ಟೋಕಿಯೊ: ಮೈ ಜತೆಗೆ ಮನಸ್ಸು ಕೂಡ ತಣ್ಣಗಾಗಲಿ, ನಾಲಗೆ ಮೇಲಿನ ರುಚಿಗ್ರಂಥಿಗಳು ಚುರುಕಾಗಲಿ ಎಂದು ಐಸ್‌ಕ್ರೀಂ ತಿನ್ನುತ್ತೇವೆ. ಕೆಲವೊಮ್ಮೆ ನೂರಾರು, ನಾಲ್ಕೈದು ಜನ ಹೋದರೆ ಸಾವಿರಾರು ರೂಪಾಯಿ ವ್ಯಯಿಸುತ್ತೇವೆ. ಆದರೆ, ಜಪಾನ್‌ನಲ್ಲಿ ಒಂದು ಐಸ್‌ಕ್ರೀಂ ಬೆಲೆ 5 ಲಕ್ಷ ರೂಪಾಯಿ ಎಂದು ಕೇಳಿದರೇನೇ ನಮ್ಮ ಮಂಡೆ (Viral News) ‘ಬಿಸಿ’ಯಾಗುತ್ತದೆ. ಹೌದು, ನೀವು ಓದಿದ್ದು ಸರಿಯಾಗಿದೆ, ಜಪಾನ್‌ನಲ್ಲಿ ತಯಾರಿಸಿರುವ ವಿಶೇಷ ಐಸ್‌ಕ್ರೀಂ ಬೆಲೆ 5 ಲಕ್ಷ ರೂ. ಆಗಿದೆ.
ಜಪಾನ್‌ನ ಐಸ್‌ಕ್ರೀಂ ಬ್ರ್ಯಾಂಡ್ ಕಂಪನಿಯಾದ ಸೆಲ್ಲಾಟೊ ತಯಾರಿಸಿದ ಬ್ಯಾಕುಯಾ (Byakuya) ಎಂಬ ಐಸ್‌ಕ್ರೀಂ ಬೆಲೆ 5 ಲಕ್ಷ ರೂಪಾಯಿ ಆಗಿದ್ದು, ಇದು ಜಗತ್ತಿನಲ್ಲೇ ದುಬಾರಿ ಐಸ್‌ಕ್ರೀಂ ಎಂಬ ಖ್ಯಾತಿಗೆ ಭಾಜನವಾಗಿದೆ. ಹಾಗೆಯೇ, ಗಿನ್ನಿಸ್ ವಿಶ್ವ ದಾಖಲೆಯನ್ನೂ ಬರೆದಿದೆ.
ಇದರಲ್ಲೇನಿದೆ ವಿಶೇಷ?
ಇಟಲಿಯಲ್ಲಿ ಬೆಳೆಯುವ ವಿಶೇಷ, ವಿರಳ ‘ಬಿಳಿ ಅಣಬೆ’ಯಿಂದ ಈ ಐಸ್‌ಕ್ರೀಂಅನ್ನು ತಯಾರಿಸಲಾಗಿದೆ. ಬಿಳಿ ಅಣಬೆಯು ಒಂದು ಕೆ.ಜಿಗೆ 12 ಲಕ್ಷ ರೂ. ಆಗಿದೆ. ಇದನ್ನು ಬಳಸಿ ಐಸ್‌ಕ್ರೀಂ ತಯಾರಿಸಲಾಗಿದೆ. ಇನ್ನು ಪರ್ಮಿಜಿಯಾನೋ ರೆಗ್ಗಿಯಾನೋ, ಸೇಕ್ ಲೀಸ್ ಸೇರಿ ಹಲವು ದುಬಾರಿ ಉತ್ಪನ್ನಗಳನ್ನು ಬಳಸಿ ಐಸ್‌ಕ್ರೀಂ ತಯಾರಿಸಲಾಗಿದೆ.
ಹೀಗಿದೆ ನೋಡಿ ದುಬಾರಿ ಐಸ್‌ಕ್ರೀಂ
ಇದನ್ನೂ ಓದಿ: Viral News : ಏರ್ ಇಂಡಿಯಾ ವಿಮಾನದಲ್ಲಿ ತೆಂಗಿನ ಕಾಯಿ ಬ್ಯಾನ್! ವೈರಲ್ ಆಯ್ತು ಸುದ್ದಿ
ಒಂದೂವರೆ ವರ್ಷದಿಂದ ತಯಾರು
ದುಬಾರಿ ಬೆಲೆಯ, ವಿಶೇಷ ಐಸ್‌ಕ್ರೀಂ ತಯಾರಿಸಲು ಜಪಾನ್ ಕಂಪನಿಯು ಒಂದೂವರೆ ವರ್ಷ ತೆಗೆದುಕೊಂಡಿದೆ. “ಒಂದೂವರೆ ವರ್ಷದ ಶ್ರಮದಿಂದಾಗಿ ಐಸ್‌ಕ್ರೀಂ ಸಿದ್ಧಗೊಂಡಿದೆ. ಹಲವು ಬಾರಿ ರುಚಿ ಸರಿ ಹೊಂದದಿದ್ದರೆ, ಸಣ್ಣದಾಗಿಯೂ ದೋಷ ಕಂಡುಬಂದರೆ ಮತ್ತೆ ಐಸ್‌ಕ್ರೀಂ ತಯಾರಿಸಲಾಗಿದೆ. ಇದೇ ಕಾರಣದಿಂದಾಗಿಯೇ ಇದು ದುಬಾರಿ ಎನಿಸಿದೆ” ಎಂಬುದಾಗಿ ಸೆಲ್ಲಾಟೊ ಕಂಪನಿ ವಕ್ತಾರ ತಿಳಿಸಿದ್ದಾರೆ. ಅಂದಹಾಗೆ, ಇಷ್ಟೊಂದು ಬೆಲೆ ಕೊಟ್ಟು ಯಾರು ಐಸ್‌ಕ್ರೀಂ ತಿನ್ನುತ್ತಾರೆ ಎಂಬುದೇ ಈಗ ಎಲ್ಲರ ಪ್ರಶ್ನೆಯಾಗಿದೆ.