Site icon Vistara News

Google lays off: ಗೂಗಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ; ಕೆಲಸ ಕಳೆದುಕೊಳ್ಳುವವರ ಸಂಖ್ಯೆ ಎಷ್ಟು?

layoff

layoff

ನವದೆಹಲಿ: ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಸರ್ಚ್‌ ಎಂಜಿನ್‌ ದೈತ್ಯ ಗೂಗಲ್‌ ಮುಂದಾಗಿದೆ (Google lays off). ಅದರ ಭಾಗವಾಗಿ ನೂರಾರು ಹಾರ್ಡ್‌ವೇರ್‌ ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ವಿಶೇಷವಾಗಿ ವರ್ಧಿತ ರಿಯಾಲಿಟಿ (Augmented reality-AR) ವಿಭಾಗದ ಮೇಲೆ ಈ ಕ್ರಮ ಗಂಭೀರ ಪರಿಣಾಮ ಬೀಳಲಿದೆ. ಪಿಕ್ಸೆಲ್ (Pixel), ನೆಸ್ಟ್ (Nest) ಮತ್ತು ಫಿಟ್‌ಬಿಟ್‌ (Fitbit)ನಂತಹ ಉತ್ಪನ್ನಗಳನ್ನು ಮೇಲ್ವಿಚಾರಣೆ ಮಾಡುವ ಗೂಗಲ್ ತನ್ನ ತಂಡಗಳ ಪುನರ್‌ ವಿಂಗಡಣೆಗೆ ಮುಂದಾಗಿದ್ದು, ಅದರ ಭಾಗವಾಗಿ ಈ ಉದ್ಯೋಗ ಕಡಿತ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಫಿಟ್‌ಬಿಟ್‌ ಸಹ-ಸಂಸ್ಥಾಪಕರಾದ ಜೇಮ್ಸ್ ಪಾರ್ಕ್ ಮತ್ತು ಎರಿಕ್ ಫ್ರೀಡ್ಮನ್ ಅವರೂ ಗೂಗಲ್‌ ತೊರೆಯಲಿದ್ದಾರೆ.
2021ರ ಜನವರಿಯಲ್ಲಿ ಗೂಗಲ್ ಫಿಟ್‌ಬಿಟ್‌ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಜೇಮ್ಸ್ ಪಾರ್ಕ್ ಫಿಟ್‌ಬಿಟ್‌ನ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪಿಕ್ಸೆಲ್ ವಾಚ್ ಮತ್ತು ಪಿಕ್ಸೆಲ್ ವಾಚ್ 2 ಅನ್ನು ಘೋಷಿಸುವ ಜವಾಬ್ದಾರಿಯನ್ನು ಅವರು ಹೊಂದಿದ್ದರು.

ಗೂಗಲ್‌ ಹೇಳಿದ್ದೇನು?

“1ಪಿ ಎಆರ್ (1P AR) ಹಾರ್ಡ್‌ವೇರ್‌ ತಂಡದ ಮೇಲೆ ಪರಿಣಾಮ ಬೀರುವ ಡಿಎಸ್‌ಪಿಎ(ಡಿವೈಸಸ್‌ & ಸರ್ವಿಸಸ್‌) ಯಲ್ಲಿನ ನೂರಾರು ಉದ್ಯೋಗಿಗಳನ್ನು ತೆಗೆದು ಹಾಕಲಾಗುತ್ತಿದೆ. ನಮ್ಮ 1ಪಿ ಎಆರ್ ಹಾರ್ಡ್‌ವೇರ್ ತಂಡದಲ್ಲಿ ಬದಲಾವಣೆಗಳನ್ನು ಕೈಗೊಳ್ಳಲಾಗುತ್ತಿದೆʼʼ ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ. “ಫಿಟ್‌ಬಿಟ್‌ ಬಳಕೆದಾರರಿಗೆ ಉತ್ತಮ ಸೇವೆ ಸಲ್ಲಿಸಲು ಕಂಪನಿ ಬದ್ಧವಾಗಿದೆ. ವೈಯಕ್ತಿಕ ಎಐನೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಹೊಸತನವನ್ನು ತರಲು ಮತ್ತು ಪಿಕ್ಸೆಲ್ ವಾಚ್, ಮರುವಿನ್ಯಾಸಗೊಳಿಸಿದ ಫಿಟ್‌ಬಿಟ್‌ ಅಪ್ಲಿಕೇಶನ್, ಫಿಟ್‌ಬಿಟ್‌ ಪ್ರೀಮಿಯಂ ಸೇವೆ ಮತ್ತು ಫಿಟ್‌ಬಿಟ್‌ ಟ್ರ್ಯಾಕರ್ ಲೈನ್‌ನೊಂದಿಗೆ ಎಂದಿನೊಂದಿಗೆ ಕಾರ್ಯ ನಿರ್ವಹಿಸಲಿದೆʼʼ ಎಂದು ಕಂಪೆನಿ ಭರವಸೆ ನೀಡಿದೆ. ಒಟ್ಟು ಎಷ್ಟು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುವುದನ್ನು ಕಂಪನಿ ಸದ್ಯ ಬಹಿರಂಗಪಡಿಸಿಲ್ಲ.

ನೋವು ತೋಡಿಕೊಳ್ಳುತ್ತಿರುವ ಉದ್ಯೋಗಿಗಳು

ಕೆಲವು ಉದ್ಯೋಗಿಗಳು ಈಗಾಗಲೇ ಆಲ್ಫಾಬೆಟ್ ಕಂಪನಿಯಿಂದ ತಮ್ಮನ್ನು ವಜಾಗೊಳಿಸಿರುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. “ಗೂಗಲ್‌ ಮತ್ತೆ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ. ಈ ಬಾರಿ ನಾನು ಮತ್ತು ತಂಡ ಇದರ ಪರಿಣಾಮ ಎದುರಿಸುತ್ತಿದ್ದೇವೆʼʼ ಎಂದು ಕಂಪನಿಯಲ್ಲಿ ಎಐ ವಿನ್ಯಾಸಗೊಳಿಸುವ ಜವಾಬ್ದಾರಿ ಹೊತ್ತ ಡೇನಿಯಲ್ ಟಿ. ಹಾಲ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಆಲ್ಫಾಬೆಟ್ ವರ್ಕರ್ಸ್ ಯೂನಿಯನ್ ಕೂಡ ಆಡಳಿತ ಮಂಡಳಿಯ ನಿರ್ಧಾರವನ್ನು ಖಂಡಿಸಿದೆ. “ನಮ್ಮ ಬಳಕೆದಾರರಿಗೆ ಉತ್ತಮ ಉತ್ಪನ್ನಗಳನ್ನು ನೀಡಲು ನಮ್ಮ ತಂಡದ ಸದಸ್ಯರು ಪ್ರತಿದಿನ ಶ್ರಮಿಸುತ್ತಾರೆ. ನಮ್ಮ ಸಹೋದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದನ್ನು ಖಂಡಿಸುತ್ತೇವೆ. ನಮ್ಮ ಉದ್ಯೋಗಗಳು ಸುರಕ್ಷಿತವಾಗಿರುವವರೆಗೂ ಹೋರಾಟವನ್ನು ನಿಲ್ಲಿಸುವುದಿಲ್ಲʼʼ ಎಂದು ತಿಳಿಸಿದೆ.

ಇದನ್ನೂ ಓದಿ: Tech Layoffs: 453 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಗೂಗಲ್ ಇಂಡಿಯಾ! ಇನ್ನಷ್ಟು ಜಾಬ್ ಕಡಿತ?

ಗೂಗಲ್ ಮಾತೃಸಂಸ್ಥೆಯಾಗಿರುವ ಆಲ್ಫಾಬೆಟ್ ಇಂಕ್ ಕೆಲವು ತಿಂಗಳ ಹಿಂದೆ ಒಟ್ಟು ಉದ್ಯೋಗಿಗಳ ಪೈಕಿ ಶೇ. 6 ಅಥವಾ 12000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. ಅದಾಗಿ ಕೆಲವೆ ತಿಂಗಳಲ್ಲಿ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. 2023ರ ಸೆಪ್ಟೆಂಬರ್‌ನಲ್ಲಿ ಬಂದ ವರದಿ ಪ್ರಕಾರ ಆಲ್ಫಾಬೆಟ್ ಕಂಪೆನಿಯಲ್ಲಿ ಸುಮಾರು 1,80,000 ಉದ್ಯೋಗಿಗಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version