ವಾಷಿಂಗ್ಟನ್: ಪ್ರೀತಿ ಕುರುಡು, ಪ್ರೀತಿ ಮಾಯೆ ಎನ್ನುತ್ತಾರೆ. ಆದರೆ, ಅಮೆರಿಕದ ಈ ಮಹಿಳೆಯ ವಿಚಾರದಲ್ಲಿ ಪ್ರತಿ ಅತಿಯಾದ ಕುರುಡುತನ ಪ್ರದರ್ಶಿಸಿದೆ. ಹೌದು, ತನ್ನ ಗಂಡ ಸತ್ತಿದ್ದಾನೆ ಎಂದು ಭಾವಿಸಿ, ಕುಟುಂಬಸ್ಥರಿಂದಲೂ ಆತ ಮೃತಪಟ್ಟಿರುವುದನ್ನು ತಿಳಿದುಕೊಂಡು, ಆತನ ನೆನಪಿನಲ್ಲಿಯೇ ದಿನಗಳನ್ನು ಕಳೆಯುತ್ತಿದ್ದ ಮಹಿಳೆಗೆ ಈಗ ತನ್ನ ಬಾಯ್‌ಫ್ರೆಂಡ್ ಬೇರೆ ದೇಶದಲ್ಲಿದ್ದಾನೆ ಹಾಗೂ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿ ಸಂಸಾರ ಸಾಗಿಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇಂತಹ ಸಿನಿಮೀಯ ಕತೆಯನ್ನು ಮಹಿಳೆಯು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಮೂಲಕ ತಿಳಿಸಿದ್ದಾರೆ. ಆ ವಿಡಿಯೊ ಈಗ ವೈರಲ್ (Viral News) ಆಗಿದೆ.
ಹೌದು, ಅನೆಸ್ಸಾ ರೋಸಿ ಎಂಬ ಮಹಿಳೆಯು ಟಿಕ್‌ಟಾಕ್ ಮೂಲಕ ತನ್ನ ಜೀವನದಲ್ಲಿ ನಡೆದ ರೋಚಕ ಘಟನೆಗಳನ್ನು, ದುರಂತವನ್ನು ಬಿಚ್ಚಿಟ್ಟಿದ್ದಾರೆ. “ನನ್ನ ಗಂಡ ಐದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಬಂತು. ಪೊಲೀಸರೇ ಈ ಕುರಿತು ನನಗೆ ಮಾಹಿತಿ ನೀಡಿದರು. ನಿಮ್ಮ ಗಂಡನ ಶವ ಸಿಕ್ಕಿದೆ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಫ್ಲೊರಿಡಾದಲ್ಲಿ ಅಂತ್ಯಕ್ರಿಯೆ ನಡೆಯುತ್ತಿದೆ ಎಂದರು. ನಾನೂ ಹೋಗಬೇಕು ಎಂದೆ. ಆದರೆ, ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಹಾಕಿದ ಕಾರಣ ನಾನು ಹೋಗುವುದು ಬೇಡ ಎಂದು ನನ್ನ ಕುಟುಂಬಸ್ಥರು ಸೂಚಿಸಿದರು. ಹಾಗಾಗಿ ನಾನು ಅಂತ್ಯಸಂಸ್ಕಾರಕ್ಕೆ ಹೋಗಲಿಲ್ಲ” ಎಂದು ರೋಸಿ ಹೇಳಿದ್ದಾರೆ.
ಇಲ್ಲಿದೆ ಮಹಿಳೆಯ ವಿಡಿಯೊ
“ಕಳೆದ ಐದು ತಿಂಗಳ ಹಿಂದೆ ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ಎರಡು ತಿಂಗಳ ಹಿಂದೆ ಅಂದರೆ ಜನವರಿಯಲ್ಲಿ ಮಾಹಿತಿ ಬಂತು. ಆದರೆ, ಇದಾದ ಎರಡೇ ತಿಂಗಳಿಗೆ ಅಂದರೆ, ಮಾರ್ಚ್‌ನಲ್ಲಿ ನನ್ನ ಗಂಡ ಬದುಕಿದ್ದಾನೆ ಎಂದೂ, ಮೆಕ್ಸಿಕೋದಲ್ಲಿ ಬೇರೊಬ್ಬ ಮಹಿಳೆಯನ್ನು ಕಾನೂನುಬದ್ಧವಾಗಿ ಮದುವೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಇದು ನಿಜವಾಗಿಯೂ ನನಗೆ ಶಾಕಿಂಗ್ ಮಾಹಿತಿ ಆಗಿದೆ” ಎಂದು ರೋಸಿ ತಿಳಿಸಿದ್ದಾರೆ.
“ನಾನೊಂದು ದಿನ ಟಿಕ್‌ಟಾಕ್ ಲೈವ್ ಬಂದೆ. ಆಗ ನನಗೆ ಯಾರೋ ನನಗೆ ಮೆಸೇಜ್ ಬಂದಿದೆ ಎಂದೂ, ಅದರಲ್ಲೇನೋ ವಿಶೇಷ ಮಾಹಿತಿ ಇದೆ ಎಂದು ಹೇಳಿದರು. ನಾನು ನನಗೆ ಬಂದ ಸಂದೇಶವನ್ನು ಚೆಕ್ ಮಾಡಿದೆ. ಆಗ ಅಚ್ಚರಿಯ ವಿಷಯ ಗೊತ್ತಾಯಿತು. ನನ್ನ ಗಂಡನೇ ನನಗೆ ಸಂದೇಶ ಕಳುಹಿಸಿದ್ದ” ಎಂದು ಹೇಳಿದ್ದಾರೆ. ಈ ಕುರಿತು ಗಂಡ ನೀಡಿರುವ ಸ್ಪಷ್ಟನೆಯನ್ನೂ ರೋಸಿ ನೀಡಿದ್ದಾರೆ. “ನಾನು ನನ್ನ ಸಾವಿನ ಕುರಿತು ಸುಳ್ಳು ಮಾಹಿತಿ ನೀಡಿಲ್ಲ. ನನ್ನ ಸಾವಿನ ಕುರಿತು ನಾನೇ ಕೇಳಿದ ಸುದ್ದಿ ಕೇಳಿ ನನಗೇ ಅಚ್ಚರಿ ಎನಿಸಿತು. ಇದು ನನ್ನ ಜೀವನದಲ್ಲಿಯೇ ಕೇಳಿದ ವಿಚಿತ್ರ ವದಂತಿ ಎಂಬುದಾಗಿ ಹೇಳಿದ್ದಾನೆ” ಎಂದು ರೋಸಿ ಹೇಳಿದ್ದಾರೆ.
ಇದನ್ನೂ ಓದಿ: IPL 2023: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡಗೌಟ್ನಲ್ಲಿ ರಿಷಭ್ ಪಂತ್ ಜೆರ್ಸಿ; ಫೋಟೊ ವೈರಲ್