Site icon Vistara News

ಇದೆಂಥ ಪ್ರೀತಿ! ಗೊಂಬೆಯನ್ನೇ ಮದುವೆಯಾದ ಯುವತಿ, ದಂಪತಿಗೀಗ ಪುಟಾಣಿ ಮಗು ಕೂಡ ಹುಟ್ಟಿದೆ!

ಬ್ರೆಜಿಲ್: ಇತ್ತೀಚಿನ ದಿನಗಳಲ್ಲಿ ಮದುವೆಗಳು ವಿಚಿತ್ರವಾಗಿ ನಡೆಯುತ್ತಿರುವುದು ಸಾಮಾನ್ಯ ವಿಷಯ. ವಿದೇಶ ಅಷ್ಟೇ ಏಕೆ ಭಾರತದಲ್ಲೂ ವಿಚಿತ್ರ ಮದುವೆಯ ಬಗ್ಗೆ ಸಾಮಾಜಿಕ ಜಲತಾಣದಲ್ಲಿ ನಾವು ನೋಡ್ತಾ ಇರುತ್ತೇವೆ. ಗಂಡು-ಹೆಣ್ಣು ವಿಚಿತ್ರ ರೀತಿಯಲ್ಲಿ ಮದುವೆಯಾಗುವುದು, ಗಂಡು ಮಕ್ಕಳೇ ಮದುವೆ ಆಗುವುದು, ಹೆಣ್ಮಕ್ಕಳೇ ವಿವಾಹ ಮಾಡಿಕೊಳ್ಳುವುದು, ಹೆಣ್ಣು ತನ್ನನ್ನೇ ತಾನು ಮದುವೆ ಆಗೋದನ್ನೆಲ್ಲ ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬಳು ಗೊಂಬೆಯನ್ನು ಮದುವೆಯಾಗಿದ್ದಾಳೆ! ಅಷ್ಟೇ ಅಲ್ಲ, ಅವರಿಗೊಂದು ಮಗು ಕೂಡಾ ಹುಟ್ಟಿದೆ!

ಈ ಕಥೆಯ ನಾಯಕಿಯ ಹೆಸರು ಮೀರಿವೊನ್ ರೋಚಾ ಮೊರೇಸ್, ವಯಸ್ಸು 37. ಬ್ರೆಜಿಲ್‌ನ ನಿವಾಸಿ ಆಗಿರುವ ಮೋರಿಸ್‌ ಸದಾ ಉತ್ಸಾಹಿ. ಮೋರಿಸ್‌ಗೆ ನೃತ್ಯ ಎಂದರೆ ವಿಪರೀತ ಹುಚ್ಚು. ತನ್ನ ಗೆಳೆಯರೊಂದಿಗೆ ಈಕೆ ಅನೇಕ ಬಾರಿ ನೃತ್ಯ ಕೂಟಗಳಿಗೆ ಹೋಗುತ್ತಿದ್ದಳು. ಆದರೆ ತನಗೆ 37 ವರ್ಷ ಕಳೆದರೂ ಸಂಗಾತಿ ಇಲ್ಲ ಅನ್ನುವ ನೋವು ಅವಳನ್ನು ಕಾಡುತಿತ್ತು. ಈ ಕುರಿತು ಆಕೆ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಏನಾದರೂ ಮಾಡಿ ತನಗೊಬ್ಬ ಸಂಗಾತಿಯನ್ನು ಹುಡುಕಿಕೊಡುವಂತೆ ತಾಯಿಯ ಮೇಲೆ ಒತ್ತಡ ಹೇರಿದ್ದಳು.

ಈ ನಡುವೆ ಮಗಳು ಸಪ್ಪೆ ಇರುವುದನ್ನು ಸಹಿಸದ ಅಮ್ಮ ಮಗಳಿಗಾಗಿ ಒಂದು ಚಿಂದಿ ಗೊಂಬೆ (ರ‍್ಯಾಗ್‌ ಡಾಲ್) ತಯಾರಿಸುತ್ತಾಳೆ. ಹಾಗೂ ಆ ಗೊಂಬೆಗೆ ಮಾರ್ಷೆಲೋ ಎಂದು ನಾಮಕರಣ ಮಾಡುತ್ತಾಳೆ. ಅದನ್ನು ತನ್ನ ಮಗಳಿಗೆ ನೀಡುತ್ತಾಳೆ.

ರ್ಯಾಗ್‌ ಡಾಲ್ ಹಾಗೂ ಯುವತಿಯ ಮದುವೆ ಪೋಟೊ, ನಂತರ ಮಗುವಿನೊಂದಿಗಿನ ಪೋಟೊ

ಚಿಂದಿಯಿಂದ ಮಾಡಿದ ಗೊಂಬೆಯನ್ನು ನೋಡಿದ ಕೂಡಲೇ ಏನನಿಸಿತೋ ಏನೋ, ಈ ಹುಡುಗಿ ಅವನೇ ನನ್ನ ಗಂಡ ಅಂದುಕೊಂಡಳು!

ʻʻನನ್ನ ತಾಯಿ ಮಾರ್ಷೆಲೋನನ್ನು ಪರಿಚಯಿಸಿದ ದಿನವೇ ನಾನು ಅವನ ಪ್ರೀತಿಯಲ್ಲಿ ಬಿದ್ದೆ, ಮೊದಲ ನೋಟದಲ್ಲೇ ಅವನ ಮೇಲೆ ಪ್ರೀತಿಯಾಗಿತ್ತು, ನೃತ್ಯ ಸಂಗಾತಿ ಇಲ್ಲದ ನನ್ನ ಜೀವನಕ್ಕೆ ಮಾರ್ಷೆಲೋ ಹೊಸ ಅರ್ಥ ನೀಡಿದ್ದಾನೆʼ ಎಂದು ಹೇಳಿದ್ದಾಳೆ. ಈ ನಡುವೆ ಆಕೆ ನಂಬಲಸಾಧ್ಯವಾದ ವಿಷಯವೊಂದನ್ನು ಹೇಳಿದ್ದಾಳೆ! “ನನ್ನ ಹಾಗೂ ಮಾರ್ಸೆಲೋ ನಡುವಿನ ಪ್ರೀತಿಯಿಂದ ನಾನು ಗರ್ಭಿಣಿಯಾದೆ! ಆದರೆ, ಮದುವೆಗೆ ಮೊದಲು ಮಗು ಆಗುವುದು ಇಷ್ಟವಿಲ್ಲದ ಕಾರಣ ನಾನು ಬೇಗನೆ ಮದುವೆಯಾಗಲು ನಿರ್ಧರಿಸಿದೆʼʼ ಎಂದಿದ್ದಾಳೆ ಮೊರೇಸ್‌!

ರ್ಯಾಗ್‌ ಡಾಲ್ ಹಾಗೂ ಮೋರಿಸ್‌ ಮೊದಲ ರಾತ್ರಿಯ ಪೋಟೊ

“ನಮ್ಮ ಮದುವೆಯ ದಿನ ಬಹಳ ಮುಖ್ಯವಾದದ್ದು, ಹಾಗೂ ಅದ್ಬುತವಾದ ದಿನವಾಗಿತ್ತು. ಆ ದಿನ ನಾನು ಭಾವುಕಳಾಗಿದ್ದೆ ಹಾಗೂ ತುಂಬಾ ಖುಷಿಯಾಗಿದ್ದೆ. ಆವತ್ತು ಸುರಿದ ಮಳೆಯಿಂದ ನಮ್ಮ ಮದುವೆಗೆ ಮತ್ತಷ್ಟು ಕಳೆ ಬಂತು. ಮದುವೆ ಮಂಟಪದ ಆರಂಭದಿಂದ ಹಿಡಿದು ಮೊದಲ ರಾತ್ರಿಯವರೆಗೂ ನಾವಿಬ್ಬರೂ ತುಂಬಾ ಸಂತೋಷದಿಂದ ಸಮಯ ಕಳೆದೆವು” ಎಂದು ಮೊರೇಸ್‌ ಹೇಳಿದ್ದಾಳೆ.

ನಿಜವೆಂದರೆ ಅವರ ಮದುವೆಗೆ 250 ಅತಿಥಿಗಳು ಬಂದು ಶುಭ ಕೋರಿದ್ದಾರೆ. ಮದುವೆಯ ನಂತರ ಅವರಿಬ್ಬರೂ ಹನಿಮೂನ್‌ಗಾಗಿ ರಿಯೊ ಡಿ ಜನೈರೊದಲ್ಲಿನ ಬೀಚ್ ಹೌಸ್‌ಗೆ ಹೋಗಿದ್ದಾರೆ.

ಇದೆಲ್ಲಾ ಮುಗಿದ ನಂತರ ಮೇ 21ರಂದು ದಂಪತಿಗೊಂದು ಮಗು ಬಂದಿದೆ. ಅದಕ್ಕೆ ಮಾರ್ಷೆಲಿನೋ ಎಂದು ಹೆಸರಿಡಲಾಗಿದೆ. ಮೊರೇಸ್‌ ತನಗೆ ಮನೆಯಲ್ಲೇ ಹೆರಿಗೆ ಆಯ್ತು ಅಂತಾಳೆ!

ಯೆಸ್‌.. ಇದೆಲ್ಲವೂ ಆಕೆಯದೇ ಕಲ್ಪನಾ ಲೋಕ. ಆಕೆ ಗೊಂಬೆಯನ್ನೇ ಗಂಡ ಎಂದುಕೊಂಡಿದ್ದಾಳೆ. ಚಿಂದಿಯಿಂದ ರೂಪಿಸಿದ ಸಣ್ಣ ಗೊಂಬೆಯನ್ನು ಮಗು ಎಂದುಕೊಂಡಿದ್ದಾಳೆ. ಆದರೆ ಆಕೆಗೆ ಇದೆಲ್ಲ ನಕಲಿ ಅಲ್ವಾ ಎಂದರೆ ಆಕೆಗೆ ನೋವಾಗುತ್ತದಂತೆ, ಕೋಪ ಬರುತ್ತದಂತೆ. ʻʻನಾನು ಅವನೊಂದಿಗೆ ಸಂತೋಷವಾಗಿದ್ದೆನೆ, ನಮ್ಮಿಬ್ಬರ ವೈವಾಹಿಕ ಜೀವನ ನೆಮ್ಮದಿಯಿಂದ ಇದೆ. ನನ್ನ ಪತಿ ನನ್ನೊಂದಿಗೆ ಜಗಳ ಮಾಡೊಲ್ಲ, ನನ್ನ ಅರ್ಥ ಮಾಡಿಕೊಂಡಿದ್ದಾನೆ, ಮಾರ್ಷೆಲೋ ಒಬ್ಬ ಶ್ರೇಷ್ಠ ಹಾಗೂ ನಿಷ್ಠಾವಂತ ಪತಿ. ಸಮಾಜದಲ್ಲಿ ಜನ ಹೇಗಿದ್ದರೂ ಮಾತನಾಡಿಕೊಳ್ಳುತ್ತಾರೆ. ಆದರೆ ನಮ್ಮ ಖುಷಿಗಾಗಿ ನಾನು ಬದುಕುವೆʼʼ ಎನ್ನುವ ಮೊರೆಸ್‌ ಕೆಲವೊಮ್ಮೆ ಸರಿ ಅನಿಸಿಬಿಡುತ್ತಾಳಲ್ವಾ?

ಮದುವೆಯಾಗಿ ಗಂಡನಿಂದ ನೋವನುಭವಿಸುತ್ತಾ, ಆಗಾಗ ಜಗಳ ಮಾಡುತ್ತಾ, ನೆಮ್ಮದಿ ಕಳೆದುಕೊಳ್ಳುತ್ತಾ ಇರುವ ಅದೆಷ್ಟೋ ಹೆಣ್ಮಕ್ಕಳಿದ್ದಾರೆ. ಗಂಡ ಹೆಂಡಿರು ಮುಖಾಮುಖಿ ಮಾತನಾಡದೆ ಬದುಕುವವರೂ ಇದ್ದಾರೆ. ಅಂಥವರ ಮಧ್ಯೆ ಅತ್ಯಂತ ಆತ್ಮೀಯತೆಯ ಕಲ್ಪನಾ ಲೋಕ ಕೂಡಾ ನೆಮ್ಮದಿಯ ಅರಮನೆಯಾಗಿ ಬಿಡುವುದು ಸುಳ್ಳೇನಲ್ಲವಲ್ಲ!

ಇದನ್ನೂ ಓದಿ : Viral Video: ತನ್ನದೇ ಮದುವೆ ಸಂಭ್ರಮವನ್ನು ಸೂತಕವಾಗಿ ಬದಲಿಸಿದ ವರ

Exit mobile version