲಿ ಹುರುಳಿಲ್ಲದಿಲ್ಲ. ಬೋರಿಸ್ ಜಾನ್ಸನ್ ಕೂಡ, ಬಹಿರಂಗವಾಗಿಯೇ ರಿಷಿ ಅವರಿಗೆ ತಮ್ಮ ಬೆಂಬಲ ಇಲ್ಲ ಎಂದು ಹೇಳಿದ್ದರು. ಈ ಹೇಳಿಕೆ ಕೂಡ ಪರಿಣಾಮ ಬೀರಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. - ಆರ್ಥಿಕ ಸುಧಾರಣೆಗಳು
ಆರ್ಥಿಕ ಸುಧಾರಣೆಗೆ ಸಂಬಂಧಿಸಿದಂತೆ ರಿಷಿ ಸುನಕ್ ಅವರು ಮಂಡಿಸಿದ ಅಥವಾ ನೀಡಿದ ಭರವಸೆಗಳು ಪ್ರಾಮಾಣಿಕ ಮತ್ತು ನಿಷ್ಠುರವಾಗಿದ್ದವು. ಬಹುಶಃ ಅವರ ಹಿನ್ನಡೆಗೆ ಈ ಸಂಗತಿಯೂ ಪ್ರಭಾವ ಬೀರಿರುವ ಸಾಧ್ಯತೆಗಳಿವೆ. ಪ್ರಚಾರದ ವೇಳೆ, ಅವರು ತೆರಿಗೆ ಕಡಿತದ ಯಾವುದೇ ಭರವಸೆಗಳನ್ನು ನೀಡಲಿಲ್ಲ. ಬದಲಿಗೆ, ಮುಂಬರುವ ದಿನಗಳು ಇನ್ನಷ್ಟು ಕಠಿಣಗಳಾಗುವುದರಿಂದ, ಹಣದುಬ್ಬರ ನಿಯಂತ್ರಣಕ್ಕೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯ ಎಂಬ ಸಂಗತಿಯನ್ನು ಪ್ರಾಮಾಣಿಕವಾಗಿ ಮನದಟ್ಟು ಮಾಡಲು ಪ್ರಯತ್ನಿಸಿದರು. ಆದರೆ, ಎದುರಾಳಿ ಲಿಜ್ ಟ್ರಸ್ ಅವರು, ಹೆಚ್ಚಿನ ತೆರಿಗೆಗಳು ಅಭಿವೃದ್ಧಿಗೆ ಅಡ್ಡಿಯಾಗುತ್ತವೆ. ಇದರಿಂದ ಹೂಡಿಕೆ ಕೂಡ ಕುಸಿಯಲಿದೆ. ಅಂತಿಮವಾಗಿ ಅದು ಆರ್ಥಿಕ ಚಟುವಟಿಕೆಗೆ ಹಿನ್ನಡೆ ತರುತ್ತದೆ. ಹಾಗಾಗಿ, ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಣಕ್ಕೆ ತೆರಿಗೆ ಕಡಿತ ಮಾಡುವುದೇ ಪರಿಹಾರ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಬಹುಶಃ ಅವರ ಈ ವಾದ ಫಲ ನೀಡಿದಂತಿದೆ. ಕನ್ಸರ್ವೇಟಿವ್ ಪಕ್ಷದ ಸಾಂಪ್ರದಾಯಿಕ ಮತದಾರರು ಇದೇ ಮನಸ್ಥಿತಿಯನ್ನು ಹೊಂದಿದವರು. ಅವರು ಕಡಿಮೆ ತೆರಿಗೆ ಮತ್ತು ವೆಚ್ಚ ನೀತಿಯಲ್ಲಿ ವಿಶ್ವಾಸ ಇಟ್ಟವರು. ಈ ನಂಬಿಕೆಗೆ ಟ್ರಸ್ ಧಕ್ಕೆ ಮಾಡಲಿಲ್ಲ; ಸುನಕ್ ಅವರಿಗೆ ಈ ಸಂಗತಿ ಅರ್ಥವಾಗಲಿಲ್ಲ! ಆದರೆ, ಕೆಲವರು ರಿಷಿ ಸುನಕ್ ಅವರ ಆರ್ಥಿಕ ಸುಧಾರಣೆ ಬಗೆಗಿನ ನೀತಿಗಳು ಕಠಿಣವಾಗಿದ್ದರೂ ಈ ಸಮಯಕ್ಕೆ ಅಗತ್ಯವಾಗಿವೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. - ಇನ್ನೂ ಒಂದು ಕಾರಣವಿದೆ
ಪಶ್ಚಿಮ ರಾಷ್ಟ್ರಗಳು ಎಷ್ಟೇ ಮುಂದುವರಿದಿದ್ದರೂ ಬಣ್ಣದ ಆಧಾರದ ಮೇಲೆ ತಾರತಮ್ಯ ಅನುಸರಿಸುವ ನೀತಿಯಿಂದ ಇನ್ನೂ ಪೂರ್ತಿಯಾಗಿ ಹೊರ ಬಂದಿಲ್ಲ. ವರ್ಣಭೇದ ಅವರ ಮನಸ್ಸಿನಾಳದಲ್ಲಿದೆ. ಹಾಗಂತ, ಬ್ರಿಟನ್ ಪಿಎಂ ಆಯ್ಕೆಯಲ್ಲಿ ವರ್ಣಭೇದವು ಪ್ರಭಾವ ಬೀರಿದೆ ಎಂದು ನೇರವಾಗಿ ಹೇಳುವುದು ಅಪಕ್ವ ಎನಿಸಿಕೊಳ್ಳುತ್ತದೆ. ಆದರೆ, ಕನ್ಸರ್ವೇಟಿವ್ ಪಕ್ಷದಲ್ಲಿ ನಾಯಕತ್ವವನ್ನು ಆಯ್ಕೆಯ ಮತದಾರ ಸಮೂಹವನ್ನು ವಿಶ್ಲೇಷಿಸಿದರೆ ಈ ಅನುಮಾನ ಕಾಡದೇ ಇರದು.
ಪಕ್ಷದ ಹಳೆಯ ಸದಸ್ಯರನ್ನು ಪರಿಗಣಿಸಿದರೆ ವರ್ಣಭೇದ ಪ್ರಭಾವ ಬೀರಿರುವ ಸಾಧ್ಯತೆ ತಕ್ಕಮಟ್ಟಿಗಾದರೂ ಇದ್ದೇ ಇದೆ. ಬಿಳಿಯ ಅಲ್ಲದ ವ್ಯಕ್ತಿಯೊಬ್ಬ ಬ್ರಿಟನ್ ಪ್ರಧಾನಿಯಾಗುವುದನ್ನು ಅವರಿಗೆ ಊಹಿಸಿಕೊಳ್ಳುವುದು ಕಷ್ಟವಾಗಿರಬಹುದು! ಹಾಗಾಗಿ, ಅವರ ಒಲವು ಸುನಕ್‌ಗಿಂತಲೂ ಲಿಜ್ ಟ್ರಸ್ ಅವರ ಕಡೆಗೆ ಹೆಚ್ಚಾಗಿರುವ ಸಾಧ್ಯತೆ ಇದೆ. - ಅತಿವೇಗ ಅಪಾಯಕ್ಕೆ ಕಾರಣ
ಬ್ರಿಟನ್ ರಾಜಕಾರಣದಲ್ಲಿ ರಿಷಿ ಸುನಕ್ ಅವರ ರಾಜಕೀಯ ಬೆಳಣಿಗೆಯನ್ನು ಗಮನಿಸಿದರೆ, ‘ಅತಿ ವೇಗ ಅಪಾಯಕ್ಕೆ ಕಾರಣ’ ಎಂಬ ಮಾತನ್ನು ನೆನಪಿಸುತ್ತದೆ. ಯಾಕೆಂದರೆ, ಪಿಎಂ ಹುದ್ದೆ ಸ್ಪರ್ಧೆ ತನಕದ ಅವರ ವೇಗವೇ ಅವರನ್ನು ಅಪಾಯಕ್ಕೆ ಸಿಲುಕಿಸಿದೆ. One who wields the crown never wears the crown ಎಂಬ ಮಾತು ಸುನಕ್ ಅವರಿಗೆ ಅಕ್ಷರಶಃ ಅನ್ವಯವಾಗುತ್ತಿದೆ. ವೇಗವಾಗಿ ದಕ್ಕಿದ ಜನಪ್ರಿಯತೆಯ ಲಾಭವನ್ನು ಮಾಡಿಕೊಳ್ಳಲು ಹೊರಟವರಿಗೆ, ಉದ್ದೇಶಿತ ಗುರಿಯನ್ನು ಸಾಧ್ಯವಾಗಲಿಲ್ಲ!
ಇದನ್ನೂ ಓದಿ | Britain PM | ಬ್ರಿಟನ್ ಮುಂದಿನ ಪ್ರಧಾನಿ ಲಿಜ್ ಟ್ರಸ್, ರಿಷಿ ಸುನಕ್‌ಗೆ ಕೈ ತಪ್ಪಿದ ಪಟ್ಟ