ತೆಹ್ರಾನ್: ವಿಶ್ವದ ಅತ್ಯಂತ ಕೊಳಕು ಮನುಷ್ಯ (World’s Dirtiest Man) ಎಂದೇ (ಕು) ಖ್ಯಾತನಾಗಿದ್ದ ಇರಾನ್ನ ಅಮೌ ಹಾಜಿ 94ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ಸುಮಾರು 50 ವರ್ಷಗಳಿಂದಲೂ ಒಮ್ಮೆಯೂ ಸ್ನಾನ ಮಾಡಿರದ ಅವರು ಭಾನುವಾರ ದೇಗಾಹ್ ಎಂಬ ಹಳ್ಳಿಯಲ್ಲಿ ಮೃತಪಟ್ಟಿದ್ದಾರೆ.
ಅಮೌ ಹಾಜಿಗೆ ಮದುವೆಯಿಲ್ಲ, ಮಕ್ಕಳಿಲ್ಲ. ಒಬ್ಬಂಟಿಯಾಗಿ ಅಲೆದಾಡುತ್ತಿದ್ದರು. ಅಲ್ಲೇ ಊರೂರು ಸುತ್ತುತ್ತಿದ್ದರು. ಆದರೆ ಸ್ನಾನ ಮಾತ್ರ ಮಾಡುತ್ತಿರಲಿಲ್ಲ. ಸ್ನಾನ ಮಾಡಿದರೆ ತನ್ನ ಆರೋಗ್ಯ ಹಾಳಾಗುತ್ತದೆ ಎಂಬ ಭಯ ಅವರನ್ನು ಕಾಡುತ್ತಿತ್ತು. ಇದೇ ಕಾರಣಕ್ಕೇ ಒಮ್ಮೆಯೂ ಸ್ನಾನ ಮಾಡಿರಲಿಲ್ಲ. ಆದರೂ ಕಳೆದ ತಿಂಗಳು ದೇಗಾಹ್ ಹಳ್ಳಿಯ ಜನರು ಅವರನ್ನು ಬಲವಂತವಾಗಿ ಕರೆದುಕೊಂಡು ಹೋಗಿ, ಸ್ನಾನ ಮಾಡಿಸಿದ್ದರು.
ಆಮೌ ಹಾಜಿ ಇರಾನ್ನಲ್ಲಿ ತುಂಬ ಜನಪ್ರಿಯ ಆಗಿದ್ದ ವ್ಯಕ್ತಿ. ಇವರ ಕತೆಯನ್ನೇ ಆಧರಿಸಿ The Strange Life of Amou Haji ಎಂಬ ಸಾಕ್ಷ್ಯಚಿತ್ರವನ್ನು 2013ರಲ್ಲಿ ತಯಾರಿಸಿ, ಬಿಡುಗಡೆ ಮಾಡಲಾಗಿದೆ. ದೇಗಾಹ್ನಲ್ಲಿ ಒಂದು ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದ ತೆರೆದ ಗುಡಿಸಲಿನಲ್ಲಿಯೇ ಮಲಗುತ್ತಿದ್ದ. ಬಳಿಕ ಹಳ್ಳಿಗರೇ ಅದರ ಮೇಲೊಂದು ಚಾವಣಿ ಕಟ್ಟಿದ್ದರು. ಹಾಜಿ ಹೀಗಾಗಲು ಕಾರಣ ಅವರು ಹರೆಯದ ಸಮಯದಲ್ಲಿ ಅನುಭವಿಸಿದ ಮಾನಸಿಕ ಆಘಾತಗಳು. ಅವರು ತಾಜಾ ಆಹಾರಗಳನ್ನೂ ಸೇವಿಸುತ್ತಿರಲಿಲ್ಲ ಎಂದು ಹಳ್ಳಿಯ ಜನ ಹೇಳಿದ್ದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: Viral News | 90 ರೂ. ಬೆಲೆಯ ಬರ್ಗರ್ ಪಡೆಯಲು 10 ರೂ.ಕೊಟ್ಟ ಬಾಲಕಿ; ಅಂಗಡಿಯಾತ ಮಾಡಿದ್ದೇನು?