ಹಾಸನ: ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮಾತಿಗೇ ಬೆಲೆ ಇಲ್ಲ ಎಂದ ಮೇಲೆ ನಾವೇನು ಮಾಡುವುದಕ್ಕೆ ಆಗುತ್ತದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಸೋನಿಯಾ ಗಾಂಧಿಯವರು ತಿಳಿಸಿದ್ದರೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಒತ್ತಾಯದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದರು.
ರಾಜ್ಯಸಭೆ ಚುನಾವಣೆ ಬಗ್ಗೆ ಕುಮಾರಣ್ಣ, ದೇವೇಗೌಡರು ನೋಡಿಕೊಳ್ತಾರೆ ಎಂದು ಮಾತು ಆರಂಭಿಸಿದ ರೇವಣ್ಣ, ಎಲ್ಲ ವಿಚಾರವನ್ನೂ ಒಂದೊಂದಾಗಿ ಹೇಳಿದರು. ಕಾಂಗ್ರೆಸ್‌ನವರು ನಮ್ಮ ಹತ್ತಿರ ಓಟು ಕೇಳಿಲ್ಲ. ಅವರಿಗೆ ಬಿಜೆಪಿ ಓಟೇ ಬೇಕಾಗಿರಬಹುದು. ಒಂದು ಕಡೆ ಕೋಮುವಾದಿ ಪಕ್ಷಗಳನ್ನು ದೂರವಿಡೋಣ ಎನ್ನುತ್ತಾರೆ. ಇನ್ನೊಂದು ಕಡೆ ಅವರ ಹತ್ತಿರವೇ ಹೋಗುತ್ತಾರೆ. ರಾಹುಲ್ ಗಾಂಧಿಯವರು ಹಾಸನಕ್ಕೆ ಬಂದು ಜೆಡಿಎಸ್ ಎಂದರೆ ಬಿಜೆಪಿಯ ಬಿ ಟೀಂ ಎಂದರು. ಈಗ ಅವರನ್ನೇ ಗೆಲ್ಲಿಸಲು ಮುಂದಾಗಿದ್ದಾರೆ ಎಂದರು.
ನಾವು ಮೇಡಂ ಹತ್ರಾನೇ ಮಾತಾಡಿದ್ವು. ಆ ಪಕ್ಷದಲ್ಲಿ ಮೇಡಂ ಮಾತಿಗೇ ಬೆಲೆ ಇಲ್ಲಾಂದ್ರೆ ನಾವೇನ್ ಮಾಡನ? ಆ ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷರ ಮಾತ್‌ಗೂ ಬೆಲೆ ಇಲ್ಲ. ಖರ್ಗೆ ಅವರ ಮಾತಿಗೂ ಬೆಲೆ ಇಲ್ಲ ಅಂತ ಸುದ್ದಿ ನೋಡ್ದೆ. ನಮ್ದೂ ಪ್ರಾದೇಶಿಕ ಪಕ್ಷ. ನಮ್ ಕ್ಯಾಂಡಿಡೇಟ್ ಗೆಲ್ಸೋದಕ್ಕೆ ಒಂದೆರಡು ಓಟ್ ಬೇಕು ಕೊಡಿ ಅಂತಾ ಕೇಳಿದ್ವಿ. ಬಿಜೆಪಿ ಕ್ಯಾಂಡಿಡೇಟಿಗೇ ಸಹಾಯ ಮಾಡ್ಬೇಕು ಅಂತ ಅವರಿಗೆ ಅನ್ಸಿದ್ರೆ ನಾವೇನು ಮಾಡಾಕಾಗುತ್ತೇ? ಎಂದು ರೇವಣ್ಣ ತಿಳಿಸಿದರು.