Site icon Vistara News

ತಟ್ಟೆಯಲ್ಲಿ ಉಳಿದ ಸ್ಯಾಂಡ್‌ವಿಚ್‌ ತಿಂದಿದ್ದಕ್ಕೆ ಮಹಿಳೆಯನ್ನು ವಜಾಗೊಳಿಸಿದ ಕಂಪನಿ! ಮುಂದೇನಾಯ್ತು?

Gabriela Rodriguez

Woman Fired For Eating Leftover Sandwich Found In UK Company's Meeting Room

ಲಂಡನ್:‌ ಹಸಿವು ಎಂಬುದು ಮನುಷ್ಯನನ್ನು ಏನೆಲ್ಲ ಕೆಲಸ ಮಾಡುತ್ತದೆ. ಹೊಟ್ಟೆ ಹೊರೆಯಲು ಕೆಲವರು ಕಳ್ಳತನ ಮಾಡುತ್ತಾರೆ, ಅದೇ ಮೂರು ಹೊತ್ತಿನ ಊಟಕ್ಕಾಗಿ (Hunger) ರಾತ್ರಿಯಿಡೀ ಕೆಲಸ ಮಾಡುವವರು ಇದ್ದಾರೆ. ಹೀಗೆ, ತೀವ್ರ ಹಸಿವಿನಿಂದಾಗಿ ಬ್ರಿಟನ್‌ನಲ್ಲಿ (United Kingdom) ಮಹಿಳೆಯೊಬ್ಬರು ಕಂಪನಿಯ (Company) ಮೀಟಿಂಗ್‌ ರೂಮ್‌ನಲ್ಲಿ ಉಳಿದ ಸ್ಯಾಂಡ್‌ವಿಚ್‌ಅನ್ನು ತಿಂದಿದ್ದು, ಇದೇ ಕಾರಣಕ್ಕಾಗಿ ಕಂಪನಿಯು ಆಕೆಯನ್ನು ಕೆಲಸದಿಂದಲೇ ವಜಾಗೊಳಿಸಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವ (Viral News) ಜತೆಗೆ ಕಂಪನಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

ಹೌದು, ಗ್ಯಾಬ್ರಿಯೆಲಾ ರೋಡ್ರಿಗ್ಯೂಸ್ (Gabriela Rodriguez) ಅವರು ಲಂಡನ್‌ನಲ್ಲಿರುವ ಡೆವೋನ್‌ಶೈರ್‌ ಸಾಲಿಸಿಟರ್ಸ್‌ ಎಂಬ ಕಾನೂನು ಕಂಪನಿಯಲ್ಲಿ (Law Firm) ಹೌಸ್‌ಕೀಪರ್‌ ಆಗಿ ಕೆಲಸ ಮಾಡುತ್ತಿದ್ದರು. ಈಕ್ವೆಡಾರ್‌ನವರಾದ ಇವರು ಹೊಟ್ಟೆ ಪೊರೆಯಲು ಕಾನೂನು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಕಂಪನಿಯಲ್ಲಿ ಮೀಟಿಂಗ್‌ ನಡೆದಿದ್ದು, ಬಗೆಬಗೆಯ ಸ್ಯಾಂಡ್‌ವಿಚ್‌ಗಳನ್ನು ಆರ್ಡರ್‌ ಮಾಡಲಾಗಿತ್ತು. ಮೀಟಿಂಗ್‌ ಮುಗಿದ ಬಳಿಕ ಕೋಣೆಯನ್ನು ಸ್ವಚ್ಛಗೊಳಿಸುವಾಗ ತಟ್ಟೆಯಲ್ಲಿ ಸ್ಯಾಂಡ್‌ವಿಚ್‌ ಕಂಡ ಮಹಿಳೆಯು‌ ಅದನ್ನು ತಿಂದಿದ್ದಾರೆ. ಇದರಿಂದಾಗಿ ಕಂಪನಿಯು ಆಕೆಯನ್ನು ಕೆಲಸದಿಂದಲೇ ವಜಾಗೊಳಿಸಿದೆ.

ಕಾನೂನು ಹೋರಾಟಕ್ಕೆ ಮುಂದಾದ ರೋಡ್ರಿಗ್ಯೂಸ್

ಕೇವಲ ಒಂದು ಸ್ಯಾಂಡ್‌ವಿಚ್‌ ತಿಂದಿದ್ದಕ್ಕೆ ವಜಾಗೊಳಿಸಿದ ಕಂಪನಿ ವಿರುದ್ಧ ಕಾನೂನು ಹೋರಾಟ ಮಾಡಲು ಗ್ಯಾಬ್ರಿಯೆಲಾ ರೋಡ್ರಿಗ್ಯೂಸ್ ತೀರ್ಮಾನಿಸಿದ್ದಾರೆ. ಇವರಿಗೆ ವಲಸಿಗರ ಹಕ್ಕುಗಳ ಪರವಾಗಿ ಹೋರಾಡುವ ಯುನೈಟೆಡ್‌ ವಾಯ್ಸಸ್‌ ಆಫ್‌ ವರ್ಲ್ಡ್‌ ಯುನಿಯನ್‌ ಸಂಘಟನೆಯೂ ಬೆಂಬಲ ನೀಡಿದೆ. “ಕಂಪನಿಯಲ್ಲಿ ಯಾರನ್ನೂ ಕೇಳದೆ, ಕಂಪನಿಯ ಆಸ್ತಿಗೆ ಕೈ ಹಾಕಿದ ಹಿನ್ನೆಲೆಯಲ್ಲಿ ಆಕೆಯನ್ನು ವಜಾಗೊಳಿಸಿದೆ” ಎಂಬುದಾಗಿ ಕಾನೂನು ಕಂಪನಿಯು ಉದ್ಧಟತನದ ಹೇಳಿಕೆ ನೀಡಿದೆ. ಹಾಗಾಗಿ, ಕಾನೂನು ಹೋರಾಟ ತೀವ್ರಗೊಳಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ‘ಕರಿಮಣಿ ಮಾಲೀಕ’ನಾಗಲು ಹುಡುಗಿ ಸಿಗದೆ ರಿಕ್ಷಾಗೆ ಬಯೋಡೇಟಾ ಅಂಟಿಸಿದ ‘ಆಟೋ ರಾಜ’!

“ಗ್ಯಾಬ್ರಿಯೆಲಾ ರೋಡ್ರಿಗ್ಯೂಸ್ ಅವರು ಕೇವಲ 1.5 ಯೂರೋ (ಅಂದಾಜು 134 ರೂಪಾಯಿ) ಮೌಲ್ಯದ ಸ್ಯಾಂಡ್‌ವಿಚ್‌ ತಿಂದಿದ್ದಕ್ಕೇ ಏಕಾಏಕಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆಕೆ ಏನಾದರೂ ಲ್ಯಾಟಿನ್‌ ಅಮೆರಿಕದವಳಾಗಿದ್ದು, ಚೆನ್ನಾಗಿ ಇಂಗ್ಲಿಷ್‌ ಮಾತನಾಡುತ್ತಿದ್ದರೆ ಕಂಪನಿಯು ಕೆಲಸದಿಂದ ವಜಾಗೊಳಿಸುತ್ತಿರಲಿಲ್ಲ. ಈಕ್ವೆಡಾರ್‌ನವಳು ಎಂಬ ಕಾರಣಕ್ಕಾಗಿ ಅನ್ಯಾಯ ಮಾಡಲಾಗಿದೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ” ಎಂದು ಸಂಘಟನೆಯು ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version