ಮಂಡ್ಯ: ಮಳವಳ್ಳಿಯಲ್ಲಿ ಇತ್ತೀಚೆಗೆ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಬಾಲಕಿಯ ಕುಟುಂಬದವರಿಗೆ ರೂ. 10 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಅವರು ಭಾನುವಾರ ಶ್ರೀ ಮಲೆಮಹಾದೇಶ್ವರ ಕುಂಭಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ʻʻಮಳವಳ್ಳಿ ಘಟನೆ ಬಗ್ಗೆ ಎಲ್ಲರೂ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಎಂದಿಗೂ ಇಂಥದ್ದು ನಡೆಯಬಾರದು. ಅತ್ಯಂತ ಅಮಾನುಷ ಕೃತ್ಯವಿದು. ಮನುಷ್ಯತ್ವವಿಲ್ಲದವರು ಮಾತ್ರ ಇಂಥ ಕೆಲಸ ಮಾಡಲು ಸಾಧ್ಯ. ಇದನ್ನು ಶಬ್ದಗಳಲ್ಲಿ ಖಂಡಿಸಲಾಗದು. ಅರಿಯದ ಕಂದಮ್ಮನ ಪರಿಸ್ಥಿತಿ ಕೇಳಿದರೆ ಕರುಳು ಕಿವುಚಿಬರುತ್ತದೆ. ಈಗಾಗಲೇ ಅಧಿಕಾರಿಗಳು ಕ್ರಮ ತೆಗೆದುಕೊಂಡು ಅಪರಾಧಿಯನ್ನು ಬಂಧಿಸಲಾಗಿದೆ. ಎಲ್ಲ 302, 307, ಪೋಕ್ಸೋ ಸೆಕ್ಷನ್‌ಗಳನ್ನು ಹಾಕಿದ್ದಾರೆ. ನಮ್ಮ ಪೊಲೀಸ್ ಮಹಾನಿರ್ದೇಶಕರಿಗೆ ಅಂದೇ ಸೂಚನೆ ನೀಡಿ ಕೂಡಲೇ ತನಿಖೆಯಾಗಿ ತಪ್ಪಿ ತಸ್ಥರನ್ನು ಶಿಕ್ಷೆಗೊಳಪಡಿಸಬೇಕೆಂದು ಸೂಚಿಸಿದ್ದೆ. ಅವರು ಎಫ್.ಎಸ್.ಎಲ್ ವರದಿ ಒಂದು ವಾರದಲ್ಲಿಯೇ ನೀಡಲಾಗುವುದೆಂದು ಹೇಳಿದ್ದು, ಬಂದ ಕೂಡಲೇ ಆರೋಪ ಪಟ್ಟಿ ಸಿದ್ಧಪಡಿಸಿ ಪೋಕ್ಸೋ ನ್ಯಾಯಾಲಯಕ್ಕೆ ಕಳುಹಿಸಿ, ಆದಷ್ಟು ಬೇಗ ನ್ಯಾಯ ನೀಡಲು ಕ್ರಮ ಕೈಗೊಂಡು ಇನ್ನೊಮ್ಮೆ ಹೀಗಾದರೆ ಅತಿ ಕಡಿಮೆ ಸಮಯದಲ್ಲಿ ಉಗ್ರ ಶಿಕ್ಷೆ ಈ ವ್ಯವಸ್ಥೆ ನೀಡಲಿದೆ ಎಂಬ ಸಂದೇಶವನ್ನು ಸಾರಲಾಗುವುದೆಂದು ಈ ಪ್ರಕರಣದಲ್ಲಿ ಸಾಬೀತು ಮಾಡುತ್ತೇವೆʼʼ ಎಂದರು.
ಅಪರಾಧಿಗೆ ಉಗ್ರ ಶಿಕ್ಷೆ
ʻʻಅಪರಾಧಿಗೆ ಉಗ್ರ ಶಿಕ್ಷೆ ನೀಡಲಾಗುವುದು. ನಿಮ್ಮ ಮನಸ್ಸಿನಲ್ಲಿರುವುದೇ ನಮ್ಮ ಮನಸ್ಸಿನಲ್ಲಿದೆ. ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೇವೆ. ಮೌಲ್ಯಗಳ ಕುಸಿತದಿಂದ ಇವೆಲ್ಲಾ ಆಗುತ್ತಿದೆ. ಯಾವುದು ಸರಿ, ತಪ್ಪು ಎಂದು ಸ್ಪಷ್ಟತೆ ಇಲ್ಲ. ಭಯ, ಭಕ್ತಿ ಇಲ್ಲ. ಇವುಗಳು ಇರಬೇಕಾದರೆ ಸಂಸ್ಕಾರ, ಸಂಸ್ಕೃತಿ ಅಗತ್ಯ. ಅಮಾನುಷ ಕೃತ್ಯ ಸಮಾಜದಲ್ಲಿ ಆಗಬಾರದೆಂದರೆ ನೈತಿಕ ಬದ್ಧತೆ, ಭಯ ಬರಬೇಕಾದರೆ ಸಂಸ್ಕಾರ ಅಗತ್ಯ ಎಂದರು. ನಾವೇನಾಗಿದ್ದೇವೆ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರು ಕೇಳಿಕೊಳ್ಳಬೇಕುʼʼ ಎಂದರು.
ಬೆಳೆ ನಾಶಕ್ಕೆ 2.30 ಕೋಟಿ ರೈತರಿಗೆ ಪರಿಹಾರ
ʻʻಕರ್ನಾಟಕದ ಉದ್ದಗಲಕ್ಕೂ ಮಳೆ ಆಗುತ್ತಿದೆ. ಕೆರೆಕಟ್ಟೆಗಳು ತುಂಬಿವೆ.ಆದರೆ ಕೆಲವು ಕಡೆ ಪ್ರವಾಹ ಆಗಿದೆ. ಜನವಸತಿ ತೊಂದರೆಯಾಗಿದ್ದು, ಸಮಸ್ಯೆ ನಿವಾರಣೆಗೆ ಕ್ರಮ ವಹಿಸಿದೆ. ಮಂಡ್ಯಕ್ಕೆ ಸಂಬಂಧಿಸಿದಂತೆ ವಿಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಬೆಳೆ ನಾಶಕ್ಕೆ 2.30 ಕೋಟಿ ರೈತರಿಗೆ ಪರಿಹಾರವನ್ನು ಒದಗಿಸಲಾಗಿದೆ. ಅದರ ಜೊತೆಗೆ ಇಬ್ಬರು ಮರಣ ಹೊಂದಿದವರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ನೀಡಿದೆ. ಬಿದ್ದುಹೋಗಿದ್ದ 304 ಮನೆಗಳಿಗಳಿಗೆ 100ಕ್ಕೆ 100 ಪರಿಹಾರ ನೀಡಲಾಗಿದೆ. ಮತ್ತೆ ಒಂದು ವಾರದಿಂದ ಆಗುತ್ತಿರುವ ಮಳೆಗೆ ಕೂಡಲೇ ಬೆಲೆ ನಾಶ, ಮನೆಗಳಿಗೆ ಸಂಬಂಧಿಸಿದಂತೆ ವರದಿ ನೀಡಿದರೆ ಕೂಡಲೇ ಪರಿಹಾರ ನೀಡಲಾಗುವುದುʼʼ ಎಂದರು.
ರಾಷ್ಟ್ರೀಯ ಹೆದ್ದಾರಿ: ಶೀಘ್ರ ಕ್ರಮ
ರಾಷ್ಟ್ರೀಯ ಹೆದ್ದಾರಿ ಗಳ ಬಗ್ಗೆ ಇದೇ ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ಬೆಂಗಳೂರು- ಮೈಸೂರಿ ಹೆದ್ದಾರಿಯಲ್ಲಿ ಪದೇ ಪದೇ ನೀರು ನಿಂತು ತೊಂದರೆಯಾಗುತ್ತಿದ್ದು, ಇದರಲ್ಲಿ ವಿನ್ಯಾಸದ ಸಮಸ್ಯೆ
ಯೋ ಅಥವಾ ನಿರ್ವಹಣೆಯ ಸಮಸ್ಯೆಯೂ ಎಂದು ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ನೀರು ಬರದಂತೆ ವಿಶೇಷ ವ್ಯವಸ್ಥೆ ಮಾಡಿ, ಬ್ಲಾಕ್ ಸ್ಟಾಟ್ ಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.
ಇದನ್ನೂ ಓದಿ | ಮಳವಳ್ಳಿ ಬಾಲಕಿ ಕೊಲೆ | ಅತ್ಯಾಚಾರ ಎಸಗಿದವನಿಗೆ ಊಟ-ತಿಂಡಿ ಕೊಡಬೇಡಿ, ಗಲ್ಲು ಶಿಕ್ಷೆಯಾಗಲಿ; ಪೋಷಕರ ಆಕ್ರೋಶ