ವಿಧಾನಸಭೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಇದೇ ವರ್ಷ ಐದು ಸಾವಿರ ಕಾನ್‌ಸ್ಟೆಬಲ್‌ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಹಾಸನ ಶಾಸಕ ಪ್ರೀತಂ ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಆರಗ ಜ್ಞಾನೇಂದ್ರ ಉತ್ತರಿಸಿದ್ದಾರೆ.
ಕಾನೂನು ಸುವ್ಯವಸ್ಥೆ ನಿಭಾಯಿಸಲು ಪೊಲೀಸರ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಾಗ 22,000 ಪೊಲೀಸ್ ಪೇದೆ ಹುದ್ದೆ ಖಾಲಿ ಇತ್ತು. ಈಗ ಕೇವಲ 9,430 ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳು ಖಾಲಿ ಇವೆ. ಈಗಾಗಲೇ 3,500 ಕಾನ್ಸ್‌ಟೆಬಲ್ ನೇಮಕಾತಿಗೆ ಆದೇಶ ಆಗಿದೆ. ಇನ್ನೂ 1,500 ಸಿವಿಲ್ ಕಾನ್ಸ್‌ಟೆಬಲ್ ನೇಮಕಾತಿಗೆ ನೋಟಿಫಿಕೇಷನ್ ಮಾಡುತ್ತೇವೆ. ಈ ಸಾಲಿನಲ್ಲಿ ಐದು ಸಾವಿರ ಪೋಸ್ಟ್ ಭರ್ತಿ ಮಾಡುತ್ತೇವೆ ಎಂದರು.
ಇಪ್ಪತ್ತು ವರ್ಷದಲ್ಲಿ ಅತ್ಯಂತ ಕಡಿಮೆ ಹುದ್ದೆ ಖಾಲಿ ಇರುವುದು ಈ ವರ್ಷ ಮಾತ್ರ, ಇದು ಸಮಾಧಾನಕರ ಸಂಗತಿ ಎಂದು ಜ್ಞಾನೇಂದ್ರ ತಿಳಿಸಿದರು. ನೇಮಕಾತಿ ಮಾಡುವುದರಿಂದ ನಿರುದೈೋಗ ಸಮಸ್ಯೆಯೂ ಕಡಿಮೆಯಾಗುತ್ತದೆ ಎಂಬ ಪ್ರೀತಂ ಗೌಡ ಮಾತಿಗೆ ಪ್ರತಿಕ್ರಿಯಿಸಿದ ಜ್ಞಾನೇಂದ್ರ, ಕಾನೂನು ಸುವ್ಯವಸ್ಥೆ ನಿಭಾಯಿಸಲು ಪೊಲೀಸರ ನೇಮಕ ಮಾಡಲಾಗುತ್ತದೆಯೇ ವಿನಃ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಪೊಲೀಸ್ ನೇಮಕಾತಿ ಮಾಡುವುದಿಲ್ಲ ಎಂದರು.
ಇದನ್ನೂ ಓದಿ | Agneepath | ರಾಜ್ಯ ಪೊಲೀಸ್ ನೇಮಕದಲ್ಲಿಯೂ ಅಗ್ನಿವೀರರಿಗೆ ಆದ್ಯತೆ; ಸಚಿವ ಆರಗ ಜ್ಞಾನೇಂದ್ರ ಘೋಷಣೆ
ವಯೋಮಿತಿ ಸಡಿಲಿಕೆ ಇಲ್ಲ
ಪೊಲೀಸ್ ಕಾನ್ಸ್‌ಟೆಬಲ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆಗೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದರು. ಈ ಕುರಿತು ಉತ್ತರಿಸಿದ ಆರಗ ಜ್ಞಾನೇಂದ್ರ, ಜನರಲ್ ಕೆಟಗರಿಗೆ 18-25 ವಯೋಮಿತಿ ಇದೆ. ಅದನ್ನು ಎರಡು ವರ್ಷ ಸಡಿಲಿಸಿ ಎಂದು ಬೇಡಿಕೆ ಇದೆ. ನನಗೂ ಹಲವು ಅಭ್ಯರ್ಥಿಗಳು ಫೋನ್ ಮಾಡಿ ಆಗ್ರಹ ಮಾಡುತ್ತಿದ್ದಾರೆ. ಆದರೆ, ಎರಡು ವರ್ಷದಲ್ಲಿ ನೇಮಕಾತಿ ಆಗಿಲ್ಲ ಎಂದು ಅವರು ತಪ್ಪು ಮಾಹಿತಿಗಳನ್ನು ಕೊಡುತ್ತಿದ್ದಾರೆ. ಎರಡು ವರ್ಷದಲ್ಲಿ ನೇಮಕಾತಿ ಆಗಿಲ್ಲ ಎಂದು ಅವರು ಹೇಳುತ್ತಿದ್ದಾರೆ, ಆದರೆ ಎಂದೂ ನೇಮಕಾತಿ ಪ್ರಕ್ರಿಯೆ ನಿಲ್ಲಿಸಿಲ್ಲ. ನಾವು ಯುವಕರನ್ನೇ ನೇಮಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ವಯೋಮಿತಿ ಸಡಿಲಿಕೆ ಸಾಧ್ಯವಿಲ್ಲ ಎಂದು ಉತ್ತರ ನೀಡಿದರು.