ಹೊಸದಿಲ್ಲಿ: ಹೆಚ್ಚುತ್ತಿರುವ ಕೃತಕ ಬುದ್ಧಿಮತ್ತೆ, ಕಡಿಮೆಯಾಗುತ್ತಿರುವ ಕಚೇರಿ ಕೆಲಸ ಹಾಗೂ ಹೆಚ್ಚುತ್ತಿರುವ ವರ್ಕ್ ಫ್ರಂ ಹೋಮ್ (Work from Home) ಸಂಸ್ಕೃತಿಯ ಪರಿಣಾಮ ಭಾರತದಲ್ಲಿ ಸುಮಾರು 85% ಉದ್ಯೋಗಿಗಳು ತಮ್ಮ ಕೆಲಸದ ಭದ್ರತೆಯ (Job Security) ಬಗ್ಗೆ ಆತಂಕ ಹೊಂದಿದ್ದಾರೆ. ಇದು ಸಮೀಕ್ಷೆಯೊಂದರ (Job Survey) ಫಲಿತಾಂಶ.
70 ಗಂಟೆಗಳ ಕೆಲಸದ ವಾರದ (70 hours work week) ಕುರಿತು ಚರ್ಚೆ, ಹೈಬ್ರಿಡ್ ಮತ್ತು ರಿಮೋಟ್ ವರ್ಕ್ ಮಾಡೆಲ್‌ಗಳಿಗೆ ಬೇಡಿಕೆಯ ಹೆಚ್ಚಳ, ಕಂಪನಿಗಳು ಕೋವಿಡ್ ನಂತರದ ಇನ್-ಆಫೀಸ್ ಸಹಜ ಸ್ಥಿತಿಗೆ ಮರಳುತ್ತಿರುವುದು ಮತ್ತು ಆರ್ಥಿಕ ಚಂಚಲತೆಯಿಂದಾಗಿ ಉದ್ಯೋಗ ಭದ್ರತೆಯ ಬಗ್ಗೆ ವ್ಯಾಪಕ ಕಾಳಜಿ- ಹೀಗೆ ಹೊಸ ಸಮೀಕ್ಷೆಯು ಉದ್ಯೋಗ ಮಾರುಕಟ್ಟೆಯಲ್ಲಿನ (Job Market) ಹಲವಾರು ದೃಷ್ಟಿಕೋನಗಳನ್ನು ಪರಿಶೋಧಿಸಿದೆ.
ಕಂಪನಿ ರಿವ್ಯೂ ಮತ್ತು ಸಂಬಳಗಳ ಕುರಿತ ಒಳನೋಟಗಳ ಸಂಸ್ಥೆಯಾದ AmbitionBox, 2023ರ ಕುರಿತು ನಡೆಸಿದ ಸಮೀಕ್ಷೆಯ ವರದಿಯಲ್ಲಿ ಈ ಅಂಶಗಳನ್ನು ಹೊರಗೆಡಹಿದೆ. ಜಾಬ್ ಮಾರ್ಕೆಟ್‌ನಲ್ಲಿ ಕಳೆದ ವರ್ಷದ ಪ್ರಮುಖ ಪ್ರವೃತ್ತಿಗಳು, ವಿವಾದಗಳು, ಉದ್ಯೋಗಿಗಳ ಸ್ಥಿತಿಗತಿಯ ಕುರಿತು ಸಮಗ್ರ ಸಮೀಕ್ಷೆ ನಡೆಸಿದೆ. ಸಮೀಕ್ಷೆಯು ಉದ್ಯೋಗಿಗಳ ಭಾವನೆಗಳು ಮತ್ತು 2024ರ ಬಗೆಗಿನ ನಿರೀಕ್ಷೆಗಳ ಕುರಿತು ಒಳನೋಟಗಳನ್ನು ಸಹ ಒಳಗೊಂಡಿದೆ.
ಸಮೀಕ್ಷೆಯ ಪ್ರಮುಖ ಫಲಿತಾಂಶಗಳು
81% ಉದ್ಯೋಗಿಗಳು ಈ ವರ್ಷ ಹೈಬ್ರಿಡ್/ರಿಮೋಟ್ ಕೆಲಸದ ಮಾದರಿಯ ಬಗ್ಗೆ ಸಂತೋಷಪಟ್ಟಿದ್ದಾರೆ ಎಂದು ಸಮೀಕ್ಷೆಯು ಸೂಚಿಸಿದೆ. ಗಣನೀಯ ಸಂಖ್ಯೆಯ ಅಂದರೆ 52% ಉದ್ಯೋಗಿಗಳು 2024ರಲ್ಲಿ ಅದನ್ನೇ ಮುಂದುವರಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕ 5 ಅಥವಾ 6 ದಿನಗಳ ಕೆಲಸದ ವಾರಕ್ಕೆ ಮರಳಲು ಅಷ್ಟೊಂದು ಇಷ್ಟ ಹೊಂದಿಲ್ಲ. 30%ರಷ್ಟು ಮಂದಿ ಸಂಪೂರ್ಣವಾಗಿ ದೂರದಿಂದಲೇ ಕೆಲಸ ಮಾಡುವ ವಿಭಿನ್ನ ಆದ್ಯತೆಯನ್ನು ಸೂಚಿಸಿದ್ದಾರೆ.
ವರ್ಕ್- ಲೈಫ್ ಸಮತೋಲನ
ಉದ್ಯೋಗಿಗಳ ಆದ್ಯತೆಗಳಲ್ಲಿ ಸ್ಪಷ್ಟವಾದ ಬದಲಾವಣೆ ಕಂಡುಬಂದಿದೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ 45% ಮುಂದಿನ ವರ್ಷ ಉತ್ತಮ ಕೆಲಸ-ಜೀವನದ ಸಮತೋಲನವನ್ನು ನಿರೀಕ್ಷಿಸಿದ್ದಾರೆ. ಅರ್ಧಕ್ಕಿಂತ ಹೆಚ್ಚು (53%) ಮಂದಿ ʼ70 ಗಂಟೆಗಳ ಕೆಲಸದ ವಾರʼವನ್ನು (70 hours work week) ಒಪ್ಪುವುದಿಲ್ಲ. 66% ಪ್ರತಿ ವಾರಕ್ಕೆ 40-60 ಗಂಟೆಗಳ ಕೆಲಸವು ಉದ್ಯೋಗಿಗಳ ಉತ್ಪಾದಕತೆ ಮತ್ತು ಯೋಗಕ್ಷೇಮಕ್ಕೆ ಸೂಕ್ತ ಎಂದು ಪ್ರತಿಪಾದಿಸಿದ್ದಾರೆ.
ʼಸಂಸ್ಥೆಯ ಆರ್ಥಿಕ ಆರೋಗ್ಯ, ಸ್ಥಿರವಾದ ನಾಯಕತ್ವ ಮತ್ತು ಸಂಸ್ಥೆಯ ಭವಿಷ್ಯದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನʼಕ್ಕೆ ಸಂಬಂಧಿಸಿದ 2024ರಲ್ಲಿ ತಮ್ಮ ಉದ್ಯೋಗದಾತರ ಸ್ಥಿರತೆಯ ಬಗ್ಗೆ 70% ಮಂದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ, 46% ಪ್ರತಿಕ್ರಿಯಿಸಿದವರು ಮುಂಬರುವ ವರ್ಷದಲ್ಲಿ ತಮ್ಮ ಉದ್ಯೋಗ ಭದ್ರತೆಯ ಬಗ್ಗೆ ಗಮನಾರ್ಹ ಕಾಳಜಿಯನ್ನು ಹೊಂದಿದ್ದಾರೆ.
ಆಂಬಿಷನ್ ಬಾಕ್ಸ್‌ನ ಸಂಸ್ಥಾಪಕ ಮತ್ತು ವ್ಯವಹಾರ ಮುಖ್ಯಸ್ಥ ಮಯೂರ್ ಮುಂಡಾಡ ಪ್ರಕಾರ ಈ ಸಮೀಕ್ಷೆಯು ಈ ಒಳನೋಟಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ಮತ್ತು ಸಹಯೋಗದ ಕೆಲಸದ ವಾತಾವರಣ ಬೆಳೆಸಬಹುದು. ಉದ್ಯೋಗಿಗಳ ಭಾವನೆಗಳು ಮತ್ತು ನಿರೀಕ್ಷೆಗಳಿಗೆ ಪ್ರತಿಕ್ರಿಯಿಸುವ ಮೂಲಕ ಸಂಸ್ಥೆಗಳು ತಮ್ಮ ಉದ್ಯೋಗಿಗಳ ವಿಕಸನಗೊಳ್ಳುತ್ತಿರುವ ಅಗತ್ಯಗಳು ಮತ್ತು ಆದ್ಯತೆಗಳೊಂದಿಗೆ ಸ್ಪಂದಿಸಬಹುದಾಗಿದೆ.
ಸಂಸ್ಥೆಯ ಸಮೀಕ್ಷೆಯಲ್ಲಿ 3400ಕ್ಕೂ ಹೆಚ್ಚು ಉದ್ಯೋಗಿಗಳು ಭಾಗವಹಿಸಿದ್ದಾರೆ. ಇದರಲ್ಲಿ 75% ಪುರುಷ ಪ್ರಾತಿನಿಧ್ಯವಿದೆ. ಪ್ರತಿಕ್ರಿಯಿಸಿದವರಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು 71% ಮತ್ತು 42%ರಷ್ಟು 25-34 ವರ್ಷ ವಯಸ್ಸಿನವರು. ಈ ಸಮೀಕ್ಷೆಯಲ್ಲಿ ಪಟ್ಟಿ ಮಾಡಲಾದ ಹತ್ತಾರು ವಲಯಗಳಲ್ಲಿ ಪ್ರತಿಕ್ರಿಯಿಸಿದ ಹೆಚ್ಚಿನವರು ಐಟಿ ಸೇವೆಗಳ ವಲಯದಿಂದ (20%) ಬಂದಿದ್ದಾರೆ.
ಇದನ್ನೂ ಓದಿ: Jobs for locals: ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಡ್ಡಾಯ: ಸಿಎಂ