ಬೆಂಗಳೂರು: ಪತ್ನಿಯನ್ನು ಕೊಲೆಗೈದು ಪರಾರಿಯಾಗಿದ್ದ ಹಂತಕನನ್ನು ಬಂಧಿಸುವಲ್ಲಿ ವಿಧಾನಸೌಧ ಪೊಲೀಸರು ಯಶಸ್ವಿಯಾಗಿದ್ದಾರೆ. ಜಾರ್ಖಂಡ್ ಮೂಲದ ಫೂಲ್ ಚಂದ್ ಉರವ್ ಬಂಧಿತ ಆರೋಪಿ.
ಮಾರ್ಚ್ 26 ರಂದು ಕ್ಷುಲ್ಲಕ ಕಾರಣಕ್ಕಾಗಿ ಆರೋಪಿ ಫೂಲ್ ಚಂದ್ ಪತ್ನಿ ಸಂಚಿ ಉರವ್ (36) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿಧಾನಸೌಧ ಪೊಲೀಸರು ಆರೋಪಿ ಫೂಲ್ ಚಂದ್‌ನನ್ನು ಬಂಧಿಸಿದ್ದಾರೆ.
ಜಾರ್ಖಂಡ್ ಮೂಲದ ಫೂಲ್‌ಚಂದ್ ಹಾಗೂ ಸಂಚಿ ಉರವ್ ಕಳೆದ ೩ ವರ್ಷಗಳಿಂದ ಬೆಂಗಳೂರಿನ ಕನ್ನಿಂಗ್ ಹ್ಯಾಂ ರಸ್ತೆಯ ಮಾತೆನ್ ಬಿಲ್ಡಿಂಗ್ ಬಳಿ ವಾಸವಾಗಿದ್ದರು. ಆರೋಪಿ ಫೂಲ್ ಚಂದ್ ಮರಗೆಲಸ ಮಾಡುತ್ತಿದ್ದ. ಆತನ ಪತ್ನಿ ಸಂಚಿ ಉರವ್ ಕೂಡ ಅದೇ ಕಾರ್ಖಾನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ದಿನ ಆರೋಪಿ ಫೂಲ್ ಚಂದ್ ಪತ್ನಿ ಸಂಚಿ ಮೇಲೆ ಜಗಳವಾಡಿದ್ದ. ಕಾರ್ಖಾನೆ ಮಾಲೀಕರು ದಂಪತಿಗೆ ಸಾಕಷ್ಟು ಬಾರಿ ಬುದ್ಧಿವಾದ ಹೇಳಿದ್ದರು. ಜಗಳ ನಿಲ್ಲಿಸದಿದ್ದರೆ ಕೆಲಸ ಬಿಟ್ಟು ಹೋಗುವಂತೆ ಬೈದಿದ್ದರು.
ಮನೆಗೆ ಬಂದ ಮೇಲೆ ಮತ್ತೆ ಜಗಳ ತೆಗೆದಿದ್ದ ಆರೋಪಿ ಫೂಲ್ ಚಂದ್ ಪತ್ನಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಬಳಿಕ ಫೋನ್ ಸ್ವಿಚ್ಚ ಆಫ್ ಮಾಡಿಕೊಂಡು ಆರೋಪಿ ತಲೆಮರೆಸಿಕೊಂಡಿದ್ದ.
ಹಂತಕನ ʻಫ್ಲೈಟ್ʼ ಹಿಸ್ಟರಿಯೇ ಬಲು ರೋಚಕ!
ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಫೂಲ್ ಚಂದ್ ಊರು ಬಿಟ್ಟು ಹೋಗಲು ಸ್ಕೆಚ್ ಹಾಕಿದ್ದ. ಅದಕ್ಕಾಗಿ ಹಂತಕ ಫ್ಲೈಟ್ ಟಿಕೆಟ್ ಕೂಡ ಬುಕ್ ಮಾಡಿಸಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ವಿಧಾನಸೌಧ ಪೊಲೀಸರು ಆರೋಪಿ ಫೂಲ್ ಚಂದ್‌ನನ್ನು ಬಂಧಿಸಿದ್ದಾರೆ.