Site icon Vistara News

Kannada Rajyotsava: ಪ್ರಾಚೀನ ಕವಿಗಳ ಕಾವ್ಯಕುಂಚದಲ್ಲಿ ಮೂಡಿದ ಕನ್ನಡ, ಕರ್ನಾಟಕದ ಬಿಂಬಗಳು

kannada maha kavigalu

ಸಂಸ್ಕೃತಿಯೆಂಬುದು (Kannada Rajyotsava) ವಿರಾಟ್‌ ಅರ್ಥಗಳನ್ನು ಹೊಮ್ಮಿಸುವ ಶಬ್ದ. ಅತ್ಯಂತ ಸೀಮಿತ, ಸಂಕುಚಿತ ದೃಷ್ಟಿಯಲ್ಲಿ ಅದೀಗ ಬಳಕೆಯಾಗುತ್ತಿರುವುದು ವಿಪರ್ಯಾಸವಾದರೂ, ನಾಡೊಂದರ ಸಂಸ್ಕೃತಿಯನ್ನು ಅರ್ಥವಿಸಿಕೊಳ್ಳಲು ಬಹುಶಿಸ್ತೀಯ ಅಧ್ಯಯನಗಳು ಬೇಕಾಗುತ್ತವೆ. ಉದಾ, ಕನ್ನಡ ನಾಡಿನ ಸಂಸ್ಕೃತಿಯನ್ನು ಅರಿಯಬೇಕಿದ್ದರೆ, ಅಲ್ಲಿನ ಜನಪದ, ಭಾಷೆ, ಹಬ್ಬಗಳು, ಕಲಾಪ್ರಕಾರಗಳು, ಸಾಹಿತ್ಯ ಮುಂತಾದ ಹಲವು ಮಗ್ಗುಲುಗಳನ್ನು ತಿಳಿಯಬೇಕು. ಆಗ ಮಾತ್ರವೇ ಕನ್ನಡ ಸೀಮೆಯ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯ.
ನಾಗರಿಕತೆಯೊಂದರ ಒಳಹೊರಗು ತಿಳಿಯುವುದಕ್ಕೆ ಆ ಪ್ರದೇಶದಲ್ಲಿ ಲಭ್ಯವಿರುವ ಶಿಲ್ಪಕಲೆ, ಪ್ರಾಚೀನ ಗ್ರಂಥಗಳು, ಕಾವ್ಯಗಳು ಸೇರಿದಂತೆ ಯಾವುದೇ ರೂಪದ ಸಾಹಿತ್ಯ ಆಕರವಾಗಬಲ್ಲದು. ಒಂದಾನೊಂದು ಕಾಲದಲ್ಲಿ ಕನ್ನಡ ನಾಡಿನ ವಿಸ್ತೀರ್ಣ ಎಷ್ಟಿತ್ತು ಎನ್ನುವುದನ್ನು ವರ್ಣಿಸುವಂಥ ಪ್ರಾಚೀನ ದಾಖಲೆಗಳು ಇಲ್ಲದಿದ್ದರೂ, ಕವಿಕಾವ್ಯಗಳಲ್ಲಿ ವರ್ಣಿಸಲಾದ ವಿವರಗಳ ಬಗ್ಗೆ ಈವರೆಗೆ ಸಾಕಷ್ಟು ಅಧ್ಯಯನ ನಡೆದು, ವಿವರಗಳನ್ನು ಖಚಿತಪಡಿಸಿಕೊಳ್ಳಲಾಗಿದೆ. ಇದು ನಾಡಿನ ವ್ಯಾಪ್ತಿಗೆ ಮಾತ್ರವಲ್ಲ, ನಾಡಿನ ಸಮೃದ್ಧಿ, ಸೌಂದರ್ಯ, ಜನರ ರೀತಿ-ನೀತಿ ಮುಂತಾದ ಬಹಳಷ್ಟು ವಿಷಯಗಳ ಬಗ್ಗೆ ಹಿಂದಿನಿಂದ ಹಿಡಿದು ಇಂದಿನ ವರೆಗಿನ ಕವಿಗಳು ವರ್ಣಿಸಿದಾರೆ. ಕವಿಗಳಿಗೆ ಕನ್ನಡ ನಾಡು ಕಂಡಿದ್ದು ಹೇಗೆ ಎನ್ನುವ ಲಹರಿಯಿದು.

ಗಡಿರೇಖೆ ಎಳೆದವರು!

ಕನ್ನಡ ನಾಡಿನ ಒಂದು ಕಾಲದ ಗಡಿಯನ್ನು ತಿಳಿಸಿಕೊಡುವ ಮೊದಲ ಆಕರವೆಂದರೆ ಶ್ರೀವಿಜಯನ ಕವಿರಾಜಮಾರ್ಗ. ʻಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್‌ʼ ಎಂದು ಕವಿರಾಜಮಾರ್ಗಕಾರ ಸ್ಪಷ್ಟಪಡಿಸಿದ್ದಾನೆ. ಈ ಗ್ರಂಥ 9ನೇ ಶತಮಾನದ ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ ಕಾಲದ್ದು. ಆ ಕಾಲದ ಜನರೆಂದರೆ ಸುಮ್ಮನಲ್ಲ, ಕುರಿತೋದದೆಯೂ ಕಾವ್ಯ ಪ್ರಯೋಗ ಪರಿಣತಮತಿಗಳು, ಸುಭಟರು, ಕವಿಗಳು, ಚೆಲ್ವರು, ಶ್ರೇಷ್ಠರು, ಗುಣಿಗಳು, ಅಭಿಮಾನಿಗಳು, ವಿವೇಕಿಗಳು. ಜನರೇ ಇಷ್ಟಾದ ಮೇಲೆ ಆಳುವವರು ಸಾಮಾನ್ಯರೇ? ಅವರು ಸುಪ್ರಭುಗಳು ಎಂದೆಲ್ಲಾ ಪ್ರೀತಿಯಿಂದ ವರ್ಣಿಸಿದ್ದಾನೆ ಕವಿ. ರವಿ ಕಾಣದ್ದನ್ನು ಕವಿ ಕಂಡಿದ್ದು ಹೌದಾಗಿರಬಹುದು.

ಕನ್ನಡ ಸೀಮೆಯ ಒಂದಿಷ್ಟು ಊರುಗಳು ರಾಮಾಯಣ- ಮಹಾಭಾರತ ಮಹಾಕಾವ್ಯಗಳಲ್ಲೂ ಉಲ್ಲೇಖಗೊಂಡಿವೆ. ರಾಮಾಯಣದ ದಂಡಕಾರಣ್ಯ, ಕೃಷ್ಣವೇಣಿ, ಕಾವೇರಿ, ತಾಮ್ರಪರ್ಣಿಯಂಥ ಹೆಸರುಗಳು ನಮ್ಮದೇ ಪ್ರದೇಶಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಉದಾ, ಕಿಷ್ಕೆಂಧೆಯನ್ನು ಹಂಪೆಯ ಸಮೀಪದ ಆನೆಗೊಂದಿ ಎನ್ನಲಾಗುತ್ತದೆ. ಕೊಂಕಣ ಪ್ರದೇಶವು ಪರಶುರಾಮನ ಕ್ಷೇತ್ರವಾಗಿದ್ದರೆ, ಮಹಾಭಾರತದ ವಿರಾಟನಗರವು ಧಾರವಾಡದ ಹಾನಗಲ್ಲೆಂದೂ ಪ್ರತೀತಿಯಿದೆ. ಇವಿಷ್ಟೇ ಅಲ್ಲ, ಗೋಕರ್ಣ, ಚಂದ್ರಗುತ್ತಿ, ಶೃಂಗೇರಿ, ಬನವಾಸಿ, ರಾಮನಾಥಪುರ, ಮುಳಕುಂಟೆ ಮುಂತಾದ ಸ್ಥಳಗಳು ರಾಮಾಯಣದೊಂದಿಗೆ ಜೋಡಿಸಲ್ಪಟ್ಟಿವೆ. ಚಿತ್ರದುರ್ಗ, ಬಳ್ಳಿಗಾವಿ, ಹರಿಹರ, ಕೈವಾರ ಮುಂತಾದ ಊರುಗಳು ಮಹಾಭಾರತದೊಂದಿಗೆ ಹೆಣೆದುಕೊಂಡಿವೆ. ಈ ಮಹಾಕಾವ್ಯಗಳ ಯಾವ್ಯಾವುದೋ ಕಥಾಸಂದರ್ಭಗಳೊಂದಿಗೆ ಸಂಬಂಧವುಳ್ಳ ಈ ಊರುಗಳಲ್ಲಿ ಐತಿಹ್ಯಗಳು, ಸ್ಥಳಪುರಾಣಗಳು, ಜನಪದ ಸಾಹಿತ್ಯಗಳು ಈ ಕಾವ್ಯಗಳೊಂದಿಗೆ ಬೆಸೆದಿವೆ. ಪೌರಾಣಿಕ ಘಟನೆಗಳನ್ನು ಲೌಕಿಕ ಸ್ಥಳಗಳಲ್ಲಿ ಹುಡುಕುವುದು ನೀರಲ್ಲಿ ಮೀನಿನ ಹೆಜ್ಜೆ ಹುಡುಕಿದಷ್ಟೇ ಕಷ್ಟ ಎಂಬಲ್ಲಿಗೆ, ಸಂಸ್ಕೃತಿಯ ಸ್ವರೂಪಗಳನ್ನು ತಿಳಿಯುವುದಕ್ಕೆ ಎಷ್ಟೊಂದು ಅಧ್ಯಯನ, ತಾಳ್ಮೆ ಬೇಕಲ್ಲವೇ? ಕನ್ನಡಿಗರ ಗುಣಗಳ ಬಗ್ಗೆ ಕವಿರಾಜಮಾರ್ಗಕಾರನಿಂದ ಸುಮ್ಮನೆ ಹೊಗಳಿಸಿಕೊಂಡಂಗಲ್ಲ!
ಇನ್ನು ʻಕಬ್ಬಿಗರ ಕಾವ್ಯʼದಲ್ಲಿ ಕವಿ ಆಂಡಯ್ಯ ಕನ್ನಡ ನಾಡಿನ ಸೊಬಗನ್ನು ಪರಿಪರಿಯಾಗಿ ವರ್ಣಿಸಿದ್ದಾನೆ. “ಪಲವುಂ ನಾಲಗೆಯುಳ್ಳವಂ ಬಗೆವೊಡೆಂದುಂ…” ಪದ್ಯದ ವಿವರಣೆಯನ್ನು ನೋಡಿದರೆ- ಮಂದವಾಗಿ ಬೀಸುವ ಮಲಯಾನಿಲ, ಕೊಳಗಳಲ್ಲಿ ಅರಳಿ ನಿಂತ ತಾವರೆ, ತುಂಬಿ ಸೂಸಿವ ಕಾಲುವೆಗಳು, ಹಚ್ಚಹಸುರಿನ ಹೊಲಗಳು, ನೋಡುವ ಕಣ್ಣಿಗೆ ಸಂತೋಷ ಸಾಗರ. ಕನ್ನಡ ನಾಡಿನ ಆ ಸೌಂದರ್ಯವನ್ನು ಬಣ್ಣಿಸಲು ಸಹಸ್ರ ನಾಲಗೆಯ ಶೇಷನಿಗೂ ಸಾಧ್ಯವಿಲ್ಲ. ಇನ್ನು ಉಳಿದ ಮಾನವರ ಪಾಡೇನು? ಅವರ ನಾಲಗೆಗಳು ನಿಶ್ಶಕ್ತ! ಎಂದು ಕವಿ ಚೋದ್ಯವಾಗಿ, ಹೃದ್ಯವಾಗಿ ಬಣ್ಣಿಸಿದ್ದಾನೆ.

ಕನ್ನಡದ ಆದಿ ಕವಿ ಪಂಪ

ನೆನೆವುದೆನ್ನ ಮನಂ…

ಕನ್ನಡದ ಆದಿ ಕವಿ ಪಂಪನ ಕಾವ್ಯಗಳ ಕಂಪಿಲ್ಲದೆ ಕರುನಾಡಿನ ವರ್ಣನೆ ಪೂರ್ಣ ಆಗುವುದಾದರೂ ಹೇಗೆ? ಪಂಪನಿಗಂತೂ ಕನ್ನಡ ನಾಡಿನ ಮರಿದುಂಬಿ, ಕೋಗಿಲೆ, ಮಲ್ಲಿಗೆಯಿಂದ ಹಿಡಿದು ಪ್ರತಿಯೊಂದೂ ಪ್ರಿಯವೇ. ನಂದನದಂಥ ನಾಡಿನ ಪ್ರಕೃತಿ ಸೌಂದರ್ಯ, ಕನ್ನಡಿಗರ ರಸಿಕತೆ, ಅವರ ತ್ಯಾಗ-ಭೋಗ ಮತ್ತು ಸಮನ್ವಯದ ಸ್ವಭಾವದಿಂದ ತೊಡಗಿ ಪ್ರತಿಯೊಂದು ಸೂಕ್ಷ್ಮ ವಿವರಗಳನ್ನೂ ತನ್ನ ಕಾವ್ಯ ಕುಂಚದಲ್ಲಿ ಕವಿ ದಾಖಲಿಸಿದ್ದಾನೆ. “ನಂದನಂಗಳೊಳೆ ಸುಳಿವ ಬಿರಯಿಯಿಂ| ಕಂಪು ತಣ್ಮಲೆಯೆ ಪೂತ ಸುರಯಿಯಿಂ| ಸುತ್ತಲುಂ ಪರಿವ ಜರಿವೊನಲ್ಗಳಿಂ| ದೆತ್ತಲು ನಲಿವ ಪೊಸ ನವಿಲ್ಗಳಿಂ| ಬೆಳೆದು ಮಗಮಗಿಪ ಗಂಧಶಾಳಿಯಿಂ| ದಲ್ಲಿ ಸುಳಿವ ಗಿಳಿವಿಂಡಿನೋಳಿಯಿಂ…” ನೋಡಿ, ಕನ್ನಡ ನಾಡಿನಲ್ಲಿರುವುದೆಲ್ಲದರ ಮೇಲಿನ ಪ್ರೀತಿ ಪಂಪನಿಗೆ ಎಷ್ಟಿದೆಯೆಂದರೆ- ನಂದನದೊಳಗೆ ಸುಳಿದಾಡುವ ವಿರಹಿಗಳು (ಅವರೂ ಇಷ್ಟ!), ಹೂತ ಸುರಗಿಯ ಕಂಪಿನಿಂದ ಆವೃತವಾದ ಮಲೆಗಳು, ಸುತ್ತಲೂ ಹರಿವ ಝರಿ, ಹೊನಲುಗಳು, ಎಲ್ಲೆಲ್ಲೂ ನಲಿವ ಹೊಸ ನವಿಲುಗಳು, ಬೆಳೆದು ಘಮಘಮಿಸುತ್ತಿರುವ ಗಂಧಶಾಳಿ ಭತ್ತಕ್ಕಾಗಿ ಸುಳಿವ ಗಿಳಿವಿಂಡುಗಳು… ಇಷ್ಟೆಲ್ಲಾ ಇದ್ದ ನಾಡಿನ ಬಗ್ಗೆ ʻಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂʼ ಎಂದು ಬನವಾಸಿಯನ್ನು, ಈ ಮೂಲಕ ಕನ್ನಡ ಸೀಮೆಯನ್ನು ಕವಿ ಕೊಂಡಾಡಿದ್ದರಲ್ಲಿ ಅಚ್ಚರಿಯಿಲ್ಲ.

ʻಕಾವೇರಿಯಿಂದ ಗೋದಾವರಿವರಗಮಿರ್ಪಾ ವಸುಧಾತಳ ವಳಯʼ ಎಂದು ಕನ್ನಡ ಸೀಮೆಗೆ ಗಡಿಹಾಕಿದ ಇನ್ನೊಬ್ಬಾತ ನಂಜುಂಡ ಕವಿ. ಆತನ ʻರಾಮನಾಥ ಚರಿತʼದಲ್ಲಿ ಬರುವ ಕರ್ನಾಟಕದ ವರ್ಣನೆ ಹೃದ್ಯಂಗಮವಾಗಿದೆ. ದೇವಲೋಕವನ್ನೇ ಅಣಕಿಸುವಂಥ ಸಮೃದ್ಧಿಯಿರುವ ಕನ್ನಡ ನಾಡಿನಲ್ಲಿ “ಫಲವಿಲ್ಲದ ಮಾವು ಮಾವಿಲ್ಲದ ಮಲ್ಲಿಗೆ ಮಲ್ಲಿಕಾಲತಿಕೆ ಇಲ್ಲದ ವನ ವನವಿಲ್ಲದ ಭೋಗಿಗಳಿಲ್ಲ ದೇಶದೆಡೆಯೊಳ್| ಅಳಿ ಇಲ್ಲದ ಅಂಬುಜ ಅಂಬುಜಮಿಲ್ಲದ ಕೊಳ ಕೊಳನಿಲ್ಲದಾರಾಮ ವಿಳಸಿತಾರಾಮವಿಲ್ಲದ ಕಾಲೂರ್ಗಳಿಲ್ಲ ಎಲ್ಲೆಲ್ಲಿ ನೋಡಿದರೂ” ಎಂಬಂತ ಅದ್ಭುತ ವರ್ಣನೆಗಳು ಕಾಣಸಿಗುತ್ತವೆ.

ರನ್ನ, ಹರಿಹರ, ರಾಘವಾಂಕ, ಸ್ವಯಂಭೂ, ಶಾಂತಿನಾಥ ಕವಿ, ಚಾಮರಸ, ಪುರಂದರದಾಸರು, ಕನಕದಾಸರು ಮುಂತಾದ ಬಹಳಷ್ಟು ಕವಿಗಳು ಕನ್ನಡದ ನೆಲ,ಜಲ, ಜನ, ಭಾಷೆಯ ಬಗ್ಗೆ ಬಣ್ಣಿಸಿದ್ದಾರೆ. ನದಿಗಳ ಹೊರತಾಗಿ ನಾಡಿಲ್ಲವಾದ್ದರಿಂದ ಕೃಷ್ಣಾ, ಕಾವೇರಿ, ತುಂಗಭದ್ರಾ, ಭೀಮಾ ಮುಂತಾದ ಜೀವಸುಧೆಯರ ಬಗ್ಗೆಯೂ ಹೇಳಿ ಮುಗಿಸಲಾರದಷ್ಟು ವರ್ಣನೆಯಿದೆ. ತುಂಗಭದ್ರೆಯನ್ನು ನೆನೆದರೆ ಭವದ ಪಾತಕವೆಲ್ಲ ದೂರವೆಂದು ರಾಘವಾಂಕ ಹೇಳಿದರೆ, ʻತುಂಗೆಮಂಗಳ ತರಂಗೆ… ಹರಿಸರ್ವಾಂಗೆʼ ಎಂದು ಪುರಂದರದಾಸರು ಹಾಡಿದ್ದಾರೆ. ʻತುಂಗೆ ಇರಲಿಕ್ಕೆ ಬಾವಿ ಕೆರೆಯೇಕೆʼ ಎಂದು ಕನಕದಾಸರು ಹೊಗಳಿದ್ದಾರೆ. ಈ ಎಲ್ಲಾ ವರ್ಣನೆಗಳ ನಡುವಿಗೊಂದು ಚೋದ್ಯವಿದೆ. ಹಿಂದೆಯೂ ಕಾವೇರಿಗಾಗಿ ಕನ್ನಡಿಗರು-ತಮಿಳರು ಗುದ್ದಾಡುತ್ತಿದ್ದರೇ? ಶಬ್ದಮಣಿದರ್ಪಣದ ಒಂದು ಸಾಲು ಹೀಗಿದೆ- ʻಕಾವೇರಿಯ ಕಾಲನಾ ತಿಗುಳನೇಂ ಕಡಂಗೊಂಡನೋ ಬಡ್ಡಿಗೊಂಡನೋ!ʼ (ಕಾವೇರಿಯ ಕಾಲುವೆಯನ್ನು ತಮಿಳನು ಏನು ಕಡಕ್ಕೆ ತೆಗೆದುಕೊಂಡನೋ ಅಥವಾ ಬಡ್ಡಿಯಲ್ಲಿ ಭೋಗ್ಯಕ್ಕೆ ಹಾಕಿಕೊಂಡನೋ!) ಚರಿತ್ರೆ ಮರುಕಳಿಸುವುದೆಂದರೆ ಹೀಗೂ ಇರಬಹುದು!

ಹೊಸಗನ್ನಡ ಕಾಲದ ಕನ್ನಡ ಪ್ರಜ್ಞೆ

ಇವೆಲ್ಲ ಹಳೆಗನ್ನಡ ಮತ್ತು ನಡುಗನ್ನಡ ಕಾವ್ಯಗಳಲ್ಲಾಯಿತು. ಹೊಸಗನ್ನಡ ಸಾಹಿತ್ಯದಲ್ಲೂ ನಮ್ಮ ನಾಡು-ನುಡಿ-ಜನ-ಜಲದಂಥ ವಿಷಯಗಳು ಪಡಿಮೂಡಿವೆ. ನವೋದಯ, ನವ್ಯ, ಬಂಡಾಯ ಮುಂತಾದ ಎಲ್ಲ ರೀತಿಯ ಕಾವ್ಯಗಳಲ್ಲೂ ಕರ್ನಾಟಕವೆಂಬ ಪ್ರಜ್ಞೆ ಎದ್ದುನಿಂತಿದೆ. ಅದರಲ್ಲೂ ಏಕೀಕರಣ-ಪೂರ್ವದ ದಿನಗಳಲ್ಲಿ, ನಾಡಿನ ವರ್ಣನೆಗಿಂತ ಹೆಚ್ಚಾಗಿ ಕನ್ನಡ ಪ್ರಜ್ಞೆಯ ಬಗ್ಗೆ ಹೇಳಿ ತೀರದಷ್ಟು ಕವನಗಳು ಬಂದಿವೆ. ಹುಯಿಲಗೋಳ ನಾರಾಯಣರಾಯರು, ಮಂಜೇಶ್ವರ ಗೋವಿಂದ ಪೈ, ಬಿ. ಎಂ. ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರರು, ಸಿದ್ಧಯ್ಯ ಪುರಾಣಿಕರು, ವಿ. ಸೀತಾರಾಮಯ್ಯ, ಡಿ.ಎಸ್‌. ಕರ್ಕಿ, ಪು.ತಿ.ನ, ಚೆನ್ನವೀರ ಕಣವಿ, ಕೆ.ಎಸ್.‌ ನರಸಿಂಹಸ್ವಾಮಿ, ಗೋಪಾಲಕೃಷ್ಣ ಅಡಿಗರು ಮುಂತಾದವರೆಲ್ಲರ ಕವನಗಳಲ್ಲೂ ಕನ್ನಡಪ್ರಜ್ಞೆ, ಏಕೀಕರಣದ ಕುರಿತಾದ ಕಳಕಳಿಯ ನೋವು ವ್ಯಕ್ತವಾಗಿದೆ. ʻಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುʼ, ʻತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆʼ, ʻಹಚ್ಚೇವು ಕನ್ನಡದ ದೀಪʼ ಮುಂತಾದ ಗೀತೆಗಳು ಇಂದಿಗೂ ಅನುರಣಿಸುತ್ತಿವೆ.

ಏಕೀಕರಣದ ಸಂದರ್ಭದಲ್ಲಿನ ಕೆಲವು ಪ್ರಮುಖ ಕವಿಗಳ ಸಾಲುಗಳನ್ನು ಗಮನಿಸಿದರೆ

ಕರ್ನಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ?/ ಮಂತ್ರಕಣಾ! ಶಕ್ತಿ ಕಣಾ! ತಾಯಿ ಕಣಾ! ದೇವಿ ಕಣಾ! ಬೆಂಕಿ ಕಣಾ! ಸಿಡಿಲು ಕಣಾ!… ಕುವೆಂಪು ಅವರ ಮಿಂಚಿನಂಥ ಸಾಲುಗಳಿವು.

ಭಾರತಿಯ ಮನೆಯಲ್ಲಿ ಲಕ್ಷದೀಪಗಳಿಂದು ನಕ್ಷತ್ರಗಳ ತೆರದಿ ಹೊಳೆಯುತಿಹವು… ಮೂಲೆಗಳು ಬೆಳಗಿದರು ನಡುಮನೆಯು ಕತ್ತಲೆಯು ಕನ್ನಡದ ದೀಪವದು ಕಾಣದಿಹುದು!… ಸಿದ್ಧಯ್ಯ ಪುರಾಣಿಕರ ಕಳವಳವಿದು.
ಹಾ ನನ್ನ ಸೋದರರೆ ಬನ್ನಿ ಒಂದಾಗಿ/ ಜಯವಧುವ ನಿಮ್ಮ ತೋಳಿನೊಳಿಟ್ಟು ತೂಗಿ… ಎಂಬುದು ಮಾಸ್ತಿಯವರ ಕರೆ.
ಇಂದು ಕೂಡ ಆಗದೆ/ ಕನ್ನಡವೊಂದಾಗದೆ?/ ಭೇದದ ಹುಳಿ ನೀಗದೆ/ ಕಾಯಿಮನ ಮಾಗದೆ… ಗೋಪಾಲಕೃಷ್ಣ ಅಡಿಗರು ನೊಂದು ಕೇಳುವ ಸಾಲುಗಳಿವು.

ಕನ್ನಡ ಸೀಮೆ ಎಂಬುದು ಒಂದಾದ ಮೇಲಿನ ಸಂಭ್ರಮ ದ. ರಾ. ಬೇಂದ್ರೆಯವರ ಸಾಲುಗಳಲ್ಲಿ ಹೀಗೆ ಕಾಣಿಸಿದೆ- “ಬಡಗಣ ತೆಂಕಣ ಪಡುವಣ ಮೂಡಣ ನಡುವಣ ಕನ್ನಡ ಪಂಚಶಿಖ/ ಪರಮೇಶ್ವರನೊಲು ಪ್ರಪಂಚ ಪ್ರಕಟಿಸಿ ಮೈದೋರಿತು ಇಗೊ ಪಂಚಮುಖ”. ವಿ.ಕೃ. ಗೋಕಾಕರು ಕವನದಲ್ಲಿ, “ಕನ್ನಡದ ಅಮೃತ ಬಿಂದುಗಳ ಮಾಲೆ/ ಹೊಳೆದಿರಲಿ ಭೂವ್ಯೋಮ ಪಟದ ಮೇಲೆ” ಎಂದು ಹಾರೈಸುತ್ತಾರೆ. ದೊಡ್ಡದೊಂದು ಮಹಾಸಂಪುಟವನ್ನೇ ಮಾಡುವಷ್ಟು ಅಗಾಧವಾಗಿದೆ ಕವಿಗಳ ಕಲ್ಪನೆಯಲ್ಲಿ ಕನ್ನಡ ನಾಡು-ನುಡಿಯ ಚಿತ್ರ. ಅವುಗಳ ಮೇಲೊಂದು ಬೆಳಕಿಂಡಿಯನ್ನಷ್ಟೇ ಇಲ್ಲಿ ತೋರುವುದಕ್ಕೆ ಸಾಧ್ಯ.

ಕರ್ನಾಟಕ, ಕನ್ನಡವೆಂಬುದು ಕವಿ-ಕಾವ್ಯಗಳ ಅಂತಃಸತ್ವವಾಗಿ ಲಾಗಾಯ್ತಿನಿಂದ ಹರಿಯುತ್ತಿದೆ. ಮೊದಲೇ ಹೇಳಿದಂತೆ, ಸಂಸ್ಕೃತಿಯೊಂದನ್ನು ಶೋಧಿಸುವುದಕ್ಕೆ ಹಲವು ಆಯಾಮಗಳಿವೆ. ನದಿಯಂತೆಯೇ ನಿಲ್ಲದೆ ಪ್ರವಹಿಸುವ ಕಾವ್ಯಧಾರೆಯೂ ಆ ಮಣ್ಣಿನ ಸತ್ವವನ್ನು ಹೀರಿ, ಜನಮನದ ಪ್ರಜ್ಞೆಯನ್ನು ಒಡಲೊಳಗೆ ಬಿತ್ತಿ ಸಂಸ್ಕೃತಿಯೆಂಬ ಫಸಲನ್ನು ಭರಿಸುತ್ತದೆ. ಹಾಗಾಗಿ ಬೇರು ಗಟ್ಟಿಯಿದ್ದರಷ್ಟೇ ಫಸಲು ಎಂಬ ತತ್ವವನ್ನು ನಾವು ಮರೆಯಬಾರದಷ್ಟೆ.

ಇದನ್ನೂ ಓದಿ: Kannada Rajyotsava: ಕನ್ನಡ ನಾಡು ʻಕರ್ನಾಟಕʼ ಆಗಿದ್ದು ಹೇಗೆ?

Exit mobile version