ಬೆಂಗಳೂರು: ರಾಜ್ಯದಲ್ಲಿ ದೊಡ್ಡ ನಕಲಿ ನೇಮಕಾತಿ ಹಗರಣವೊಂದು ಬೆಳಕಿಗೆ ಬಂದಿದೆ. ಸರಕಾರಿ ಇಲಾಖೆಯೊಂದರ ಹೆಸರಿನಲ್ಲಿ ವಂಚಕರ ಜಾಲವೊಂದು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಪ್ರಕ್ರಿಯೆಗಳನ್ನೂ ಆರಂಭಿಸಿತ್ತು. ಈ ವಿಚಾರ ಈಗ ಮೂಲ ಇಲಾಖೆಗೆ ಗೊತ್ತಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ರಾಜ್ಯದ ಪಶು ಸಂಗೋಪನಾ ಇಲಾಖೆಯ ಹೆಸರಿನಲ್ಲಿ ಈ ನಕಲಿ ಅಧಿಸೂಚನೆ ಹೊರಡಿಸಲಾಗಿದೆ. ಇಲಾಖೆಯಲ್ಲಿ ವಿವಿಧ ಸಹಾಯಕ ಹುದ್ದೆಗಳು ಖಾಲಿ ಇವೆ ಎಂದು ಅದರಲ್ಲಿ ಹೇಳಲಾಗಿತ್ತು. ಈ ಅಸಾಮಿಗಳು ಎಷ್ಟು ಚಾಲಾಕಿಗಳೆಂದರೆ ಪಶುಸಂಗೋಪನಾ ಇಲಾಖೆಯೇ ಅಧಿಸೂಚನೆ ಹೊರಡಿಸಿದೆ ಎನ್ನುವಂತೆಯೇ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡು ಪ್ರಕಟ ಮಾಡಿದ್ದರು.
www.ahvs.kar.in ಎಂಬ ವೆಬ್‌ಸೈಟ್ ರಚಿಸಿ ಅದರಲ್ಲೇ ಅಧಿಸೂಚನೆ ಪ್ರಕಟವಾಗಿದೆ. ಸಾಮಾನ್ಯವಾಗಿ ನೋಡುವವರಿಗೆ ಇದರಲ್ಲಿ ಯಾವುದೇ ವಂಚನೆ ಕಾಣುವುದಕ್ಕೆ ಸಾಧ್ಯವೇ ಇಲ್ಲ. ಅಧಿಸೂಚನೆಗೇ ಪಶು ಸಂಗೋಪನಾ ಸಚಿವರಾಗಿರುವ ಪ್ರಭು ಚೌಹಾಣ್ ಅವರ ನಕಲಿ ಸಹಿಯನ್ನೂ ಹಾಕಲಾಗಿದೆ.
ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಲ್ಲಿ ಖಾಲಿ ಹುದ್ದೆ ಇದೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದಕ್ಕೆ ಮೀಸಲಿರಿಸಿದ 93 ಹುದ್ದೆಗಳಿವೆ ಎಂದು ಅದರಲ್ಲಿ ತಿಳಿಸಲಾಗಿತ್ತು. ಪ್ರಮುಖವಾಗಿ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಹಾಗೂ ಡಿ ಗ್ರೂಪ್ ನೇಮಕಾತಿ ಹೆಸರಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ.
ಅಧಿಸೂಚನೆಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ ಎಂಬಂತೆ ಬಿಂಬಿಸಿದ್ದಾರೆ ವಂಚಕರು. ಸಾಕಷ್ಟು ಮಂದಿ ಈ ಅಧಿಸೂಚನೆ ನಂಬಿ ಅರ್ಜಿಯನ್ನೂ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇದನ್ನು ಪರಿಶೀಲಿಸಿ ವಿಶೇಷ ನೇರ ನೇಮಕಾತಿ ಎಂದು ಅಯ್ಕೆ ಪಟ್ಟಿಯನ್ನೂ ವಂಚಕರು ಪ್ರಕಟಿಸಿದ್ದಾರೆ. ಅಂತಿಮ ಹಾಗೂ ತಾತ್ಕಾಲಿಕ ಅಯ್ಕೆ ಪಟ್ಟಿ ಎಂದು ಯಾವ ಸಂಶಯವೂ ಬಾರದಂತೆ ವಿವರ ನೀಡಲಾಗಿದೆ. ನಕಲಿ ಅಧಿಸೂಚನೆಯ ಪ್ರತಿಯನ್ನು ಮುಖ್ಯಮಂತ್ರಿಗಳ ಕಚೇರಿಗೂ ಕಳಿಸಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿರುವುದು ವಿಶೇಷ.
ಗೊತ್ತಾಗಿದ್ದು ಹೇಗೆ?
ಈ ನಡುವೆ, ನೇಮಕಾತಿ ಪ್ರಕ್ರಿಯೆಯ ಬಗ್ಗೆ ಪಶು ಸಂಗೋಪನಾ ಇಲಾಖೆಗೆ ಯಾರೂ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಲಾಖೆಯಿಂದ ಯಾವುದೇ ಅಧಿಸೂಚನೆ ಹೊರಡಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಬಳಿಕ ಪರಿಶೀಲಿಸಿದಾಗ ನಕಲಿ ಅಧಿಸೂಚನೆ ಹೊರಡಿಸಿರುವುದು ಪತ್ತೆಯಾಗಿದೆ.
ವಂಚಕರ ವಿರುದ್ಧ ದೂರು
ಸಚಿವರು ಮತ್ತು ಆಯುಕ್ತರ ನಕಲಿ ಸಹಿ ಮಾಡಿ ನೇಮಕಾತಿಯ ನಕಲಿ ಅಧಿಸೂಚನೆ ಬಿಡುಗಡೆ ಮಾಡಿರುವ ವಂಚಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇದೀಗ ಸಂಜಯ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕರಾದ ರಮೇಶ್ ಅವರು ನೀಡಿರುವ ದೂರನ್ನು ಆಧರಿಸಿ ಸಂಜಯ ನಗರ ಪೊಲೀಸರು ದೂರು ಪಡೆದು ಎಫ್‌ಐಆರ್ ದಾಖಲಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಈ ನಡುವೆ, ಅದೆಷ್ಟು ಮಂದಿ ಈ ನಕಲಿ ಅಧಿಸೂಚನೆ ನಂಬಿ ಅರ್ಜಿ ಸಲ್ಲಿಸಿದ್ದಾರೋ? ಯಾರೆಲ್ಲ ನಕಲಿ ನೇಮಕಾತಿ ಪತ್ರ ಪಡೆದಿದ್ದಾರೋ ಗೊತ್ತಿಲ್ಲ.