ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ಆರಂಭಿಸಿದೆ. ಇದರ ಮೊದಲ ಭಾಗವಾಗಿ ರಾಜ್ಯದ ಇಬ್ಬರು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ರಾಹುಲ್ ಗಾಂಧಿ ಮಾಡಿದ್ದಾರೆ.
ನವ ದೆಹಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಮಂಗಳವಾರ (ಜೂನ್ 28) ಕರೆಸಿಕೊಂಡ ರಾಹುಲ್ ಗಾಂಧಿ, ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.
ಸಭೆಯ ನಂತರ ಸ್ವತಃ ಫೇಸ್ಬುಕ್ನಲ್ಲಿ ರಾಹುಲ್ ಗಾಂಧಿ ಈ ಕುರಿತು ಬರೆದುಕೊಂಡಿದ್ದಾರೆ. ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ಸಿಂಗ್ ಸುರ್ಜೇವಾಲಾ ಅವರೊಂದಿಗೆ ಕರ್ನಾಟಕ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದೆ. ಕರ್ನಾಟಕದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಿದ್ಧತೆ, ಪ್ರಚಾರ ಹಾಗೂ ತಂತ್ರದ ಕುರಿತು ಉಪಯುಕ್ತ ಚರ್ಚೆಗಳನ್ನು ನಡೆಸಿದೆವು ಎಂದು ರಾಹುಲ್ ಹೇಳಿದ್ದಾರೆ. ಎಲ್ಲರೂ ಒಟ್ಟಿಗೆ ಕುಳಿತು ಚರ್ಚಿಸುತ್ತಿರುವ ಭಾವಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಹಗ್ಗಜಗ್ಗಾಟ ಇರುವುದು ಈಗಾಗಲೆ ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ. ಇಬ್ಬರ ನಡುವೆ ವೈಮನಸ್ಸನ್ನು ಕಡಿಮೆ ಮಾಡಿದರೆ ವಿಧಾನಸಭೆ ಚುನಾವಣೆಯಲ್ಲಿ ಅರ್ಧ ಗೆದ್ದಂತೆ ಎಂದು ರಾಹುಲ್ ಗಾಂಧಿ ತಿಳಿದಿದ್ದಾರೆ. ಇದಕ್ಕಾಗಿ ಪ್ರಥಮವಾಗಿ ಇಬ್ಬರನ್ನೂ ಕರೆಸಿಕೊಂಡು ಮಾತನಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ವಲಯದಲ್ಲಿ ಇದನ್ನು ʼಸಂಧಾನʼ ಸಭೆ ಎಂದೇ ಪರಿಗಣಿಸಲಾಗಿದೆ.
ಇಬ್ಬರೂ ಒಟ್ಟಾಗಿ ಹೋದರೆ ಮಾತ್ರ ಅಧಿಕಾರಕ್ಕೆ ಬರಲಿದ್ದೇವೆ. ಆಗ ಇಬ್ಬರಿಗೂ ಅಧಿಕಾರ ಸಿಗುತ್ತದೆ. ಇಲ್ಲದಿದ್ದರೆ ಸರ್ಕಾರ ಬೇರೆಯವರ ಪಾಲಾಗುತ್ತದೆ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಬಗೆಹರಿಸಿಕೊಂಡು ಒಟ್ಟಾಗಿ ಚುನಾವಣೆ ಎದುರಿಸೋಣ ಎಂಬ ಸಂದೇಶವನ್ನು ಇಬ್ಬರೂ ನಾಯಕರಿಗೆ ರಾಹುಲ್ ಗಾಂಧಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | ನಿಜವಾಗಿ ಜಾತಿ ವ್ಯವಸ್ಥೆ ತಂದವರು ಸಿದ್ದರಾಮಯ್ಯ: ಬ್ರಾಹ್ಮಣರ ಸಂಘ ಆರೋಪ