ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ತೀವ್ರ ಚರ್ಚೆಯಾಗಿ ಸದ್ಯ ತಣ್ಣಗಾಗಿರುವ ಪಠ್ಯಪುಸ್ತಕ ವಿವಾದ ಮತ್ತೆ ಭುಗಿಲೇಳುವ ಆತಂಕ ಎದುರಾಗಿದೆ. ಲೇಖಕ ರೋಹಿತ್ ಚಕ್ರತೀರ್ಥ ಸಮಿತಿಯ ಪರಿಷ್ಕೃತ ಪಠ್ಯವನ್ನು ಹಿಂಪಡೆದು ಪ್ರೊ. ಬರಗೂರು ರಾಮಚಂದ್ರಪ್ಪ ಪರಿಷ್ಕರಿಸಿದ್ದ ಪಠ್ಯವನ್ನೆ ಮುಂದುವರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ 61 ಸಾಹಿತಿಗಳನ್ನು ಪ್ರಮುಖವಾಗಿ ಈ ಬೆದರಿಕೆ ಪತ್ರದಲ್ಲಿ ಟಾರ್ಗೆಟ್ ಮಾಡಲಾಗಿದೆ.
ಬಿ.ಎಲ್. ವೇಣು ಅವರಿಗೆ ಈ ಪತ್ರ ಬರೆಯಲಾಗಿದ್ದರೂ, ಈ ಬೆದರಿಕೆಯಿಂದ ವೇಣು ಅವರನ್ನು ಹೊರಗಿಡಲಾಗಿದೆ! ಬಿ.ಎಲ್. ವೇಣು ಸರ್, ನಿಮ್ಮನ್ನು ಬಿಟ್ಟು 61 ತಲೆಹರಟೆ ಸಾಹಿತಿಗಳಿಗೆ ಮಾತ್ರ ಪತ್ರ ಎಂದು ಪ್ರಾರಂಭದಲ್ಲೆ ತಿಳಿಸಲಾಗಿದೆ. ಪ್ರಾರಂಭದಲ್ಲಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮುಂತಾದವರನ್ನು, ಪತ್ರದ ಕೊನೆಯಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಹೆಸರಿಸಲಾಗಿದೆ.
ಪಠ್ಯದಲ್ಲಿ ಭಗವದ್ಗೀತೆ ಅಂಶಗಳನ್ನು ಸೇರಿಸಿದ್ದಕ್ಕೆ ನೀವು ವಿರೋಧಿಸಿದ್ದೀರ. ನೀವು ಹುಟ್ಟಿರುವ ದೇಶದ ಮೂಲಗ್ರಂಥದ ಬಗ್ಗೆ ನಿಮಗೆ ಏಕಿಷ್ಟು ದ್ವೇಷ? ನೀವು 61 ಜನರಲ್ಲ, 61 ಸಾವಿರ ಜನರು ಬಂದರೂ ಆ ಗ್ರಂಥವನ್ನು ಏನೂ ಮಾಡಲು ನಿಮ್ಮಿಂದ ಆಗುವುದಿಲ್ಲ. ಇಡೀ ಜಗತ್ತಿಗೆ ಒಳ್ಳೆಯ ಸಂದೇಶ ನೀಡುವ ಗ್ರಂಥ ಅವಿನಾಶಿ ಎಂದು ತಿಳಿಸಲಾಗಿದೆ.
ವೇಣು ಅವರೇ, ಇಂಥವರಿಗೆಲ್ಲ ಬುದ್ಧೀ ಹೇಳಿ. ಇಲ್ಲವಾದರೆ ಕಾಲನ ಉಪಚಾರಕ್ಕೆ ಸಿದ್ಧವಾಗಿ. ಸಾವರ್ಕರ್ ವಿಚಾರದಲ್ಲಿ ದಯವಿಟ್ಟು ಕ್ಷಮೆ ಕೇಳಿ ಎಂದು ಪತ್ರ ಮುಕ್ತಾಯವಾಗಿದೆ. ವಿಶೇಷವಾಗಿ ಹಂಸಲೇಖ ಅವರನ್ನು ಉಲ್ಲೇಖಿಸಿರುವ ಪತ್ರ, ಹಂಸನಂತೆ ಇದ್ದ ಹಂಸಲೇಖನನ್ನು ಕಂಸನಂತೆ ಮಾಡಿಬಿಟ್ಟಿದ್ದೇ ಈ ತಿಳಿಗೇಡಿ 61 ಜನ ಸಾಹಿತಿಗಳು ಎಂದು ʻಸಹಿಷ್ಣು ಹಿಂದುʼ ಹೆಸರಿನಲ್ಲಿ ಪತ್ರ ಬರೆಯಲಾಗಿದೆ.
ಇತ್ತೀಚೆಗೆ ಮಾಜಿ ಸಚಿವ ಬಿ.ಟಿ. ಲಲಿತಾ ನಾಯಕ್ ಅವರಿಗೂ ಇದೇ ರೀತಿ ಬೆದರಿಕೆ ಪತ್ರ ರವಾನೆಯಾಗಿತ್ತು. ಈ ಕುರಿತು ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ | ನಿನಗೂ ರುಂಡ ಮುಂಡ ಬೇರೆಯಾಗಬೇಕಿದೆಯಾ?; ಕಾಳಿ ಕೈಯಲ್ಲಿ ಸಿಗರೇಟ್ ಕೊಟ್ಟವಳಿಗೆ ಬೆದರಿಕೆ