Site icon Vistara News

ಅಮೆಜಾನ್‌ನ ಅಲೆಕ್ಸಾ ಯುನಿಟ್‌ನ ನೂರಾರು ಉದ್ಯೋಗ ಕಡಿತ! ಕಾರಣ ಆರ್ಥಿಕ ಹಿಂಜರಿತವಲ್ಲ

Amazon planning to lay off from Alexa unit

ನವದೆಹಲಿ: ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ಯೂನಿಟ್‌ನಲ್ಲಿ (Alexa Unit) ನೂರಾರು ಉದ್ಯೋಗಗಳಿಗೆ ಕತ್ತರಿ (lay off) ಹಾಕುವುದಾಗಿ ಅಮೆಜಾನ್ ಡಾಟ್ ಕಾಮ್ (Amazon) ಶುಕ್ರವಾರ ಘೋಷಣೆ ಮಾಡಿದೆ. ಬದಲಾಗುತ್ತಿರುವ ವ್ಯಾಪಾರ ಆದ್ಯತೆಗಳು ಮತ್ತು ಉತ್ಪಾದಕ ಕೃತಕ ಬುದ್ಧಿಮತ್ತೆಯ (generative artificial intelligence) ಮೇಲೆ ಹೆಚ್ಚು ಒತ್ತು ನೀಡುತ್ತಿರುವ ಕಾರಣಕ್ಕಾಗಿ ಉದ್ಯೋಗಗಳನ್ನು ಕಡಿತ ಮಾಡುತ್ತಿರುವುದಾಗಿ ಅಮೆಜಾನ್ ಹೇಳಿಕೊಂಡಿದೆ. ಈ ಮೇಲ್ ಮಾಹಿತಿಯ ಪ್ರಕಾರ, ಉದ್ಯೋಗ ಕಡಿತವು ಅಲೆಕ್ಸಾದಲ್ಲಿ ಕೆಲಸ ಮಾಡುವ ನೂರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಎಷ್ಟು ಮಂದಿ ಬಾಧಿತರಾಗಿದ್ದಾರೆ ಎಂಬುದನ್ನು ವಿವರಿಸಲು ವಕ್ತಾರರು ನಿರಾಕರಿಸಿದ್ದಾರೆ.

ಆರು ತಿಂಗಳ ಹಿಂದೆ ಬಹುತೇಕ ಕಂಪನಿಗಳು ಆರ್ಥಿಕ ಹಿಂಜರಿತ ಕಾರಣ ನೀಡಿ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಗಳನ್ನು ಕಡಿತ ಮಾಡಿದ್ದವು. ಆದರೆ, ಅಮೆಜಾನ್ ಇದೀಗ ಬೇರೆಯದ್ದೇ ಕಾರಣಗಳನ್ನು ಉದ್ಯೋಗಗಳನ್ನು ಕಡಿತ ಮಾಡುತ್ತಿರುವುದು ಚರ್ಚೆಗೆ ಕಾರಣವಾಗಿದೆ.

ನಮ್ಮ ವ್ಯಾಪಾರದ ಆದ್ಯತೆಗಳೊಂದಿಗೆ ಉತ್ತಮವಾಗಿ ಹೊಂದಾಣಿಕೆ ಮಾಡಲು ನಾವು ನಮ್ಮ ಕೆಲವು ಪ್ರಯತ್ನಗಳನ್ನು ಬದಲಾಯಿಸುತ್ತಿದ್ದೇವೆ. ಈ ಪ್ರಕ್ರಿಯೆಯು ಗ್ರಾಹಕರಿಗೆ ಹೆಚ್ಚು ಮುಖ್ಯವಾಗಿದೆ. ಅಲ್ಲದೇ, ನಮ್ಮ ಸಂಪನ್ಮೂಲಗಳನ್ನು ಹೆಚ್ಚಿಸುವುದು ಮತ್ತು ಉತ್ಪಾದಕ ಎಐ ಮೇಲೆ ಕೇಂದ್ರೀಕರಿಸಿದ ಪ್ರಯತ್ನಗಳನ್ನುಇದು ಒಳಗೊಂಡಿರುತ್ತದೆ ಎಂದು ಅಲೆಕ್ಸಾ ಮತ್ತು ಫೈರ್ ಟಿವಿಯ ಉಪಾಧ್ಯಕ್ಷ ಡೇನಿಯಲ್ ರೌಶ್, ಇಮೇಲ್‌ನಲ್ಲಿ ತಿಳಿಸಿದ್ದಾರೆ.

ಕಳೆದ ಕೆಲವು ವಾರಗಳಿಂದ ಅಮೆಜಾನ್ ತನ್ನ ಅನೇಕ ವಿಭಾಗಗಳನ್ನು ಟ್ರಿಮ್ ಮಾಡುವ ಪ್ರಯತ್ನ ಮಾಡುತ್ತಿದೆ. ಅಮೆಜಾನ್ ತನ್ನ ಸಂಗೀತ ಮತ್ತು ಗೇಮಿಂಗ್ ವಿಭಾಗಗಳು ಮತ್ತು ಕೆಲವು ಮಾನವ ಸಂಪನ್ಮೂಲ ಪಾತ್ರಗಳನ್ನು ಒಳಗೊಂಡಂತೆ ಕಳೆದ ವಾರದಲ್ಲಿ ವಿವಿಧ ವಿಭಾಗಗಳಲ್ಲಿ ಟ್ರಿಮ್ ಮಾಡುವ ಪ್ರಕ್ರಿಯೆ ಆರಂಭಿಸಿತ್ತು.

ಏಳು ತಿಂಗಳ ಹಿಂದೆ ಉದ್ಯೋಗ ಕಡಿತ ಆರಂಭಿಸಿತ್ತು

ಇ-ಕಾಮರ್ಸ್‌ ದಿಗ್ಗಜ ಅಮೆಜಾನ್‌ ವೆಚ್ಚ ನಿಯಂತ್ರಣದ ಭಾಗವಾಗಿ (Amazon layoffs) ತನ್ನ ಜಾಹೀರಾತು ವಿಭಾಗದಲ್ಲಿ ಉದ್ಯೋಗ ಕಡಿತವನ್ನು ಏಳು ತಿಂಗಳ ಹಿಂದೆ ಆರಂಭಿಸಿತ್ತು. ಉದ್ಯೋಗ ಕಡಿತ ಮುನ್ನ ಈ ಕುರಿತು ಇ-ಮೇಲ್‌ ಮೂಲಕ ಸಂಬಂಧಿಸಿದ ಉದ್ಯೋಗಿಗಳಿಗೆ ತಿಳಿಸಲಾಗಿತ್ತು.

ಅಮೆಜಾನ್‌ನ ಜಾಹೀರಾತು ವಿಭಾಗದ ಹಿರಿಯ ಉಪಾಧ್ಯಕ್ಷ ಪೌಲ್‌ ಕೋಟಾಸ್‌ ಅವರು, ಉದ್ಯೋಗಿಗಳಿಗೆ ಲೇಆಫ್‌ ಬಗ್ಗೆ ಮಾಹಿತಿ ತಿಳಿಸಿದ್ದರು. ಸಿಬ್ಬಂದಿ ಬಲದಲ್ಲಿ ಸಣ್ಣ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ನವ ದೆಹಲಿ ಮತ್ತು ನ್ಯೂಯಾರ್ಕಿನಲ್ಲಿರುವ ಕಂಪನಿಯ ಉದ್ಯೋಗಿಗಳ ಮೇಲೆ ಇದು ಪ್ರಭಾವ ಬೀರಲಿದೆ. ಕಂಪನಿಯೊಳಗೆಯೇ ಬೇರೆ ಉದ್ಯೋಗ ಕಂಡುಕೊಳ್ಳಲು ಕೂಡ ಉದ್ಯೋಗಿಗಳಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಅಮೆಜಾನ್‌ 27,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಳೆದ ಜನವರಿಯಲ್ಲಿ 18,000 ಹುದ್ದೆ ಕಡಿತವನ್ನು ಘೋಷಿಸಲಾಗಿತ್ತು. ಕಳೆದ ತಿಂಗಳು 9000 ಸಿಬ್ಬಂದಿಯನ್ನು ವಜಾಗೊಳಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: Job Fair: ಮೈಸೂರಿನಲ್ಲಿ ನ. 19ರಂದು ಅನ್ನದಾತರ ಮಕ್ಕಳಿಗಾಗಿ ಉದ್ಯೋಗ ಮೇಳ

Exit mobile version