ಬೆಳಗಾವಿ: ತಮ್ಮ ವಿರುದ್ಧದ ಸಿಡಿ ಕೇಸ್‌ಗೆ ಸಂಬಂಧಿಸಿದಂತೆ ಶಿರಾ ಹಾಗೂ ದೇವನಹಳ್ಳಿಯ ಪ್ರಮುಖ ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿದಾಗ 110 ಸಿಡಿಗಳು ಸಿಕ್ಕಿವೆ. ಇದು ಮಹಾ ನಾಯಕನ ಕುತಂತ್ರದಿಂದ ಆಗಿವೆ. ಇಡೀ ರಾಜ್ಯದ ಕೆಲವು ಪ್ರಮುಖರ ಸಿಡಿಗಳು ಅದರಲ್ಲಿವೆ. ಸಿಬಿಐ ತನಿಖೆಯಾದರೆ ಎಲ್ಲವೂ ಹೊರಗೆ ಬರಲಿದೆ. ಈ ಬಗ್ಗೆ ಮಾತನಾಡಿರುವ ಆಡಿಯೊ ಸಾಕ್ಷಿ ನನ್ನ ಬಳಿ ಇದೆ. ಇದನ್ನು ಸಿಬಿಐಗೆ ವಹಿಸುವಂತೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಹೇಳಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ದೇವನಹಳ್ಳಿಯಲ್ಲಿರುವ ಡಿ.ಕೆ. ಶಿವಕುಮಾರ್ ಆಪ್ತನ ಮನೆ ಮೇಲೆ ದಾಳಿ ಮಾಡಿದಾಗ ಸಿಡಿಗಳು ಸಿಕ್ಕಿದ್ದು, ಈ ವಿಷಯವನ್ನು ಮುಚ್ಚಿಡಲಾಗಿದೆ. ಈ ಎಲ್ಲ ಕೃತ್ಯಗಳ ಹಿಂದೆ ಮಹಾನಾಯಕ ಎನಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಕೈವಾಡ ಇದ್ದು, ಆತನ ಮುಖವಾಡವನ್ನು ಕಳಚಬೇಕು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ, ಮುಂದಿನ ವಾರ ನವ ದೆಹಲಿಗೆ ತೆರಳಿ ಅಮಿತ್ ಷಾ ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್‌ಗೆ ಬುದ್ಧಿ ಕಲಿಸಬೇಕು. ಈಗ ನಾನೊಬ್ಬ ಅನುಭವಿಸಿದ್ದೇ ಸಾಕು. ಈ ಸಂದರ್ಭದಲ್ಲಿ ಜನ ನನ್ನನ್ನು ಕೈಹಿಡಿದಿದ್ದಾರೆ. ಆದರೆ, ಆದ್ರೆ ಬೇರೆಯವರು ಈ ರೀತಿ ಸಮಸ್ಯೆಯನ್ನು ಎದುರಿಸಬಾರದು. ಬಹಳಷ್ಟು ಜನ ಬ್ಲ್ಯಾಕ್‌ಮೇಲರ್‌ಗಳನ್ನು ಸೃಷ್ಟಿಸಿದ್ದಾನೆ. ಅವೆಲ್ಲವನ್ನೂ ಹೊರಗೆ ತೆಗೆಯಬೇಕು. ಹೀಗಾಗಿ ಸಿಬಿಐ ತನಿಖೆಗೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಿಬಿಐಗೆ ಕೊಡಿ
ಉಡುಪಿಯಲ್ಲಿ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನೂ ಸಿಬಿಐಗೆ ಕೊಟ್ಟರೆ ಇನ್ನೂ ಹಲವು ವಿಚಾರಗಳು ಹೊರಬರುತ್ತವೆ. ಸಂತೋಷ ಪಾಟೀಲ್ ಉಡುಪಿಗೆ ಹೋಗುವ ಪೂರ್ವದಲ್ಲಿ ಚಿಕ್ಕಮಗಳೂರಿಗೆ ಹೋಗಿದ್ದ. ಅಲ್ಲಿ ಲಾಡ್ಜ್‌ನಲ್ಲಿ ಒಂದೇ ರೂಮ್ ಪಡೆದು ಮೂರು ಜನ ಮಲಗುತ್ತಾರೆ. ಉಡುಪಿಗೆ ಮರಳಿ ಬಂದು ಎರಡು ರೂಮ್ ಏಕೆ ಮಾಡುತ್ತಾರೆ? ಇದೆಲ್ಲ ವಿಚಾರವನ್ನು ಸಿಬಿಐ ತನಿಖೆಗೆ ಕೊಟ್ಟರೆ ಬಹಳಷ್ಟು ವಿಚಾರಗಳು ಹೊರಬರುತ್ತವೆ. ನಮ್ಮ ಸರ್ಕಾರಕ್ಕೆ ಮುಜುಗರ ಆಗಬಾರದು ಎಂದು ಸುಮ್ಮನೆ ಕುಳಿತಿದ್ದೇವೆ ಎಂದು ಜಾರಕಿಹೊಳಿ ಹೇಳಿದರು.
ಸಂತೋಷ ಪಾಟೀಲ್ ಆತ್ಮಹತ್ಯೆ ಹಿಂದೆ ಮಹಾನಾಯಕ (ಡಿ.ಕೆ. ಶಿವಕುಮಾರ್) ಇದ್ದಾರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ, ಅದನ್ನು ನಾನು ಖಚಿತವಾಗಿ ಹೇಳಲು ಆಗದು. ಈ ಬಗ್ಗೆ ತನಿಖೆ ಆಗಬೇಕು ಎಂದು ಉತ್ತರಿಸಿದರು.
ಕಾಂಗ್ರೆಸ್‌ನವರದ್ದು ಆಮಿಷ ಅಲ್ಲವೇ?
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 6 ಸಾವಿರ ರೂಪಾಯಿ ಕೊಟ್ಟರೆ ಮತ ಹಾಕಿ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ದೂರು ನೀಡಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, ನಾನು ಆರನೇ ಅವಧಿಯ ಎಂಎಲ್‌ಎ, ವಿದ್ಯಾವಂತ, ನನಗೆ ಕಾನೂನಿನ ಅರಿವಿದೆ. ಮೊದಲನೆಯದಾಗಿ ಚುನಾವಣಾ ನೀತಿ ಸಂಹಿತೆ ಇಲ್ಲ, ನಾನು ಯಾರ ಅಭ್ಯರ್ಥಿ ಪರ ಹೇಳಿಕೆ ನೀಡಿಲ್ಲ. ಆರು ಸಾವಿರ ರೂಪಾಯಿ ನೀಡುತ್ತೇನೆ ಎಂದು ನೇರವಾಗಿ ಹೇಳಿದ್ದು ತಪ್ಪು. ಗ್ರಾಮೀಣ ಶಾಸಕರು ಬಹಿರಂಗವಾಗಿ ರಸ್ತೆ ಮೇಲೆ ಹಂಚುತ್ತಿದ್ದಾರೆ. ಅದು ಆಮಿಷ ಅಲ್ವಾ? ಇಂತಹ ಸಣ್ಣ ರಾಜಕೀಯ ಮಾಡಬಾರದು ಎಂದು ಪ್ರತಿಕ್ರಿಯೆ ನೀಡಿದರು.
ಮೊನ್ನೆಯ ಸಮಾವೇಶ ಯಶಸ್ವಿಯಾದ ಹಿನ್ನೆಲೆಯಲ್ಲಿ ಔತಣಕೂಟವನ್ನು ಏರ್ಪಡಿಸಿದ್ದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹತ್ತು ಕೋಟಿ ರೂಪಾಯಿಗೂ ಹೆಚ್ಚು ಹಣ ಕೊಡುತ್ತೇನೆ ಅಂದಿದ್ದೇನೆ. ಗ್ರಾಮೀಣ ಕ್ಷೇತ್ರದುದ್ದಕ್ಕೂ ಕೆಲಸ ಆಗಿಲ್ಲ. ಅದಕ್ಕಾಗಿ ಹಣದ ಬಗ್ಗೆ ಮಾತನಾಡಿದ್ದೆ. ಎರಡು ಸಾವಿರ ರೂ. ಕೊಡ್ತೀವಿ, 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂಬುದು ಆಮಿಷ ಅಲ್ಲವೇ? ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರ ಹೇಳಿಕೆ ಆಮಿಷ ಆಗುವುದಿಲ್ಲವೇ? ರಾಜಕಾರಣದಲ್ಲಿ ಇಷ್ಟು ಕೆಳಮಟ್ಟಿಗೆ ಹೋಗಬಾರದು. ಇದಕ್ಕೂ ಮುಖ್ಯಮಂತ್ರಿಗೂ ಏನು ಸಂಬಂಧ? ನನ್ನ ಕ್ಷೇತ್ರಕ್ಕೆ ಸೀಮಿತವಾಗಿ ಹೇಳಿದ್ದೇನೆ. ಅವರ ಮೇಲೆ ಏಕೆ ದೂರು ನೀಡಬೇಕಿತ್ತು. ಇದೆಲ್ಲದಕ್ಕೂ ನಾನು ಕಾನೂನು ಮೂಲಕ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್‌ಗೆ 224 ಕ್ಷೇತ್ರಗಳಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರವೇ ಇಲ್ಲವೇ? ಪ್ರಧಾನಿ ನರೇಂದ್ರ ಮೋದಿಯಂತಹ ನಾಯಕ ಇದ್ದಾಗ ದುಡ್ಡು ಕೊಡುವ ಪರಿಸ್ಥಿತಿ ನಮಗೇಕಿದೆ. ಕ್ಷೇತ್ರದ ಅಭಿವೃದ್ಧಿಗೆ ಹತ್ತು ಕೋಟಿ ರೂ. ನೀಡುತ್ತೇನೆ. ಮಕ್ಕಳ ಶಾಲೆ ಶುಲ್ಕ, ಆಸ್ಪತ್ರೆ, ಬಡವರಿಗೆ ಸಹಾಯಧನ ಕೊಡುತ್ತೇನೆ ಎಂದು ಹೇಳಿದ್ದಾಗಿ ಜಾರಕಿಹೊಳಿ ತಿಳಿಸಿದರು.
ಇದನ್ನೂ ಓದಿ: Employment Generation : 18,567 ಜನರಿಗೆ ಉದ್ಯೋಗ ಕೊಡುವ ಬೃಹತ್ ಹೂಡಿಕೆಗೆ ರಾಜ್ಯ ಸರ್ಕಾರ ಸಮ್ಮತಿ
ಡಿಕೆಶಿ ವರ್ಸಸ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಹೇಳಿಕೆಗೆ ಬೆಂಗಳೂರಲ್ಲಿ ಪ್ರತಿಕ್ರಿಐೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಅವನಿಗೆ ಪ್ಯಾಂಟ್ ಬಿಚ್ಚು ಅಂತ ನಾನು ಹೇಳಿದ್ದೆನಾ? ನಮ್ಮ ಕಾಂಗ್ರೆಸ್ ಪಕ್ಷ ಹಾಳು ಮಾಡಿದ್ದೇ ಅವನು. ಆಪರೇಷನ್ ಕಮಲ ಮಾಡಿ ಹಾಳು ಮಾಡಿದ. ಅದೇನೋ ಸಿಬಿಐ ತನಿಖೆ ಮಾಡಿಸುವುದಾಗಿ ಹೇಳುತ್ತಿದ್ದಾನಲ್ಲ ಮಾಡಿಸಲಿ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ, ಕೆಳಮಟ್ಟದ ಶಬ್ದಗಳ ಉಪಯೋಗ ಬೇಡ. ಎಲ್ಲರಿಗೂ ಖಾಸಗಿ ವಿಷಯ ಇರಲಿದೆ. ಪದೇ ಪದೆ ಚರ್ಚೆ ಮಾಡುವುದು ಬೇಡ. ಡಿ.ಕೆ. ಶಿವಕುಮಾರ್ ತಲೆ ಔಟ್ ಆಗಿದೆ. ಅವನ ತಲೆ ಸರಿ ಇಲ್ಲ. ಪದೇ ಪದೆ ಟೀಕೆ ಮಾಡಿದರೆ ನಾವು ಸಣ್ಣವರಾಗುತ್ತೇವೆ. ಅವನು ಕೆಳಮಟ್ಟಕ್ಕೆ ಇಳಿದಿದ್ದಾನೆ. 2008ರ ಶಿವಕುಮಾರ್ ಆಗಿ ಆತ ಉಳಿದಿಲ್ಲ. ಗ್ರಾಮೀಣ ಶಿವಕುಮಾರ್ ಆಗಿ ಅಷ್ಟೇ ಉಳಿದಿದ್ದಾನೆ ಅವನು ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು.