Site icon Vistara News

Viral Video: ಹೇ ಅಲ್ಲಾ, ನಮಗೆ ಮೋದಿಯನ್ನು ಕೊಡು, ಅವರೇ ಈ ದೇಶವನ್ನು ಸರಿ ಮಾಡಲಿ ಎಂದು ಬೇಡಿಕೊಂಡ ಪಾಕಿಸ್ತಾನಿ ಯುವಕ

Economic Crisis in Pakistan

#image_title

ಪಾಕಿಸ್ತಾನದಲ್ಲಿ ಆರ್ಥಿಕತೆ ತೀವ್ರ ಹದಗೆಟ್ಟಿದೆ. ಬಹುತೇಕ ದಿವಾಳಿ ಸ್ಥಿತಿ (Economic Crisis in Pakistan) ತಲುಪಿದ್ದು, ಅಲ್ಲಿನ ಜನರಿಗೆ ಎರಡು ಹೊತ್ತಿನ ಊಟವೂ ಸರಿಯಾಗಿ ಸಿಗುತ್ತಿಲ್ಲ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನದಾಚೆ ತಲುಪಿ, ಕೈಗೆಟುಕದಂತಾಗಿವೆ. ಐಎಂಎಫ್​, ವಿಶ್ವ ಬ್ಯಾಂಕ್​​ಗಳೂ ಕೂಡ ಪಾಕಿಸ್ತಾನಕ್ಕೆ ಸಾಲ ಕೊಡಲು ನಿರಾಕರಿಸಿವೆ. ಹೀಗಿರುವಾಗ ಪಾಕಿಸ್ತಾನದ ಯುವಕನೊಬ್ಬ, ಅಲ್ಲಿನ ಮಾಧ್ಯಮವೊಂದರ ಜತೆ ಮಾತನಾಡುತ್ತ ‘ನಮಗೆ ಪ್ರಧಾನಿ ನರೇಂದ್ರ ಮೋದಿಯವರು ಬೇಕು, ಅವರೊಬ್ಬರೇ ಪಾಕಿಸ್ತಾನವನ್ನು ಉಳಿಸಬಲ್ಲರು’ ಎಂದು ಹೇಳಿದ್ದಾನೆ. ಹಾಗೇ, ಭಾರತದ ಪ್ರಧಾನಿಯನ್ನು ಯುವಕ ಹೊಗಳಿದ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಪಾಕಿಸ್ತಾನದ ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಸನಾ ಅಮ್ಜದ್​ ಎಂಬ ಪತ್ರಕರ್ತೆ ಪಾಕ್​​ ನಿವಾಸಿಗಳ ಬಳಿ ಇಲ್ಲಿನ ಆರ್ಥಿಕತೆ ಬಗ್ಗೆ ಪ್ರಶ್ನಿಸಿದರು. ಹಾಗೇ, ಯುವಕನೊಬ್ಬನ ಬಳಿ ಬಂದು, ‘ಪಾಕಿಸ್ತಾನದಲ್ಲಿ ಇಂಥ ಪರಿಸ್ಥಿತಿ ಇರುವಾಗ, ಅನೇಕರು ಭಾರತದಲ್ಲಿ ಆಶ್ರಯ ಪಡೆದರೂ ಸರಿ, ಪಾಕಿಸ್ತಾನದಿಂದ ಓಡಿ ಹೋಗಿ ಜೀವ ಉಳಿಸಿಕೊಳ್ಳಿ’ ಎಂಬ ಘೋಷಣೆ ಕೂಗುತ್ತ ಅನೇಕರು ರಸ್ತೆಗಳಲ್ಲಿ ಮೆರವಣಿಗೆ ಸಾಗುತ್ತಿರುವುದು ಯಾಕೆ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಯುವಕ ‘ಆ ಘೋಷಣೆ ಸರಿಯಾಗಿಯೇ ಇದೆ, ನಾನೂ ಪಾಕಿಸ್ತಾನದಲ್ಲಿ ಹುಟ್ಟಬಾರದಿತ್ತು ಎಂದೇ ಅನ್ನಿಸುತ್ತಿದೆ’ ಎಂದು ಮೊದಲು ಹೇಳಿದ್ದಾನೆ.

‘1947ರಲ್ಲಿ ಭಾರತದಿಂದ ಪಾಕಿಸ್ತಾನ ಪ್ರತ್ಯೇಕವಾಗದೆ ಇದ್ದರೆ, ಇಂದು ನಾವೂ ಕೂಡ 20 ರೂಪಾಯಿಗೆ ಕೆಜಿ ಟೊಮ್ಯಾಟೋ, 150 ರೂಪಾಯಿಗೆ ಕೆಜಿ ಚಿಕನ್​, ​ 50 ರೂಪಾಯಿಗೆ ಲೀಟರ್​ ಪೆಟ್ರೋಲ್​ ಖರೀದಿಸಬಹುದಿತ್ತು. ಆಗ ನಾವು ಒಂದು ಇಸ್ಲಾಂ ರಾಷ್ಟ್ರವನ್ನೇನೋ ಪಡೆದೆವು. ಆದರೆ ದುರದೃಷ್ಟಕ್ಕೆ ಇಲ್ಲಿ ಇಸ್ಲಾಂ ಧರ್ಮವನ್ನು ಸ್ಥಾಪಿಸಲು ಸಾಧ್ಯವೇ ಆಗಲಿಲ್ಲ. ಭಾರತದ ಪ್ರಧಾನಿ ನರೇಂದ್ರ ಮೋದಿ ನಿಜಕ್ಕೂ ಅತ್ಯುತ್ತಮ ಆಡಳಿತಗಾರರು. ಅವರ ದೇಶದ ಜನರು ಅವರನ್ನು ತುಂಬ ಗೌರವಿಸುತ್ತಾರೆ. ಅವರು ಹೇಳಿದ್ದನ್ನು ಅನುಸರಿಸುತ್ತಾರೆ. ನಮಗೆ ಮೋದಿಯವರು ಸಿಕ್ಕಿದ್ದರೆ, ಇಮ್ರಾನ್ ಖಾನ್​, ಶರೀಫ್​, ಫರ್ವೇಜ್​ ಮುಷರಫ್​ ಯಾರೂ ಬೇಡವಾಗಿತ್ತು. ಈಗಾದರೂ ಸರಿ, ನಮಗೆ ನರೇಂದ್ರ ಮೋದಿಯ ಅಗತ್ಯವಿದೆ. ಅವರು ಮಾತ್ರ ಈ ದೇಶವನ್ನು ಮತ್ತೊಮ್ಮೆ ಸರಿಪಡಿಸಬಹುದು. ಅಭಿವೃದ್ಧಿಗೊಳಿಸಬಹುದು’ ಎಂದು ಆ ಯುವಕ ಹೇಳಿದ್ದಾನೆ.

ಇದನ್ನೂ ಓದಿ: Javed Akhtar: 26/11 ಮುಂಬೈ ದಾಳಿಕೋರರು ಇನ್ನೂ ನಿಮ್ಮಲ್ಲೇ ಇದ್ದಾರೆ! ಪಾಕಿಸ್ತಾನಕ್ಕೆ ಅಖ್ತರ್ ಖಡಕ್ ಉತ್ತರ

‘ನಾವು ಮೋದಿ ಆಡಳಿತದಡಿಯಲ್ಲಿ ಬದುಕಲು ಸಿದ್ಧರಿದ್ದೇವೆ. ಮೋದಿ ಮಹಾನ್​ ನಾಯಕರು. ಅವರು ಕೆಟ್ಟವರಲ್ಲ. ಯಾವಾಗ ನಾವು ನಮ್ಮ ಮಕ್ಕಳ ಹೊಟ್ಟೆ ತುಂಬಿಸಲೂ ವಿಫಲರಾಗುತ್ತೇವೋ, ಆಗ ನಾವಿರುವ ನಮ್ಮ ದೇಶಕ್ಕೇ ಶಾಪ ಹಾಕಲು ಶುರು ಮಾಡುತ್ತೇವೆ. ದಯವಿಟ್ಟು ಮೋದಿಯನ್ನು ನಮಗೆ ಕೊಡು, ಅವರು ನಮ್ಮ ದೇಶವನ್ನು ಆಳುವಂತೆ ಮಾಡು ಎಂದು ನಾವು ಅಲ್ಲಾನನ್ನು ಬೇಡಿಕೊಳ್ಳುತ್ತೇವೆ’ ಎಂದು ಆ ಯುವಕ ಕಣ್ತುಂಬಿಕೊಂಡು ಹೇಳಿರುವದನ್ನು ವಿಡಿಯೊದಲ್ಲಿ ನೋಡಬಹುದಾಗಿದೆ.

ಪತ್ರಕರ್ತೆಯೊಂದಿಗೆ ಪಾಕಿಸ್ತಾನಿ ಯುವಕನ ಮಾತು:

Exit mobile version