ನವ ದೆಹಲಿ: ಟೆಕ್ಕಿಗಳಿಗೆ ಇದು ಆಘಾತಕಾರಿ ಸುದ್ದಿ. (layoffs 2023) ಈ ವರ್ಷ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಸುಮಾರು 2 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. 696 ಟೆಕ್ ಕಂಪನಿಗಳು (tech companies) ಸಾಮೂಹಿಕ ಉದ್ಯೋಗ ಕಡಿತ ಘೋಷಿಸಿವೆ.
ಈ ವರ್ಷ ಮೇ 18ರ ವೇಳೆಗೆ 1,97,985 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಉದ್ಯೋಗ ನಷ್ಟ ಇನ್ನೂ ಮುಂದುವರಿಯುವ ಆತಂಕ ಇದೆ. ಈಗಾಗಲೇ ಕಳೆದ 2022 ಅನ್ನು ಮೀರಿಸುವಂತೆ ಉದ್ಯೋಗ ನಷ್ಟ ಸಂಭವಿಸಿದೆ. 2022ರಲ್ಲಿ 1065 ಟೆಕ್ ಕಂಪನಿಗಳು 1.64 ಲಕ್ಷ ಉದ್ಯೋಗವನ್ನು ಕಡಿತಗೊಳಿಸಿವೆ.
ಮೆಟಾ, ಗೂಗಲ್, ಅಮೆಜಾನ್, ಮೈಕ್ರೊಸಾಫ್ಟ್, ಟ್ವಿಟರ್ ಮೊದಲಾದ ಪ್ರಮುಖ ಟೆಕ್ ಕಂಪನಿಗಳಲ್ಲಿ ಸಾಮೂಹಿಕ ಉದ್ಯೋಗ ಕಡಿತ ಸಂಭವಿಸಿದೆ. ಎಲಾನ್ ಮಸ್ಕ್ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಟ್ವಿಟರ್ ಅನ್ನು ಖರೀದಿಸಿದ್ದರು. ಬಳಿಕ ಕಂಪನಿ ಅರ್ಧದಷ್ಟು ಸಿಬ್ಬಂದಿಯನ್ನು ವಜಾಗೊಳಿಸಿತ್ತು.
ಮೆಟಾ 6000 ಉದ್ಯೋಗಿಗಳನ್ನು ವಜಾಗೊಳಿಸಲಿದೆ. ಕಳೆದ ವರ್ಷ ನವೆಂಬರ್‌ನಲ್ಲಿ 11000 ಉದ್ಯೋಗ ಕಡಿತ ಮಾಡಿತ್ತು. 2023ರ ಮಾರ್ಚ್‌ನಲ್ಲಿ ಮತ್ತೆ 10,000 ಉದ್ಯೋಗ ಕಡಿತ ಘೋಷಿಸಿತ್ತು. ಉದ್ಯೋಗ ಕಳೆದುಕೊಂಡವರು ಕೌಶಲವನ್ನು ಹೆಚ್ಚಿಸಿಕೊಳ್ಳುವುದು, ವೈಯಕ್ತಿಕ ಹಣಕಾಸು, ಉಳಿತಾಯವನ್ನು ರೂಢಿಸಿಕೊಳ್ಳುವುದು, ಹೊಸ ಕಲಿಕೆಗೆ ತೊಡಗಿಸಿಕೊಳ್ಳುವುದು ಸೂಕ್ತ ಎನ್ನುತ್ತಾರೆ ತಜ್ಞರು.
ಡೊನ್ಜೊ, ಶೇರ್ ಚಾಟ್, ರೆಬೆಲ್ ಫುಡ್ಸ್, ಭಾರತ್ ಅಗ್ರಿ, ಓಲಾದಲ್ಲಿ ವ್ಯಾಪಕ ಉದ್ಯೋಗ ಕಡಿತ ನಡೆದಿದೆ. ಅಕ್ಸೆಂಚರ್ 19000 ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದೆ. ಇದುವರೆಗೆ ಆ್ಯಪಲ್ ಕಂಪನಿ ಮಾತ್ರ ಸಾಮೂಹಿಕ ಉದ್ಯೋಗ ಕಡಿತ ಘೋಷಿಸದ ಪ್ರಮುಖ ಟೆಕ್ ಕಂಪನಿಯಾಗಿ ಉಳಿದಿದೆ. ಸಾಮೂಹಿಕ ಉದ್ಯೋಗ ಕಡಿತದ ಆಯ್ಕೆ ಕಂಪನಿಯ ಮುಂದಿಲ್ಲ ಎಂದು ಅದರ ಸಿಇಒ ಟಿಮ್ ಕುಕ್ ತಿಳಿಸಿದ್ದಾರೆ.
ಇದನ್ನೂ ಓದಿ: Meta layoffs : ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಲ್ಲಿ ಮುಂದಿನವಾರ ಮತ್ತೆ 6,000 ಉದ್ಯೋಗ ಕಡಿತ