Site icon Vistara News

ವಿಸ್ತಾರ ಸಂಪಾದಕೀಯ: ಸರ್ಕಾರಿ ಪರೀಕ್ಷೆಗಳನ್ನು ಕಳಂಕಮುಕ್ತಗೊಳಿಸಿ

Vistara Editorial, Government should conduct exam without any lapse

ರ್ಕಾರಿ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳ ಅಕ್ರಮ ಬಹುದೊಡ್ಡ ದಂಧೆಯಾಗಿದೆ ಎಂಬುದಕ್ಕೆ ಇತ್ತೀಚೆಗಿನ ಬೆಳವಣಿಗೆಗಳು ಸಾಕ್ಷಿಗಳಾಗಿವೆ. ಪಿಎಸ್ಐ ಪರೀಕ್ಷೆ ಹಗರಣ ಮಾಸುವ ಮುನ್ನವೆ ಇದೀಗ ಮತ್ತೊಂದು ಬಹುದೊಡ್ಡ ಸ್ಕ್ಯಾಮ್ ಬಯಲಾಗಿದೆ. ಎಫ್‌ಡಿಎ ಪರೀಕ್ಷೆ ಅಕ್ರಮದ ಪ್ರಕರಣ ಹೊರಬಂದಿದ್ದು, ಬಗೆದಷ್ಟೂ ಬಯಲಾಗುತ್ತಿದೆ. ಅಭ್ಯರ್ಥಿಗಳು ಬ್ಲ್ಯೂಟೂತ್ ಡಿವೈಸ್ ಖರೀದಿಸಿ ಪರೀಕ್ಷೆಯಲ್ಲಿ ಅಕ್ರಮ ಎಸಗುತ್ತಿದ್ದವರನ್ನು ಪೊಲೀಸರು ಈಗಾಗಲೇ ಹೆಡೆಮುರಿ‌ ಕಟ್ಟಿದ್ದಾರೆ. ತನಿಖೆ ಮಾಡಿದಾಗ ಪಿಎಸ್ಐ ಅಕ್ರಮದ ಕಿಂಗ್‌ಪಿನ್ ಆಗಿದ್ದ ಆರ್.ಡಿ ಪಾಟೀಲ್‌ ಎಂಬಾತನೇ ಇದಕ್ಕೂ ಸೂತ್ರಧಾರಿ ಎಂಬುದು ಬಯಲಾಗಿದೆ. ಈತ ಕಲಬುರಗಿ ನಗರದಲ್ಲೇ ತಂಗಿದ್ದು, ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿದ್ದಾನೆ. ಸದ್ಯ ವಾಸವಿದ್ದ ಅಪಾರ್ಟ್‌ಮೆಂಟ್‌ನಿಂದ ಹಾರಿ ಪರಾರಿ ಆಗಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈತನನ್ನು ಬಂಧಿಸಲು ಯಾವ ಕಾಣದ ಕೈಗಳು ತಡೆಯಾಗಿವೆ, ಅಥವಾ ಬಂಧಿಸಲು ಬರುತ್ತಿದ್ದಾರೆ ಎಂಬ ಮಾಹಿತಿ ಈತನಿಗೆ ಕೊಟ್ಟವರು ಯಾರು? ಪೊಲೀಸ್‌ ಇಲಾಖೆಯಲ್ಲಿ ಇರುವವರು ಅಲ್ಲದೆ ಬೇರೊಬ್ಬರು ಕೊಡಲು ಸಾಧ್ಯವಿಲ್ಲ. ಹಾಗಿದ್ದರೆ ಈ ಹಗರಣದ ಬೇರುಗಳು ಇನ್ನೂ ವ್ಯಾಪಕವಾಗಿ ಚಾಚಿಕೊಂಡಿವೆ ಎಂದು ಅರ್ಥ ಮಾಡಿಕೊಳ್ಳಬಹುದು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅ.28 ಮತ್ತು 29ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗಾಗಿ ಖಾಲಿ ಇದ್ದ 720 ಎಫ್‌ಡಿಎ (FDA) ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗೆ ನಡೆಸಿತ್ತು. ಆದರೆ ಕಲಬುರಗಿ ‌ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಪರೀಕ್ಷಾ ಅಕ್ರಮ ಬೆಳಕಿಗೆ ಬಂದಿತ್ತು. ಕಲಬುರಗಿ ನಗರ ಹಾಗೂ ಅಫಜಲಪುರ ತಾಲೂಕಿನಲ್ಲಿ ಹಲವು ಅಭ್ಯರ್ಥಿಗಳು, ಕನ್ನಡ ಮತ್ತು ಇಂಗ್ಲೀಷ್ ಕಮ್ಯೂನಿಕೇಷನ್ಸ್ ಪ್ರಶ್ನೆ ಪತ್ರಿಕೆ ಪರೀಕ್ಷೆಯಲ್ಲಿ ಬ್ಲ್ಯೂಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆಯಲು ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕಲಬುರಗಿ ಹಾಗೂ ಅಫಜಲಪುರ ಸೇರಿ ಒಟ್ಟು 16ಕ್ಕೂ ಅಧಿಕ ಜನರನ್ನು ಬಂಧಿಸಿದ್ದರು. ಇದರ ಸೂತ್ರಧಾರಿ, ಪಿಎಸ್ಐ ಸ್ಕ್ಯಾಮ್ ಕಿಂಗ್‌ಪಿನ್ ಆರ್.ಡಿ ಪಾಟೀಲ್‌ ಕೆಲ ತಿಂಗಳ ಹಿಂದೆಯಷ್ಟೇ ಜಾಮೀನು ಪಡೆದು ಹೊರಬಂದಿದ್ದ. ಕಲಬುರಗಿ ನಗರ ಹಾಗೂ ಅಫಜಲಪುರ ಪರೀಕ್ಷಾ ಕೇಂದ್ರದಲ್ಲಿ ಅಕ್ರಮಕ್ಕೆ ಬಳಸಲು ತಂದಿದ್ದ ಬ್ಲ್ಯೂಟೂತ್ ಡಿವೈಸ್‌ಗಳನ್ನು ಆರ್.ಡಿ ಪಾಟೀಲ್ ಬಳಿ ಖರೀದಿಸಲಾಗಿತ್ತು ಎಂದು ಗೊತ್ತಾಗಿದೆ.

ಪಿಎಸ್‌ಐ ಹಾಗೂ ಎಫ್‌ಡಿಎ ಪರೀಕ್ಷೆಗಳು ಯಾಕೆ ಹೀಗೆ ಹಗರಣಗಳ ಕೂಪಗಳಾಗಿವೆ ಎಂಬುದು ಅರ್ಥವಾಗದ ಸಂಗತಿ. ಬಹುಶಃ ಕೇಂದ್ರ ಸರ್ಕಾರ ನಡೆಸುವ ಯುಪಿಎಸ್‌ಸಿ ಪರೀಕ್ಷೆಗಳನ್ನು ನೋಡಿ ನಮ್ಮ ಸರ್ಕಾರ ಪಾಠ ಕಲಿಯಬಹುದು. ಅಲ್ಲಿ ಬಿಗಿಯಾದ ನಿಯಮಗಳಿವೆ. ಪರೀಕ್ಷೆಯನ್ನು ಪಾರದರ್ಶಕವಾಗಿ, ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲದಂತೆ ನಡೆಸುವ ಕ್ರಮವನ್ನು ಅದರಿಂದ ಕಲಿಯಬಹುದು. ಯುಪಿಎಸ್‌ಸಿಗೆ ಇದು ಸಾಧ್ಯವಾಗಬಹುದಾದರೆ, ರಾಜ್ಯ ಸರ್ಕಾರಕ್ಕೆ ಯಾಕೆ ಸಾಧ್ಯವಾಗದು? ಇದನ್ನು ಅಷ್ಟೇನೂ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂದು ಪರೀಕ್ಷಾ ಮಂಡಳಿಗೆ ಅನಿಸಿದೆಯೇ? ಹಾಗೆ ಅನಿಸಿದರೆ, ಅಕ್ರಮ ಎಸಗಿದವರು ಬಹು ಸುಲಭವಾಗಿ ಪಾಸಾಗುವುದು, ಪದವಿ ಪಡೆಯುವುದು ನಡೆಯುತ್ತದೆ. ಪ್ರತಿಭಾವಂತರು ಹಾಗೂ ಕಷ್ಟಪಟ್ಟು ಪರೀಕ್ಷೆ ಬರೆದವರು ನ್ಯಾಯವಾಗಿ ತಮಗೆ ಸಿಗಬೇಕಾದುದರಿಂದ ವಂಚಿತರಾಗುತ್ತಾರೆ. ಪರಿಶ್ರಮಿಗಳಿಗೂ ಕಳ್ಳರಿಗೂ ವ್ಯತ್ಯಾಸವೇ ಇಲ್ಲದಂತಾಗುತ್ತದೆ. ಪಿಎಸ್‌ಐ ಪರೀಕ್ಷೆಯಲ್ಲಿ ಕದ್ದು ಬರೆದವರು ಪೊಲೀಸರಾಗಿಬಿಟ್ಟರೆ, ಅವರಿಂದ ಯಾವ ಬಗೆಯ ಕಾನೂನುಪಾಲನೆಯನ್ನು ನಿರೀಕ್ಷಿಸಬಹುದು? ಹೀಗೆ ವಂಚಿಸಿ ಸರ್ಕಾರಿ ಹುದ್ದೆ ಪಡೆದವರು ತಾವು ಮುಂದೆ ಇದಕ್ಕಾಗಿ ಮಾಡಿದ ವೆಚ್ಚದ ನೂರು ಪಟ್ಟು, ಸಾವಿರ ಪಟ್ಟು ಗೆಬರಿಕೊಳ್ಳಲು ಅಡ್ಡದಾರಿಗಳನ್ನು ಹಿಡಿಯುವುದು ಖಚಿತ. ಅಧಿಕಾರಶಾಹಿ ಹಳ್ಳ ಹಿಡಿಯುವುದೆಂದರೆ ಹೀಗೆ.

ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಉನ್ನತ ಹುದ್ದೆಯಲ್ಲಿರುವವರ ಆಶೀರ್ವಾದ ಇಲ್ಲದೆ ಇಂಥವು ನಡೆಯುವುದಿಲ್ಲ. ಮೇಲ್ನೋಟಕ್ಕೆ ಕಾಣಿಸುವ ಕಿಂಗ್‌ಪಿನ್‌ಗಳು ಬರಿಯ ಪಾತ್ರಧಾರಿಗಳಾಗಿದ್ದು, ಅವರ ಹಿಂದೆಯೂ ಸೂತ್ರಧಾರರು ಇರಬಹುದು. ಇವರನ್ನು ಸೂಕ್ತ ತನಿಖೆಯ ಮೂಲಕ ಹೆಡೆಮುರಿ ಕಟ್ಟಿ ಪರೀಕ್ಷಾ ವ್ಯವಸ್ಥೆಯನ್ನು ಕಳಂಕಮುಕ್ತಗೊಳಿಸಬೇಕಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಡೀಪ್‌ ಫೇಕ್‌ ವಿಡಿಯೋ ಹಾವಳಿ, ಕಠಿಣ ಕ್ರಮ ಅಗತ್ಯ

Exit mobile version