ಬೆಳಗಾವಿ: 2022ರ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಸಿದ ‘ಇನ್ವೆಸ್ಟ್ ಕರ್ನಾಟಕ’ ಸಮಾವೇಶದ (Invest Karnataka conference) ಮೂಲಕ 57 ಕಂಪನಿಗಳೊಂದಿಗೆ 5,41,369 ಕೋಟಿ ರೂ.ಗಳ ಹೂಡಿಕೆಗೆ ಸರ್ಕಾರವು ಒಡಂಬಡಿಕೆ ಮಾಡಿಕೊಂಡಿದೆ. ಇದೇ ರೀತಿಯಲ್ಲಿ, ಹುಬ್ಬಳ್ಳಿಯಲ್ಲಿ ನಡೆಸಲಾದ ಎಫ್ಎಂಸಿಜಿ ಹೂಡಿಕೆದಾರರ ಸಮಾವೇಶದ (FMCG Investors Meet) ಮುಖಾಂತರ 16 ಕಂಪನಿಗಳೊಂದಿಗೆ ರಾಜ್ಯದಲ್ಲಿ 1,275 ಕೋಟಿ ರೂ. ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (Minister MB Patil) ಅವರು ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ಹೇಳಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂ.ಬಿ. ಪಾಟೀಲ್, ಇನ್ವೆಸ್ಟ್ ಕರ್ನಾಟಕದಲ್ಲಿ ಕುದುರಿಸಲಾದ ಒಡಂಬಡಿಕೆಗಳ ಪೈಕಿ 7 ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದ್ದು, ಇವುಗಳಿಗೆ ಭೂಮಿ, ನೀರು ಮತ್ತು ವಿದ್ಯುತ್ ಪೂರೈಕೆ ಒದಗಿಸಲಾಗುವುದು. ಇವು ಬೃಹತ್ ಯೋಜನೆಗಳಾದ್ದರಿಂದ ಕಾರ್ಯಾರಂಭ ಮಾಡಲು 3-4 ವರ್ಷಗಳು ಹಿಡಿಯುತ್ತವೆ ಎಂದು ವಿವರಿಸಿದರು.
ಇದನ್ನೂ ಓದಿ: CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್ ಮಾಡಿದ ಯತ್ನಾಳ್ ಎಂದ ಸಿದ್ದರಾಮಯ್ಯ
ಎಫ್ಎಂಸಿಜಿ ಸಮಾವೇಶದಲ್ಲಾದ 16 ಒಡಂಬಡಿಕೆಗಳ ಪೈಕಿ 3 ಯೋಜನೆಗಳಿಗೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಅನುಮೋದನೆ ಕೊಡಲಾಗಿದ್ದು, ಇವುಗಳಿಗೂ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಮೇಲ್ಕಂಡ ಎರಡೂ ಬಗೆಯ ಯೋಜನೆಗಳು ಅನುಷ್ಠಾನದ ನಾನಾ ಹಂತಗಳಲ್ಲಿವೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಇನ್ವೆಸ್ಟ್ ಕರ್ನಾಟಕ-2022 ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಹಿಂದಿನ ಸರ್ಕಾರವು 74.99 ಕೋಟಿ ರೂ. ವೆಚ್ಚ ಮಾಡಿದೆ. ಹಾಗೆಯೇ, ಹುಬ್ಬಳ್ಳಿಯಲ್ಲಿ 2022ರ ನವೆಂಬರ್‌ನಲ್ಲಿ ನಡೆಸಲಾದ ಹೂಡಿಕೆದಾರರ ಸಮಾವೇಶಕ್ಕೆ 12.23 ಲಕ್ಷ ರೂ.ಗಳನ್ನು ಸರ್ಕಾರದ ವತಿಯಿಂದ ಖರ್ಚು ಮಾಡಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ವಿವರಿಸಿದರು.
ಸ್ಥಳೀಯರಿಗೆ ಶೇ.70 ಉದ್ಯೋಗ ನೀಡಬೇಕೆನ್ನುವ ನಿಯಮ
ಸರ್ಕಾರದ ನಿಯಮಾವಳಿಗಳ ಪ್ರಕಾರ ಈ ಉದ್ಯಮಗಳಲ್ಲಿ `ಡಿ’ ಗ್ರೂಪ್ ಹುದ್ದೆಗಳನ್ನು ಕನ್ನಡಿಗರಿಗೆ ಶೇಕಡಾ 100ರಷ್ಟು ಮತ್ತು ಒಟ್ಟಾರೆಯಾಗಿ ಶೇ.70ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಕೊಡಬೇಕೆನ್ನುವ ನಿಯಮ ರೂಪಿಸಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಮೋಡ ಬಿತ್ತನೆಗೆ ಮುಂದಾದ ಸರ್ಕಾರ; ಶೀಘ್ರ ತೀರ್ಮಾನವೆಂದ ಡಿಕೆಶಿ
ರಾಜ್ಯದಲ್ಲಿ ತೀವ್ರ ಬರಗಾಲ ಕಾಡುತ್ತಿದೆ. ಮಳೆ ಅಂಶವೇ ಇಲ್ಲ ಎಂಬಂತೆ ಆಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಅಲ್ಲದೆ, ಕುಡಿಯಲು ಸೇರಿದಂತೆ ಅನೇಕ ಕಾರಣಗಳಿಗೆ ಮಳೆ ಬಂದರೆ ಅನುಕೂಲವಾಗಲಿದೆ. ಅಲ್ಲದೆ, ಕೇಂದ್ರ ಸರ್ಕಾರ ಈಗಾಗಲೇ ಮಳೆ ಸಮಸ್ಯೆ ಆಗಿರುವ ಬಗ್ಗೆ ವರದಿ ನೀಡಿದೆ. ಹೀಗಾಗಿ ರಾಜ್ಯದಲ್ಲಿ ಮೋಡ ಬಿತ್ತನೆ (cloud seeding) ಆಗಬೇಕು ಎಂದು ಶಾಸಕ ಪ್ರಕಾಶ್ ಕೋಳಿವಾಡ (MLA Prakash Koliwada) ಅವರು ವಿಧಾನಸಭಾ ಕಲಾಪದ (Belagavi Winter Session) ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದರು. ಇದಕ್ಕೆ ಸಚಿವ ಎಚ್.ಕೆ. ಪಾಟೀಲ್ (Minister HK Patil) ಧ್ವನಿಗೂಡಿಸಿದ್ದಾರೆ. ಆಗ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar), ಮೋಡ ಬಿತ್ತನೆ ಈ ಹಿಂದೆ ಯಶಸ್ಸು ಕಂಡಿದೆ. ಹೀಗಾಗಿ ಈ ಬಗ್ಗೆ ಆರ್ಥಿಕ ಇಲಾಖೆ ಜತೆ ಮಾತನಾಡಿ ತೀರ್ಮಾನ ಪ್ರಕಟಿಸಲಾಗುವುದು ಎಂದು ಹೇಳಿದರು.
ಶೂನ್ಯ ವೇಳೆಯಲ್ಲಿ ಮೋಡ ಬಿತ್ತನೆ ಬಗ್ಗೆ ಗಮನ ಸೆಳೆದ ಶಾಸಕ ಪ್ರಕಾಶ್ ಕೋಳಿವಾಡ, ಮಳೆ ಇಲ್ಲದೆ ರೈತರಿಗೆ ಸಮಸ್ಯೆ ಆಗಿದೆ. ಕೇಂದ್ರ ಸರ್ಕಾರ ಈಗಾಗಲೇ ಮಳೆ ಸಮಸ್ಯೆ ಆಗಿರುವ ಬಗ್ಗೆ ವರದಿ ನೀಡಿದೆ. ಮೋಡ ಬಿತ್ತನೆ ಮಾಡಿರುವುದರಿಂದ ಮಳೆಯಾಗಲಿದೆ. ಕಡಿಮೆ ವೆಚ್ಚದಲ್ಲಿ ಮಳೆ ತರಿಸಿ ರೈತರಿಗೆ ಅನುಕೂಲ ಮಾಡಬಹುದು. ಅದಕ್ಕಾಗಿ ಸರ್ಕಾರ ಅನುದಾನ ನೀಡುವಂತೆ ಮನವಿ ಮಾಡಿದರು.
ಬೇಗ ಮೋಡ ಬಿತ್ತನೆ ಆಗಲಿ: ಎಚ್.ಕೆ. ಪಾಟೀಲ್
ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ಎಚ್.ಕೆ. ಪಾಟೀಲ್, ಅತ್ಯಂತ ಗಂಭೀರ ಹಾಗೂ ಮಹತ್ವದ ವೈಜ್ಞಾನಿಕ ವಿಚಾರ ಎತ್ತಿದ್ದಾರೆ. ಇಂದು ಸೇರಿದಂತೆ ಇನ್ನೆರಡು ದಿನ ಮೋಡ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದನ್ನು ಉಪಯೋಗ ಮಾಡಿಕೊಳ್ಳಬೇಕು. ಅನ್ನೋದು ಅವರ ಆಶಾಭಾವನೆಯಾಗಿದೆ. ಕಡಿಮೆ ವೆಚ್ಚದಲ್ಲಿ ಮಾಡಬಹುದು ಅಂತ ಹೇಳಿದ್ದಾರೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಚ್ಚು ಮಾಹಿತಿ ಕೊಡುತ್ತಾರೆ ಎಂದು ಹೇಳಿದರು.
ಎಷ್ಟು ಖರ್ಚಾಗುತ್ತದೆಯೋ ಅಷ್ಟು ಕೊಟ್ಟರೆ ಸಾಕು
ಆಗ ಡಿಸಿಎಂ ಡಿಕೆಶಿ ಉತ್ತರ ನೀಡಿ, ಮೋಡ ಬಿತ್ತನೆಯನ್ನು ಬಹಳ ರಾಜ್ಯಗಳಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ಈ ಹಿಂದೆ ಎಚ್.ಕೆ ಪಾಟೀಲ್ ಇದನ್ನು ಮಾಡಿದ್ದರು. ಅಲ್ಲದೆ, ಇದಕ್ಕೆ ಎಷ್ಟು ಖರ್ಚಾಗುತ್ತದೆಯೋ ಅಷ್ಟು ಕೊಟ್ಟರೆ ಸಾಕು. ಹೆಚ್ಚಿಗೆ ಏನನ್ನೂ ಕೊಡುವುದು ಬೇಡ ಅಂತ ಪ್ರಕಾಶ್ ಕೋಳಿವಾಡ ಹೇಳಿದ್ದಾರೆ. ಹೀಗಾಗಿ ನಾನು ಫೈನಾನ್ಸ್ ಅವರ ಜತೆ ಮಾತನಾಡುತ್ತೇನೆ. ಈ ಹಿಂದೆ ಅವರ ಜಿಲ್ಲೆಯಲ್ಲಿ ಮಾಡಿ ಅದರ ಅನುಕೂಲ ಪಡೆದಿದ್ದಾರೆ. ಹಣಕಾಸು ಇಲಾಖೆ ಜತೆ ಚರ್ಚೆ ಮಾಡಿ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Belagavi Winter Session: ಗ್ಯಾರಂಟಿಗೆ 11000 ಕೋಟಿ ರೂ. ಬಳಕೆ; ಯಾವುದಕ್ಕೆ ಎಷ್ಟು? ಲೆಕ್ಕ ಕೊಟ್ಟ ಸರ್ಕಾರ!
ಸರ್ಕಾರ ಕೊಡದಿದ್ದರೆ ನನ್ನ ದುಡ್ಡಲ್ಲಿ ಮಾಡುತ್ತೇನೆ!
ಈ ವೇಳೆ ಮಾತನಾಡಿದ ಶಾಸಕ ಪ್ರಕಾಶ್ ಕೋಳಿವಾಡ, ಒಂದು ವೇಳೆ ಸರ್ಕಾರ ಹಣ ಕೊಡದಿದ್ದರೆ ನಾನೇ ಸ್ವತಃ ನನ್ನ ಹಣದಿಂದ ಮೋಡ ಬಿತ್ತನೆ ಮಾಡಿಸುತ್ತೇನೆ ಎಂದು ಹೇಳಿದರು.