ನವ ದೆಹಲಿ: ದೇಶದಲ್ಲಿ ನಾಲ್ಕು ಪ್ರಮುಖ ಕನ್ಸಲ್ಟಿಂಗ್ ಕಂಪನಿಗಳಲ್ಲಿ ಮುಂಬರುವ ತಿಂಗಳುಗಳಲ್ಲಿ ಒಟ್ಟು 80,000 ಉದ್ಯೋಗಿಗಳ ನೇಮಕಾತಿ ( Job market) ಪ್ರಕ್ರಿಯೆ ನಡೆಯಲಿದೆ. ಕೋವಿಡ್-19 ಬಿಕ್ಕಟ್ಟು ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಚಟುವಟಿಕೆಗಳು ಗಣನೀಯ ವಿಸ್ತರಿಸುತ್ತಿರುವುದು ಇದಕ್ಕೆ ಕಾರಣ.
ಡೆಲಾಯಿಟ್, ಪಿಡಬ್ಲ್ಯುಸಿ, ಇವೈ ಮತ್ತು ಕೆಪಿಎಂಜಿ ( Deloitte, PWC, EY, KPMG) ಒಟ್ಟಾಗಿ 80 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿವೆ. ಉದ್ಯಮ ವಲಯದಲ್ಲಿ ಉಂಟಾಗುತ್ತಿರುವ ಬೇಡಿಕೆ ಮತ್ತು ಉದ್ಯೋಗಿಗಳ ವಲಸೆ ಹೆಚ್ಚಿರುವುದರಿಂದ ನೇಮಕ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕಂಪನಿಗಳು ಮುಂದಾಗಿವೆ. ಪಿಡಬ್ಲ್ಯುಸಿ ಇಂಡಿಯಾ ಕಳೆದ ವರ್ಷ 3,000 ಹುದ್ದೆಗಳನ್ನು ಸೃಷ್ಟಿಸಿತ್ತು. ಮುಂದಿನ 5 ವರ್ಷಗಳಲ್ಲಿ 10,000 ಹೆಚ್ಚುವರಿ ನೇಮಕಾತಿಗೆ ಮುಂದಾಗಿದೆ. ಮೇಲ್ಕಂಡ ನಾಲ್ಕೂ ಕಂಪನಿಗಳು ಭಾರತದಲ್ಲಿ ಮುಂದಿನ 2-3 ವರ್ಷಗಳಲ್ಲಿ 210,000 ತಂತ್ರಜ್ಞಾನ ಮತ್ತು ತಂತ್ರಜ್ಞಾನೇತರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ. ಜೂನ್ ಅಂತ್ಯಕ್ಕೆ ಇವುಗಳ ಒಟ್ಟು ಆದಾಯ 21,500 ಕೋಟಿ ರೂ. ದಾಟುವ ಸಾಧ್ಯತೆಯೂ ಇದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಯಾವ ಹುದ್ದೆಗಳಿಗೆ ಬೇಡಿಕೆ?
ತಂತ್ರಜ್ಞಾನಕ್ಕೆ ಸಂಬಂಧಿಸಿ ಡೆವಲಪರ್, ಸೈಬರ್‌ಸೆಕ್ಯುರಿಟಿ, ಕ್ಲೌಡ್ ಟೆಕ್, ಮೊಬಿಲಿಟಿ, ಡೇಟಾ ಸೈನ್ಸ್, ಅನಾಲಿಟಿಕ್ಸ್ ವಿಭಾಗದ ಹುದ್ದೆಗಳಿಗೆ ಬೇಡಿಕೆ ಇದೆ. ತಂತ್ರಜ್ಞಾನೇತರ ವಿಭಾಗದಲ್ಲಿ ಬಿಸಿನೆಸ್ ವಿಶ್ಲೇಷಣೆ, ಹಣಕಾಸು ತಜ್ಞರು, ಬಿಸಿನೆಸ್ ಆಪರೇಷನ್ ಕನ್ಸಲ್ಟಿಂಗ್‌ಗೆ ಬೇಡಿಕೆ ಉಂಟಾಗಿದೆ.
ಪ್ರತಿಭಾವಂತರ ಕೊರತೆ: ಹೀಗಿದ್ದರೂ, ಪ್ರತಿಭಾವಂತ ಉದ್ಯೋಗಿಗಳ ಕೊರತೆ ಉಂಟಾಗಿದೆ. 85% ಕಂಪನಿಗಳು ಪ್ರತಿಭಾವಂತ ಉದ್ಯೋಗಿಗಳ ಅಭಾವವನ್ನು ಎದುರಿಸುತ್ತಿವೆ. ಪ್ರತಿಭೆ-ಕೌಶಲದ ಕೊರತೆ ತೀವ್ರವಾಗಿದೆ.