Site icon Vistara News

ರಾಜ್ಯಸಭೆ ಚುನಾವಣೆ | ಜೆಡಿಎಸ್‌ ತೆಕ್ಕೆಯಿಂದ ಹಾರಿದ ತುಮಕೂರು ʼಗುಬ್ಬಿʼ

ತುಮಕೂರು: ರಾಜ್ಯಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್‌ನವರು ನಮಗೆ ಮತ ನೀಡಲಿ, ನಾವು ಕಾಂಗ್ರೆಸ್‌ನವರಿಗೆ ಮತ ನೀಡುತ್ತೇವೆ ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಒಂದೆಡೆ ಮಾತನಾಡುತ್ತಿದ್ದರೆ ಇತ್ತ ತಮ್ಮದೇ ಗೂಡಿನ ಹಕ್ಕಿ ಹಾರಿಹೋಗುವ ಮುನ್ಸೂಚನೆ ನೀಡಿದೆ. ತಾವು ಜೆಡಿಎಸ್‌ ಅಭ್ಯರ್ಥಿಗೆ ಮತ ನೀಡುವುದು ಅನುಮಾನ ಎಂದು ತುಮಕೂರು ಜಿಲ್ಲೆ ಗುಬ್ಬಿ ವಿಧಾನಸಭೆ ಕ್ಷೇತ್ರದ ಜೆಡಿಎಸ್‌ ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ಹೇಳಿದ್ದಾರೆ.

ಈ ಕುರಿತು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ ಎಸ್‌.ಆರ್‌. ಶ್ರೀನಿವಾಸ್‌. ಈಗಾಗಲೆ ಜೆಡಿಎಸ್‌ ನಾಯಕರ ಬಗ್ಗೆ ಅನೇಕ ಬಾರಿ ಅಸಂತೋಷ ಹೊರಹಾಕಿರುವ ಶ್ರೀನಿವಾಸ್‌, ಈಗಲೂ ಮುಂದುವರಿಸಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಮತ ಹಾಕುವಂತೆ ನನಗೆ ಪಕ್ಷದಿಂದ ಕರೆ ಬಂದಿಲ್ಲ. ಕುಪೇಂದ್ರ ರೆಡ್ಡಿ ಮನೆಗೆ ಬಂದಿದ್ದರು. ಸಹಾಯ ಕೇಳಿದರು. ನಾನು ಮಾತಾಡುತ್ತೀನಿ ಎಂದಿದ್ದೇನೆ. ಆದರೆ ರಾಜ್ಯಸಭೆ ಚುನಾವಣೆ ಕುರಿತು ಕುಮಾರಸ್ವಾಮಿ ನನ್ನ ಬಳಿ ಮಾತಾಡಿಲ್ಲ. ಜೆಡಿಎಸ್‌ ಅಭ್ಯರ್ಥಿಗೆ ಮತ ನೀಡುವಂತೆ ಜೆಡಿಎಸ್‌ ನಾಯಕ ಇಲ್ಲಿವರೆಗೆ ಕೇಳಿಲ್ಲ ಎಂದಿದ್ದಾರೆ.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ನಮ್ಮ ಆಫರ್‌ ಇನ್ನೂ ಮುಗಿದಿಲ್ಲ ಎಂದ ಕುಮಾರಸ್ವಾಮಿ

ಈಗಾಗಲೆ ಅವರು ನನಗೆ ಪರ್ಯಾಯ ನಾಯಕನನ್ನು ಹುಡಕುಕಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ದ ಹರಿಹಾಯ್ದಿದ್ದಾರೆ. ಅವರಿಗೆ ನನ್ನ ಮತದ ಅವಶ್ಯಕತೆ ಇಲ್ಲ. ಆದರೂ ಸದ್ಯಕ್ಕೆ ನಾನು ಜೆಡಿಎಸ್‌ಗೆ ಮತ ಹಾಕಬೇಕು ಎಂದುಕೊಂಡಿದ್ದೇನೆ. ಆದರೆ 40 ಗಂಟೆಗಳಲ್ಲಿ ಏನುಬೇಕಾದರೂ ಆಗಬಹುದು. ಸಿದ್ದರಾಮಯ್ಯನವರು ವಿಶ್ಲೇಷಣೆ ಮಾಡಿದ ರೀತಿ ನನ್ನದು ಆತ್ಮಸಾಕ್ಷಿ ಮತ ಅಲ್ಲ. ನಾನು ಕುಮಾರಸ್ವಾಮಿ ಹಾಗೂ‌ ನಿಖಿಲ್ ಬೆನ್ನಿಗೆ ಚೂರಿ ಹಾಕಿದ್ದೇನಂತೆ. ನನ್ನ ಮತ ಯಾರಿಗೆ ಎಂದು ಇನ್ನೂ ನಿರ್ಣಯ ಮಾಡಿಕೊಂಡಿಲ್ಲ ಎಂದರು.

ಜೆಡಿಎಸ್‌ ಶಾಸಕರು ಇರುವ ರೆಸಾರ್ಟ್‌ಗೆ ಹೋಗುವುದಿಲ್ಲ ಎಂದು ತಿಳಿಸಿದ ಶ್ರೀನಿವಾಸ್‌, ನಾನು ಯಾವತ್ತೂ ರೇಸಾರ್ಟ್ ರಾಜಕೀಯ ಮಾಡಿಲ್ಲ. ನಾನು ಈ ಬಾರಿಯೂ ರೆಸಾರ್ಟ್‌ಗೆ ಹೋಗಲ್ಲ. ವಿಪ್ ಜಾರಿಯಾಗಿದೆ. ಯಾರಿಗಾದರೂ ಓಟ್‌ ಹಾಕಬೇಕು ಎನ್ನಿಸುತ್ತಿಲ್ಲ. ನಾನು ಚುನಾವಣೆಗೆ ಹೋಗುತ್ತೀನೊ ಇಲ್ಲವೋ ಅದೇ ಗೊತ್ತಿಲ್ಲ. ಹೋದರೆ ಯಾರಿಗೋ ಒಬ್ಬರಿಗೆ ಓಟ್‌ ಹಾಕಲೇಬೇಕು ಅಲ್ವ ಎಂದು ಶ್ರೀನಿವಾಸ್‌ ಒಗಟೊಗಟಾಗಿ ಹೇಳಿದ್ದಾರೆ.

ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಜೆಡಿಎಸ್‌-ಕಾಂಗ್ರೆಸ್‌ Offer Closes Soon

Exit mobile version